ಕರಾವಳಿ ಬಿಗ್ ನ್ಯೂಸ್… ತಪ್ಪದೇ ಓದಿ..!
* ಮಂಗಳೂರು: ನೂತನ ಡಿಸಿಪಿಯಾಗಿ ಮಿಥುನ್ ಕುಮಾರ್ ಎಂಟ್ರಿ!
* ಬೈಂದೂರು: ನರೇಗಾ ಕೂಸಿನ ಮನೆ ಕೆಲವೆಡೆ ಸ್ಥಗಿತ: ಏಕೆ..?
* ಸುಳ್ಯ ತಾಲ್ಲೂಕು ಕಚೇರಿಯಲ್ಲಿ ಲಿಫ್ಟ್ ಇಲ್ಲ: ವೃದ್ಧರ ಪರದಾಟ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕರಾವಳಿ ಭಾಗದ ಕಾವಲು ಪಡೆಯ ಎಸ್. ಪಿ ಆಗಿದ್ದ ಮಿಥುನ್ ಕುಮಾರ್ ಅವರನ್ನು ಇದೀಗ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿ ನೇಮಕಗೊಳಿಸಿ ಸರ್ಕಾರವು ಆದೇಶವನ್ನು ಹೊರಡಿಸಿದೆ. ಅದೇ ರೀತಿ ನಕ್ಸಲ್ ನಿಗ್ರಹ ಪಡೆಯ ಎಸ್.ಪಿ ಆಗಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಿಸಲಾಗಿತ್ತು. ಇದೀಗ ಅದನ್ನು ರದ್ದುಪಡಿಸಿ, ಜಿತೇಂದ್ರ ಕುಮಾರ್ ದಯಾಮ ಅವರು ತಮ್ಮ ಸ್ವಸ್ಥಾನದಲ್ಲಿ ಮುಂದುವರಿಯುವಂತೆ ಆದೇಶಿಸಲಾಗಿದೆ. ಹಾಗೆಯೇ ಈ ಹಿಂದೆ ಡಿಸಿಪಿಯಾಗಿದ್ದ ಸಿದ್ದಾರ್ಥ ಗೋಯಲ್ ಅವರನ್ನು ಬಾಗಲಕೋಟೆಯ ಎಸ್. ಪಿ ಯಾಗಿ ವರ್ಗಾಯಿಸಲಾಗಿದೆ.
* ಬೈಂದೂರು: ನರೇಗಾ ಕೂಸಿನ ಮನೆ ಕೆಲವೆಡೆ ಸ್ಥಗಿತ
ಬೈಂದೂರು: ರಾಜ್ಯದ ನಾಲ್ಕು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ, ನರೇಗಾ ಯೋಜನೆ ಅಡಿಯಲ್ಲಿ ಕೂಸಿನ ಮನೆ ಎಂಬ ಹೆಸರಿನಲ್ಲಿ ಶಿಶು ಪಾಲನ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಉಡುಪಿಯಲ್ಲಿ ಮೊದಲಿಗೆ ಇಪ್ಪತ್ತೆರಡು ಕೂಸಿನ ಮನೆ ಸ್ಥಾಪಿಸಲು ಯೋಚಿಸಿದ್ದು, ಬಳಿಕ ಹದಿನಾಲ್ಕು ಶಿಶು ಪಾಲನಾ ಕೇಂದ್ರಗಳು ಸ್ಥಾಪಿಸಲ್ಪಟ್ಟವು. ಇದೀಗ ಮಕ್ಕಳ ಕೊರತೆಯಿಂದಾಗಿ ಹದಿನಾಲ್ಕರಲ್ಲಿ ಬ್ರಹ್ಮಾವರದ ಅವರ್ಸೆ, ಉಡುಪಿಯ ಕುಕ್ಕೆಹಳ್ಳಿ, ಕಾಪುವಿನ ಪಡುಬಿದ್ರೆ ಮತ್ತು ಕಾರ್ಕಳದ ಮಿಯಾರು ಸೇರಿ ನಾಲ್ಕು ಕೂಸಿನ ಮನೆಗಳನ್ನು ಮುಚ್ಚಲಾಗಿದೆ ಎಂದು ಉಡುಪಿ ಜಿಲ್ಲಾ ಸಹಾಯಕ ಕಾರ್ಯಕ್ರಮ ಸಂಯೋಜಕರಾದ ವಿಜಯ್ ಶ್ಯಾಮ್ ಅವರು ತಿಳಿಸಿದ್ದಾರೆ. ಇವುಗಳ ಜೊತೆಗೆ ಕೂಸಿನ ಮನೆ ಸರ್ಕಾರದ ಯೋಜನೆಯಾದರೂ, ಅದನ್ನು ನಿರ್ಮಿಸಲು ಕಟ್ಟಡವನ್ನು ಹೊಂದಿಸುವುದು ಗ್ರಾಮ ಪಂಚಾಯಿತಿ ಕೆಲಸ, ಹಾಗೆಯೇ ಕಲ್ಪಿಸಿಕೊಡುವಾಗ ಹಳೆಯ ಕಟ್ಟಡಗಳನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಕೂಸಿನ ಮನೆಗೆ ಆಹಾರ ಪೂರೈಕೆಯನ್ನು ಮಾತ್ರ ಸರ್ಕಾರ ಮಾಡುತ್ತದೆ. ಉಳಿದಂತೆ ಸಿಬ್ಬಂದಿಗಳಿಗೆ ವೇತನ ನೀಡುವುದು ಮುಂತಾದ ಖರ್ಚು ವೆಚ್ಚಗಳನ್ನು ಗ್ರಾಮ ಪಂಚಾಯಿತಿ ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ವ್ಯಯಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಮಕ್ಕಳ ಕೊರತೆಯ ಜೊತೆಗೆ ಕಾರ್ಯನಿರ್ವಹಿಸಲು ಸಿಬ್ಬಂದಿಗಳು ಸಹ ಬಾರದಿರುವುದು ಕೂಡ ಮತ್ತೊಂದು ಸಮಸ್ಯೆಯಾಗಿ ತಲೆದೋರಿದೆ ಎಂದು ಹೇಳಿದರು.
ಸುಳ್ಯ ತಾಲ್ಲೂಕು ಕಚೇರಿಯಲ್ಲಿ ಲಿಫ್ಟ್ ಇಲ್ಲ!: ವೃದ್ಧರ ಪರದಾಟ!
ಸುಳ್ಯ: ತಾಲ್ಲೂಕು ಆಡಳಿತ ಕಚೇರಿಯಲ್ಲಿ ಲಿಫ್ಟ್ ಸೌಕರ್ಯವಿಲ್ಲದ ಕಾರಣ ಅನಾರೋಗ್ಯ ಪೀಡಿತರು ಮತ್ತು ಹಿರಿಯ ನಾಗರಿಕರು ಬಂದು ಹೋಗಲು ಸಮಸ್ಯೆ ಉಂಟಾಗಿದೆ. ಎರಡು ಅಂತಸ್ತುಗಳ ಕಟ್ಟಡವಾದ ಇದರಲ್ಲಿ ಕೆಳಗಡೆ ತಹಶೀಲ್ದಾರರ ಕೊಠಡಿ, ಸಭಾಗೃಹ, ನಿಯಂತ್ರಣ ಕೊಠಡಿ, ಕಾನೂನು ಮಾಹಿತಿ ಮತ್ತು ದಾಖಲಾತಿಗೆ ಸಂಬಂಧಿಸಿದ ಕಚೇರಿಗಳಿವೆ. ಅವುಗಳನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಸಂಬಂಧಿಸಿದ ಕಚೇರಿಗಳೆಲ್ಲ ಇರುವುದು ಮೊದಲ ಮತ್ತು ಎರಡನೇ ಮಹಡಿಯಲ್ಲಿ. ಹೀಗಾಗಿ ಕಾರ್ಯನಿರ್ವಹಿಸುವವರಿಗೆ ಮತ್ತು ತಮ್ಮ ಕೆಲಸವನ್ನು ಮಾಡಿಸಿಕೊಂಡು ಹೋಗಲು ಬರುವ ಸಾರ್ವಜನಿಕರಿಗೆ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಅನಿವಾರ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲೂ ಲಿಫ್ಟಿನ ವ್ಯವಸ್ಥೆ ಇದ್ದು, ಸುಳ್ಯದಲ್ಲಿ ಮಾತ್ರ ಇನ್ನೂ ಆ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಜೆರಾಕ್ಸ್, ಸಹಿಯಂತಹ ಸಣ್ಣಪುಟ್ಟ ಕೆಲಸಗಳಿಗೂ ದಿನಕ್ಕೆ ಹತ್ತಾರು ಬಾರಿ ಎರಡು ಅಂತಸ್ತುಗಳ ಕಟ್ಟಡವನ್ನು ಹತ್ತಿ ಇಳಿಯುವುದು ಪ್ರಯಾಸದಾಯಕವಾಗಿದೆ, ಇದರಿಂದ ಸಮಯವೂ ವ್ಯರ್ಥವಾಗುತ್ತದೆ. ಅಲ್ಲದೆ ಹಿರಿಯ ನಾಗರಿಕರು ಆಗಮಿಸಿದರೆ ಅವರಿಗೆ ತುಂಬಾ ಅನನುಕೂಲತೆ ಎದುರಾಗುತ್ತದೆ. ಆದಷ್ಟು ಬೇಗ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿ ಜನರು ಆಗ್ರಹಿಸಿದ್ದಾರೆ.