ಕರಾವಳಿ ಟಾಪ್ ನ್ಯೂಸ್
* ಬೈಂದೂರು: ಕೆಂಪುಕಲ್ಲು ಗಣಿಗಾರಿಕೆ ಪ್ರದೇಶದ ಮೇಲೆ ದಾಳಿ
* ಬಂಟ್ವಾಳ: ಹುಡುಗಿ ನೋಡುವ ನೆಪದಲ್ಲಿ ಬ್ಲಾಕ್ ಮೇಲ್
* ಪುತ್ತೂರು: ಸಜ್ಜಿಗೆ ತಿಂದು ಹೋದ ಕಳ್ಳರು
* ಬೆಳ್ತಂಗಡಿ: ಚಿನ್ನಯ್ಯ ಪತ್ನಿ ಎಸ್ಐಟಿ ಕಛೇರಿಗೆ ಹಾಜರ್
* ಮಂಗಳೂರು: ಅಧಿಕ ಲಾಭಾಂಶದ ಹೆಸರಿನಲ್ಲಿ ವಂಚನೆ
* ಉಡುಪಿ: ವಿದ್ಯುತ್ ಆಘಾತಕ್ಕೆ ಉದ್ಯಮಿ ಬಲಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಬೈಂದೂರು: ಕೆಂಪುಕಲ್ಲು ಗಣಿಗಾರಿಕೆ ಪ್ರದೇಶದ ಮೇಲೆ ದಾಳಿ
ಬೈಂದೂರು: ಸರ್ಕಾರಿ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ ಘಟನೆ, ಗೊಳಿಹೊಳೆ ಗ್ರಾಮದ ಬಡ್ಕಿ ಎನ್ನುವಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ, ಆಲೂರು ಗ್ರಾಮದ ವಾಟೆ ಕಾಡು ನಿವಾಸಿಯಾದ ಮನೋಜ ನರಸಿಂಹ ಮೊಗವೀರ ಎನ್ನುವ ವ್ಯಕ್ತಿಯನ್ನು ವಿಚಾರಿಸಿದ್ದು, ಕಲ್ಲುಕ್ವಾರೆ ನಡೆಸಲು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೆ, ಕಲ್ಲನ್ನು ಅಕ್ರಮವಾಗಿ ತೆಗೆಯುತ್ತಿರುವುದಾಗಿ ಸರಪಂಚರ ಬಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಈತನನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ಗಣಿಗಾರಿಕೆಗೆ ಬಳಸಿದ ಕಲ್ಲನ್ನು ಕತ್ತರಿಸಲು ಬಳಸಿದ ಟಿಲ್ಲರ್ ಅನ್ನು ವಶಪಡಿಸಿಕೊಳ್ಳಲಾಯಿತು. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
* ಬಂಟ್ವಾಳ: ಹುಡುಗಿ ನೋಡುವ ನೆಪದಲ್ಲಿ ಬ್ಲಾಕ್ ಮೇಲ್
ಬಂಟ್ವಾಳ: ಸೌದಿಯಲ್ಲಿ ಉದ್ಯೋಗದಲ್ಲಿರುವ ಕೇರಳ ಮೂಲದ ಅಶ್ರಫ್ ಎನ್ನುವ ವ್ಯಕ್ತಿಗೆ, ಹುಡುಗಿ ನೋಡುವ ವಿಚಾರದ ನಂತರ ಫೋಟೋ ಮತ್ತು ವೀಡಿಯೋ ತೆಗೆದುಕೊಂಡು ಬೆದರಿಕೆಯೊಡ್ಡಿದ ಘಟನೆ ವಿಟ್ಲದಲ್ಲಿ ನಡೆದಿದೆ. ಕಳೆದ ವರ್ಷ ಅಶ್ರಫ್ ಮದುವೆಯ ಕಾರಣಕ್ಕಾಗಿ ಮಂಗಳೂರಿಗೆ ಆಗಮಿಸಿದ್ದು, ಬಶೀರ್ ಸಫಿಯಾ ಮತ್ತು ಇತರರು ಸೇರಿ ಅಶ್ರಫ್ ಗೆ ಹೆಣ್ಣು ನೋಡುವ ನೆಪದಲ್ಲಿ ಕರೆಸಿಕೊಂಡು, ಫೋಟೋ ವೀಡಿಯೋ ತೆಗೆದು ನಂತರ ಅದನ್ನು ಬೇರೆ ರೀತಿ ಬಳಸಿಕೊಂಡು, ಸೋರಿಕೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ 44.80 ಲಕ್ಷದಷ್ಟು ಹಣವನ್ನು ಈ ನೆಪದಲ್ಲಿ ವಸೂಲಿ ಮಾಡಿದ್ದಾರೆ ಎಂದು, ಸ್ವತಃ ಅಶ್ರಫ್ ಅವರೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ, ಆರೋಪಿಗಳ ವಿರುದ್ಧ ಅಪರಾಧ ಕ್ರಮ 145/2025 ಕಾಲಂ 318 (4), 3೦8(2), 115 (2), 351(2),r/w 3(5) ಬಿಎನ್ಎಸ್ 2023ರ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಪುತ್ತೂರು: ಸಜ್ಜಿಗೆ ತಿಂದು ಹೋದ ಕಳ್ಳರು
ಪುತ್ತೂರು: ಮೋಹನ್ ಆಚಾರ್ಯ ಅವರು ಕಳೆದೆರಡು ದಿನಗಳ ಹಿಂದೆ ಕುಟುಂಬ ಸಮೇತರಾಗಿ, ಪೊಳಲಿ ದೇವಾಲಯಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯಲ್ಲಿ ಕಳ್ಳತನವಾದ ಘಟನೆ ನೆಹರುನಗರದ ಸಿಟಿಗುಡ್ಡೆಯಲ್ಲಿರು ಅವರ ನಿವಾಸದಲ್ಲಿ ನಡೆದಿದೆ. ಕುಟುಂಬದವರು ಸಂಜೆ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಹಿಂಬಾಗಿಲಿನಿಂದ ಒಳನುಗ್ಗಿದ್ದು, ಕಪಾಟಿನಲ್ಲಿ ಇರಿಸಿದ್ದ ಮೂರು ಪವನ್ ಚಿನ್ನಾಭರಣವನ್ನು ಕಳುವು ಮಾಡಿದ್ದಾರೆ. ಪೊಲೀಸರು ಮೋಹನ್ ಆಚಾರ್ಯ ಅವರ ಮನೆಗೆ ಭೇಟಿ ನೀಡಿ, ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮೋಜಿನ ಸಂಗತಿ ಎಂದರೆ ಕಳ್ಳತನ ಮಾಡಿಕೊಂಡು ಹೋಗುವ ಸಂದರ್ಭದಲ್ಲಿ, ಮನೆಯಲ್ಲಿ ಮಾಡಿಟ್ಟಿದ್ದ ಸಜ್ಜಿಗೆಯನ್ನು ತಿಂದು ಹೋಗಿದ್ದಾರೆ ಎನ್ನುವುದು ತಿಳಿದುಬಂದಿದೆ.
* ಬೆಳ್ತಂಗಡಿ: ಚಿನ್ನಯ್ಯ ಪತ್ನಿ ಎಸ್ಐಟಿ ಕಛೇರಿಗೆ ಹಾಜರ್
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿಯಾದ ಚಿನ್ನಯ್ಯನಿಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳುವ ಸಲುವಾಗಿ, ಎಸ್ಐಟಿ ಅಧಿಕಾರಿಗಳು ಆತನ ಎರಡನೇ ಪತ್ನಿ ಮಲ್ಲಿಕಾ ಅವರನ್ನು ತಮ್ಮ ಕಛೇರಿಗೆ ಕರೆಸಿದ್ದಾರೆ. ಇದಕ್ಕೂ ಮೊದಲು ಎಸ್ಐಟಿ ಅಧಿಕಾರಿಗಳು ಮೃತದೇಹಗಳನ್ನು ಹೂತಿದ್ದೇನೆ ಎಂದು ಚಿನ್ನಯ್ಯ ತೋರಿಸಿದ್ದ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಭೇಟಿ ನೀಡಿ, ಮತ್ತೊಮ್ಮೆ ಶೋಧನಾ ಕಾರ್ಯವನ್ನು ನಡೆಸಿದ್ದರು ಎನ್ನಲಾಗಿದೆ.
* ಮಂಗಳೂರು: ಅಧಿಕ ಲಾಭಾಂಶದ ಹೆಸರಿನಲ್ಲಿ ವಂಚನೆ
ಮಂಗಳೂರು: ಅಕ್ಟೋಬರ್ ಮೂರರಂದು ವ್ಯಕ್ತಿಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯನ್ನು ನೋಡುತ್ತಿದ್ದ ಸಂದರ್ಭದಲ್ಲಿ, ಹೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಾಹೀರಾತೊಂದು ಬಂದಿತ್ತು. ಅಧಿಕ ಹಣದ ಆಮಿಷಕ್ಕೆ ಒಳಗಾದ ವ್ಯಕ್ತಿಯು, ಆ ಲಿಂಕ್ ಅನ್ನು ಒತ್ತಿದಾಗ ಟೆಲಿಗ್ರಾಂ ತೆರೆದುಕೊಂಡಿತು. ಟೆಲಿಗ್ರಾಂ ತೆರೆಯುತ್ತಿದ್ದಂತೆ ವ್ಯಕ್ತಿಯು ಟ್ರಿಡ್ ಗ್ರಿಪ್ ಮ್ಯಾನೇಜರ್ ಎನ್ನುವ ಗುಂಪಿಗೆ ಸೇರ್ಪಡೆಗೊಂಡರು. ಅದರಲ್ಲಿ ಸಾಗರ್ ಎನ್ನುವ ವ್ಯಕ್ತಿಯ ಪರಿಚಯವಾಗಿದ್ದು, ಹೂಡಿಕೆ ಮಾಡಲು ನೋಂದಣಿ ಮಾಡಿಸಿಕೊಳ್ಳಲು ಮೊದಲಿಗೆ 19,300 ರೂಪಾಯಿ ಪಾವತಿಸಬೇಕೆಂದು ಆತ ತಿಳಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ವ್ಯಕ್ತಿಯು ಯುಪಿಐ ಮೂಲಕ ಸಾಗರ್ ಅವರಿಗೆ ವರ್ಗಾಯಿಸಿದ್ದಾರೆ. ನಂತರ ಸಾಗರ್ ಅವರು ನಮ್ಮ ಸೀನಿಯರ್ ಮ್ಯಾನೇಜರ್ ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ತಿಳಿಸಿದ್ದು, ಸಾತ್ವಿಕ್ ಶೆಟ್ಟಿ ಎನ್ನುವ ವ್ಯಕ್ತಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ 13 ಲಕ್ಷ ರೂಪಾಯಿ ಲಾಭ ಕೊಡಿಸುವುದಾಗಿ ನಂಬಿಸಿದ್ದಾನೆ. ಅದರಂತೆ ವ್ಯಕ್ತಿಯು ಅಕ್ಟೋಬರ್ ಎಂಟರಂದು 7 ಲಕ್ಷ ರೂಪಾಯಿ ಪಾವತಿಸಿದರು. ಮರುದಿನ 1420 ಮತ್ತು 11539 ರೂಪಾಯಿಯಷ್ಟು ಹಣ ಹಿಂತಿರುಗಿ ಬಂದಿದೆ. ಬಳಿಕ ಸಾತ್ವಿಕ್ ಶೆಟ್ಟಿ ಹಣದ ಹೆಚ್ಚಿನ ಆಮಿಷ ಒಡ್ಡಿ, ಅಮೇರಿಕಾದ 60 ಕಂಪನಿಯ ಗ್ರೂಪ್ ಇದ್ದು, ಅದರಲ್ಲಿ ಹೂಡಿಕೆ ಮಾಡಿದರೆ 30 ಲಕ್ಷ ರೂಪಾಯಿ ಲಭಿಸುವಂತೆ ಮಾಡುತ್ತೇನೆ, ನಿಮ್ಮ ಪರವಾಗಿ ನಾನೇ ಒಂದು ಡಾಲರ್ ನೀಡಿ, ಖಾತೆಯನ್ನು ಮಾಡಿಸಿ ಕೊಡುತ್ತೇನೆ, ಬಳಿಕ ನೀವು 10 ಲಕ್ಷ ರೂಪಾಯಿ ಹೂಡಿಕೆ ಮಾಡಿ ಎಂದು ತಿಳಿಸಿದ್ದಾನೆ. ಇದರಿಂದ ವ್ಯಕ್ತಿಗೆ ಅನುಮಾನ ಬಂದು, ಸೈಬರ್ ಸಹಾಯವಾಣಿಗೆ ದೂರು ನೀಡಿದ್ದು, ಬಳಿಕ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಸಾಗರ್, ಸಾತ್ವಿಕ್ ಶೆಟ್ಟಿ ಮತ್ತು ಟ್ರಿಡ್ ಗ್ರಿಪ್ ಖಾತೆಯ ಮ್ಯಾನೇಜರ್ ಎಂದು ಹೇಳಿಕೊಂಡಿರುವ ಗ್ರೂಪ್ ಅಡ್ಮಿನ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
* ಉಡುಪಿ: ವಿದ್ಯುತ್ ಆಘಾತಕ್ಕೆ ಉದ್ಯಮಿ ಬಲಿ
ಉಡುಪಿ: ಸುನಿಲ್ ಕುಮಾರ್ ಸೋನ್ಸ್ ಅವರು ಬೈಲೂರಿನ ಸುನೀತಾ ಹೊಲೋ ಬ್ಲಾಕ್ ಫ್ಯಾಕ್ಟರಿಯ ಮಾಲೀಕರಾಗಿದ್ದು, ಕಳೆದ 22 ವರ್ಷಗಳಿಂದ ಫ್ಯಾಕ್ಟರಿಯನ್ನು ನಡೆಸುತ್ತಿದ್ದಾರೆ. ಸೋಮವಾರದಂದು ಸಂಜೆ ಕೆಲಸ ಮುಗಿಸಿ ಹೊರಡುವ ಸಂದರ್ಭದಲ್ಲಿ, ಸುನಿಲ್ ಕುಮಾರ್ ಅವರು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದರು.