Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಹೊನ್ನಾವರ: ಮುದ್ದು ಗಣಪನ ಆಗಮನಕ್ಕೆ ಸಕಲ ಸಿದ್ಧತೆ
• ಬೈಂದೂರು: ಎಕ್ಸ್ ಪ್ರೆಸ್ ರೈಲಿಗೆ ನೂತನ ನಿಲುಗಡೆ
• ಉಳ್ಳಾಲ: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ
• ಪುತ್ತೂರು: ದಿಗ್ಬಂಧನಕ್ಕೆ ಒಳಗಾದ ಕಾಡಾನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊನ್ನಾವರ: ಕರಾವಳಿ ಭಾಗದ ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಈಗಾಗಲೇ ಮುತ್ತೈದೆಯರು ಅರಿಶಿಣ,ಕುಂಕುಮ, ಹೂವು, ಹಣ್ಣು, ಬಳೆ, ಕಾಯಿಗಳನ್ನು ಸಿದ್ಧಪಡಿಸಿಟ್ಟುಕೊಂಡು, ಶಿವನ ಅರ್ಧಾಂಗಿಯಾದ ಗೌರಿಗೆ ಬಾಗಿನವನ್ನು ಅರ್ಪಿಸಲು ಸಂಭ್ರಮದಿಂದ ತಮ್ಮ ಮನೆಗೆ ಆಹ್ವಾನಿಸಿ, ಬಾಗಿನ ಪೂಜೆಯನ್ನು ಆರಂಭಿಸಿದ್ದಾರೆ, ಪುರುಷರು ನಾಳೆಯ ದಿನ ಬರುವ ಗೌರಿಸುತನಿಗಾಗಿ ಮನೆಯನ್ನು ಅಲಂಕರಿಸಿ, ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಇನ್ನು ಹೊನ್ನಾವರದ ಭೂಸ್ವರ್ಗ ಕೆರೆಯ ಗಣಪತಿ ಶಾಲೆಯಲ್ಲಿ ನೂರಾರು ವಿಘ್ನನಿವಾರಕರು ಒಡವೆ ವಸ್ತ್ರಗಳನ್ನು ಧರಿಸಿ, ಔತಣಕ್ಕೆ ಭಕ್ತರ ಮನೆಗೆ ತೆರಳಲು ಸಿದ್ಧರಾಗಿ ಕುಳಿತಿದ್ದಾರೆ.‌ ವೃತ್ತಿಯಿಂದ ಪಂಚವಾದ್ಯ ವಾದಕರು ಮತ್ತು ಯಕ್ಷಗಾನ ಕಲಾವಿದರಾದ ಕುಟುಂಬವೊಂದು ಮಳೆಗಾಲ ಆರಂಭವಾಗುತ್ತಿದ್ದಂತೆ ಗದ್ದೆಯ ಆಳದಲ್ಲಿರುವ ಮೃದುವಾದ ಮಣ್ಣನ್ನು ಸಂಗ್ರಹಿಸಿ ತಂದು, ಅದನ್ನು ಹದಗೊಳಿಸಿ ಮೂರ್ತಿಯ ತಯಾರಿಕೆಯನ್ನು ಆರಂಭಿಸಿ ಬಿಡುತ್ತಾರೆ. ಶುದ್ಧ ನೈಸರ್ಗಿಕ ಮಣ್ಣಿನಿಂದ ತಯಾರಾಗುವ ಮೂರ್ತಿಗಳಿಗೆ, ಪರಿಸರ ಸ್ನೇಹಿ ಬಣ್ಣವನ್ನು ಲೇಪಿಸಲಾಗುತ್ತದೆ.‌ ಯಾವುದೇ ಪರಿಕರಗಳನ್ನು ಬಳಸದೆ, ಕೇವಲ ಕೈಯಿಂದಲೇ ಸಂಪೂರ್ಣ ಮೂರ್ತಿಯನ್ನು ರೂಪಿಸುವುದು ಇವರ ಹೆಗ್ಗಳಿಕೆ. ಇನ್ನು ಭಂಡಾರಿ ಕೇರಿಯಲ್ಲಿ ನೂರಾರು ಗಣಪತಿಗಳು ಒಂದೇ ಬಾರಿಗೆ ನೋಡಲು ಲಭಿಸುವುದರಿಂದ, ಈಗಾಗಲೇ ಗಣಪತಿ ಪ್ರಿಯರು ಅಲ್ಲಿಗೆ ತೆರಳಿ ವೈವಿಧ್ಯಮಯ ಮುದ್ದು ಗಣೇಶನನ್ನು ಕಣ್ತುಂಬಿಕೊಂಡು ಬರುತ್ತಿದ್ದಾರೆ. ಕರಾವಳಿ ಭಾಗದ ಎಲ್ಲೆಡೆ ಅಧಿಕ ಪ್ರಮಾಣದಲ್ಲಿ ಮನೆ ಮನೆಯಲ್ಲೂ ಗಣೇಶನನ್ನು ಬರಮಾಡಿಕೊಂಡು, ಆಹಾರ ಪ್ರಿಯನಿಗೆ ಚಕ್ಕುಲಿ, ಮೋದಕ, ಕರಿಗಡುಬು ಮೊದಲಾದವುಗಳನ್ನು ನೈವೇದ್ಯ ಮಾಡಿ ವಿಘ್ನನಿವಾರಕನನ್ನು ಸಂತೃಪ್ತಪಡಿಸಲು ತಯಾರಿ ಮಾಡಿಕೊಳ್ಳಲಾಗಿದೆ.

• ಬೈಂದೂರು: ಎಕ್ಸ್ ಪ್ರೆಸ್ ರೈಲಿಗೆ ನೂತನ ನಿಲುಗಡೆ

ಬೈಂದೂರು: ಗೋವಾದ ಮಡಗಾಂವ್ ನಿಂದ ಕೇರಳದ ಎರ್ನಾಕುಲಂವರೆಗೆ ಚಲಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗೆ ಮೂಕಾಂಬಿಕಾ ರಸ್ತೆ ಬೈಂದೂರಿನಲ್ಲಿ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲೆಂದು, ನೂತನ ನಿಲುಗಡೆ ನೀಡಲು ಸರ್ಕಾರ ನಿರ್ಧರಿಸಿದೆ ಮತ್ತು ಇದು ತತಕ್ಷಣವೇ ಜಾರಿಗೆ ಬರಲಿದೆ ಎಂಬ ಮಾಹಿತಿಯನ್ನು ರೈಲ್ವೆ ಸಹಾಯಕ ಸಚಿವರಾದ ವಿ.ಸೋಮಣ್ಣ ಅವರು ನೀಡಿದ್ದಾರೆ.

• ಉಳ್ಳಾಲ: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ.

ಉಳ್ಳಾಲ: ಅಂಕೋಲಾ ಮೂಲದ ಸುಬ್ರಾಯ ವೆಂಕಟರಮಣ ಭಟ್ ಎಂಬ ವ್ಯಕ್ತಿಯು ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ, ಸಾವನ್ನು ಕೂಡ ಸಾರ್ಥಕ ಪಡಿಸಿಕೊಂಡಿದ್ದಾರೆ.‌ ಮೆದುಳು ನಿಷ್ಕ್ರಿಯಗೊಂಡಿದ್ದ ಇವರ ಅಂಗಾಂಗಗಳನ್ನು, ಕುಟುಂಬಸ್ಥರು ದಾನ ಮಾಡಲು ಒಪ್ಪಿಗೆ ಸೂಚಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ವೆಂಕಟರಮಣ ಭಟ್ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದೆರಡು ದಿನಗಳ ಹಿಂದೆ ಅಲ್ಲಿನ ವೈದ್ಯರು ಬ್ರೈನ್ ಡೆಡ್ ಆಗಿರುವುದನ್ನು ಕುಟುಂಬಸ್ಥರಿಗೆ ಘೋಷಿಸಿದ್ದರು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ. ವೈದ್ಯಕೀಯ ಅಧೀಕ್ಷಕಿ ಡಾ/ ಸುಮಲತಾ ಶೆಟ್ಟಿ, ವೆಂಕಟರಮಣ ಭಟ್ ಅವರಿಗೆ ಚಿಕಿತ್ಸೆ ನೀಡಿದ ಡಾ/ ಸುಧೀಂದ್ರ ಯು, ಡಾ/ ಸುರೇಶ್. ಜಿ ಹಾಗೂ ಅಂಗಾಂಗ ಕಸಿ ಸಂಯೋಜಕರಾದ ಡಾ/ಅಕ್ಷತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿವಿಧ ತಜ್ಞರ ಸಹಕಾರದಿಂದ ಜೀವಸಾರ್ಥಕ ತಂಡವು ಅಂಗಾಂಗ ಬೇರ್ಪಡಿಸುವ ಕಾರ್ಯವನ್ನು ಕೈಗೊಂಡಿತು ಎಂಬ ಮಾಹಿತಿ ಬಂದಿದೆ. ಬೇರ್ಪಡಿಸಿದ ಅಂಗಗಳನ್ನು ಎಂ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಒದಗಿಸಲಾಯಿತು ಎನ್ನಲಾಗಿದೆ.

• ಪುತ್ತೂರು: ದಿಗ್ಬಂಧನಕ್ಕೆ ಒಳಗಾದ ಕಾಡಾನೆ

ಪುತ್ತೂರು: ಬಿಳಿಯೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಜೋಡಿಯೊಂದು, ಭಾನುವಾರದಂದು ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ವಿಹರಿಸುತ್ತಿರುವುದು ಬೆಳಕಿಗೆ ಬಂದಿದೆ. ಆ ಸಂದರ್ಭದಲ್ಲಿ ನದಿಯ ಎರಡು ದಿಕ್ಕುಗಳಲ್ಲೂ ಜನ ಸಮೂಹ ನೆರೆದಿದ್ದರಿಂದ, ಕಾಡಾನೆ ಜೋಡಿಗಳು ಡಿಗ್ಬಂಧನಕ್ಕೆ ಒಳಗಾದವು. ಶನಿವಾರದಂದು ಸುಬ್ರಾಯ ಭಟ್ಟ ಎಂಬ ಸ್ಥಳೀಯರ ತೋಟದಲ್ಲಿದ್ದ ಇವು, ಬಳಿಕ ಸರಳೀಕಟ್ಟೆ, ಪಿಲಿಗೂಡು, ಅಂಬೊಟ್ಟು, ಅಂಡೆತಡ್ಕ ದಾರಿಯಿಂದ ನೇತ್ರಾವತಿ ನದಿಗೆ ಇಳಿದಿರಬಹುದು ಎಂದು ಹೇಳಲಾಗಿದೆ. ವಿಷಯ ತಿಳಿದೊಡನೆ ಜನರು ಆನೆಗಳನ್ನು ವೀಕ್ಷಿಸಲು ನದಿಯ ತೀರಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಆನೆಗಳಿಗೆ ಗಲಿಬಿಲಿಯುಂಟಾಗಿ, ದಡದತ್ತ ತೆರಳಲು ಸಹ ಸಾಧ್ಯವಾಗದೇ ನದಿಯ ಮಧ್ಯಭಾಗದಲ್ಲಿದ್ದ ದಿನ್ನೆಯ ಮೇಲೆ ನಿಂತುಕೊಂಡಿತು ಎನ್ನಲಾಗಿದೆ. ನಂತರ ಅವು ಜನವಸತಿ ಪ್ರದೇಶದತ್ತ ಬಾರದ ರೀತಿಯಲ್ಲಿ ಅರಣ್ಯ ಇಲಾಖೆಯವರು, ಪೊಲೀಸ್ ಇಲಾಖೆಯವರು, ಹೋಂಗಾರ್ಡ್ ಸಿಬ್ಬಂದಿಗಳು ಗಮನವಿರಿಸಿ, ಕಾರ್ಯಾಚರಣೆಯನ್ನು ನಡೆಸಿದರು. ಇದರಿಂದಾಗಿ ಕಾಡಾನೆಗಳು ಕಾಡಿನತ್ತ ತೆರಳಿ, ಯಾವುದೇ ರೀತಿಯ ಅಪಾಯ ಸಂಭವಿಸಲಿಲ್ಲ ಎಂಬ ಮಾಹಿತಿ ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.