ಕರಾವಳಿ ಟಾಪ್ ನ್ಯೂಸ್
– ಆಟವಾಡುತ್ತಿದ್ದಾಗ ಕೋರ್ಟ್ ನಲ್ಲೇ ಕುಸಿದು ಯುವಕನ ಸಾವು!
– ಮಂಜೇಶ್ವರ: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು!
– ಬೈಂದೂರು: ಪತಿಯ ಕಿರುಕುಳ: ಪತ್ನಿ ನೇಣು ಬಿಗಿದು ಆತ್ಮಹತ್ಯೆ
NAMMUR EXPRESS NEWS
ಮಂಗಳೂರು: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಖಾಸಗಿ ಕಾಲೇಜಿನ ವಿದ್ಯಾರ್ಥಿ ಓರ್ವ ಅಸುನೀಗಿದ್ದಾರೆ.
ನಗರದ ಫಳ್ನೀರ್‌ನಲ್ಲಿ ಜನವರಿ 15 ರಂದು ಈ ಘಟನೆ ನಡೆದಿದೆ. ಅತ್ತಾವರ ಐವರಿ ಟವರ್ ನಿವಾಸಿಯಾಗಿದ್ದ ಮತ್ತು ಅದ್ದೂರು ಮೂಲದ ಶರೀಫ್ ಅವರ ಪುತ್ರ ಶಹೀಮ್ (20) ಮೃತ ಯುವಕ. ಗೆಳೆಯರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಶಹೀಮ್ ಅವರು ಏಕಾಏಕಿ ಕೋರ್ಟ್ನಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದರು.
* ಮಂಜೇಶ್ವರ: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು!
ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಯರ್‌ಕಟ್ಟೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ವ್ಯಕ್ತಿಯೊಬ್ಬನ ಮೃತ ದೇಹ ಕಂಡಿದ್ದು ಸಾವಿಗೆ ಕಾರಣ ನಿಗೂಢವಾಗಿದೆ. ಮೃತ ವ್ಯಕ್ತಿಯನ್ನು ಪೈವಳಿಕೆ ಬಾಯಾರು ಪದವು ಕ್ಯಾಂಪ್ಕೋ ಕಂಪೌಂಡ್ ಬಳಿಯ ಮುಹಮ್ಮದ್ ಆಶಿಫ್ (29) ಎಂದು ಗುರುತಿಸಲಾಗಿದೆ.
ಜ. 15ರಂದು ಮುಂಜಾನೆ 3.20ಕ್ಕೆ ಟಿಪ್ಪರ್‌ನೊಳಗೆ ಆಶಿಫ್ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೈವೇ ಪೆಟ್ರೋಲಿಂಗ್ ಪೊಲೀಸ್ ಹಾಗೂ ಸ್ಥಳೀಯರು ಅಶಿಫ್ ಅವರನ್ನು ಬಂದ್ಯೋಡ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಕುಂಬಳೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಮುಂಜಾನೆ 2 ಕ್ಕೆ ಆಶಿಫ್ ತನ್ನ ಟಿಪ್ಪರ್ ಸಹಿತ ಮನೆಯಿಂದ ತೆರಳಿದ್ದರು. ಸಂಬಂಧಿಕ ನೋರ್ವ ಫೋನ್ ಮಾಡಿದ್ದಾಗಿ ಹೇಳಲಾಗಿದೆ. ಉಪ್ಪಳಕ್ಕೆ ತಲುಪಬೇಕಾದ ಸಮಯವಾದರೂ ತಲುಪದ ಕಾರಣ, ಮನೆಯಿಂದ 3 ಕಿ.ಮೀ ದೂರದ ಕಾಯರ್‌ಕಟ್ಟೆಯ ರಸ್ತೆ ಬದಿ ಟಿಪ್ಪರ್ ನಿಲ್ಲಿಸಿದ್ದು ಕಂಡುಬಂದಿತು. ಆಶಿಫ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಿದ್ದರೂ ಪ್ರಕರಣ ನಿಗೂಢವಾಗಿದೆ. ಚಾಲಕನ ಸೀಟಿನ ಬಳಿಯ ಬಾಗಿಲು ಹಾಗೂ ಟಿಪ್ಪರ್‌ನೊಳಗೆ ರಕ್ತದ ಕಲೆಗಳು, ದಾರಿಯಲ್ಲಿ ಒಂದು ಬೆತ್ತ ಕೂಡಾ ಕಂಡುಬಂದಿದೆ. ಆಶಿಫ್ ಅವರ ಪಾದರಕ್ಷೆಗಳು ರಸ್ತೆ ಬದಿಯಲ್ಲಿದ್ದವು. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
* ಬೈಂದೂರು: ಪತಿಯ ಕಿರುಕುಳ: ಪತ್ನಿ ನೇಣು ಬಿಗಿದು ಆತ್ಮಹತ್ಯೆ
ಬೈಂದೂರು: ಇಲ್ಲಿನ ಗಂಗಾನಾಡು ಎಂಬಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಕಿರುಕುಳವೇ ಆತ್ಮಹತ್ಯೆ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.
ಮೃತರನ್ನು ಕುಂದಾಪುರದ ಕೊರಗ ಎಂಬವರ ಮಗಳು ಹಾಗೂ ಗಂಗಾನಾಡು ನಿವಾಸಿ ವಿಷ್ಣು ಎಂಬವರ ಪತ್ನಿ ರಂಜಿತಾ (28) ಎಂದು ಗುರುತಿಸಲಾಗಿದೆ. ಇವರು ಜ.13ರಂದು ರಾತ್ರಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದು, ಹುಡುಕಾಡಿ ದಾಗ ಆಕೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.