Categories
ಚಿಕ್ಕಮಗಳೂರು

ಕಾಡಾನೆ ತೊಲಗಿಸಿ – ಮತ ಕೇಳಿ, ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ..

ಕಾಡಾನೆ ತೊಲಗಿಸಿ – ಮತ ಕೇಳಿ, ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ..
– ನಿರಂತರ ಕಾಡಾನೆ ದಾಳಿಗೆ ಹೈರಾಣಾದ ತಾಲೂಕಿನ ಜನ
– ಸಮಸ್ಯೆ ನಿವಾರಣೆಗೆ ಸ್ಥಳೀಯರಿಂದ ಚುನಾವಣೆ ಬಹಿಷ್ಕಾರದ ಅಸ್ತ್ರ

NAMMUR EXPRESS NEWS
ಎನ್.ಆರ್ ಪುರ: ”ಕಾಡಾನೆಗಳ ಹಾವಳಿ ಸಂಪೂರ್ಣ ಕಡಿಮೆಯಾಗುವವರೆಗೂ ಚುನಾವಣೆ ಘೋಷಿಸಬೇಡಿ, ಘೋಷಿಸಿದರೆ ಮತಯಾಚನೆಗೆ ಬರಬೇಡಿ..” ಎಂದು ತಾಲೂಕಿನಲ್ಲಿ ಆನೆ ಹಾವಳಿ ಬಾಧಿತ ಗ್ರಾಮಗಳ ಜನರ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ರಸ್ತೆ ಸರಿಪಡಿಸಲು ಮತ್ತು ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಚುನಾವಣೆ ಬಹಿಷ್ಕಾರದ ಆಸ್ತ್ರ ಪ್ರಯೋಗಿಸಲಾಗುತ್ತಿತ್ತು. ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಗ್ರಾಮಸ್ಥರು ಸಮಸ್ಯೆ ಪರಿಹರಿಸಿಕೊಡಲು ಆಗ್ರಹಿಸುತ್ತಿದ್ದರು. ಈಗ ಜೀವ ಮತ್ತು ಜೀವನ ಉಳಿಸಿಕೊಳ್ಳುವುದಕ್ಕಾಗಿ ಚುನಾವಣೆ ಬಹಿಷ್ಕಾರದ ಆಸ್ತ್ರವನ್ನು ಬಳಸಲು ಮುಂದಾಗಿದ್ದಾರೆ. ಕಸಬಾ ಹೋಬಳಿಯ ಶೆಟ್ಟಿಕೊಪ್ಪ, ಸಾತ್‌ಕೊಳಿ, ಮುತ್ತಿನಕೊಪ್ಪ, ಹೊಸಕೊಪ್ಪ, ಯಕ್ಕಡಬೈಲು, ಆರಂಬಳಿ, ಜೇನುಬಿಟ್ಟಸರ, ಭೀಮನರಿ, ಚನ್ನಮಣಿ, ಭದ್ರಾ ಕಾಲೊನಿ, ಗುಳ್ಳದಮನೆ, ಅಬ್ಬಿಗುಂಡಿ, ಹಗಲುಮನೆ, ಮೀನು ಕ್ಯಾಂಪ್‌, ಅಲ್ದಾರ, ಬೈರಾಪುರ ಹಾಗೂ ತಾಲೂಕು ಕೇಂದ್ರದ ಸುತ್ತ ಕಾಡಾನೆಗಳು ನಿರಂತರ ಸುತ್ತಾಡುತ್ತಿವೆ. 3 ತಿಂಗಳ ಹಿಂದೆ ರಾತ್ರಿವೇಳೆ ಪ್ರತ್ಯಕ್ಷವಾಗಿ, ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದ್ದವು. ಇತ್ತೀಚೆಗೆ ಹಗಲು ಹೊತ್ತಿನಲ್ಲಿಯೇ ಯಾರ ಭಯವೂ ಇಲ್ಲದೆ ಗದ್ದೆ, ತೋಟಗಳಲ್ಲಿಹಸುಗಳಂತೆ ಹೊಕ್ಕು ಮೇಯುತ್ತವೆ. ಭತ್ತ, ಅಡಕೆ, ಬಾಳೆ ಮುಂತಾದ ಬೆಳೆಗಳನ್ನು ಕಣ್ಣೆದುರಿನಲ್ಲೇ ಹಾಳು ಮಾಡುತ್ತಿವೆ. ಗ್ರಾಮಸ್ಥರಿಗೆ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಆನೆ ಹಾವಳಿ ಒಂದೆರಡು ದಿನದ ಸಮಸ್ಯೆಯಾದರೆ ಸಹಿಸಬಹದು. ಪ್ರತಿದಿನವೂ ಬೆಳೆ ನಾಶ ನಡೆಯುತ್ತಿದ್ದರೆ ಸಹಿಸಿಕೊಂಡಿರುವುದು ಹೇಗೆ ಎಂಬುದು ರೈತರ ಪ್ರಶ್ನೆ. ಜೀವವನ್ನು ಕೈಯಲ್ಲಿಹಿಡಿದುಕೊಂಡು ಗದ್ದೆ, ತೋಟಗಳಿಗೆ ಹೋಗಬೇಕಾಗಿದೆ. ಕೆಲವು ಸಂದರ್ಭ ಮನೆಯಿಂದಲೇ ಹೊರಗೆ ಬಾರದಿರುವುದಂತೆ ಎಚ್ಚರಿಕೆ ನೀಡುತ್ತಾರೆ. ನಾವು ಜೀವನ ನಡೆಸುವುದು ಹೇಗೆ ಎಂಬುದು ಸಂತ್ರಸ್ತರ ಅಳಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.