ಕರಾವಳಿ ಟಾಪ್ ನ್ಯೂಸ್
* ಬಂಟ್ವಾಳ: ಬೈಕ್ ಓಡಿಸಿದ ಅಪ್ರಾಪ್ತನಿಗೆ ದಂಡ!
* ಕಾರ್ಕಳ: ಅಕ್ರಮ ಪಟಾಕಿ ಮಾರಾಟ; ಪೊಲೀಸರ ದಾಳಿ
* ಉಡುಪಿ: ಟೆಲಿಗ್ರಾಂ ಮೂಲಕ ಬಿಡ್ಡಿಂಗ್: ವ್ಯಕ್ತಿಗೆ ವಂಚನೆ
* ಪುತ್ತೂರು: ವ್ಯಕ್ತಿಯ ಮೇಲೆ ಅಪರಿಚಿತ ಗುಂಪಿನ ಹಲ್ಲೆ
* ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರನ ವಿರುದ್ಧ ಕೇಸ್
* ಬೈಂದೂರು: ಅಕ್ರಮ ಮರಳು ಸಾಗಾಟ; ಪೊಲೀಸರ ದಾಳಿ
* ಭಟ್ಕಳ: ಪಾರ್ಕಿಂಗ್ ವಿಚಾರವಾಗಿ ಮದುವೆ ಮನೆಯಲ್ಲಿ ಕಲಹ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಕಳೆದ ತಿಂಗಳು ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನವನ್ನು ಅಪ್ರಾಪ್ತ ವಯಸ್ಕ ಚಲಾಯಿಸಿದ್ದು, ಮತ್ತೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳದ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಸಿಸಿ ನಂಬರ್ 1766/2025 ರ ಅನ್ವಯ ಅಪ್ರಾಪ್ತನಿಗೆ ವಾಹನವನ್ನು ಚಲಾಯಿಸಲು ನೀಡಿದ, ಅದರ ಮಾಲೀಕ ಮೊಹಮ್ಮದ್ ಅನೀಸ್ ನ ವಿಚಾರಣೆ ನಡೆಸಿ, ಬಳಿಕ ಅವರ ಮೇಲೆ 32.೦೦೦ ರೂಪಾಯಿ ದಂಡವನ್ನು ವಿಧಿಸಿದೆ.
* ಕಾರ್ಕಳ: ಅಕ್ರಮ ಪಟಾಕಿ ಮಾರಾಟ; ಪೊಲೀಸರ ದಾಳಿ
ಕಾರ್ಕಳ: ದೀಪಾವಳಿ ಹಬ್ಬದ ನೆಪದಲ್ಲಿ ಮಿಯಾರು ಪ್ರದೇಶದಲ್ಲಿ, ಪರವಾನಿಗೆ ರಹಿತ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿ, ಮಾರಾಟ ಮಾಡಲು ಸಜ್ಜಾಗಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ದಾಳಿ ನಡೆಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ, ಮೂರು ಕಂಟೇನರ್ ಗಾತ್ರದ ಪ್ರಮಾಣದಲ್ಲಿ ಪಟಾಕಿಗಳು ಕಂಡುಬಂದಿವೆ. ಸ್ಥಳದಲ್ಲೇ ಪಟಾಕಿ ಸಂಬಂಧಿತ ಮಹಜರು, ಪರಿಶೀಲನೆ ಹಾಗೂ ಮಾದರಿ ಸಂಗ್ರಹ ಕಾರ್ಯವನ್ನು ನಡೆಸಲಾಯಿತು. ಈ ಕುರಿತು ಕಾರ್ಕಳ ವಲಯದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ ಅವರು “ಸುರಕ್ಷತಾ ನಿಯಮವನ್ನು ಉಲ್ಲಂಘಿಸಿ, ಪರವಾನಿಗೆ ರಹಿತ ಪಟಾಕಿ ಸಂಗ್ರಹಣೆ ಮಾಡಿರುವ ಕುರಿತು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ. ದೀಪಾವಳಿಯ ಹಿನ್ನೆಲೆಯಲ್ಲಿ ಪೊಲೀಸರು ಅನಧಿಕೃತ ಪಟಾಕಿ ಸಂಗ್ರಹಣೆ ಮತ್ತು ಮಾರಾಟದ ವಿರುದ್ಧ ಕಣ್ಗಾವಲಿರಿಸಿದ್ದು, ಮುಂದೆ ಕೂಡ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
* ಉಡುಪಿ: ಟೆಲಿಗ್ರಾಂ ಮೂಲಕ ಬಿಡ್ಡಿಂಗ್; ವ್ಯಕ್ತಿಗೆ ವಂಚನೆ
ಉಡುಪಿ: ಚಿನ್ನದ ಉತ್ಪನ್ನಗಳ ಬಿಡ್ಡಿಂಗ್ ಮೂಲಕ ಕೆಲಸದ ಆಸೆ ತೋರಿಸಿ, ವ್ಯಕ್ತಿಯೊಬ್ಬರನ್ನು ವಂಚಿಸಿದ ಘಟನೆ ನಡೆದಿದೆ. ಮೂಡುತೋನ್ಸೆ ನಿವಾಸಿಯಾದ ವ್ಯಕ್ತಿಯು ಕಳೆದ ತಿಂಗಳು ಟೆಲಿಗ್ರಾಂ ನಲ್ಲಿ ಬಂದ ಸಂದೇಶವನ್ನು ನಂಬಿ, ಸೆಪ್ಟೆಂಬರ್ ಹದಿನೆಂಟರಿಂದ ರಿಂದ ಅಕ್ಟೋಬರ್ ಹತ್ತರವರೆಗೆ ಅಪರಿಚಿತ ನೀಡಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿದ್ದಾರೆ. ಒಟ್ಟು 29,68, 973 ರೂಪಾಯಿಯಷ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ನಂತರ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಾನು ಮೋಸ ಹೋದ ವಿಚಾರದ ಕುರಿತು ಅರಿವಾಗಿದೆ. ವಂಚನೆಗೆ ಸಂಬಂಧಿಸಿದಂತೆ ಸೆನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಪುತ್ತೂರು: ವ್ಯಕ್ತಿ ಮೇಲೆ ಅಪರಿಚಿತ ಗುಂಪಿನ ಹಲ್ಲೆ
ಪುತ್ತೂರು: ಕೆಮ್ಮಾಯಿ ನಿವಾಸಿಯಾದ ಪ್ರವೀಣ್ ಎನ್ನುವವರು, ತಿಂಡಿಯನ್ನು ಪಾರ್ಸಲ್ ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ, ಅಪರಿಚಿತ ಗುಂಪೊಂದು ಅವರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ತಮ್ಮ ಅಕ್ಕನ ಕಾರಿನಲ್ಲಿ ಬಂದು ತಿಂಡಿಯನ್ನು ತೆಗೆದುಕೊಳ್ಳುತ್ತಿದ್ದಾಗ, ಅಲ್ಲಿಯೇ ನಿಂತಿದ್ದ ನಾಲ್ಕರಿಂದ ಐದು ಮಂದಿ ಮತ್ತು ಪ್ರವೀಣ್ ಅವರ ನಡುವೆ ಯಾವುದೋ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದಿದೆ. ಇದರಿಂದ ಉದ್ರಿಕ್ತರಾದ ಆ ಜನರು ಪ್ರವೀಣ್ ಅವರ ಕಾರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರವೀಣ್ ಅವರ ಜೊತೆಯಲ್ಲಿದ್ದ ಪ್ರಜ್ವಲ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಅಪರಿಚಿತರು ಇಬ್ಬರ ಮೇಲು ಹಲ್ಲೆ ನಡೆಸಿದಷ್ಟೇ ಅಲ್ಲದೆ, ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರವೀಣ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪುತ್ತೂರಿನ ಪೊಲೀಸ್ ಠಾಣೆಯಲ್ಲಿ ಕಾಲಂ 115, 126 (2), 352, 351 (2), 324 ಹಾಗೂ 3(5) ಬಿಎನ್ಎಸ್ 2023ರ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರನ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ, ಆರೋಪಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಸಂಬಂಧಿಸಿದಂತೆ, ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ ವೀಡಿಯೋ ಮೂಲಕ ಜನರಿಗೆ ತಪ್ಪು ಸಂದೇಶವನ್ನು ರವಾನಿಸಿದ್ದರು. ಮಹೇಶ್ ಶೆಟ್ಟಿ ತಿಮರೋಡಿಯನ್ನು ಕಳೆದ ತಿಂಗಳು ಬೆಳ್ತಂಗಡಿ ಪೊಲೀಸರು ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿರುವುದು ಕಾನೂನಿನ ಪ್ರಕಾರ ಸರಿಯಾಗಿದ್ದರೂ, ಜಯಂತ್ ಟಿ ಅದು ತಪ್ಪು ಎನ್ನುವ ರೀತಿಯಲ್ಲಿ ವೀಡಿಯೋ ಮೂಲಕ ಬಂಟ್ವಾಳ ಡಿವೈಎಸ್ಪಿ ಮತ್ತು ಪುತ್ತೂರು ಎಸಿ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿ ಜನರನ್ನು ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 353 (1) ಅನ್ವಯ ಸುಮಾಟೊ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಬೈಂದೂರು: ಅಕ್ರಮ ಮರಳು ಸಾಗಾಟ; ಪೊಲೀಸರ ದಾಳಿ
ಬೈಂದೂರು: ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಳಿ ನಡೆಸಿದ ಘಟನೆ, ಕಿರಿಮಂಜೇಶ್ವರ ಕೊಡೇರಿಯ ಎಡಮಾವಿನ ಹೊಳೆಯಲ್ಲಿ ನಡೆದಿದೆ. ಬೈಂದೂರು ಠಾಣೆಯ ಎಸ್ಐ ಆದ ತಿಮ್ಮೇಶ್ ಅವರು ಗಸ್ತು ಕರ್ತವ್ಯದಲ್ಲಿದ್ದ ಸಮಯದಲ್ಲಿ, ಮೂವರು ದೋಣಿಯಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ತಕ್ಷಣ ಸ್ಥಳಕ್ಕೆ ಧಾವಿಸಿ, ಅಕ್ರಮ ಚಟುವಟಿಕೆಯ ಮೇಲೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಸುರೇಶ್ ಪೂಜಾರಿ, ನಾಗೇಶ್ ಪೂಜಾರಿ ಮತ್ತು ಶರಣ್ ದೇವಾಡಿಗ ಅವರನ್ನು ಸೆರೆ ಹಿಡಿಯಲಾಯಿತು.
* ಭಟ್ಕಳ: ಪಾರ್ಕಿಂಗ್ ವಿಚಾರವಾಗಿ ಮದುವೆ ಮನೆಯಲ್ಲಿ ಕಲಹ
ಭಟ್ಕಳ: ಪಾರ್ಕಿಂಗ್ ವಿಚಾರವಾಗಿ ಪ್ರಾರಂಭಗೊಂಡ ಜಗಳವು, ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಲುಪಿದ ಘಟನೆ, ಹೆಬಳೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಹನೀಫಾಬಾದ್ ನಲ್ಲಿರುವ ಮದುವೆಯ ಸಭಾಂಗಣದ ಎದುರು ನಡೆದಿದೆ. ಸಣ್ಣ ಕಾರಣಕ್ಕಾಗಿ ಪ್ರಾರಂಭಗೊಂಡ ಕಲಹವು, ಮುಂದುವರಿದಂತೆಲ್ಲ ಗಂಭೀರವಾಗಿ ಅದು ಹೊಡೆದಾಟದ ಮಟ್ಟಕ್ಕೆ ತಲುಪಿದೆ. ಇದರಲ್ಲಿ ಐದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ ಮತ್ತು ಸಿಬ್ಬಂದಿಗಳು ಜಗಳ ನಿಲ್ಲಿಸುವಂತಾಯಿತು. ಇದಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.