ಕರಾವಳಿ ಟಾಪ್ ನ್ಯೂಸ್
* ಸುಳ್ಯ: ಕ್ರಿಪ್ಟೋ ಕರೆನ್ಸಿ ಮಾಫಿಯಾ ಹುಷಾರ್!
* ಮಂಗಳೂರು: ಬಜರಂಗದಳದ ವ್ಯಕ್ತಿಯಿಂದ ಬಾರ್ ನಲ್ಲಿ ಚೂರಿ ಇರಿತ
* ಬೆಳ್ತಂಗಡಿ: ಮೇಯಲು ಬಿಟ್ಟಿದ್ದ ದನ ಕಳುವು
* ಕಾರ್ಕಳ: ಜುಗಾರಿ ಆಡುತ್ತಿದ್ದ ಏಳು ಮಂದಿ ಪೊಲೀಸರಿಗೆ ಸೆರೆ
* ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸ್ಪೋಟ; ತಪ್ಪಿದ ಅವಘಡ
* ಉಡುಪಿ: ಕಾರು ಡಿಕ್ಕಿ; ಮಹಿಳೆಗೆ ಗಾಯ
* ಪುತ್ತೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನ ಕಳುವು
* ಹೊನ್ನಾವರ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ;
* ಭಟ್ಕಳ: ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸುಳ್ಯ: ಕ್ರಿಪ್ಟೋ ಕರೆನ್ಸಿ ಹೂಡಿಕೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಸುಳ್ಯದ ಕೆರೆಮೂಲೆಯ ನಿವಾಸಿಯಾದ ವ್ಯಕ್ತಿಯೊಬ್ಬರು ಚಾಟ್ ಜಿಪಿಟಿ ಮೂಲಕ ಆ್ಯಪ್ ವೊಂದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಅದರಲ್ಲಿ ಇಶಾ ಸಿಂಗ್ ಎನ್ನುವ ಅಪರಿಚಿತ ವ್ಯಕ್ತಿಯು ಕ್ರಿಪ್ಟೋ ಕರೆನ್ಸಿ ಹೂಡಿಕೆ ಮತ್ತು ಟ್ರೇಡಿಂಗ್ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಆನ್ ಲೈನ್ ಮೂಲಕ ಹಂತಹಂತವಾಗಿ 2,90,000 ದಷ್ಟು ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ಬಜರಂಗದಳದ ವ್ಯಕ್ತಿಯಿಂದ ಬಾರ್ ನಲ್ಲಿ ಚೂರಿ ಇರಿತ
ಮಂಗಳೂರು: ಬಾರ್ ಒಂದರಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಸೂರತ್ಕಲ್ ನಲ್ಲಿ ನಡೆದಿದೆ. ಮುಖೀದ್, ನಿಜಾಮ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಬಾರ್ ಗೆ ತೆರಳಿ ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿ ಮದ್ಯ ಸೇರಿಸಿದ ನಾಲ್ಕು ಅಪರಿಚಿತ ವ್ಯಕ್ತಿಗಳು ಅವರೊಂದಿಗೆ ವಾಗ್ವಾದ ನಡೆಸಿದ್ದು, ಬಾರ್ ನಿಂದ ಹೊರಬಂದ ಬಳಿಕವೂ ಜಟಾಪಟಿ ಮುಂದುವರಿದಿತ್ತು. ಆಗ ನಾಲ್ಕು ಜನ ಅಪರಿಚಿತ ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಚಾಕು ತೆಗೆದುಕೊಂಡು ಮುಖೀದ್ ನಿಗೆ ಹೊಟ್ಟೆ ಮತ್ತು ಕಿವಿಯ ಬಳಿ ಇರಿದಿದ್ದಾನೆ. ಮುನೀದ್ ನ ಜೊತೆಗಿದ್ದ ನಿಜಾಮ್ ನ ಕೈಗೂ ಚುಚ್ಚಿದ್ದರಿಂದ ಗಾಯವಾಗಿದೆ. ಗಾಯವು ಆಳವಾಗಿಯಾಗದ ಕಾರಣ ಮುನೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಸೂರತ್ಕಲ್ ನ ರೌಡಿ ಶೀಟರ್ ಗಳಾದ ಮತ್ತು ಬಜರಂಗದಳದ ಸಕ್ರಿಯರಾದ ಗುರುರಾಜ್, ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಎಂದು ಗುರುತಿಸಲಾಗಿದೆ. ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ, ಆರೋಪಿಗಳು ಮೊದಲೇ ಪರಾರಿಯಾಗಿದ್ದರಕ ಎನ್ನುವ ಸಂಗತಿ ತಿಳಿದುಬಂದಿದೆ. ಪೊಲೀಸ್ ಕಮಿಷನರ್ ಆದ ಸುಧೀರ್ ಕುಮಾರ್ ರೆಡ್ಡಿ ಅವರು, ಶುಕ್ರವಾರದಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ನಾಲ್ವರು ಆರೋಪಿಗಳ ವಿರುದ್ಧ 3೦7 ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
* ಬೆಳ್ತಂಗಡಿ: ಮೇಯಲು ಬಿಟ್ಟಿದ್ದ ದನ ಕಳುವು
ಬೆಳ್ತಂಗಡಿ: ಮೇಯಲು ಬಿಟ್ಟಿದ್ದ ದನವೊಂದು ಕಾಣೆಯಾಗಿರುವ ಘಟನೆ ಕಾಣೆಯೂರು ಗ್ರಾಮದ ಬೋರುಗುಡ್ಡೆಯಲ್ಲಿ ನಡೆದಿದೆ. ಈಶ್ವರ್ ನಾಯ್ಕ ಎನ್ನುವವರು ಕಳೆದ 10 ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿದ್ದು, ಒಂದು ಜರ್ಸಿ ದನ ಮತ್ತು ಅದರ ಕರುವನ್ನು, ಅವರ ಮನೆಯ ಬಳಿಯಿರುವ ಅಕೇಶಿಯ ಕಾಡಿಗೆ ಮೇಯಲು ಬಿಟ್ಟಿದ್ದರು. ಸಂಜೆ 6 ಗಂಟೆಯ ಸುಮಾರಿಗೆ ಕರು ಮಾತ್ರ ಮನೆಗೆ ಬಂದಿದ್ದು, ದನ ಬರಲಿಲ್ಲ. ಅಲ್ಲದೆ ಕರುವಿನ ಕುತ್ತಿಗೆಗೆ ನೈಲಾನ್ ಹಗ್ಗವೊಂದು ಸುತ್ತಿಕೊಂಡಿತ್ತು. ಇದರಿಂದಾಗಿ ಅನುಮಾನಗೊಂಡ ಈಶ್ವರ ನಾಯ್ಕ ಅವರು ಬಾಡಿಗೆ ತೆರಳಿ, ಎಲ್ಲೆಡೆ ಹುಡುಕಿದರೂ ದನ ಪತ್ತೆಯಾಗಲಿಲ್ಲ. ಅದರ ಮೌಲ್ಯ 25,000 ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಶ್ವರ ನಾಯ್ಕ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
* ಕಾರ್ಕಳ: ಜುಗಾರಿ ಆಡುತಿದ್ದ ಏಳು ಮಂದಿ ಪೊಲೀಸರಿಗೆ ಸೆರೆ
ಕಾರ್ಕಳ: ಕಳೆದೆರಡು ದಿನಗಳ ಹಿಂದೆ ಹಣವನ್ನು ಪಣವಾಗಿಟ್ಟು, ಇಸ್ಪೀಟ್ ಆಡುತ್ತಿದ್ದ ಏಳು ಮಂದಿ ಆರೋಪಿಗಳನ್ನು, ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಮತ್ತು ಅವರ ತಂಡ ಸೆರೆಹಿಡಿದ ಘಟನೆ, ಎಸ್ ಪಿ ಕ್ರಿಯೇಶನ್ ಕ್ಲಬ್ ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ 1130 ರೂಪಾಯಿ ನಗದು ಹಣ, ಇಸ್ಪೀಟ್ ಎಲೆಗಳು, 7 ಮೊಬೈಲ್ ಗಳು, ಕುರ್ಚಿಗಳು, ಮೇಜುಗಳು, ಸಿಸಿಟಿವಿ ಡಿವಿಆರ್ ಮತ್ತು ಕ್ಲಬ್ ನ ದಾಖಲಾತಿ ಪುಸ್ತಕವನ್ನು ವಶಪಡಿಸಿಕೊಳ್ಳಲಾಯಿತು. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 193/2025, 79, 80 ಕೆಪಿ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸ್ಪೋಟ; ಯುವಕನ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ
ಬಂಟ್ವಾಳ: ಅನಂತಾಡಿ ಗ್ರಾಮದ ಬಾಬನಕಟ್ಟೆ ಎನ್ನುವಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಯುವಕನ ಸಮಯಪ್ರಜ್ಞೆಯಿಂದ ಮನೆಯಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ತಾಯಿ ಸುಶೀಲ ಮತ್ತು ಮಗ ಜಯರಾಜ್ ಇಬ್ಬರೇ ವಾಸವಾಗಿದ್ದ ಮನೆಯಲ್ಲಿ, ಹಳೆ ಸಿಲಿಂಡರ್ ಖಾಲಿಯಾಗಿದ್ದು ಹೊಸ ಸಿಲಿಂಡರ್ ಅನ್ನು ಅಳವಡಿಸಲಾಗಿತ್ತು. ಆದರೆ, ಹೊಸ ಸಿಲಿಂಡರ್ ನ ರೆಗ್ಯುಲೇಟರ್ ಪಕ್ಕದಿಂದ ಗ್ಯಾಸ್ ಸೋರಿಕೆಯಾಗಿ, ಒಮ್ಮೆಗೆ ಬೆಂಕಿ ಹತ್ತಿಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಧೃತಿಗೆಡದೆ ಜಯರಾಜ್ ಬೆಂಕಿ ಹತ್ತಿಕೊಂಡಿದ್ದ ಸಿಲಿಂಡರ್ ಅನ್ನು ಮನೆಯಿಂದ ಹೊರ ಹಾಕಿದ್ದು, ತಕ್ಷಣ ನೆರೆಮನೆಯ ವೆಂಕಪ್ಪ ಪೂಜಾರಿಯವರು ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ಮೇಲೆ ಗೋಣಿಚೀಲವೊಂದನ್ನು ಒದ್ದೆ ಮಾಡಿ ಹಾಕಿ, ಬೆಂಕಿಯನ್ನು ಆರಿಸಿದ್ದಾರೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು, ಕಿಟಕಿ, ಬಾಗಿಲು, ದ್ವಿಚಕ್ರವಾಹನ ಸೇರಿದಂತೆ, ಹಲವಾರು ಸಾಮಗ್ರಿಗಳು ಹಾನಿಗೊಳಪಟ್ಟಿವೆ. ಜಯರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಾಯಿ ಮಗ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಸುಜಾತ, ಮಾಜಿ ಅಧ್ಯಕ್ಷರಾದ ಗಣೇಶ್ ಅವರೊಂದಿಗೆ, ಸನತ್ ಕುಮಾರ್ ರೈ, ಗಣೇಶ್ ಬಂಟ್ರಿಂಜ, ಉಮೇಶ್ ನೆಡ್ಯಾರ್, ಗ್ರಾಮ ಕರಣಿಕರು ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಹಾಗೆಯೇ ಬಂಟ್ವಾಳದ ಕಾರಿಂಜೇಶ್ವರ ಗ್ಯಾಸ್ ಏಜೆನ್ಸಿಯ ಕರುಣಾಕರ ಶೆಟ್ಟಿಯವರು ಸುಶೀಲ ಮತ್ತು ಜಯರಾಜ್ ಅವರನ್ನು ಭೇಟಿ ಮಾಡಿ, ಸ್ಪೋಟದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವ ಭರವಸೆಯನ್ನು ನೀಡಿದರು.
* ಉಡುಪಿ: ಕಾರು ಢಿಕ್ಕಿ; ಮಹಿಳೆಗೆ ಗಾಯ
ಉಡುಪಿ: ಪರ್ಕಳ ಕಡೆಯಿಂದ ಉಡುಪಿಯ ಕಡೆಗೆ ಸಾಗುತ್ತಿದ್ದ ಕಾರು ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದ ಘಟನೆ, ಮಣಿಪಾಲದ ಖಾಸಗಿ ಆಸ್ಪತ್ರೆಯೊಂದರ ಎದುರಿಗೆ ನಡೆದಿದೆ. ಇದರ ಪರಿಣಾಮವಾಗಿ ಶಿವಮೊಗ್ಗ ಮೂಲದ ರುಬೀನಾ ಕೌಸರ್ ಅವರು ಗಾಯಗೊಂಡಿದ್ದಾರೆ. ಕಾರು ಚಾಲಕನಾದ ಜಯಂತ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಪುತ್ತೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನ ಕಳುವು
ಪುತ್ತೂರು: ಬಪ್ಪಳಿಗೆಯ ನಿವಾಸಿಯಾದ ನೇಬಿಸಾ ಎನ್ನುವ ವ್ಯಕ್ತಿಯು, ಮನೆಯಲ್ಲಿ ಸಾಕಿಕೊಂಡಿದ್ದ ದನವನ್ನು ಮನೆಯ ಸಮೀಪದಲ್ಲಿದ್ದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಪುತ್ತೂರಿಗೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಕಟ್ಟಿ ಹಾಕಿದ್ದ ದನ ಇರಲಿಲ್ಲ. ಎರಡು ದಿನಗಳ ಕಾಲ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನೇಬಿಸಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
* ಹೊನ್ನಾವರ: 16 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿಯೊಂದಿಗೆ, ಮೂವರು ವ್ಯಕ್ತಿಗಳು ದೈಹಿಕ ಸಂಪರ್ಕ ಬೆಳೆಸಿದ ಘಟನೆ, ಹೊನ್ನಾವರದ ಗ್ರಾಮವೊಂದರಲ್ಲಿ ನಡೆದಿದೆ. ಪರಿಣಾಮವಾಗಿ ಹುಡುಗಿಯು ಎರಡು ತಿಂಗಳ ಗರ್ಭಿಣಿಯಾಗಿರುವ ಸಂಗತಿ ತಿಳಿದುಬಂದಿದೆ. ದುಷ್ಕರ್ಮಿಗಳನ್ನು ಮಾವಿನಕುರ್ವೆಯ ಅಭಿ ಗೌಡ, ನಗರೆ ಹೇಮಂತ ನಾಯ್ಕ ಮತ್ತು ಇಡಗುಂಜಿಯ ದೇವೇಂದ್ರ ನಾಯ್ಕ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯು ನೀಡಿದ ದೂರಿನ ಆಧಾರದ ಮೇಲೆ, ಮೂವರು ದುಷ್ಕರ್ಮಿಗಳ ವಿರುದ್ಧ ಲೈಂಗಿಕ ಅಪರಾಧ ಕಾಯ್ದೆ ಅನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
* ಭಟ್ಕಳ: ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ
ಭಟ್ಕಳ: ಗ್ರಾಮೀಣ ಪೊಲೀಸ್ ತಂಡವು ಸಿಪಿಐ ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ, ಆಹಾರ ನಿರೀಕ್ಷಕರಾದ ಉದಯ ತಳವಾರ ಅವರ ಸಹಯೋಗದೊಂದಿಗೆ ಪಡಿತರ ಯೋಜನೆಗೆ ಸಂಬಂಧಿಸಿದಂತೆ, ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡು ಬೇರೆಡೆಗೆ ಸಾಧಿಸಲಾಗುತ್ತಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸಮೀರ್ ಮುಗಳಿಹೊಂಡ, ಮಲ್ಲಿಕಾರ್ಜುನ್ ಆರ್ ಮಾಗಡಿ, ನಿತಿನ್ ಎಚ್.ಎನ್, ಸಬೂಲ್ ಮುಗಳಿ ಹೊಂಡ, ಮಾರುತಿ ಒಮ್ನಿ , ಅಶೋಕ ಲೈಲ್ಯಾಂಡ್ ಲಾರಿ, ಅಶೋಕ ಲೈಲ್ಯಾಂಡ್ ದೋಸ್ತ್ ವಾಹನಗಳ ಚಾಲಕರು ಮತ್ತು ಮಾಲೀಕರೆಂದು ಗುರುತಿಸಲಾಗಿದೆ. ಪೊಲೀಸರ ಈ ದಾಳಿಯಲ್ಲಿ 228 ಚೀಲಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ, ಸುಮಾರು 3,87,600 ರೂಪಾಯಿಯಷ್ಟು ಬೆಲೆ ಬಾಳುವ, 11400 ಕ್ವಿಂಟಾಲ್ ಪಡಿತರ ಅಕ್ಕಿಯನ್ನು, ಸಾಗಿಸಲು ಬಳಸಲಾದ ಅಶೋಕ ಲೈಲ್ಯಾಂಡ್ ಲಾರಿ, ಮಾರುತಿ ಒಮ್ನಿ, ಅಶೋಕ ಲೈಲ್ಯಾಂಡ್ ದೋಸ್ತ್ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಹಾರ ನಿರೀಕ್ಷಕರಾದ ಉದಯ್ ತಳವಾರ್ ಅವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಳ್ಳಲಾಗಿದೆ.