ಕರಾವಳಿ ಟಾಪ್ ನ್ಯೂಸ್
• ಕುಂದಾಪುರ: ಮದುವೆ ಮನೆಯಲ್ಲಿ ಕಳ್ಳತನ
• ಬೈಂದೂರು: ಅಪ್ರಾಪ್ತ ಬಾಲಕನ ವಸತಿಗೃಹಕ್ಕೆ ಕರೆತಂದ ಮಹಿಳೆ
• ಮಂಗಳೂರು: ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ ನಾಪತ್ತೆ
• ಕಾರವಾರ: 2 ಕಾರುಗಳ ನಡುವೆ ಅಪಘಾತ; ಓರ್ವ ವ್ಯಕ್ತಿ ಸಾವು
• ಪುತ್ತೂರು: ಯುವತಿಯರೊಂದಿಗೆ ಅನುಚಿತ ವರ್ತನೆ; ಆರೋಪಿ ಸೆರೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ಬ್ರಹ್ಮಾವರ ಮೂಲದ ಯಶೋಧ ಎನ್ನುವ ಮಹಿಳೆಯು ಮದುವೆಗೆಂದು ಕುಂದಾಪುರಕ್ಕೆ ಬಂದ ಸಂದರ್ಭದಲ್ಲಿ, ಮದುವೆ ಮನೆಯಲ್ಲಿಯೇ ತನ್ನ ಚಿನ್ನಾಭರಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಕುತ್ತಿಗೆಯಲ್ಲಿದ್ದ ಸುಮಾರು 3.5 ಲಕ್ಷ ಬೆಲೆಬಾಳುವ ಚಿನ್ನದ ಸರ ಮತ್ತು ಒಂದು ಲಕ್ಷ ಮೌಲ್ಯದ ಎರಡು ಚಿನ್ನದ ಉಂಗುರಗಳು ಕಳುವಾಗಿದೆ. ಮದುವೆ ಮುಗಿದ ಬಳಿಕ ಊಟಕ್ಕೆ ಕುಳಿತಿದ್ದ ಸಮಯದಲ್ಲಿ, ಸಭಾಗೃಹದ ಸಮೀಪದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ಸಂದರ್ಭದಲ್ಲಿ ಯಶೋಧ ಕೂಡ ತನ್ನ ಮಗುವಿಗೆ ತೊಂದರೆಯಾದರೆ ಎಂದು ಭಾವಿಸಿ, ಅರ್ಧಕ್ಕೆ ಊಟ ನಿಲ್ಲಿಸಿ, ಮಗುವನ್ನು ಎತ್ತಿಕೊಂಡು ಓಡಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಬಂದು ನೋಡಿದಾಗ, ಕುತ್ತಿಗೆಯಲ್ಲಿದ್ದ ಸರ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಸಿಸಿ ಕ್ಯಾಮೆರಾ ಕೂಡ ಇಲ್ಲದಿರುವುದರಿಂದ, ಕಳ್ಳತನ ಮಾಡಿರುವವರನ್ನು ಪತ್ತೆಹಚ್ಚುವುದು ಕೂಡ ಸಾಧ್ಯವಾಗಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಶೋಧ ಅವರ ಪತಿ ವೀರೇಂದ್ರ ಶೆಟ್ಟಿಗಾರ್ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರಿನ ಆಧಾರದ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬೈಂದೂರು: ಅಪ್ರಾಪ್ತ ಬಾಲಕನನ್ನು ವಸತಿಗೃಹಕ್ಕೆ ಕರೆತಂದ ಮಹಿಳೆ
ಬೈಂದೂರು: ಲೈಂಗಿಕ ಸಂಪರ್ಕ ಹೊಂದಲು ಬಯಸಿದ ವಿವಾಹಿತ ಮಹಿಳೆಯೊಬ್ಬಳು 17 ವರ್ಷದ ಅಪ್ರಾಪ್ತ ಬಾಲಕನನ್ನು ಕೇರಳದಿಂದ ಕರೆತಂದು, ವಸತಿಗೃಹದಲ್ಲಿ ಇರಿಸಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಕಳೆದೆರಡು ದಿನಗಳ ಹಿಂದೆ ಬಾಲಕ ಮತ್ತು ಆ ಮಹಿಳೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಾಲಕನ ಮನೆಯವರು ಮತ್ತು ಮಹಿಳೆಯ ಮನೆಯವರು ದೂರು ನೀಡಿದ್ದರು. ಕೇರಳದಿಂದ ಕೊಲ್ಲೂರಿಗೆ ಪಯಣಿಸುವ ಸಂದರ್ಭದಲ್ಲಿ ಮೊಬೈಲ್ ಬಳಸದ ಕಾರಣ, ಪೊಲೀಸರಿಗೆ ಅವರನ್ನು ಪತ್ತೆಹಚ್ಚಲು ಹೆಚ್ಚು ಸಮಯ ಹಿಡಿಯಿತು. ಕೊಲ್ಲೂರನ್ನು ತಲುಪಿದ ಬಳಿಕ ಮಹಿಳೆಯು ತನ್ನ ಗೆಳತಿಗೆ ತಲುಪಿದ ಸಂದೇಶವನ್ನು ಕಳುಹಿಸಿದ್ದರಿಂದ ಪೊಲೀಸರಿಗೆ ಅವರ ಸುಳಿವು ದೊರೆಯಿತು. ವಸತಿಗೃಹದಲ್ಲಿ ಬಾಲಕನೊಂದಿಗೆ ಇದ್ದ ಮಹಿಳೆಯನ್ನು ಕೇರಳದ ಪೊಲೀಸರು ಸೆರೆಹಿಡಿದು, ಕೊಟ್ಟಾರಕ್ಕರ ಜೈಲಿನಲ್ಲಿ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಬಾಲಕನನ್ನು ಹೆತ್ತವರೊಂದಿಗೆ ಕಳುಹಿಸಿಕೊಡಲಾಯಿತು.
• ಮಂಗಳೂರು: ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ ನಾಪತ್ತೆ
ಮಂಗಳೂರು: ಕಾಟಿಪಳ್ಳ ಗ್ರಾಮದ ಪ್ರಜ್ಞಾ ಎಂಬ ಯುವತಿಯು ಸೋಮವಾರದಂದು ಸಮವಸ್ತ್ರ ಧರಿಸಿ, ತಾಯಿಗೆ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು, ಮರಳಿ ಮನೆಗೆ ಬಾರದಿರುವ ಸಂಗತಿ ಬೆಳಕಿಗೆ ಬಂದಿದೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಸೂರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಕಾರವಾರ: ಎರಡು ಕಾರುಗಳ ನಡುವೆ ಅಪಘಾತ; ಓರ್ವ ವ್ಯಕ್ತಿ ಸಾವು
ಕಾರವಾರ: ಪುತ್ತೂರು ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರಿನ ಚಾಲಕ, ಎದುರಿಗೆ ಬರುತ್ತಿದ್ದ ಮತ್ತೊಂದು ಕಾರನ್ನು ಹಿಂದಿಕ್ಕಿ ತಾನು ಮುಂದೆ ಹೋಗಲು ಪ್ರಯತ್ನಿಸುವಾಗ, ಕಾರು ನಿಯಂತ್ರಣ ತಪ್ಪಿದ ಘಟನೆ ಹೆದ್ದಾರಿಯ ಸುರಂಗ ಮಾರ್ಗದಲ್ಲಿ ನಡೆದಿದೆ. ಇದರ ಪರಿಣಾಮವಾಗಿ ಕಾರು ಚಾಲಕ ರಂಜಿತ್ ಕುಮಾರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜಿತ್ ಕುಮಾರ್ ಗೋವಾದಿಂದ ಪುತ್ತೂರಿನ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ.
• ಪುತ್ತೂರು: ಯುವತಿಯರೊಂದಿಗೆ ಅನುಚಿತ ವರ್ತನೆ; ಆರೋಪಿ ಸೆರೆ
ಪುತ್ತೂರು: ವಿಟ್ಲ ಮೂಲದ ರಾಜೇಶ್ ಎಂಬ ವ್ಯಕ್ತಿಯು, ಯುವತಿಯರು ಮತ್ತು ಮಹಿಳೆಯರ ಮುಂದೆ ಅನುಚಿತವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ, ಪರ್ಪುಂಜದ ಮಹಿಳೆಯರಿಬ್ಬರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸಂಪ್ಯ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯದ ಎದುರಿಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸುವಂತೆ ಆದೇಶ ನೀಡಿದೆ.