– ಕರಾವಳಿಯ ಜನತೆಯಲ್ಲಿ ಹೆಚ್ಚಿದ ಆತಂಕ !
– ಸಿಸಿ ಕ್ಯಾಮರಾ ಮುಚ್ಚಿ ಹೋಟೆಲ್ ಗೆ ನುಗ್ಗಿದ ಕಳ್ಳರು!
– ಉಳ್ಳಾಲ: ತಪ್ಪಿದ ನೈತಿಕ ಪೊಲೀಸ್ಗಿರಿ!
– ಕೈಗಾರಿಕ ಪ್ರದೇಶದಲ್ಲಿ ಕಲ್ಲು ಬಂಡೆ ಸ್ಫೋಟ, ಅಕ್ರಮ ಕಲ್ಲು ಸಾಗಾಟ!
– ಹೆಬ್ರಿಯಲ್ಲಿ ವಿದ್ಯಾರ್ಥಿ ನೇಣಿಗೆ ಶರಣು!
NAMMUR EXPRESS NEWS
ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯರಸ್ತೆಯ ವಾಣಿಜ್ಯ ಸಂಕೀರ್ಣವೊಂದರಲ್ಲಿನ ಹೊಟೇಲ್ಗೆ ಕಳ್ಳರು ನುಗ್ಗಿದ್ದು, ಮುಸುಕುಧಾರಿ ಕಳ್ಳ ಹೋಟೇಲ್ನ ಬೀಗ ಮುರಿಯುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಆ ಬಳಿಕ ಕ್ಯಾಮರಾವನ್ನು ಅಡ್ಡಲಾಗಿ ಮುಚ್ಚಲಾಗಿದೆ. ಹೊಟೇಲ್ನ ಶಟರ್ನ ಬೀಗ ಮುರಿದು ಒಳ ನುಗ್ಗಿ ಡ್ರಾಯರ್ನಲ್ಲಿದ್ದ ಹಣವನ್ನು ಕಳವು ಮಾಡಲಾಗಿದೆ. ಜೊತೆಗೆ ಅದೇ ಕಟ್ಟಡದ ಮೆಡಿಕಲ್ ಗೂ ನುಗ್ಗಿದ್ದಾರೆ ಎನ್ನಲಾಗಿದೆ. ಬಿ.ಸಿ.ರೋಡಿನಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ 10 ದಿನಗಳ ಹಿಂದೆ ಕೈಕಂಬದಲ್ಲಿ ಇದೇ ರೀತಿ ನಾಲ್ಕೈದು ಅಂಗಡಿಗಳಿಂದ ನಗದು ಕಳವು ಮಾಡಲಾಗಿತ್ತು. ಜತೆಗೆ ಅಜ್ಜಿಬೆಟ್ಟಿನಲ್ಲಿ ಮಹಿಳೆಯ ಸರ ಎಳೆದು ಪರಾರಿಯಾಗಿದ್ದು, ಈ ಪ್ರಕರಣದಲ್ಲಿ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಳ್ಳಾಲ: ಸೋಮೇಶ್ವರ ದೇವಸ್ಥಾನ ಮತ್ತು ಬೀಚ್ ಸುತ್ತಿ ಉಳ್ಳಾಲದಲ್ಲಿರುವ ಕಾಲೇಜಿಗೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿಗಳ ತಂಡವನ್ನು ಸ್ಥಳೀಯರು ಪ್ರಶ್ನಿಸಿದ್ದು, ವಿದ್ಯಾರ್ಥಿಗಳ ತಂಡದಲ್ಲಿ ಓರ್ವ ಮುಸ್ಲಿಂ ವಿದ್ಯಾರ್ಥಿ ಇದ್ದ ಕಾರಣ ನೈತಿಕ ಪೊಲೀಸ್ಗಿರಿಯಾಗುವ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರ ವಶಕ್ಕೆ ವಿದ್ಯಾರ್ಥಿಗಳನ್ನು ಒಪ್ಪಿಸಿದ ಘಟನೆ ಸೋಮೇಶ್ವರ ಬಸ್ ನಿಲ್ದಾಣದ ಬಳಿ ನಡೆದಿದೆ. ಉಳ್ಳಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಸೋಮೇಶ್ವರ ದೇವಸ್ಥಾನ ಮತ್ತು ಬೀಚ್ಗೆ ಆಗಮಿಸಿದ್ದು, ಸಂಜೆ ಕೆಲವು ವಿದ್ಯಾರ್ಥಿಗಳು ತಮ್ಮ ವಾಹನಗಳಲ್ಲಿ ತೆರಳಿದರೆ, ನಾಲ್ವರು ವಿದ್ಯಾರ್ಥಿನಿಯರು ಮತ್ತು ಮೂವರು ವಿದ್ಯಾರ್ಥಿಗಳು ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು.
ಈ ಸಂದರ್ಭ ವಿದ್ಯಾರ್ಥಿನಿಯೊಂದಿಗೆ ಇದ್ದ ಓರ್ವ ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ಆ ವಿದ್ಯಾರ್ಥಿ ಮುಸ್ಲಿಂ ವಿದ್ಯಾರ್ಥಿ ಎಂದು ತಿಳಿದುಬಂದಿತ್ತು. ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೆಲವೇ ಕ್ಷಣದಲ್ಲಿ ಪೊಲೀಸರು ಆಗಮಿಸಿದ್ದರಿಂದ ನೈತಿಕ ಪೊಲೀಸ್ಗಿರಿ ತಪ್ಪಿದಂತಾಗಿದೆ. ಈ ಕುರಿತು ಇನ್ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್. ಅವರು ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿ ನೀಡಿದಾಗ ಎಲ್ಲ ವಿದ್ಯಾರ್ಥಿಗಳು ಕೇರಳದ ಒಂದೇ ಊರಿನವರಾಗಿದ್ದು. ವಿದ್ಯಾರ್ಥಿಯ ಪರಿಚಯವಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಬಿಡಲಾಗಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಪಡುಬಿದ್ರೆ : ನಂದಿಕೂರು ಕೈಗಾರಿಕ ಪ್ರದೇಶದಲ್ಲಿರುವ ಕಲ್ಲು ಬಂಡೆಗಳಿಂದ ಕೂಡಿರುವ ಖಾಲಿ ನಿವೇಶನದಲ್ಲಿ ಯಾವುದೇ ರೀತಿಯ ಸ್ಫೋಟಕ ಪರವಾನಿಗೆ ಇಲ್ಲದೇ ಕಲ್ಲು ಬಂಡೆಗಳನ್ನು ಸ್ಫೋಟಿಸಿ ಅವುಗಳನ್ನು ಲಾರಿಗಳ ಮೂಲಕ ತುಂಬಿಸಿ ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪಡುಬಿದ್ರಿ ಪೊಲೀಸರು ನಾಲ್ಕು ಟಿಪ್ಪರ್, ಸ್ಥಳದಲ್ಲಿ ಉಪಯೋಗಿಸುತ್ತಿದ್ದ ಹಿಟಾಚಿ ಯಂತ್ರ, ಕಂಪ್ರಸರ್ ಟ್ರ್ಯಾಕ್ಟರ್ ಹಾಗೂ ಬಂಡೆ ಸ್ಫೋಟಿಸಲು ಸಿದ್ಧತೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಪಡುಬಿದ್ರಿ ಕ್ರೈಂ ಎಸೈ ಸುದರ್ಶನ್ ದೊಡ್ಡಮನಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿಯ ವೇಳೆ ಖಾಲಿ ನಿವೇಶನದಲ್ಲಿ ಕಲ್ಲು ಬಂಡೆಗಳನ್ನು ಒಡೆದು ಹಾಕಿರುವುದು ಮತ್ತು ಒಡೆದಿರುವ ಬಂಡೆಕಲ್ಲುಗಳನ್ನು ಲೋಡ್ ಮಾಡಿರುವುದು ಪತ್ತೆ ಯಾಗಿದೆ.
ಬಂಡೆಕಲ್ಲುಗಳಲ್ಲಿ ಕೆಲವು ಕಡೆ ರಂಧ್ರ ಕೊರೆದು ಎಲೆಕ್ಟ್ರಿಕ್ ವಯರ್ ಸಂಪರ್ಕಿಸಿ ಬಂಡೆಕಲ್ಲುಗಳನ್ನು ಸ್ಫೋಟ ನಡೆಸಲು ಸಿದ್ಧತೆ ನಡೆಸಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಕಲ್ಲು ಬಂಡೆ ಸ್ಫೋಟಿಸುತ್ತಿದ್ದ ಮಂಜುನಾಥ ನಾಯ್ಕರ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲಿದ್ದ ಟಿಪ್ಪರ್ ಲಾರಿ ಚಾಲಕರು ಓಡಿ ಹೋಗಿದ್ದಾರೆ. ಈ ಖಾಲಿ ಜಾಗವು ಐವನ್ ಎನ್ನುವವರಿಗೆ ಸೇರಿದ್ದಾಗಿದ್ದು ವೆರೋನಿಕಾ ಯಾನೆ ಶರ್ವಿನ್ ಅವರು ಸ್ಪೋಟಕ ಬಳಸಿ ಒಡೆಯಲು ಗುತ್ತಿಗೆ ವಹಿಸಿಕೊಂಡಿದ್ದಾಗಿ ಆರೋಪಿ ಮಂಜುನಾಥ ಬಾಯ್ಬಿಟ್ಟಿದ್ದಾನೆ.
ಸಂಬಂಧಪಟ್ಟ ಇಲಾಖೆಯಿಂದ ಬಂಡೆಕಲ್ಲನ್ನು ಸ್ಫೋಟಕ ಬಳಸಿ ಒಡೆಯಲು ಮತ್ತು ಒಡೆದ ಬಂಡೆಕಲ್ಲುಗಳನ್ನು ಟಿಪ್ಪರ್ಗಳ ಮೂಲಕ ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆದಿರುವುದಿಲ್ಲ. ಸ್ಥಳದಲ್ಲಿದ್ದ ಸ್ಫೋಟಕ ವಸ್ತುಗಳು, ಕಂಪ್ರಸರ್ ಟ್ರ್ಯಾಕ್ಟರ್, 4 ಟಿಪ್ಪರ್ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಜಾಗದ ಮಾಲಕ ಐವನ್, ವೆರೊನಿಕಾ ಯಾನೆ ಶರ್ವಿನ್, ಮಂಜುನಾಥ ನಾಯ್ಕರ್ ಮತ್ತು ಇತರರ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಹೆಬ್ರಿ: ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಶಶಾಂಕ್ ಎಂಬ ಯುವಕ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಹೆಬ್ರಿ ಗ್ರಾಮದ ಗಿಲ್ಲಾಳಿ ಕುಡ್ತರಬೈಲುವಿನ ಮನೆಯ ಮಲಗುವ ಕೋಣೆಯ ಮೇಲಿನ ಮರದ ಜಂತಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
