Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

•ಪುತ್ತೂರು: ದನ ಕದ್ದು ತೋಟದಲ್ಲೇ ಮಾಂಸ ಮಾಡಿದ ದುಷ್ಕರ್ಮಿಗಳು!

• ಉಡುಪಿ: ಹೂಡಿಕೆ ಹೆಸರಿನಲ್ಲಿ ಕೊಟ್ಯಂತರ ರೂಪಾಯಿ ವಂಚನೆ!
• ಬ್ರಹ್ಮಾವರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ
• ಕುಂದಾಪುರ: ಹನಿಟ್ರ್ಯಾಪ್ ಪ್ರಕರಣ; ಆರೋಪಿಗಳ ಬಂಧನ
• ಮೂಡಬಿದರೆ: 10 ವರ್ಷಗಳ ಹಿಂದೆ ಮಾಡಿದ ಅಪರಾಧಕ್ಕೆ ಈಗ ಶಿಕ್ಷೆ
• ಮಂಗಳೂರು: ಫ್ಲೈ ಓವರ್ ಕೆಳಗೆ ನಿಲ್ಲಿಸಿದ ಬೈಕ್ ಮಾಯ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಹೆನ್ರಿ ಡಿ. ಅಲ್ಮೇಡಾ ಎನ್ನುವ ಮಹಿಳೆಯು ಕಳೆದೆರಡು ತಿಂಗಳ ಹಿಂದೆ, ಫೇಸ್ ಬುಕ್ ನಲ್ಲಿ ಹೂಡಿಕೆ ಮಾಡುವುದರ ಕುರಿತು ಜಾಹೀರಾತೊಂದನ್ನು ನೋಡಿದಾಗ, ಕೆಳಗೆ ನೀಡಿದ ಲಿಂಕ್ ಅನ್ನು ಒತ್ತಿದ್ದಾರೆ. ಬಳಿಕ ಅಲ್ಮೇಡಾ ಅವರ ವಾಟ್ಸಾಪ್ ಗೆ ಹೂಡಿಕೆ ಮಾಡುವಂತೆ ಸಂದೇಶ ಬರುವುದರ ಜೊತೆಗೆ, ಅಂಕಿತ್ ಘೋಷ್ ಎನ್ನುವ ಅಪರಿಚಿತ ವ್ಯಕ್ತಿಯು ಕರೆ ಮಾಡಿ, ಹೂಡಿಕೆಯ ಕುರಿತು ಅಲ್ಮೇಡಾ ಅವರಿಗೆ ಮಾಹಿತಿಯನ್ನು ನೀಡಿ, ವಾಟ್ಸಾಪ್ ಗುಂಪಿಗೆ ಅಲ್ಮೇಡಾ ಅವರನ್ನು ಸೇರಿಸಿದ್ದಾರೆ. ಗುಂಪಿನಲ್ಲಿರುವ ಹಲವಾರು ಮೊಬೈಲ್ ಸಂಖ್ಯೆಗಳಿಗೆ ಹೂಡಿಕೆ ಮಾಡಿದಂತೆಲ್ಲ ಲಾಭಾಂಶ ಅಧಿಕವಾಗುತ್ತದೆ ಎಂದು ತಿಳಿಸಿದ್ದಾರೆ.‌ ಇದನ್ನು ನಿಜವೆಂದು ಭಾವಿಸಿದ ಅಲ್ಮೇಡಾ ಅವರು ಜುಲೈ 22 ರಿಂದ ಸೆಪ್ಟೆಂಬರ್ ಒಂದರವರೆಗೆ ಹಂತಹಂತವಾಗಿ ಸುಮಾರು 1, 32,90,000 ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಬಳಿಕ ವಂಚಕರು ಹೂಡಿದ ಹಣವನ್ನು ಹಿಂದೆ ನೀಡುವುದಾಗಲಿ ಅಥವಾ ಲಾಭಾಂಶ ನೀಡುವುದಾಗಲಿ ಏನನ್ನು ಮಾಡದೇ ಇದ್ದಾಗ, ತಾನು ಮೋಸ ಹೋದ ಸಂಗತಿ ಅಲ್ಮೇಡಾ ಅವರಿಗೆ ಅರಿವಾಗಿದೆ.‌ ನಂತರ ಅವರು ಉಡುಪಿಯ ಸೆನ್ ಪೊಲೀಸ್ ಠಾಣೆಗೆ ದೂರ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

• ಬ್ರಹ್ಮಾವರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಬ್ರಹ್ಮಾವರ: ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸುವ ಮೂಲಕ, ಹನ್ನೊಂದು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹೇರಾಡಿ ಗ್ರಾಮದ ರಶ್ಮಿ ಬಾರ್ ಮತ್ತು ಲಾಡ್ಜ್ ನ ಕಟ್ಟಡದಲ್ಲಿ ನಡೆದಿದೆ.‌ ಈ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ ಸುಮಾರು 21,080 ರೂಪಾಯಿ ನಗದು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ರಾಜೀವ್ ಶೆಟ್ಟಿ, ರತ್ನಾಕರ, ಪ್ರಶಾಂತ್, ಹರೀಶ್ ಮೊಗವೀರ, ವಿಶ್ವನಾಥ ಪೂಜಾರಿ ಭಟ್ಕಳ, ಗಣೇಶ್ ಪೂಜಾರಿ, ಕೇಶವ, ಪ್ರಭಾಕರ ಶೆಟ್ಟಿ, ಜಯರಾಜ್, ರಾಜು ಪೂಜಾರಿ ಮತ್ತು ಲೋಹಿತ್ ಕುಪ್ಪಸ್ವಾಮಿ ಭೋವಿ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಕುಂದಾಪುರ: ಹನಿಟ್ರ್ಯಾಪ್ ಪ್ರಕರಣ; ಆರೋಪಿಗಳ ಬಂಧನ

ಕುಂದಾಪುರ: ಸಂದೀಪ್ ಎನ್ನುವವರು ಹನಿ ಟ್ರ್ಯಾಪ್ ಜಾಲಕ್ಕೆ ಒಳಗಾಗಿ, ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಕೇವಲ ಮೂರು ಗಂಟೆಗಳ ಒಳಗಾಗಿ, ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಆರೋಪಿಗಳನ್ನು ಅಬ್ದುಲ್ ಸವಾದ್, ಮೊಹಮ್ಮದ್ ನಾಸಿರ್ ಶರೀಫ್ ಮತ್ತು ಅಸ್ಮಾ ಎಂದು ಗುರುತಿಸಲಾಗಿದೆ. ಸಂದೀಪ್ ಅವರು ಕಳೆದ ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ, ಅಬ್ದುಲ್ ಸವಾದ್ ಮತ್ತು ಮೊಹಮದ್ ನಾಸೀರ್ ಶರೀಫ್ ಎನ್ನುವವರ ಪರಿಚಯವಾಯಿತು. ಆ ಸಂದರ್ಭದಲ್ಲಿ ಅಸ್ಮಾ ಅವರ ಪರಿಚಯ ಕೂಡ ಆಯಿತು ಎನ್ನಲಾಗಿದೆ. ಆಗ ಅಸ್ಮಾ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಲು ಸಂದೀಪ್ ನನ್ನು ಪ್ರೇರೇಪಿಸಿ, ಸೆಪ್ಟೆಂಬರ್ ಎರಡರಂದು ಸಂಜೆ 6:30ರ ಸುಮಾರಿಗೆ ಕೋಟೇಶ್ವರಕ್ಕೆ ಬರುವಂತೆ ತಿಳಿಸಿದ್ದಾಳೆ. ಅದರಂತೆ ಸಂದೀಪ್ ಆಗಮಿಸಿದಾಗ ಅಸ್ಮಾ ಸಂದೀಪ್ ನನ್ನು ಆಟೋದಲ್ಲಿ ಮೂಡುಗೋಪಾಡಿಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋದಳು. ಜೊತೆಗೆ ಅಬ್ದುಲ್ ಸಾವದ್ ಮತ್ತು ಮೊಹಮ್ಮದ್ ನಾಸಿರ್ ಶರೀಫ್ ನನ್ನು ಅಲ್ಲಿಗೆ ಬರಹೇಳಿದ್ದಾಳೆ. ನಂತರ ಮೂವರು ಸೇರಿ ಸಂದೀಪ್ ನಿಗೆ ಮೂರು ಲಕ್ಷ ರೂಪಾಯಿ ನೀಡುವಂತೆ ಬೆದರಿಕೆಯೊಡ್ಡಿದ್ದಾರೆ. ಆಗ ಸಂದೀಪ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಉಡುಪಿಯ ಎಸ್ ಪಿ ಹರಿರಾಮ್ ಶಂಕರ್ ಅವರ ಆದೇಶದಂತೆ, ಹೆಚ್ಚುವರಿ ಎಸ್ ಪಿ ಆದ ಸುಧಾಕರ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಕುಂದಾಪುರದ ಡಿವೈಎಸ್ ಪಿ ಎಚ್. ಡಿ .ಕುಲಕರ್ಣಿ ಅವರ ನಿರ್ದೇಶನದಂತೆ ನಗರ ಠಾಣೆಯ ಎಸ್ಐಗಳಾದ ನಂಜಾನಾಯ್ಕ, ಪುಷ್ಪ, ಪ್ರಿನ್ಸ್, ಘನಶ್ಯಾಮ, ವಾಹನ ಚಾಲಕರಾದ ರಾಜು, ನಾಗೇಶ್, ಮಹಾಬಲ, ರಾಘವೇಂದ್ರ, ಗೌತಮ್, ಭಾಗೀರಥಿ, ನಾಗಶ್ರೀ ಮತ್ತು ರೇವತಿ ಅವರು ಕಾರ್ಯಾಚರಣೆಯನ್ನು ನಡೆಸಿ, ವಿಚಾರಣೆಯ ಮೂಲಕ ಆರೋಪಿಗಳನ್ನು ಬಂಧಿಸಿ, ಅವರನ್ನು ಕುಂದಾಪುರದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳು ಬಳಸಿದ ಎರಡು ಕಾರ್ ಗಳನ್ನು ವಶಪಡಿಸಿಕೊಳ್ಳಲಾಯಿತು.

• ಪುತ್ತೂರು: ದನವನ್ನು ಕದ್ದು, ಮಾಲೀಕರ ತೋಟದಲ್ಲಿ ಮಾಂಸವನ್ನು ಸಿದ್ಧಪಡಿಸಿದ ದುಷ್ಕರ್ಮಿಗಳು

ಪುತ್ತೂರು: ಕಡಂಬು ನಿವಾಸಿಯಾದ ದೇಜಪ್ಪ ಮೂಲ್ಯ ಅವರು ಗಬ್ಬದ ಹಸುವೊಂದನ್ನು ಸಾಕಿಕೊಂಡಿದ್ದು, ಬುಧವಾರ ಬೆಳಿಗ್ಗೆ ಎದ್ದು ನೋಡಿದಾಗ ಕಂಡುಬರಲಿಲ್ಲ. ಮನೆಯವರೆಲ್ಲ ಹುಡುಕಿದಾಗ ಅವರದ್ದೇ ತೋಟದಲ್ಲಿ ದುಷ್ಕರ್ಮಿಗಳು ದನವನ್ನು ಕಡಿದು, ಅಲ್ಲಿಯೇ ಮಾಂಸ ಸಿದ್ಧಪಡಿಸಿ, ಚರ್ಮ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಅಲ್ಲೇ ಬಿಟ್ಟು ಹೋಗಿರುವುದು ಕಂಡುಬಂದಿದೆ. ಮಾಹಿತಿ ಲಭಿಸುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆಯನ್ನು ನಡೆಸಿದರು.‌

• ಮೂಡಬಿದರೆ: 10 ವರ್ಷಗಳ ಹಿಂದೆ ಮಾಡಿದ ಅಪರಾಧಕ್ಕೆ ಈಗ ಶಿಕ್ಷೆ

ಮೂಡಬಿದರೆ: 2015ರಲ್ಲಿ ಮಧ್ಯಾಹ್ನ ಕಟೀಲಿನಿಂದ ನಿಡ್ಡೋಡಿಯತ್ತ ತೆರಳುತ್ತಿದ್ದ ಬೈಕಿಗೆ, ನಿಡ್ಡೋಡಿಯಿಂದ ಕಟೀಲಿನತ್ತ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟಿದ್ದರು. ಬಸ್ ಚಾಲಕ ಶ್ರೀನಿವಾಸ್ ಅವರ ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದಾಗಿ ಈ ಘಟನೆ ಸಂಭವಿಸಿದ್ದ ಹಿನ್ನೆಲೆಯಲ್ಲಿ, ಅವರಿಗೆ ಇದೀಗ ಮೂಡಬಿದರೆಯ ಸಿ ಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆಯನ್ನು ವಿಧಿಸಿದ್ದಾರೆ. ಆರೋಪಿಗೆ ಭಾರತೀಯ ದಂಡ ಸಂಹಿತೆ ಕಾಲಂ 279ರ ಅನ್ವಯ ಆರು ತಿಂಗಳುಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಮತ್ತು 500 ರೂಪಾಯಿ ಜುಲ್ಮಾನೆ ಪಾವತಿಸಲು ಆದೇಶ ನೀಡಲಾಗಿದ್ದು, ತಪ್ಪಿದಲ್ಲಿ ಏಳು ದಿನಗಳ ಸಾದಾ ಕಾರಾಗೃಹ ಶಿಕ್ಷೆ, ಭಾರತೀಯ ದಂಡ ಸಂಹಿತೆ 338ರ ಅನ್ವಯ ಎರಡು ವರ್ಷಗಳ ಕಾರಾಗೃಹ ಬಂಧನದ ಜೊತೆಗೆ 500 ರೂಪಾಯಿ ಜುಲ್ಮಾನೆ ಪಾವತಿಸಲು ಆದೇಶವನ್ನು ಹೊರಡಿಸಿದೆ. ಅದು ಕೂಡ ತಪ್ಪಿದಲ್ಲಿ, ಏಳು ದಿನಗಳ ಸಾದಾ ಕಾರಾಗೃಹವಾಸ, ಭಾರತೀಯ ದಂಡ ಸಂಹಿತೆ 3೦4 (ಎ) ಪ್ರಕಾರ ಎರಡು ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು 5000 ರೂಪಾಯಿ ಜುಲ್ಮಾನೆ ಪಾವತಿಸಲು ಆಜ್ಞಾಪಿಸಿದೆ. ಅದರಿಂದ ಕೂಡ ತಪ್ಪಿಸಿಕೊಂಡಿದ್ದಾದಲ್ಲಿ 30 ದಿನಗಳ ಸಾದಾಕಾರಾಗೃಹ ವಾಸದೊಂದಿಗೆ, ಈ ಮೂರು ಶಿಕ್ಷೆಗಳನ್ನು ಆರೋಪಿಯು ಏಕಕಾಲದಲ್ಲಿ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ.‌

• ಮಂಗಳೂರು: ಫ್ಲೈ ಓವರ್ ಕೆಳಗೆ ನಿಲ್ಲಿಸಿದ ಬೈಕ್ ಮಾಯ

ಮಂಗಳೂರು: ಅಜಯ್ ಎನ್ನುವ ವ್ಯಕ್ತಿಯೊಬ್ಬರು ಆಗಸ್ಟ್ 30ರಂದು ತಮ್ಮ ಸ್ನೇಹಿತರಾದ ನಿಶ್ಚಿತ್ ಅವರ ಬೈಕ್ ನಲ್ಲಿ ಬಂದು, ಕೂಳೂರು ಫ್ಲೈ ಓವರ್ ಕೆಳಗೆ ಬೈಕ್ ನಿಲ್ಲಿಸಿ, ಹ್ಯಾಂಡ್ ಲಾಕ್ ಮಾಡಿ ಮಂತ್ರಾಲಯಕ್ಕೆ ತೆರಳಿದ್ದರು. ಕಳೆದೆರಡು ದಿನಗಳ ಹಿಂದೆ ಮಂತ್ರಾಲಯದಿಂದ ಹಿಂತಿರುಗಿದ ಅಜಯ್ ಅವರು ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ಅಲ್ಲಿ ಬೈಕ್ ಇಲ್ಲದೆ, ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಬೆಲೆಬಾಳುವ ಬೈಕ್ ಕಳುವಾಗಿರುವ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.