Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಉಡುಪಿ: ಆನ್ ಲೈನ್ ಟ್ರೆಂಡಿಂಗ್ 44 ಲಕ್ಷ ನಾಮ..!
• ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಆರೋಪಿಗಳ ಬಂಧನ
• ಕುಂದಾಪುರ: ಶಾಲಾ ಮಾಲೀಕರ ವಿರುದ್ಧ ಪ್ರಕರಣ ದಾಖಲು
• ಶಿರಸಿ: ಏರ್ ಗನ್ ಗುಂಡಿನಿಂದ ಮೃತನಾದ ಬಾಲಕ
• ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ; ಓರ್ವ ವ್ಯಕ್ತಿ ಸಾವು
• ಪುತ್ತೂರು: ಚೆಕ್ ಅಮಾನ್ಯ; ಆರೋಪಿಗೆ ಶಿಕ್ಷೆ
• ಸುಳ್ಯ: ಸರ್ಕಾರಿ ಬಸ್ ಗಳ ನಡುವೆ ಢಿಕ್ಕಿ; ಪ್ರಯಾಣಿಕರಿಗೆ ಗಾಯ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಶಿವಳ್ಳಿ ಗ್ರಾಮದ ತೀರ್ಥರಾಜ ಶೆಣೈ ಎನ್ನುವವರಿಗೆ, ಆನ್ ಲೈನ್ ಟ್ರೆಂಡಿಂಗ್ ಹೆಸರಿನಲ್ಲಿ 44 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ತೀರ್ಥರಾಜ ಶೆಣೈ ಅವರು ದೂರು ನೀಡಿದ್ದು, ದೂರಿನಲ್ಲಿ “ಕ್ಯಾಪಿಟಲ್ ಗೇಯ್ಸ್ ಕ್ರೀವ್ ಎನ್ನುವ ಟೆಲಿಗ್ರಾಂ ಗುಂಪಿಗೆ, ಆದಿ ನಿಹಾಲ್ ಎನ್ನುವ ಅಪರಿಚಿತ ವ್ಯಕ್ತಿಯು ನನ್ನನ್ನು ಸೇರಿಸಿದ್ದಾರೆ, ನಂತರ ಫಿಡಿಲಿಟಿ ಇನ್ಸ್ಟಿಟ್ಯೂಷನಲ್ ಪಾರ್ಟ್ನರ್ಸ್ ಎಫ್ – 101 ಎನ್ನುವ ಗುಂಪಿಗೆ ಸೇರಿಸಿದ್ದು, ಈ ಗುಂಪಿನಲ್ಲಿನ ಷೇರು ಮಾರ್ಕೆಟ್ ನಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸಿದ್ದಾರೆ.‌ ಹಣವನ್ನು ಹೂಡಿದ ಬಳಿಕ, ಹೂಡಿದ ಹಣವನ್ನಾಗಲಿ ಅಥವಾ ಹೇಳಿದ್ದ ಲಾಭಾಂಶವಾಗಲಿ ನೀಡದೆ ವಂಚಿಸಿದ್ದಾರೆ” ಎಂದು ದಾಖಲಿಸಿದ್ದಾರೆ. ತೀರ್ಥರಾಜ್ ಅವರು ಕಳೆದ ವರ್ಷ ಡಿಸೆಂಬರ್ 19 ರಿಂದ ಈ ವರ್ಷದ ಜನವರಿ ಏಳರವರೆಗೆ ತಮ್ಮ ತಾಯಿಯ ಬ್ಯಾಂಕ್ ಖಾತೆಯಿಂದ, ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ಹಂತಹಂತವಾಗಿ ಹಣವನ್ನು ವರ್ಗಾಯಿಸುತ್ತಾ, ಸುಮಾರು 44 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ದೂರನ್ನು ದಾಖಲಿಸುತ್ತಿದ್ದಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ಆದೇಶದ ಮೇರೆಗೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ನಾಯಕ್ ಮತ್ತು ಸಹಾಯಕ ಪೊಲೀಸ್ ಉಪಾಧೀಕ್ಷಕರಾದ ಡಾ. ಹರ್ಷ ಪ್ರಿಯಂವದ ಅವರ ನಿರ್ದೇಶನದಂತೆ ಸೆನ್ ಪೊಲೀಸ್ ಠಾಣೆಯ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದು ರಚನೆಯಾಗಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈಗಾಗಲೇ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಇಬ್ಬರು ಮಾತ್ರ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಇತರ ಆರೋಪಿಗಳ ಪತ್ತೆಗಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

• ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಆರೋಪಿಗಳ ಬಂಧನ

ಮಂಗಳೂರು: ಹಾಸನ ಮೂಲದ ಹಲಸೋಗೆ ಗ್ರಾಮದ ನಿವಾಸಿ ಸುಲೈಮನ್ ಎಂಬ ವ್ಯಕ್ತಿಯು, ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಠಾಣೆಯ ಎಎಸ್ಐ ಆದ ಅಶೋಕ್ ಮತ್ತು ಅವರ ಸಿಬ್ಬಂದಿಯಾದ ಸುರೇಂದ್ರ ಕುಮಾರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಬುಧವಾರವಾರದಂದು ಬೆಳಿಗ್ಗೆ ಸುಮಾರು 12:45ರ ಸಮಯದಲ್ಲಿ ಓಣಿಯೊಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು, ಏಳೆಂಟು ಜನರು ನಿಂತಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ಪ್ರಶ್ನಿಸಿದಾಗ ಸುಲೈಮಾನ್ “ನಮ್ಮನ್ನು ಕೇಳಲು ನೀವು ಯಾರು? ನಾವು ಏನು ಬೇಕಾದರೂ ಮಾಡಿಕೊಳ್ಳುತ್ತೇವೆ” ಎಂದು ಉದ್ಧಟತನದಿಂದ ಪ್ರತಿಕ್ರಿಯಿಸಿ, ಅಶೋಕ್ ಅವರ ಮೇಲೆ ಕೈಮಾಡಲು ಮುಂದಾಗಿದ್ದಾನೆ. ಆಗ ಅಶೋಕ್ ಅವರು ತಪ್ಪಿಸಿಕೊಂಡಾಗ, ಸುಲೈಮಾನ್ ಅವರ ಕೈಯಲ್ಲಿದ್ದ, ಮೊಬೈಲ್ ಗೆ ಅಳವಡಿಸಲಾದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಎಳೆದುಕೊಂಡು, ಮುರಿದು ಹಾಕಿದ್ದಾನೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಬಂದ ಸುರೇಂದ್ರ ಕುಮಾರ್ ಅವರ ಹೊಟ್ಟೆ ಮತ್ತು ಸೊಂಟಕ್ಕೆ ಒದ್ದು, ಬೆನ್ನು ಮತ್ತು ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಿದ್ದಾರೆ. ಆಗ ಅಶೋಕ್ ಅವರು ತಮ್ಮ ಸಹೋದ್ಯೋಗಿಯನ್ನು ಸುಲೈಮನ್ ನಿಂದ ಬಿಡಿಸಿ, ಪಾರು ಮಾಡಿದ್ದಾರೆ. ನಂತರ ರಾಯಣ್ಣ ಮತ್ತು ಪುರುಷೋತ್ತಮ ಎಂಬ ಠಾಣೆಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಅವರ ಸಹಾಯದಿಂದ ಅಶೋಕ್ ಅವರು ಸುರೇಂದ್ರ ಅವರನ್ನು ಸುರಕ್ಷಿತವಾಗಿ ಠಾಣೆಗೆ ಕರೆ ತಂದಿದ್ದಾರೆ. ಘಟನೆಯ ಆಧಾರದ ಮೇಲೆ ಮತ್ತು ಇಲಾಖೆಯ ಸ್ವತ್ತುಗಳನ್ನು ಹಾಳು ಮಾಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

• ಕುಂದಾಪುರ: ಶಾಲಾ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಹುಣಸೆಮಕ್ಕಿ ಗ್ರಾಮದಲ್ಲಿ, ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಶಾಲಾ ವಾಹನವೊಂದು ಆಟೋಗೆ ಢಿಕ್ಕಿ ಹೊಡೆದು, ಅಪಘಾತ ಸಂಭವಿಸಿದ್ದರ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿತ್ತು. ವಿಚಾರಣಾ ಹಂತದ ಸಂದರ್ಭದಲ್ಲಿ ಆಟೋ ಚಾಲಕ ಉದಯ್ ಅವರು ವಿಮಾ ಪರಿಹಾರವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಆಗ ವಿಮಾ ಕಂಪನಿಯವರು ಶಾಲಾ ವಾಹನದ ವಿಮಾ ಪಾಲಿಸಿಯನ್ನು ಪರಿಶೀಲಿಸಿದಾಗ, ಪಾಲಿಸಿಯು ನಕಲಿ ಎಂಬುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಸ್ರೂರಿನ ಶ್ರೀಶಾರದಾ ಆಂಗ್ಲ ಮಾಧ್ಯಮ ಶಾಲೆಯ ಮಾಲೀಕರ ವಿರುದ್ಧ ನಕಲಿ ವಿಮೆಯನ್ನು ಸೃಷ್ಟಿಸಿ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರಿಂದ, ರಿಲಯನ್ಸ್ ಸಾಮಾನ್ಯ ವಿಮಾ ಕಂಪನಿಯು ನೀಡಿದ ದೂರಿನ ಆಧಾರದ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

• ಶಿರಸಿ: ಏರ್ ಗನ್ ಗುಂಡಿನಿಂದ ಬಾಲಕ ಮೃತ

ಶಿರಸಿ: ಹಾವೇರಿ ಮೂಲದ, ಪ್ರಸ್ತುತ ಶಿರಸಿಯ ಸೋಮನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಬಸಪ್ಪ ಉಂಡಿ ಎನ್ನುವವರ ಒಂಭತ್ತು ವರ್ಷದ ಮಗ ಏರ್ ಗನ್ ಗುಂಡಿಗೆ ಬಲಿಯಾದ ಧಾರುಣ ಘಟನೆ ನಡೆದಿದೆ. ತೋಟದ ಮಾಲೀಕರು ಮಂಗಗಳನ್ನು ಓಡಿಸುವ ಸಲುವಾಗಿ ತಂದಿದ್ದ ಏರ್ ಗನ್ ಅನ್ನು ಮಕ್ಕಳು ಆಟ ಆಡುವಾಗ ತೆಗೆದುಕೊಂಡಿದ್ದಾರೆ, ಏಳು ವರ್ಷದ ತಮ್ಮ ತಮಾಷೆಗಾಗಿ ಗುಂಡು ಹಾರಿಸಿದಾಗ, ಅದು ನಿಜವಾಗಿ ಆತನ ಒಂಭತ್ತು ವರ್ಷದ ಅಣ್ಣನಿಗೆ ತಗುಲಿ, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

• ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ; ಓರ್ವ ವ್ಯಕ್ತಿ ಸಾವು

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ನಿವಾಸಿ ಪುರುಷೋತ್ತಮ ಅಲಿಯಾಸ್ ಬಾಲು ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಬುಧವಾರದಂದು ರಾಷ್ಟ್ರೀಯ ಹೆದ್ದಾರಿಯ ಉಜಿರೆ- ಚಾರ್ಮಾಡಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಲಾರಿ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ಮೃತಪಟ್ಟ ಸಂಗತಿ ತಿಳಿದುಬಂದಿದೆ.

• ಪುತ್ತೂರು: ಚೆಕ್ ಅಮಾನ್ಯ; ಆರೋಪಿಗೆ ಶಿಕ್ಷೆ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯಲ್ಲಿ, ರಾಮಕುಂಜ ಗ್ರಾಮದ ರಮೇಶ್ ಅವರು ಸಾಲವನ್ನು ಪಡೆದುಕೊಂಡಿದ್ದು, ಅದನ್ನು ಮರುಪಾವತಿಸಲು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮಂಗಳೂರು ಶಾಖೆಗೆ ಚೆಕ್ ನೀಡಿದ್ದರು. ಈ ಚೆಕ್ ಅನ್ನು ಸಂಗ್ರಹಕ್ಕೆ ಹಾಕಿದಾಗ ರಮೇಶ್ ಅವರ ಖಾತೆಯಲ್ಲಿ ಚೆಕ್ ನಲ್ಲಿ ಬರೆದದ್ದಕ್ಕಿಂತ ಕಡಿಮೆ ಮೊತ್ತವಿದ್ದು , ಚೆಕ್ ಬೌನ್ಸ್ ಆಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಮೇಶ್ ಅವರ ವಿರುದ್ಧ ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಲಾಯಿತು. ವಿಚಾರಣೆಯ ವೇಳೆ ರಮೇಶ್ ಅವರ ಅಪರಾಧ ಸಾಬೀತಾಗಿದ್ದು, ಆರೋಪಿಗೆ ಬಡ್ಡಿ ಮತ್ತು ಖರ್ಚು ಸಮೇತ ಹಣವನ್ನು ಎರಡು ತಿಂಗಳ ಒಳಗಾಗಿ ಹಿಂತಿರುಗಿಸಬೇಕು, ತಪ್ಪಿದಲ್ಲಿ ಆತನಿಗೆ ಒಂದು ವರ್ಷಗಳ ಕಾಲ ಸಾದಾ ಶಿಕ್ಷೆಯನ್ನು ವಿಧಿಸಬೇಕೆಂದು ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ.

• ಸುಳ್ಯ: ಎರಡು ಸರ್ಕಾರಿ ಬಸ್ ಗಳ ನಡುವೆ ಢಿಕ್ಕಿ; ಪ್ರಯಾಣಿಕರಿಗೆ ಗಾಯ

ಸುಳ್ಯ: ಧರ್ಮಸ್ಥಳದಿಂದ ಮೈಸೂರಿಗೆ ಮತ್ತು ಸುಳ್ಯದಿಂದ ಪುತ್ತೂರಿನ ಕಡೆಗೆ ತೆರಳುತ್ತಿದ್ದ, ಎರಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳ ನಡುವೆ ಅಡ್ಕಾರು ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು, ಇದರ ಪರಿಣಾಮವಾಗಿ ಸುಮಾರು 20ಕ್ಕೂ ಹೆಚ್ಚು ಜನ ಪ್ರಯಾಣಿಕರಿಗೆ ಗಾಯಗಳಾಗಿರುವ ಸಂಗತಿ ತಿಳಿದುಬಂದಿದೆ.‌ ಹೆಚ್ಚಿನ ಪ್ರಯಾಣಿಕರಿಗೆ ಮುಖದ ಮೇಲೆ ಮತ್ತು ಎದೆಯ ಭಾಗಕ್ಕೆ ಗುದ್ದಿದ ಗಾಯಗಳಾಗಿದ್ದು, ಮೇಘನಾ, ಬಾಲಚಂದ್ರ, ಪುಂಡರಿಕ, ಜುಬೈದಾ, ರವೀಂದ್ರ, ವಿದ್ಯಾ, ಅನುರಾಧ, ಲಲಿತಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಎರಡೂ ಬಸ್ ಗಳು ಜಖಂಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.