ಕರಾವಳಿ ಟಾಪ್ ನ್ಯೂಸ್
ಅಪರಾಧ ಲೋಕದ ಸುದ್ದಿ ಏನೇನ್ ಆಯ್ತು?
• ಉಳ್ಳಾಲ: ಬಟ್ಟೆ ಅಂಗಡಿಯ ಮುಂದೆ ಚಿನ್ನದ ಸರ ಕಳುವು
• ಬೈಂದೂರು: ಅಕ್ರಮ ಮದ್ಯ ಮಾರಾಟ ಪತ್ತೆ; ಪ್ರಶಂಸಾ ಪತ್ರ
• ಉಡುಪಿ: ನದಿಯಲ್ಲಿ ವೃದ್ಧರ ಮೃತದೇಹ ಪತ್ತೆ
• ಬ್ರಹ್ಮಾವರ: ಕಚ್ಚಾ ಸಾಮಗ್ರಿಗಳ ಹೆಸರಿನಲ್ಲಿ ಕೊಟ್ಯಂತರ ಮೋಸ
• ಕುಂದಾಪುರ: ಮಾದಕ ವಸ್ತು ಸೇವನೆ; ವ್ಯಕ್ತಿಯ ಸೆರೆ
• ಮಂಗಳೂರು: ಎರಡು ದ್ವಿಚಕ್ರ ವಾಹನಗಳ ಕಳುವು
• ಪುತ್ತೂರು: ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಅಪಘಾತ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಳ್ಳಾಲ: ಮಿನ್ನತ್ ಎನ್ನುವ ಮಹಿಳೆಯು ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಸಿ, ಮನೆಗೆ ತೆರಳಲು ಹುಡುಗಿಯೊಬ್ಬಳು ತನ್ನ ತಾಯಿಯೊಂದಿಗೆ ಹೊರಗೆ ನಿಂತಿದ್ದಾಗ, ಆಕೆಯ ಕೊರಳಲ್ಲಿದ್ದ ಹತ್ತು ಗ್ರಾಂ ಚಿನ್ನದ ಸರವನ್ನು ಕಳುವು ಮಾಡಿದ ಘಟನೆ ತೊಕ್ಕೋಟಿನಲ್ಲಿ ನಡೆದಿದೆ. ಪೊಲೀಸರು ಮಿನ್ನತ್ ಳನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಮಿನ್ನತ್ ಹಿಂದೆ ಮದುವೆ ಮುಂತಾದ ಸಭೆ ಸಮಾರಂಭಗಳಲ್ಲಿ ಕೂಡ ಕಳುವು ಮಾಡಿದ್ದ ಚಿನ್ನದ ಸರಗಳು ಸೇರಿದಂತೆ, ಒಟ್ಟು 1.8 ಲಕ್ಷ ರೂಪಾಯಿ ಬೆಲೆಬಾಳುವ, ಸುಮಾರು 18 ಗ್ರಾಂ ನಷ್ಟು ತೂಕವುಳ್ಳ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
• ಬೈಂದೂರು: ಅಕ್ರಮ ಮದ್ಯ ಮಾರಾಟ ಪತ್ತೆ; ಚಾಲಕ ರಾಜೇಶ್ ಅವರಿಗೆ ಪ್ರಶಂಸಾ ಪತ್ರ
ಬೈಂದೂರು: ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮತ್ತು 56/2025 ಕಾಲಂ 32, 34 ಕೆಇ ಆ್ಯಕ್ಟ್ ಪ್ರಕರಣದಲ್ಲಿ ಇಆರ್ ವಿ ಕರ್ತವ್ಯದಲ್ಲಿರುವಾಗ ದೊರೆತ ಮಾಹಿತಿಯ ಆಧಾರದ ಮೇಲೆ, ಅಕ್ರಮ ಮದ್ಯ ಮಾರಾಟವನ್ನು ಪತ್ತೆ ಹಚ್ಚಿ, ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ 112 ಸಿಬ್ಬಂದಿ ಚಾಲಕ ರಾಜೇಶ್ ಅವರಿಗೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಅವರು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.
• ಉಡುಪಿ: ನದಿಯಲ್ಲಿ ವೃದ್ಧರ ಮೃತದೇಹ ಪತ್ತೆ
ಉಡುಪಿ: ಕಳೆದೆರಡು ದಿನಗಳ ಹಿಂದೆ, ಸ್ವರ್ಣನದಿಯ ದಡದಲ್ಲಿ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಕಲ್ಯಾಣಪುರದ ಕಳವಿನಬಾಗಿಲು ಭಜನಾ ಮಂಡಳಿಯ ಸಮೀಪ ನಡೆದಿದೆ. ನದಿಯ ದಡದ ಮತ್ತೊಂದು ಬದಿಯಲ್ಲಿ ಕೈಚೀಲವೊಂದು ಲಭಿಸಿದ್ದು, ಅದರಲ್ಲಿರುವ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪುಸ್ತಕದ ಆಧಾರದ ಮೇಲೆ ಮೃತ ವೃದ್ಧರನ್ನು ಕೇರಳ ಮೂಲದ ಶಿವದಾಸನ್ ಎಂದು ಗುರುತಿಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆನಂದ್, ಆದರ್ಶ್, ಮಹಿಳಾ ಪಿಸಿ ಶಾಂಭವಿ ಅವರು ಸ್ಥಳಕ್ಕೆ ಆಗಮಿಸಿ, ಕಾನೂನು ಪ್ರಕ್ರಿಯೆಯನ್ನು ನಡೆಸಿದರು. ಸಮಾಜಸೇವಕರಾದ ನಿತ್ಯಾನಂದ ಒಳಕಾಡುವರು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಲ್ಲಿ ಇಲಾಖೆಗೆ ನೆರವಾದರು ಎಂದು ಹೇಳಲಾಗಿದೆ.
• ಬ್ರಹ್ಮಾವರ: ಕಚ್ಚಾ ಸಾಮಗ್ರಿಗಳ ಹೆಸರಿನಲ್ಲಿ ಕೊಟ್ಯಂತರ ರೂಪಾಯಿ ವಂಚನೆ
ಬ್ರಹ್ಮಾವರ: ಹರಿಯಾಣ ಮೂಲದ ಬೆನ್ ಆ್ಯಂಡ್ ಗಾವ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, ಕಚ್ಚಾ ಸಾಮಗ್ರಿಗಳ ಸಂಗ್ರಹಣಾ ಘಟಕವನ್ನು ಆಧುನಿಕವಾಗಿ ನಿರ್ಮಿಸಿ ಕೊಡುವುದಾಗಿ ನಂಬಿಸಿ, ಹೇರೂರು ಗ್ರಾಮದ ಸುಪ್ರೀಂ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ವಂಚಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಹೇರೂರು ಗ್ರಾಮದ ಕಂಪನಿಯ ನಿರ್ದೇಶಕರಾದ ರವಿ.ಕೆ ಅವರು ಮುಂಗಡವಾಗಿ 1.45.00.000 ರೂಪಾಯಿ ನೀಡಿದ್ದರು, ಬಳಿಕ 40.03.311 ರೂಪಾಯಿ ಪಾವತಿಸಿದ್ದು, ಹರಿಯಾಣದ ಕಂಪನಿಯು ಒಟ್ಟು 1.85.00.000 ವಂಚಿಸಿದೆ ಎನ್ನಲಾಗಿದೆ. ಕಟ್ಟಡವನ್ನು ಸಂಪೂರ್ಣವಾಗಿ ನಿರ್ಮಿಸಿ ಕೊಡುವಲ್ಲಿ ಅವರು ವಿಫಲರಾಗಿದ್ದಾರೆ ಮತ್ತು ಹಣ ಮರುಪಾವತಿಸಲು ಕೇಳಿದರೆ, ದಿನಕ್ಕೊಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ರವಿ.ಕೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಂಪನಿಯ ನಿರ್ದೇಶಕರ ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಕುಂದಾಪುರ: ಮಾದಕ ವಸ್ತು ಸೇವನೆ; ವ್ಯಕ್ತಿಯ ಸೆರೆ
ಕುಂದಾಪುರ: ದೀಕ್ಷಿತ್ ಉಗ್ರಾಣಿ ಬೆಟ್ಟು ಎಂಬ ವ್ಯಕ್ತಿಯು, ಮಾದಕ ವಸ್ತು ಸೇವಿಸಿರುವ ಹಿನ್ನೆಲೆಯಲ್ಲಿ, ಕುಂದಾಪುರದ ಎಎಸ್ಐ ಶಾಂತರಾಜ್ ಅವರ ತಂಡ ಬಂಧಿಸಿರುವ ಘಟನೆ ಕುಂಭಾಶಿ ಜಂಕ್ಷನ್ ಬಳಿ ನಡೆದಿದೆ. ದೀಕ್ಷಿತ್ ನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಪೊಲೀಸರ ಸಂಶಯ ದೃಢಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಮಂಗಳೂರು: ಎರಡು ದ್ವಿಚಕ್ರ ವಾಹನಗಳ ಕಳುವು
ಮಂಗಳೂರು: ನಗರದ ಕೇಂದ್ರ ಮಾರುಕಟ್ಟೆಯಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನ ಕಳುವಾದ ಹಿನ್ನೆಲೆಯಲ್ಲಿ, ಅದರ ಮಾಲೀಕರಾದ ವಿನಾಯಕ ಎನ್ನುವವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿನಾಯಕ ಅವರು ಕಳೆದ ತಿಂಗಳು ಉದಯ್ ಶೆಟ್ಟಿಗಾರ್ ಎನ್ನುವವರಿಗೆ ಬೈಕ್ ಅನ್ನು ಮಾರಿದ್ದು, ಅವರು ಅದನ್ನು ಉಪಯೋಗಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಮಾರುಕಟ್ಟೆಗೆ ತರಕಾರಿ ತರಲೆಂದು ಬೈಕ್ ನಲ್ಲಿ ಬಂದಿದ್ದು, ತರಕಾರಿಗಳನ್ನು ಖರೀದಿಸಿ ಮರಳಿ ಬಂದು ನೋಡಿದಾಗ ಬೈಕ್ ಕಳುವಾಗಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಗುಡ್ಡೆಯಂಗಡಿಯ ಪಡುಕೋಡಿ ಎಂಬಲ್ಲಿ, ಮೊಹಮ್ಮದ್ ರಿಯಾಜ್ ಎನ್ನುವವರಿಗೆ ಸೇರಿದ್ದ ಬೈಕ್ ಅವರು ವಿದೇಶಕ್ಕೆ ಹೋಗುವ ಸಂದರ್ಭದಲ್ಲಿ ತಮ್ಮ ಸಂಬಂಧಿಯಾದ ಮೊಹಮದ್ ಹುಸೇನ್ ಸಿಖಾಮ್ ಅವರಿಗೆ ಬಳಸಲು ನೀಡಿ ಹೋಗಿದ್ದರು. ಅದು ಕೂಡ ಕಳುವಾಗಿದ್ದು, ಎಷ್ಟೇ ಹುಡುಕಿದರೂ ಸಿಗದ ಕಾರಣ ರಿಯಾಜ್ ಅವರು ವಿದೇಶದಿಂದಲೇ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಪುತ್ತೂರು: ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಅಪಘಾತ
ಪುತ್ತೂರು: ಬಜತ್ತೂರು ನಿವಾಸಿ ಹರ್ಷಿತ್ ಕುಮಾರ್ ಅವರು, ತಮ್ಮ ಸ್ನೇಹಿತರಾದ ಚೇತನ್ ಅವರೊಂದಿಗೆ ನೆಲ್ಯಾಡಿ ಪೆಟ್ರೋಲ್ ಬಂಕ್ ನಲ್ಲಿ, ಪೈಂಟಿಂಗ್ ಮಾಡುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾದ ಘಟನೆ ನಡೆದಿದೆ. ಹರ್ಷಿತ್ ಅವರು ಏಣಿ ಹತ್ತಿ ಪೆಟ್ರೋಲ್ ಬಂಕ್ ನ ಗೋಡೆಗಳಿಗೆ ಪೈಂಟಿಂಗ್ ಮಾಡುತ್ತಿದ್ದಾಗ, ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಕಾರ್ ಏಣಿಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಹರ್ಷಿತ್ ಅವರು ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.