ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯೇ ಡೀಲ್..!
ಕಾನೂನು ಕುರುಡಾಗಿದೆ, ದಂಧೆಗಾರರು ದೇವರಾಗಿದ್ದಾರೆ…!
ಮದ್ಯ ಹೊಳೆಯಲ್ಲಿ ಬದುಕು ತೇಲುತ್ತಿದೆ..ಕಾನೂನು ಮುಳುಗುತ್ತಿದೆ!
ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದ ದಂಧೆ ಹಲವೆಡೆ ತೆರೆದ ಬಾಗಿಲಿನಂತೆ ನಡೆಯುತ್ತಿದೆ. ಅಬಕಾರಿ ಇಲಾಖೆ ಮತ್ತು ಪೊಲೀಸರು ಕಣ್ಣರಳಿದಂತೆ ಕಾಣಿಸುತ್ತಿರುವ ಸ್ಥಿತಿಯಲ್ಲಿ ದಂಧೆಗಾರರೇ ದೇವರಂತೆ ಬೆಳೆದಿದ್ದಾರೆ. ಆತಂಕ ಎಂದರೆ ಯಾವುದು ಒಳ್ಳೆ ಡ್ರಿಂಕ್ಸ್.ಯಾವುದು ಸ್ಪಿರಿಟ್ ಡ್ರಿಂಕ್ಸ್ ಎಂಬುದೇ ಗೊತ್ತಾಗದಷ್ಟು ರಾತ್ರಿ–ಹಗಲು ಮುಕ್ತವಾಗಿ ನಡೆಯುತ್ತಿರುವ ಈ ವ್ಯಾಪಾರ ಜನರ ಜೀವನವನ್ನು ಕಿತ್ತುಕೊಳ್ಳುತ್ತಿದೆ.
ಸೂರ್ಯ ನೆತ್ತಿಯ ಮೇಲೆ ಬರುವುದಕ್ಕಿಂತ ಮೊದಲೇ ಕುಡಿದ ಮಂಪರಿನಲ್ಲಿ ಬೀದಿ ಬದಿಯಲ್ಲಿ ಬಸ್ ಸ್ಟ್ಯಾಂಡ್ ಯಾವುದೋ ಕುರುಚಲು ಕಾಡಿನಲ್ಲಿ ಮಲಗಿರುವ ಮದ್ಯ ವ್ಯಸನಿ ಪ್ರೇಮಿಗಳಿಗೆ ತಮ್ಮ ಮನೆಯಲ್ಲಿ ಹೆಂಡತಿ ಮಕ್ಕಳು ಕಾಯುತ್ತಿದ್ದಾರೆ ಎಂಬ ಪರಿಜ್ಞಾನವಿಲ್ಲದೆ ಅನಾಗರಿಕರಂತೆ ಬಿದ್ದಿರುವುದನ್ನು ಎಲ್ಲೆಡೆ ಕಂಡುಬರುತ್ತಿದೆ.
ಬಾರ್, ವೈನ್ ಸ್ಟೋರ್ ಅಲ್ಲಿ ಯಾವುದೇ ಕಾನೂನು ಪಾಲನೆ ಆಗುತ್ತಿಲ್ಲ. ಹಳ್ಳಿ ಹಳ್ಳಿಯ ಅಂಗಡಿಗಳಲ್ಲಿ ಅಕ್ರಮ ಮದ್ಯ ರಾಜಾರೋಷವಾಗಿ ಮಾರಾಟ ಆಗುತ್ತಿದೆ. ಯುವ ಜನರ ಸುಂದರ ಬದುಕು ಬೀದಿಗೆ ಬೀಳುತ್ತಿದೆ ಎಂಬ ಆರೋಪ ಪೋಷಕ ವಲಯದಿಂದ ಕೇಳಿ ಬಂದಿದೆ. ಇದು ಬರೀ ಒಂದು ತಾಲೂಕಿನ ಕಥೆ ಅಲ್ಲ. ಇಡೀ ಮಲೆನಾಡಲ್ಲಿ ಇಂತಹ ದುರಂತ ನಡೆಯುತ್ತಿದೆ.
ಅಕ್ರಮ ಮದ್ಯದ ಸೇವನೆ ಅನೇಕ ಮನೆಗಳನ್ನು ಕಣ್ಣೀರಿಗೆ ದೂಡಿದೆ. ಮದ್ಯ ಸೇವನೆಯಿಂದ ಅನಾರೋಗ್ಯ, ಸಾಲ ಪೀಡನೆ, ಕುಟುಂಬಗಳ ಭಂಗ, ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಊರಿನಲ್ಲಿ ಒಂದು ಎರಡು ದಿನಸಿ ಅಂಗಡಿಗಳಿರುತ್ತವೆ. ರಾತ್ರಿ ವೇಳೆ ಅದೇ ದಿನಸಿ ಅಂಗಡಿಯಲ್ಲಿ ಮದ್ಯ ಸಿಗುವ ಕಾರಣ ಹೆಣ್ಣು ಮಕ್ಕಳು ದಿನಸಿ ಅಂಗಡಿಗೆ ದಿನಸಿ ತರಲು ಹೋಗದ ಪರಿಸ್ಥಿತಿ ಇಂದು ಉಂಟಾಗಿದೆ. ಹಾಗೆ ಕುಡಿದ ಮತ್ತಿನಲ್ಲಿ ಕುಡುಕರ ದಾಂದಲೆಗಳು ನಾನಾ ತರಹದಲ್ಲಿ ಕಂಡು ಬರುತ್ತಿದೆ, ಮರ್ಯಾದಸ್ಥರು ರಸ್ತೆಯಲ್ಲಿ ಓಡಾಡುವರು ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಅಬಕಾರಿ ಇಲಾಖೆ ಅಕ್ರಮ ನಿರ್ವಹಣೆ ಬದಲು ತಿಂಗಳ ಮಾಮೂಲಿ ಎಣಿಸುತ್ತಿದೆ. ಅಧಿಕಾರಿಗಳೇ ಎಜೇಂಟ್ ಆಗಿದ್ದಾರೆ. ಕಾನೂನು ಜಾರಿಗೊಳಿಸಬೇಕಾದ ಇಲಾಖೆಯೇ ಕೈಕಟ್ಟಿ ಡೀಲ್ ಮಾಡುತ್ತಿದೆ. ಜನರ ಹಿತಾಸಕ್ತಿಗಿಂತಲೂ ದಂಧೆಗಾರರ ಲಾಭಕ್ಕೆ ಕಾನೂನು ಸೇವೆ ಸಲ್ಲಿಸುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಸಮಾಜದಲ್ಲಿ ಯುವಕರು ಇದಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದು, ಅಪರಾಧಗಳು, ದರೋಡೆ, ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಮದ್ಯದ ನದಿಯಲ್ಲಿ ಕುಟುಂಬಗಳು ಮುಳುಗುತ್ತಿದ್ದರೂ, ಕಾನೂನು ಮೌನವಾಗಿರುವುದು ಜನರ ಕೋಪಕ್ಕೆ ಕಾರಣವಾಗಿದೆ.
ಜನರ ಕೋಪ, ಸರ್ಕಾರದ ಮೌನ ಜನರ ಆಕ್ರೋಶ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. “ದಂಧೆಗಾರರ ಬೆಂಬಲದಲ್ಲಿ ಇಲಾಖೆ ನಿಂತಿದೆಯೇ?”, “ಅಕ್ರಮ ಮದ್ಯ ಹೊಳೆಯ ತಡೆಯುವ ಮನಸ್ಸು ಸರ್ಕಾರಕ್ಕಿದೆಯೇ?” ಎಂಬ ಪ್ರಶ್ನೆಗಳು ಎಲ್ಲೆಡೆ ಎದ್ದುಕಾಣುತ್ತಿವೆ. ಸಮಾಜವನ್ನು ರಕ್ಷಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯ ತೋರಿದರೆ, ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬ ಪ್ರಶ್ನೆ ಮೂಡಿದೆ.
