ಕರಾವಳಿ ಟಾಪ್ ನ್ಯೂಸ್
* ಉಡುಪಿ: ನಕಲಿ ಬೋರ್ಡ್ ಹಾಕಿ ಖಾಸಗಿ ಬಸ್ ಓಡಾಟ!
* ಪುತ್ತೂರು: ಫೋಕ್ಸೋ ಕೇಸ್: ಆರೋಪಿ ನ್ಯಾಯಾಲಯಕ್ಕೆ ಹಾಜರ್
* ಬಂಟ್ವಾಳ: ಮಾಣಿಯಿಂದ ಕಲ್ಲಡ್ಕದತ್ತ ಹೆದ್ದಾರಿ ಸವಾರಿ ಕಷ್ಟ ಕಷ್ಟ
* ಕಡಬ: ಕರಾವಳಿಯಲ್ಲಿ ಮತ್ತೆ ಕಾಡಾನೆ ಹಾವಳಿ
* ಬ್ರಹ್ಮಾವರ: ಸೆಪ್ಟಂಬರ್ ನಾಲ್ಕರಂದು ಬ್ರಹ್ಮಾವರ ಬಂದ್?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಅಂಬಿಕಾ ಎಂಬ ಹೆಸರಿನ ಖಾಸಗಿ ಬಸ್ ವೊಂದು, ಉಡುಪಿಯಿಂದ ಕುಂದಾಪುರದತ್ತ ತೆರಳುತ್ತಿರುವ ಸಂದರ್ಭದಲ್ಲಿ, ನಕಲಿ ನೋಂದಣಿ ಫಲಕವನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ, ಆರ್ ಟಿ ಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಉಮೇಶ್ ಎನ್ನುವವರು ಚಾಲಕರಾಗಿದ್ದು, ರಾಜೇಂದ್ರ ಅವರು ನಿರ್ವಹಣೆ ಮಾಡುತ್ತಿದ್ದರು. ಅಂಬಿಕಾ ಬಸ್ ಮೇಲೆ ಅನುಮಾನಗೊಂಡ ಆರ್ ಟಿ ಓ ಅಧಿಕಾರಿಗಳು, ಬಸ್ ಅನ್ನು ರಸ್ತೆಯ ಮಾರ್ಗಮಧ್ಯದಲ್ಲಿಯೇ ನಿಲ್ಲಿಸಿ ತನಿಖೆ ನಡೆಸಿದ್ದು, ಬಸ್ ಗೆ ಅಳವಡಿಸಲಾಗಿದ್ದ ನೋಂದಣಿ ಫಲಕ, ವಾಹನದ ಇಂಜಿನ್ ಮತ್ತು ಚಾಸಿಸ್ ಅಂಕಿಗಳ ನಡುವೆ ಭಾರಿ ವ್ಯತ್ಯಾಸ ಕಂಡು ಬಂದಿದೆ. ಅಲ್ಲದೆ ಚಾಲಕರಾದ ಉಮೇಶ್ ಅವರ ಬಳಿ ವಾಹನಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ್ದು ಮತ್ತೊಂದು ಆರೋಪವಾಗಿದೆ. ತಮ್ಮ ಚಾಲನ ಪರವಾನಿಗೆಯನ್ನು ಸಹ ಆರ್ಟಿಓ ಅಧಿಕಾರಿಗಳಿಗೆ ತೋರಿಸುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಉಲ್ಲಂಘನೆಯ ಆಧಾರದ ಮೇಲೆ ಬಸ್ ಅನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆರ್ ಟಿ ಓ ಇನ್ಸ್ಪೆಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ನಕಲಿ ಫಲಕವನ್ನು ಅಳವಡಿಸಿಕೊಂಡಿರುವ ಹಿಂದಿನ ಉದ್ದೇಶ, ಇದರಲ್ಲಿ ಇನ್ನೂ ಯಾವ ಯಾವ ವ್ಯಕ್ತಿಗಳು ಭಾಗಿಗಳಾಗಿದ್ದಾರೆ ಎನ್ನುವ ಸಂಗತಿಗಳು ಇನ್ನಷ್ಟೇ ತನಿಖೆಯ ಮೂಲಕ ಹೊರಬೀಳಬೇಕಾಗಿದೆ.
ಪುತ್ತೂರು: ಫೋಕ್ಸೋ ಕೇಸ್: ಆರೋಪಿ ನ್ಯಾಯಾಲಯಕ್ಕೆ ಹಾಜರ್
ಪುತ್ತೂರು: ಗದಗ ಜಿಲ್ಲೆಯ ದಿಂಡೂರಿನ ಮೂಲದ ಪೀರಪ್ಪ ಅವರು ಫೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿಯಾಗಿದ್ದು, ಆತನನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅವನ ಊರಿನಿಂದಲೇ ವಶಕ್ಕೆ ಪಡೆದುಕೊಂಡಿದ್ದಾರೆ. ಪೀರಪ್ಪನ ಮೇಲೆ 153/2008, 16/2018, ಕಾಲಂ 376 (2)(I), 504 ಐಪಿಸಿ, 5 6 ಪೋಕ್ಸೋ ಕಾಯ್ದೆ 2012ನೇ ಪ್ರಕರಣದ ಆಧಾರದ ಮೇಲೆ ವಾರೆಂಟ್ ಹೊರಡಿಸಿದ್ದು, ಪೊಲೀಸ್ ಠಾಣೆಯ ನಿರೀಕ್ಷಕರಾದ ರವಿ ಬಿ. ಎಸ್, ಉಪನಿರೀಕ್ಷಕರಾದ ಜಂಬುರಾಜ್ ಬಿ ಮಹಾಜನ್ ಮತ್ತು ಸುಷ್ಮಾ ಭಂಡಾರಿ ಅವರ ನೇತೃತ್ವದಲ್ಲಿ ಪ್ರವೀಣ್ ರೈ, ಎಚ್ ಸಿ ಹರೀಶ್, ಚೋಳಪ್ಪ ಸಂಶಿ ಅವರು ಪೀರಪ್ಪನನ್ನು ದಸ್ತಗಿರಿ ಮಾಡಿ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶವನ್ನು ಹೊರಡಿಸಿದೆ.
ಮಾಣಿಯಿಂದ ಕಲ್ಲಡ್ಕದತ್ತ ಆಗಮಿಸುವ ಹೆದ್ದಾರಿ ಸವಾರಿ ಕಷ್ಟ ಕಷ್ಟ
ಬಂಟ್ವಾಳ: ಕುದ್ರುಬೆಟ್ಟುವಿನ ಸಮೀಪದಲ್ಲಿ ಮಾಣಿಯಿಂದ ಕಲ್ಲಡ್ಕದತ್ತ ಆಗಮಿಸುವ ಹೆದ್ದಾರಿಯಲ್ಲಿ ತೀವ್ರ ಮಳೆಯಿಂದಾಗಿ ರಸ್ತೆಯ ಮಧ್ಯದಲ್ಲಿ ನೀರು ನಿಂತಿದ್ದು, ವಾಹನಗಳು ಸಂಚರಿಸುವಾಗ ನೀರಿನಲ್ಲಿ ತೇಲಾಡುವಂತಾಗಿ, ಚಾಲಕರ ನಿಯಂತ್ರಣ ತಪ್ಪಿ ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿದೆ. ಇತ್ತೀಚಿಗೆ ಬೆಂಗಳೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದೆ. ಅದೇ ದಿನ ಸಂಜೆ ಕಲ್ಲಡ್ಕದ ಆಸ್ಪತ್ರೆಯಿಂದ ರೋಗಿಯೊಬ್ಬನನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್, ಚಾಲಕನ ನಿಯಂತ್ರಣಕ್ಕೆ ಸಿಗದೆ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಆದರೆ ಎರಡು ಘಟನೆಯಲ್ಲಿ ವಾಹನಗಳು ಮಾತ್ರ ಜಖಂಗೊಂಡಿದ್ದು, ಯಾರ ಜೀವಕ್ಕೂ ಅಪಾಯ ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಗುತ್ತಿಗೆ ಆಧಾರಿತ ಕಾಮಗಾರಿ ಸಂಸ್ಥೆಯು ದುರಸ್ತಿ ಕಾರ್ಯವನ್ನು ನಡೆಸಿದ್ದು, ದುರಸ್ತಿಯ ಬಳಿಕವೂ ನೀರು ಹರಿದು ಹೋಗದೆ, ರಸ್ತೆಯಲ್ಲೇ ನಿಲ್ಲುತ್ತಿರುವುದು ಸಾರ್ವಜನಿಕರಲ್ಲಿ ಕಿರಿಕಿರಿಯನ್ನುಂಟು ಮಾಡಿದೆ.
ಕಡಬ: ಕರಾವಳಿಯಲ್ಲಿ ಮತ್ತೆ ಕಾಡಾನೆ ಹಾವಳಿ
ಕಡಬ: ಬಲ್ಯದ ಕೊಡಂಗೆ ಎಂಬ ಗ್ರಾಮದ ನಿವಾಸಿಯಾದ ಧನಂಜಯ ಅವರ ಭತ್ತ ಬೇಸಾಯ ಮಾಡುವ ಗದ್ದೆಗೆ ಎರಡು ಕಾಡಾನೆಗಳು ದಾಳಿ ನಡೆಸಿ, ಅಧಿಕ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದೆ. ಕೇವಲ ಭತ್ತದ ಗದ್ದೆಯನ್ನಷ್ಟೇ ಅಲ್ಲದೆ ಅಡಿಕೆ, ಬಾಳೆ, ನೀರಾವರಿಗಾಗಿ ಅಳವಡಿಸಲಾಗಿದೆ ಪೈಪ್ ಲೈನ್ ಗಳನ್ನೂ ಸಹ ಧ್ವಂಸ ಮಾಡಿ, ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಅಲ್ಲದೆ ಸುತ್ತಮುತ್ತಲು ಇದ್ದ ಜಲಜಾಕ್ಷಿ ರೈ, ಶಾಂತರಾಮ ರೈ, ಸುಂದರ ಗೌಡ, ಪುಷ್ಪರಾಜ್, ಶಿವಪ್ರಸಾದ ಎನ್ನುವವರ ಕೃಷಿಯನ್ನು ಸಹ ಹಾಳುಗೆಡವಿದೆ ಎನ್ನಲಾಗಿದೆ. ಈ ಆನೆಗಳು ಕಳೆದ ಕೆಲವು ದಿನಗಳಿಂದ ಪಡ್ನೂರು ರಕ್ಷಿತಾರಣ್ಯ ಪ್ರದೇಶದಲ್ಲಿ ನೆಲೆ ಕಂಡುಕೊಂಡಿದ್ದು, ರಾತ್ರಿಯ ಸಮಯದಲ್ಲಿ ಬಲ್ಯ ಗ್ರಾಮಕ್ಕೆ ಆಗಮಿಸಿ, ದಾಳಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.