ಕರಾವಳಿ ಟಾಪ್ ನ್ಯೂಸ್
* ಉಡುಪಿ: ಮಣಿಪಾಲದ ಕಾಲೇಜಿನಲ್ಲಿ ಮಾರಾಮಾರಿ; ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ
* ಬೆಳ್ತಂಗಡಿ: ಕರಿಮಣಿ ಸರ ಕದ್ದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು
* ಬಂಟ್ವಾಳ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ
* ಪುತ್ತೂರು: ಗಂಧದ ಮರ ಕಳ್ಳನ ಸೆರೆ
* ಕುಂದಾಪುರ: ಕಳೆನಾಶಕ ಸೇವಿಸಿ ಅಸ್ತವ್ಯಸ್ತವಾಗಿದ್ದ ವ್ಯಕ್ತಿ ಸಾವು
* ಕಾರ್ಕಳ: ಆನ್ ಲೈನ್ ಗೇಮ್ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಉಡುಪಿ: ಮಣಿಪಾಲದ ಕಾಲೇಜಿನಲ್ಲಿ ಮಾರಾಮಾರಿ; ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ
ಉಡುಪಿ: ಮಣಿಪಾಲದ ಕಾಲೇಜ್ ವೊಂದರ ವಿದ್ಯಾರ್ಥಿಗಳು ಮಧ್ಯಾಹ್ನ ಊಟಕ್ಕೆ ಹೊರಟ ಸಂದರ್ಭದಲ್ಲಿ, ಪರಸ್ಪರ ಹೊಡೆದಾಡಿಕೊಂಡ ಘಟನೆ ಗುರುವಾರದಂದು ನಡೆದಿರುವುದು ಬೆಳಕಿಗೆ ಬಂದಿದೆ. ರಾಜ್ ಗಿರೀಶ್ ಮತ್ತು ಸಾತ್ವಿಕ್ ಎಂಬ ವಿದ್ಯಾರ್ಥಿಗಳು ಊಟಕ್ಕೆ ಹೋಗಲು ಕಾಲೇಜಿನಿಂದ ಹೊರಬರುತ್ತಿದ್ದಂತೆ, ರಾಜ್ ವೀರ್ ಸಿಂಗ್, ವಿಕ್ರಮ್ ವೀರ್ ಸಿಂಗ್ ಮತ್ತು ಎರಡನೇ ವರ್ಷದ ವಿದ್ಯಾರ್ಥಿ ಕ್ರಿಶ್ ಆ ಇಬ್ಬರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ರಾಜ್ ವೀರ್ ಸಿಂಗ್ ರಾಜ್ ಗಿರೀಶ್ ನನ್ನು ಮೊದಲಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಆತನ ಸ್ಕೂಟಿಯ ಕೀ ಅನ್ನು ಕಿತ್ತುಕೊಂಡು, ಶೋಷಿಸಿದ್ದಾನೆ. ನಂತರ ಸಾತ್ವಿಕ್ ನತ್ತ ಗಮನಹರಿಸಿ, ಅವನನ್ನು ಕೊಲ್ಲುವ ಉದ್ದೇಶದಿಂದ, ಆತನ ಕೈ ಕಾಲು ಮತ್ತು ಭುಜದ ಮೇಲೆ ದಾಳಿ ನಡೆಸಿ, ನೆಲಕ್ಕೆ ತಳ್ಳಿ, ಬಲವಾಗಿ ಒದ್ದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಸಾತ್ವಿಕ್ ನ ಎಡಭುಜದ ಮೂಳೆ ಮುರಿದಿದ್ದು, ಕೈ ಮೇಲಕ್ಕೆ ಎತ್ತಲಾರದಷ್ಟು ಗಂಭೀರ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಾತ್ವಿಕ್ ನ ಸ್ನೇಹಿತನಾದ ರಾಜ್ ಗಿರೀಶ್ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ, ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೆಳ್ತಂಗಡಿ: ಕರಿಮಣಿ ಸರ ಕದ್ದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು.
ಬೆಳ್ತಂಗಡಿ: ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಕರಿಮಣಿ ಸರವನ್ನು ಎಳೆದುಕೊಂಡು, ಕಳ್ಳತನ ಮಾಡಿದ್ದ ಆರೋಪಿಯಾದ ಉಮೇಶ್ ಗೌಡನನ್ನು ಅದೇ ದಿನ ಬೆಳ್ತಂಗಡಿ ಪೊಲೀಸರು ಬಂಧಿಸಿ, ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಾದ ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಾದ ಸುಬ್ಟಾಪುರ ಮಠ್ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.ಇದರ ಹಿನ್ನೆಲೆಯಲ್ಲಿ ಶುಕ್ರವಾರದಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆರೋಪಗಳು ಸಾಬೀತಾಗಿದ್ದು, ಉಮೇಶ್ ಗೌಡನಿಗೆ ಮೂರು ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ, 20,000 ರೂಪಾಯಿ ದಂಡವನ್ನು ವಿಧಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಆರೋಪಿಗೆ ಶಿಕ್ಷೆಯನ್ನು ನೀಡುವಲ್ಲಿ ಸ್ಥಳ ಮಹಜರು ಪಿಎಸ್ಐ ಮುರಳೀಧರ್ ನಾಯ್ಕ, ತನಿಖಾ ಸಹಾಯಕರಾದ ಎಎಸ್ಐ ಕುಲಾಜ್ಯೋತಿ ತಿಲಕ್, ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬ್ಬಂದಿ ಸತೀಶ್ ಅವರು ಭಾಗಿಯಾಗಿದ್ದರು.
* ಬಂಟ್ವಾಳ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ
ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಉಜಿರಂಡಿ ಪಲ್ಕೆಯ ಪಲ್ಲದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಶನಿವಾರದಂದು ನಡೆದಿದೆ. ಇದರ ಪರಿಣಾಮವಾಗಿ ಕಾರು ಪೂರ್ತಿಯಾಗಿ ನುಜ್ಜುಗುಜ್ಜಾಗಿದ್ದು, ಚಾಲಕ ಮತ್ತು ಅದರಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರನ್ನು ಕಾವಳಮೂಡೂರು ಗ್ರಾಮದ ಧನುಷ್ ಹಾಗೂ ಪರಾರ್ದೊಟ್ಟು ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿಯ ರಭಸಕ್ಕೆ ಸಾರಿಗೆ ಬಸ್ ನ ಮುಂದಿನ ಭಾಗದ ಗಾಜು ಸಂಪೂರ್ಣ ಪುಡಿಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯವು ಸಹ ಆಗದೇ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಎನ್ನಲಾಗಿದೆ.
* ಪುತ್ತೂರು: ಗಂಧದ ಮರ ಕಳ್ಳನ ಸೆರೆ
ಪುತ್ತೂರು: ಕೇರಳ ಮೂಲದ ಚಂದ್ರನ್ ಗಂಧದ ಮರದ ಸಾಗಾಟ ಅಪರಾಧಕ್ಕೆ ಸಂಬಂಧಿಸಿದಂತೆ, ಕಳೆದ 55 ವರ್ಷಗಳಿಂದ ತಲೆಮರಿಸಿಕೊಂಡಿದ್ದು, ವಾರೆಂಟ್ ಅಪರಾಧಿ ಆಗಿರುವ ಈತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರನ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ದೊರೆತ ಬಳಿಕ ಚಂದ್ರನ್ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಇದೀಗ ಎರಡನೇ ಆರೋಪಿಯಾದ ಮತ್ತು ತಲೆಮರೆಸಿಕೊಂಡಿದ್ದ ಚಂದ್ರನ್ ನನ್ನು ಪುತ್ತೂರಿನ ಪೊಲೀಸರು ಕೇರಳದಲ್ಲಿ ಸೆರೆಹಿಡಿದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
* ಕುಂದಾಪುರ: ಕಳೆನಾಶಕ ಸೇವಿಸಿ ಅಸ್ತವ್ಯಸ್ತವಾಗಿದ್ದ ವ್ಯಕ್ತಿ ಸಾವು
ಕುಂದಾಪುರ: ಅಸೋಡಿ ಗ್ರಾಮದ ನಿವಾಸಿಯಾದ ಭಾಸ್ಕರ್ ಮೊಗವೀರ ಎನ್ನುವ ವ್ಯಕ್ತಿಯು, ಕಳೆದ ತಿಂಗಳ 27ನೇ ತಾರೀಖಿನಂದು ತೋಟಕ್ಕೆ ಹಾಕುವ ಕೀಟನಾಶಕದಂತಹ ವಿಷದ ಪದಾರ್ಥವನ್ನು ಸೇವಿಸಿ ಅಸ್ತವ್ಯಸ್ತಗೊಂಡಿದ್ದರು. ಕೂಡಲೇ ಅವರನ್ನು ಕೊಟೇಶ್ವರದ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 22 ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭಾಸ್ಕರ್ ಅವರು, ಗುಣಮುಖರಾಗದ ಹಿನ್ನೆಲೆಯಲ್ಲಿ ಅವರನ್ನು ಬುಧವಾರದಂದು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ, ನಂತರ ಮನೆಗೆ ಕರೆತರಲಾಯಿತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಭಾಸ್ಕರ್ ಅವರು ಶನಿವಾರ ನಸುಕಿನ ಜಾವ ಮೃತಪಟ್ಟರು ಎನ್ನುವ ಸಂಗತಿ ಮೂಲಗಳಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾರ್ಕಳ: ಆನ್ ಲೈನ್ ಗೇಮ್ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ.
ಕಾರ್ಕಳ: ಗಂಜಿಮಠದ ನಿವಾಸಿ ನಜೀರ್ ಎನ್ನುವ ವ್ಯಕ್ತಿಯು, ಆನ್ ಲೈನ್ ಗೇಮ್ ಹೆಸರಿನಲ್ಲಿ ಸಾರ್ವಜನಿಕರನ್ನು ಮೋಸಗೊಳಿಸುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಗ್ರಾಮಾಂತರ ಠಾಣೆಯ ಪಿಎಸ್ಐ ನಜೀರ್ ನನ್ನು ಬಂಧಿಸಿದ್ದಾರೆ. ನಜೀರ್ ಬೆಳ್ಮಣ್ ಗ್ರಾಮದಲ್ಲಿ ಆನ್ ಲೈನ್ ಆಟವನ್ನು ಆಡುತ್ತಾ, ಬೇರೆಯವರಿಗೂ ಆ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ನಜೀರ್ ನನ್ನು ಬಂಧಿಸಿದ ಸಂದರ್ಭದಲ್ಲಿ, ಆತನ ಬಳಿಯಿದ್ದ 30,000 ರೂಪಾಯಿ ಹಣವನ್ನು ವಶಪಡಿಸಿಕೊಂಡು, ಮೊಬೈಲ್ ಅನ್ನು ಪರಿಶೀಲಿಸಿದಾಗ, ವೆಬ್ ಸೈಟ್ ಲಿಂಕ್ ಮತ್ತು ಆ್ಯಪ್ ಬಳಸಿ ಆನ್ ಲೈನ್ ಬೆಟ್ಟಿಂಗ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಜೀರ್ ವಿರುದ್ಧ ಕಾರ್ಕಳದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.