Categories
ಅಪಘಾತ ಅಪರಾಧ ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬ್ರಹ್ಮಾವರ: ಬೈಕಿಗೆ ಡಿಕ್ಕಿ ಹೊಡೆದ ಕಾಡುಹಂದಿ!
* ಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ
* ಕಾಪು: ಆಟೋ ಲಾರಿ ನಡುವೆ ಅಪಘಾತ
* ಮಂಗಳೂರು: ಕರ್ತವ್ಯಕ್ಕೆ ಅಡ್ಡಿ, ಬಾರ್ ಮಾಲೀಕನ ವಿರುದ್ಧ ಕೇಸ್
* ಬೆಳ್ತಂಗಡಿ: ತಿಮರೋಡಿಗಾಗಿ ಪೊಲೀಸರ ಶೋಧನೆ
* ಪುತ್ತೂರು: ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿಗೆ ಗಂಭೀರ ಗಾಯ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಬ್ರಹ್ಮಾವರ: ಬೈಕಿಗೆ ಡಿಕ್ಕಿಹೊಡೆದ ಕಾಡುಹಂದಿ

ಬ್ರಹ್ಮಾವರ: ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಐ ಬಸವರಾಜ್ ಅವರು ರಾತ್ರಿಯ ಗಸ್ತು ಕರ್ತವ್ಯವನ್ನು ಪೂರೈಸಿ, ಬೆಳ್ಳಂಬೆಳಗ್ಗೆ ಮನೆಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ, ಕಾಡುಹಂದಿಯೊಂದು ಅವರ ಬೈಕ್ ಗೆ ಢಿಕ್ಕಿ ಹೊಡೆದ ಘಟನೆ ಕೋಟದ ಸಮೀಪದ ಮಣೂರಿನಲ್ಲಿ ನಡೆದಿದೆ. ಇದರ ಪರಿಣಾಮವಾಗಿ ಬಸವರಾಜ್ ಅವರು ಬೈಕ್ ಸಹಿತವಾಗಿ ಬಿದ್ದಿದ್ದಾರೆ. ಇದನ್ನು ಕಂಡ ಲಾರಿಯವರೊಬ್ಬರು ತಕ್ಷಣ ಬಸವರಾಜ್ ಅವರನ್ನು ರಸ್ತೆಯ ಪಕ್ಕದಲ್ಲಿ ಕುಳ್ಳಿರಿಸಿ, ಉಪಚರಿಸಿದ್ದಾರೆ. ಬಳಿಕ ಲಾರಿ ಚಾಲಕ ಬಸವರಾಜ್ ಅವರ ಬೈಕ್ ಅನ್ನು ಪಕ್ಕದಲ್ಲಿ ನಿಲ್ಲಿಸಲೆಂದು ಹೋಗುವ ಸಮಯದಲ್ಲಿ, ಕುಂದಾಪುರ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಾಲಕ ಬಸವರಾಜ್ ಅವರ ಬೈಕ್ ಅನ್ನು ಗುದ್ದಿಕೊಂಡೇ ಮುಂದಕ್ಕೆ ತೆರಳಿ ಪರಾರಿಯಾದ. ಬೈಕ್ ಪೂರ್ತಿ ಹಾಳಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬಂಟ್ವಾಳ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ.

ಬಂಟ್ವಾಳ: ಬಾಲಕಿಯೊಬ್ಬಳು ಮನೆಯಲ್ಲಿ ಒಂಟಿಯಾಗಿ ಇದ್ದ ಸಂದರ್ಭದಲ್ಲಿ, ಸ್ಥಳೀಯ ವ್ಯಕ್ತಿಯೊಬ್ಬ ಮನೆಗೆ ಬಂದು, ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವಿಟ್ಲದಲ್ಲಿ ನಡೆದಿದೆ. ತಂದೆ ತಾಯಿ ಕೆಲಸಕ್ಕೆ ಹೋಗಿದ್ದು, ಬಾಲಕಿ ಒಬ್ಬಳೇ ಇರುವುದನ್ನು ತಿಳಿದುಕೊಂಡು, ಈ ರೀತಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ನಾರಾಯಣ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವನ್ನು ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

* ಕಾಪು: ಅಟೋ ಲಾರಿ ನಡುವೆ ಅಪಘಾತ

ಕಾಪು: ಕೆನರಾ ಬ್ಯಾಂಕ್ ಬಳಿಯ ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿಯೊಂದು, ಆಟೋದ ಹಿಂದಿನ ಭಾಗಕ್ಕೆ ಢಿಕ್ಕಿ ಹೊಡೆದ ಘಟನೆ ಎರ್ಮಾಳ ತೆಂಕ ಗ್ರಾಮದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಲಾರಿ ತಕ್ಷಣ ಬ್ರೇಕ್ ಹಾಕಿ ನಿಂತಿದ್ದರಿಂದ, ಅದರ ಹಿಂದೆ ಬರುತ್ತಿದ್ದ ಬಸ್, ಲಾರಿಗೆ ಗುದ್ದಿದೆ. ಪರಿಣಾಮವಾಗಿ ಆಟೋ ಉರುಳಿ ಬಿದ್ದು, ಚಾಲಕ ನಾರಾಯಣ ಪೂಜಾರಿ ಮತ್ತು ಪ್ರಯಾಣಿಕರಾದ ಕೃಷ್ಣ ಭಂಡಾರಿ, ವಸಂತಿ ಭಂಡಾರಿ, ಜ್ಯೋತಿ ಅವರಿಗೆ ಗಾಯಗಳಾಗಿವೆ. ತಕ್ಷಣ ಬಸ್ ನಲ್ಲಿದ್ದ ಪ್ರಯಾಣಿಕರು ಆಟೋವನ್ನು ಮೇಲಕ್ಕೆತ್ತಿ, ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದರಿಂದ, ಆಟೋದಲ್ಲಿದ್ದವರನ್ನು ಪಡುಬಿದ್ರಿಯಾ ಖಾಸಗಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ಕಳುಹಿಸಿಕೊಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೂರತ್ಕಲ್ ಮತ್ತು ಮಣಿಪಾಲದ ಆಸ್ಪತ್ರೆಗಳಿಗೆ ಕಳುಹಿಸಲಾಯಿತು. ಲಾರಿ ಚಾಲಕನ ಅಸಡ್ಡೆಯ ಚಲನೆಯ ಕಾರಣಕ್ಕಾಗಿ ಆತನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರು: ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಾರ್ ಮಾಲೀಕನ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ರಾತ್ರಿಯ ವೇಳೆ ಕಾನೂನಿಗೆ ವಿರುದ್ಧವಾಗಿ, ಸಮಯವನ್ನು ಮೀರಿ ಮದ್ಯವನ್ನು ಮಾರಾಟ ಮಾಡಿದ್ದಷ್ಟೇ ಅಲ್ಲದೆ, ಇದನ್ನು ಪ್ರಶ್ನಿಸಲು ಹೋದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಬಿಜೈ ಕಾಪಿಕಾಡ್ ಸಮೀಪದ ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಮಾಲೀಕನ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಬಾರ್ ಸಿಎಲ್ 9 ಪರವಾನಿಗೆಯನ್ನು ಹೊಂದಿದ್ದು, 11: 30ಕ್ಕೆ ಬಾಗಿಲನ್ನು ಮುಚ್ಚಬೇಕಾಗಿದ್ದು, ನಡುರಾತ್ರಿ ಒಂದು ಗಂಟೆಯವರೆಗೆ ತೆರೆದಿದ್ದರು ಎನ್ನಲಾಗಿದೆ. ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ, ಬಾರ್ ನ ಬಾಗಿಲು ಮುಚ್ಚಿದ್ದು, ಒಳಗಡೆ ದೀಪದ ಬೆಳಕಿತ್ತು. ಮತ್ತು ಜನರು ಮಾತನಾಡುತ್ತಿರುವುದು ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೋಲಿಸ್ ಅಧಿಕಾರಿ ಪ್ರಶ್ನಿಸಿದಾಗ ಅದರ ಸಿಬ್ಬಂದಿ “ಗ್ರಾಹಕರಿದ್ದ ಕಾರಣ ಇನ್ನು ತೆರೆದಿದ್ದರು. ಈಗ ಅವರಿಗೆ ಮದ್ಯವನ್ನು ನೀಡಿ, ಹಿಂಬಾಗಿಲಿನಿಂದ ಕಳುಹಿಸಿದ್ದಾರೆ” ಎಂದು ತಿಳಿಸಿದ್ದಾನೆ. ಇದರ ಆಧಾರದ ಮೇಲೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಹಿಂಬದಿಯಿಂದ ಪರಾರಿಯಾಗುತ್ತಿದ್ದ ಗ್ರಾಹಕರನ್ನು ಹಿಡಿಯಲು ಹೋದಾಗ ಗ್ರಾಹಕರು ಮತ್ತು ಬಾರ್ ನ ಮಾಲೀಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

* ಬೆಳ್ತಂಗಡಿ: ತಿಮರೋಡಿಗಾಗಿ ಪೊಲೀಸರ ಶೋಧನೆ

ಬೆಳ್ತಂಗಡಿ: ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಗಡಿಪಾರು ಆದೇಶವನ್ನು ಹೊರಡಿಸಿರುವ ಬೆನ್ನಲ್ಲೇ, ಆತ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.‌ ಕಳೆದ ಕೆಲವು ದಿನಗಳಿಂದ ಮನೆಗೆ ಬಾರದೆ, ಪರಾರಿಯಾಗಿರುವ ತಿಮರೋಡಿ ಮೊಬೈಲ್ ಅನ್ನು ಸಹ ಸ್ವಿಚ್ ಆಫ್ ಮಾಡಿ, ಮನೆಯಲ್ಲಿ ಇರಿಸಿದ್ದಾನೆ. ಇದಕ್ಕೂ ಮೊದಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ, ನ್ಯಾಯಾಲಯಕ್ಕೆ ಆಗಮಿಸಿಲ್ಲ. ಆತ ದಕ್ಷಿಣ ಕನ್ನಡದಲ್ಲೇ ಅಥವಾ ಚಿಕ್ಕಮಗಳೂರು, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ತೆಯಾದ ಕೂಡಲೇ ಆತನನ್ನು ಪೊಲೀಸರು ಬಂಧಿಸಿ, ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಮತ್ತು ಆತನ ಪತ್ನಿ ಮಲ್ಲಿಕಾ ಖಾತೆಗೆ ತಿಮರೋಡಿ ಆಪ್ತರಾದ ಹನ್ನೊಂದು ಮಂದಿ ಹತ್ತು ಸಾವಿರದಂತೆ, ಎರಡು ಲಕ್ಷ ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ವಿಚಾರದಲ್ಲಿ ತಿಮರೋಡಿ ಪತ್ನಿ ಖಾತೆಯಿಂದಲೂ ಹಣ ವರ್ಗಾವಣೆಯಾಗಿದೆ ಎನ್ನುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ತಿಮರೋಡಿ ಪತ್ನಿಯ ವಿಚಾರಣೆ ನಡೆಸಿದ್ದಾರೆ.

* ಪುತ್ತೂರು: ನರಿಮೊಗರು ಗ್ರಾಮದ ಪುರುಷೋತ್ತಮ ಆಚಾರ್ಯ ಎನ್ನುವವರ ಮಗಳಾದ, ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ಒಂಭತ್ತನೇ ತರಗತಿ ಓದುತ್ತಿರುವ, ವರ್ಷಾ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಸಮೀಪ ಓಮ್ನಿ ಕಾರೊಂದು ಢಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಕೂಡ ನುಜ್ಜುಗುಜ್ಜಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ವರ್ಷಾಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.