ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕರಾವಳಿಯ ಕೊಡುಗೆ!!
* ಕನ್ನಡದ ಜತೆ ಕೊಂಕಣಿ, ಬ್ಯಾರಿ ಸಾಹಿತ್ಯಕ್ಕೂ ಕೊಡುಗೆ
* ಪತ್ರಿಕೋದ್ಯಮದ ಮೊದಲ ಮೈಲುಗಲ್ಲು!
– ನಾಗರಿಕರಾಗಿ ಬದುಕುವುದ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಕರಾವಳಿ ಮಂದಿ!
NAMMUR EXPRESS NEWS
ಕರ್ನಾಟಕದ ಕರಾವಳಿ ಉಡುಪಿ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಇದು ತನ್ನ ಪ್ರಾಕೃತಿಕ ಸೌಂದರ್ಯ, ದೇವಾಲಯಗಳು ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಜಗತ್ಪ್ರಸಿದ್ಧವಾಗಿದೆ.
ಕನ್ನಡ ಸಾಹಿತ್ಯಕ್ಕೆ ಕರಾವಳಿ ಕರ್ನಾಟಕದ ಕೊಡುಗೆ ಅಪಾರವಾದದ್ದು. ಸಾಹಿತ್ಯದ ಎಲ್ಲಾ ಪ್ರಕಾರಗಳಿಗೆ ಅನನ್ಯ ಕೊಡುಗೆ ನೀಡಿದ ಹಲವರಿಗೆ ಜನ್ಮದಾತೆ ಕರಾವಳಿ.
ಇಲ್ಲಿನ ಜನರ ಆಡು ಭಾಷೆ ತುಳು. ಆದ್ದರಿಂದಲೇ ಇದನ್ನು ತುಳುನಾಡು ಎಂದು ಕರೆಯುತ್ತಾರೆ. ಕನ್ನಡ ಇಲ್ಲಿನವರಿಗೆ ಕಲಿತು ಬಂದ ಭಾಷೆಯಾಗಿದೆ. ಇದರೊಂದಿಗೆ ಕೊಂಕಣಿ, ಬ್ಯಾರಿ ಭಾಷೆಗಳನ್ನಾಡುವವರು ಇಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಕರಾವಳಿ ಜಿಲ್ಲೆಯ ಅಧಿಕ ಸಂಖ್ಯೆಯ ಜನರ ಆಡುಭಾಷೆ ತುಳು, ಕೊಂಕಣಿ ಇತ್ಯಾದಿಯಾಗಿದ್ದರೂ ಕನ್ನಡ ನಾಡಿಗೆ ಜಿಲ್ಲೆಯ ಕವಿಗಳು, ಸಾಹಿತಿಗಳು, ಕಲಾವಿದರು ಸಲ್ಲಿಸಿದ ಕೊಡುಗೆ ಅಪಾರವಾದುದು.
– ಪತ್ರಿಕೋದ್ಯಮದ ಮೊದಲ ಮೈಲುಗಲ್ಲು!
ಕರಾವಳಿ ಜಿಲ್ಲೆಯಲ್ಲಿ ಕನ್ನಡ ಶಾಸನಗಳು ಸಾಕಷ್ಟು ಹಿಂದಿನಿಂದಲೇ ದೊರೆಯುತ್ತಾದರೂ, ನಿಶ್ಚಿತ ದಾಖಲೆಯೊಂದಿಗೆ ಕನ್ನಡ ಸಾಹಿತ್ಯ ದೊರೆಯುವುದು, 1222ರ ಕಾಲಘಟ್ಟದಲ್ಲಿ ರಚಿಸಿದ ಸೋಮರಾಜನ ಉದ್ಭಟ ಕಾವ್ಯದಿಂದ ಎನ್ನುತ್ತಾರೆ. ಆದರೆ ಈ ಬಗ್ಗೆ ಇನ್ನು ಖಚಿತತೆ ಇಲ್ಲ. ಇನ್ನು ಕನ್ನಡದ ಪ್ರಥಮ ಪತ್ರಿಕೆಯಾದ “ಮಂಗಳೂರು ಸಮಾಚಾರ” ಹುಟ್ಟಿಕೊಂಡದ್ದು ಇಲ್ಲೇ ಎನ್ನುವುದು ಹೆಮ್ಮೆಯ ಸಂಗತಿ.
ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದವರಲ್ಲಿ ಕರಾವಳಿಗರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೆ.ಶಿವರಾಮ ಕಾರಂತ, ಪಂಜೆ ಮಂಗೇಶರಾಯರು, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣ ಭಟ್ಟ ಹೆಸರು ನಮಗೆ ಥಟ್ಟನೆ ನೆನಪಾದರೂ, ಕರಾವಳಿ ವಲಯದ ಹೆಚ್ಚಿನ ಕವಿ, ವಿದ್ವಾಂಸರು, ಸಾಹಿತಿಗಳು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಟ್ಟವರು.
ನಡೆದಾಡುವ ಜ್ಞಾನಕೋಶ ಕಾರಂತರು, ಪಂಜೆ, ಗೋವಿಂದ ಪೈ, ಅಡಿಗ ಹೀಗೆ ಕೆಲವರನ್ನು ಬಿಟ್ಟರೆ ಉಳಿದವರ ಹೆಸರು ಸಮಗ್ರ ಕರ್ನಾಟಕ ಸ್ತರದಲ್ಲಿ ಕೇಳಿ ಬಂದದ್ದು ವಿರಳ ಎನ್ನುವುದು ವಿಪರ್ಯಾಸ.
ನಾಗರಿಕರಾಗಿ ಬದುಕುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಕರಾವಳಿ ಮಂದಿ!
ನಾಡಿನಲ್ಲೇ ಪ್ರಜ್ಞಾವಂತರು
ಕರಾವಳಿ ಜನರು ಸ್ವಚ್ಛತೆ ಇರಬಹುದು. ಬದುಕಿನ ಶಿಸ್ತು ಇರಬಹುದು ಅಥವಾ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವ ವಿಚಾರಗಳಲ್ಲಿ ಶೇ.99ರಷ್ಟು ಈ ಭಾಗದ ಜನರು ಪ್ರಜ್ಞಾವಂತ ನಾಗರಿಕರಾಗಿ ಬದುಕುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಾಮಾನ್ಯ ವಿಚಾರಗಳಲ್ಲಿಯೂ ಹೆಚ್ಚು ಪ್ರಜ್ಞಾವಂತರಾಗಿ ವರ್ತಿಸುತ್ತಾರೆ. ದಕ್ಷಿಣ ಕನ್ನಡ ಇರಬಹುದು ಅಥವಾ ಉಡುಪಿ ಜಿಲ್ಲೆ ಇರಬಹುದು ಇದು ಈ ಭಾಗದ ಜನರ ಬದುಕಿನ ವಿಶೇಷತೆ.
ಹೋಟೆಲ್-ವಸತಿ ವ್ಯವಸ್ಥೆಗೆ ಕರಾವಳಿಯಲ್ಲಿ ಕೊರತೆಯಿಲ್ಲ!
ಹೋಟೆಲ್ ಉದ್ಯಮದಿಂದ ಸೇವೆ ಕಡೆಗೆ
ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇಂದ್ರವಾದ ಮಂಗಳೂರು ಇರಲಿ ಅಥವಾ ಉಡುಪಿ ಜಿಲ್ಲೆಯ ಮಣಿಪಾಲ-ಉಡುಪಿ ಇರಲಿ, ಜನರಿಗೆ ಅದರಲ್ಲಿಯೂ ಪ್ರವಾಸಿಗರಿಗೆ ಅತ್ಯುತ್ತಮ ಶುಚಿ- ರುಚಿಯಾದ ಆಹಾರವನ್ನು ಉಣಬಡಿಸುವಲ್ಲಿ ಆಯ್ಕೆಗೆ ತಕ್ಕಷ್ಟು ಹೋಟೆಲ್ ಗಳು ಇವೆ. ಅದು ಸಸ್ಯಾಹಾರವಿರಲಿ, ಮಾಂಸಾಹಾರ ಇರಲಿ, ಈ ಭಾಗದ ತಿಂಡಿ-ತಿನಸು, ವೆಜ್-ನಾನ್-ವೆಜ್ ಊಟಕ್ಕೆ ಹೆಸರುವಾಸಿಯಾದ ಹತ್ತಾರು ಹೋಟೆಲ್ ಗಳಿವೆ. ಹೀಗಾಗಿ, ಮಂಗಳೂರು ಭಾಗಕ್ಕೆ ಬರುವ ಪ್ರವಾಸಿಗರಿಗೆ ಇಲ್ಲಿ ಉತ್ತಮ ಆತಿಥ್ಯ ಪಡೆಯುವುದಕ್ಕೆ ಹೋಟೆಲ್-ವಸತಿ ವ್ಯವಸ್ಥೆಗೆ ಎಂದಿಗೂ ಕೊರತೆ ಇಲ್ಲ.
ಉಡುಪಿ ಹೋಟೆಲ್ ಎಲ್ಲೆಡೆ ಫೇಮಸ್!
ಈ ನಡುವೆ, ಉಡುಪಿ ಹೆಸರು ಹೋಟೆಲ್‌ಗಳಿಂದಾಗಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕರ್ನಾಟಕ ರಾಜ್ಯ ಇರಲಿ ಅಥವಾ ಬೇರೆ ರಾಜ್ಯ ಇರಲಿ ನೀವು ಎಲ್ಲೇ ಹೋದರೂ ಅಲ್ಲೊಂದು ಉಡುಪಿ ಹೆಸರಿನ ಹೋಟೆಲ್ ಕಾಣಿಸುತ್ತದೆ. ಅದಕ್ಕೆ ಕಾರಣ ದೇಶದುದ್ದಕ್ಕೂ ಉಡುಪಿ ಹೋಟೆಲ್‌ಗಳ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ.
ಕೊಲ್ಲಿ ರಾಷ್ಟ್ರದ ನಂಟು, ಉದ್ಯೋಗ, ಕೈ ತುಂಬಾ ಹಣ!
ಮಂಗಳೂರು ನಗರವು ವಾಣಿಜ್ಯ ನಗರಿಯಾಗಿ ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಿರುವುದಕ್ಕೆ ಪ್ರಮುಖ ಕಾರಣ ಕೊಲ್ಲಿ ರಾಷ್ಟ್ರದೊಂದಿಗಿನ ಔದ್ಯೋಗಿಕ ನಂಟು.
ಹೌದು, ಕರಾವಳಿ ಭಾಗದ ಹೆಚ್ಚಿನ ಮಂದಿಯು ಉದ್ಯೋಗಕ್ಕೆ ನೆಚ್ಚಿಕೊಂಡಿರುವ ದೇಶ ಅಂದರೆ ಅದು ದುಬೈ, ಕುವೈಟ್, ಕತಾರ್‌ನಂಥ ಕೊಲ್ಲಿ ರಾಷ್ಟ್ರಗಳು. ಕಡಿಮೆ ವಿದ್ಯಾರ್ಹತೆ ಹೊಂದಿದವರಿಗೂ ಅಲ್ಲಿ ಕೈತುಂಬ ಸಂಬಳ ಪಡೆಯುವ ಉದ್ಯೋಗಾವಕಾಶ ಲಭ್ಯವಿದೆ. ಈ ಕಾರಣದಿಂದ ಕಡಿಮೆ ಕಲಿತವರು ಕೂಡ ಗಲ್ಫ್ ದೇಶಗಳಿಗೆ ಹೋಗಿ ಉತ್ತಮ ದುಡಿಮೆ ಮಾಡಿ ಹಣ ಸಂಪಾದನೆಯೊಂದಿಗೆ ಊರಿಗೆ ವಾಪಾಸ್ಸಾಗಿ ಆರ್ಥಿಕವಾಗಿ ಸದೃಢ ಹಾಗೂ ಸ್ವಾವಲಂಬಿ ಜೀವನವನ್ನು ಸಾಗಿಸುತ್ತಿರುತ್ತಾರೆ. ಈ ಗಲ್ಫ್ ಜತೆಗಿನ ಔದ್ಯೋಗಿಕ ನಂಟು ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಕೂಡ ಗರಿಗೆದರುವುದಕ್ಕೆ ಪ್ರಮುಖ ಕಾರಣವಾಗಿದೆ.
