Categories
ಕರಾವಳಿ

ಡಿ. 20ರಿಂದ ಕರಾವಳಿ ಕಲೋತ್ಸವ!

ಡಿ. 20ರಿಂದ ಕರಾವಳಿ ಕಲೋತ್ಸವ!
– ಬಿ.ಸಿ.ರೋಡಿನಲ್ಲಿ ಡಿ.21 ರಿಂದ ಜನವರಿ 5ರವರೆಗೆ ಪ್ರತಿದಿನ
 – ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನ
 – ವಿದ್ಯಾರ್ಥಿಗಳಿಂದ “ಪಿಲಿ ನಲಿಕೆ” ಅದ್ದೂರಿ ಕಾರ್ಯಕ್ರಮ

NAMMUR EXPRESS NEWS
ಬಂಟ್ವಾಳ: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರಲೋಕ ಮೋಕೆದ ಕಲಾವಿದೆ‌ರ್ ಸೇವಾ ಟ್ರಸ್ಟ್ ಬಂಟ್ವಾಳ, ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 20 ರಿಂದ ಜನವರಿ 26ವರೆಗೆ ಬಿ. ಸಿ ರೋಡು ಮುಖ್ಯ ವೃತ್ತದ ಬಳಿ ಇರುವ ಗೋಲ್ಡನ್‌ ಪಾರ್ಕ್‌ ಅಸೋಸಿಯೇಟ್ಸ್‌ ಮೈದಾನದಲ್ಲಿ ಕರಾವಳಿ ಕಲೋತ್ಸವ 2024-25 ಮತ್ತು ಬಹುಸಂಸ್ಕೃತಿ ಹಾಗೂ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮಗಳು ನಡೆಯಲಿದೆ. ಸಭಾಂಗಣದಲ್ಲಿ ಮಕ್ಕಳ ಚಿಣ್ಣರೋತ್ಸವ, ನಾಟಕೋತ್ಸವ, ರಾಜ್ಯ ಮಟ್ಟದ ಫಿಲ್ಕ್ ಡ್ಯಾನ್ಸ್ ಸ್ಪರ್ಧೆ, ಜಿಲ್ಲಾ ಮಟ್ಟದ ಸಿಂಗಾರಿ ಮೇಳ (ಚೆಂಡೆ) ಸ್ಪರ್ಧೆ, ಜಾನಪದ ನೃತ್ಯ, ಭರತನಾಟ್ಯ. ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಡಿಸೆಂಬರ್ 20ರಂದು ಸಂಜೆ 5 ಗಂಟೆಗೆ ಬಿ ಸಿ ರೋಡಿನ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಿಂದ ಜಾನಪದ ದಿಬ್ಬಣದ ಮೆರವಣಿಗೆಯು ಸುಮಾರು 250 ಮಂದಿ ಕಲಾವಿದರ ಜೊತೆ ರಾಜ್ಯ ಹಾಗೂ ಹೊರ ರಾಜ್ಯದ ಜಾನಪದ ತಂಡಗಳೊಂದಿಗೆ, ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸ್ತುತಿಯೊಂದಿಗೆ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್‌ ಮೈದಾನದ ಕೀರ್ತಿಶೇಷ ಶ್ರೀ ರಘು ಸಪಲ್ಯ ಮೊಗರ್ನಾಡು ಕಲಾ ವೇದಿಕೆ, ದಿವಂಗತ ಫಾರೂಕ್ ಗೂಡಿನ ಬಳಿ ಸಭಾಂಗಣದತ್ತ ಸಾಗಿ ಬರಲಿದೆ. ಸಂಜೆ ಗಂಟೆ 6.30 ಕ್ಕೆ ಕರಾವಳಿ ಕಲೋತ್ಸವ ಉದ್ಘಾಟನೆ, ಕೀರ್ತಿಶೇಷ ಶ್ರೀ ರಘು ಸಪಲ್ಯ ಮೊಗರ್ನಾಡು ಕಲಾ ವೇದಿಕೆ ದಿವಂಗತ ಫಾರೂಕ್ ಗೂಡಿನಬಳಿ ಸಭಾಂಗಣ ಉದ್ಘಾಟನೆ, ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟನೆ ಹಾಗೂ ವಿವಿಧ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಉದಯ ಚೌಟ ಸಾಧನ ಪ್ರಶಸ್ತಿ ಪ್ರದಾನ, ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ಬಳಿಕ ರಾತ್ರಿ ಗಂಟೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಝೀ ಕನ್ನಡ ಸ ರಿ ಗ ಮ ಪ ಖ್ಯಾತಿಯ ಅಮೀಶ್ ಕುಮಾ‌ರ್, ಸಮನ್ವಿ ರೈ, ಅನ್ವಿತ್ ಕೊಡಗು ಮತ್ತು ಚಿಣ್ಣರ ಲೋಕ ಸಂಸ್ಥೆಯ ಬಾಲ ಕಲಾವಿದರಿಂದ “ರಸಮಂಜರಿ” ಮತ್ತು ಮಾ. ಸಾಯಿ ಮನ್ವಿತ್‌ ಕೊಟ್ಟಾರಿ ಮುನ್ನೂರು ಮತ್ತು ತಂಡ, ನರಿಕೊಂಬು ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ “ಪಿಲಿ ನಲಿಕೆ” ಕಾರ್ಯಕ್ರಮ ನಡೆಯಲಿದೆ. ಡಿ 21 ರಿಂದ ಜನವರಿ 5 ರವರೆಗೆ ಪ್ರತಿದಿನ ಸಭಾ ಕಾರ್ಯಕ್ರಮ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.