Categories
ಕರಾವಳಿ

ಧರ್ಮಸ್ಥಳ ತನಿಖೆ ಜೋರು!

ಕರಾವಳಿ ಟಾಪ್ ನ್ಯೂಸ್

ಧರ್ಮಸ್ಥಳ ತನಿಖೆ ಜೋರು!

* ಉಡುಪಿ: ಖತರ್ನಾಕ್ ಕಳ್ಳನ ಬಂಧನ: ಚಿನ್ನಾಭರಣ ವಶ
* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ಮುಂದುವರಿದ ತನಿಖೆ
* ಪುತ್ತೂರು: ಕಬ್ಬಿಣದ ಪೈಪ್ ನಿಂದ ಹಲ್ಲೆ: ಕೇಸ್
* ಕಾರ್ಕಳ: ಅರಣ್ಯ ಇಲಾಖೆಯ ವಾಚ್ ಮೆನ್ ಆತ್ಮಹತ್ಯೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಶಿರ್ವಾದ ಬಬ್ಬರ್ಯ ದೇವಸ್ಥಾನದ ಬಳಿಯ ನಿವಾಸಿಯಾದ ಪವಿತ್ರ ಎನ್ನುವವರ ಮನೆಯಲ್ಲಿ ಕೆಲವು ದಿನಗಳ ಹಿಂದೆ ಕಳ್ಳರು ನುಗ್ಗಿ, 137 ಗ್ರಾಂ ತೂಕದ ಮತ್ತು 12,75,000 ರೂಪಾಯಿ ಮೌಲ್ಯದ ಚಿನ್ನಾಭರಣ ಅಪಹರಿಸಿದ್ದರು. ಉಡುಪಿ ಜಿಲ್ಲಾ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಂತೆ ಶಿರ್ವ ಪೊಲೀಸರ ತಂಡ ಕಾರ್ಯಾಚರಣೆಯನ್ನು ನಡೆಸಿ, ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯು ಕುಖ್ಯಾತ ಅಂತರ್ ರಾಜ್ಯ ಕಳ್ಳ ಬರ್ಪೆ ಅಬೂಬಕರ್ ಎಂದು ಗುರುತಿಸಲಾಗಿದ್ದು, ಸೆರೆಹಿಡಿದ ಬಳಿಕ ಆತನಿಂದ ಏಳು ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ಮುಂದುವರಿದ ತನಿಖೆ

ಬೆಳ್ತಂಗಡಿ: ಧರ್ಮಸ್ಥಳದ ಸುತ್ತಮುತ್ತಲು ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಹೇಳಿಕೆ ನೀಡಿದ್ದ, ಅನಾಮಿಕ ವ್ಯಕ್ತಿಯ ವಿಚಾರಣೆ ಮುಂದುವರಿದಿದ್ದು, ಎರಡನೇ ದಿನವಾದ ಭಾನುವಾರದಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಪ್ರಣವ್ ಮೊಹಾಂತಿ ಅವರೇ ಸ್ವತಃ ವಿಚಾರಣೆ ನಡೆಸಿದ್ದಾರೆ ಎಂಬ ಸಂಗತಿ ತಿಳಿದು ಬಂದಿದೆ. ಶನಿವಾರ ಕೂಡ ಮಂಗಳೂರಿನ ಮಲ್ಲಿಕಟ್ಟೆಯ ಐಬಿಯಲ್ಲಿರುವ ಎಸ್ಐಟಿ ಕಚೇರಿಯಲ್ಲಿ ಎಸ್ಐಟಿ ಅಧಿಕಾರಿಯಾದ ಡಿಐಜಿ ಅನುಚೇತ್ ಅವರ ನೇತೃತ್ವದಲ್ಲಿ ಸತತ ಎಂಟು ಗಂಟೆಗಳ ಕಾಲ ವಿಚಾರಣೆಯನ್ನು ನಡೆಸಲಾಗಿತ್ತು. ಮರುದಿನ ಕೂಡ ಅನಾಮಿಕನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದರ ಜೊತೆ ಜೊತೆಗೆ, ಅನಾಮಿಕ ವ್ಯಕ್ತಿಯ ಕುಟುಂಬದ ಮಾಹಿತಿ ಮತ್ತು ಅವರಲ್ಲೊಬ್ಬ ಬಾಲಕಿಗೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳದ ಕುರಿತು ಸಹ ವಿಚಾರಣೆಯನ್ನು ನಡೆಸಿದ್ದಾರೆ. ವಿಚಾರಣೆಯು ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರಬೀಳಲಿದೆ.

ಪುತ್ತೂರು: ಕಬ್ಬಿಣದ ಪೈಪ್ ನಿಂದ ಹಲ್ಲೆ: ಕೇಸ್

ಪುತ್ತೂರು: ಮೀನು ಮಾರುಕಟ್ಟೆಯ ಬಳಿ ಉರ್ಲಾಂಡಿ ನಿವಾಸಿಯಾದ ಹರೀಶ್ ಎನ್ನುವವರ ಮೇಲೆ ಕಬ್ಬಿಣದ ಪೈಪ್ ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹರೀಶ್ ಮತ್ತು ಪ್ರಸಾದ್ ಎನ್ನುವವರು ಹಣಕಾಸು ಸಂಸ್ಥೆಯೊಂದನ್ನು ನಡೆಸುತ್ತಿದ್ದು, ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಕಲಹ ಏರ್ಪಟ್ಟಿದೆ. ಆಗ ಪ್ರಸಾದ್ ಕೋಪಗೊಂಡು ಹರೀಶ್ ನ ಮೇಲೆ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಹರೀಶ್ ನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಕಾರ್ಕಳ: ಅರಣ್ಯ ಇಲಾಖೆಯ ವಾಚ್ ಮೆನ್ ಆತ್ಮಹತ್ಯೆ

ಕಾರ್ಕಳ: ಅರಣ್ಯ ಇಲಾಖೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ತಾತ್ಕಾಲಿಕವಾಗಿ ವಾಚ್ ಮನ್ ಕೆಲಸ ನಿರ್ವಹಿಸುತ್ತಿದ್ದ, ವೇದವ್ಯಾಸ ಎನ್ನುವ ವ್ಯಕ್ತಿಯು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ಕಸಬ ಗ್ರಾಮದಲ್ಲಿ ನಡೆದಿದೆ. ಇವರು ತಮ್ಮ ಸೋದರಳಿಯನ ಜೊತೆ ಅನಂತ ಶಯನದಲ್ಲಿ ವಾಸವಾಗಿದ್ದು, ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ವೇದವ್ಯಾಸ ಅವರಿಗೆ ಕ್ಯಾನ್ಸರ್ ಬಂದಿರುವ ಸಂಗತಿ ತಿಳಿದು ಬಂದಿತ್ತು. ಅಂದಿನಿಂದ ಅವರು ಮನೆಯಲ್ಲಿ ಇದ್ದರು. ಹೀಗಾಗಿ ಮನನೊಂದು ವಿಷ ಸೇವಿಸಿದ್ದರು, ಮೊದಲಿಗೆ ಕಾರ್ಕಳ ಆಸ್ಪತ್ರೆಗೆ ಸೇರಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಎರಡು ಮೂರು ತಿಂಗಳಗಳ ಕಾಲ ಅವರನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಪ್ರಯತ್ನಿಸಿದ್ದರಿಂದ, ಸಾವಿಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.