ಕರಾವಳಿ ಬೆಂಗಳೂರು ರೈಲ್ವೆ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ
– ಉಡುಪಿ ಮತ್ತು ಚಿಕ್ಕಮಗಳೂರು ಸಂಸದ ಶ್ರೀನಿವಾಸ ಪೂಜಾರಿ ಮನವಿ
* ಬಂಟ್ವಾಳ: ಎಸ್ಎಎಫ್ ಕಾರ್ಯಪಡೆ ವತಿಯಿಂದ ಪಥ ಸಂಚಲನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕರಾವಳಿ ಮತ್ತು ಬೆಂಗಳೂರು ನಡುವಿನ ರೈಲ್ವೆ ಸಮಸ್ಯೆಗೆ ಸಂಬಂಧಿಸಿದಂತೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂಸದರಾದ ಶ್ರೀನಿವಾಸ ಪೂಜಾರಿ ಅವರು ವಿಧಾನಸೌಧಕ್ಕೆ ಭೇಟಿ ನೀಡಿ, ಅವುಗಳ ಕುರಿತು ಜನರಲ್ ಮ್ಯಾನೇಜರ್ ಆಗಿರುವ ಮುಕುಲ್ ಶರಣ್ ಮಾಥುರ್ ಮತ್ತು ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚಿಸಿ, ಮನವಿಯನ್ನು ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿದಾಗ ಮತ್ತು ಸಮಸ್ಯೆಗಳ ಕುರಿತು ಸಂಸದರು ಚರ್ಚಿಸಿದಾಗ, ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಹಾರೇಬೆಟ್ಟ ನಿಲ್ದಾಣದಲ್ಲಿ ತಿರುವಿನ ವ್ಯವಸ್ಥೆಗೆ ಮೂವತ್ತನಾಲ್ಕು ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದ್ದು, ಟೆಂಡರ್ ಇದೀಗ ಅಂತಿಮಗೊಳ್ಳುತ್ತಿದೆ, ಮಂಗಳೂರು ಹಾಸನ ರೈಲು ಅಭಿವೃದ್ಧಿಗೆ ನಿಗಮದ ನಿಯಮಿತವಾದ ಮಂಜೂರಾತಿ ಬೇಕಾಗಿರುವ ಹಿನ್ನೆಲೆಯಲ್ಲಿ, ಎಚ್ಎಂಆರ್ ಡಿಸಿ ಕಡೆಯಿಂದ ಅಧಿಕೃತ ಒಪ್ಪಿಗೆಯನ್ನು ಪಡೆಯಲಾಗಿದ್ದು, ಇನ್ನೇನು ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಲಾಗಿದ್ದು, ಒಂದು ವರ್ಷದೊಳಗಾಗಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಯನ್ನು ಮುಗಿಸುವ ಗುರಿಯನ್ನು ಹೊಂದಲಾಗಿದೆ, ಇನ್ನು ಮೊದಲಾದ ವಿವರಗಳನ್ನು ಸಂಸದರಾದ ಶ್ರೀನಿವಾಸ ಪೂಜಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ. ಕೊಂಕಣ ರೈಲ್ವೆ ಸಲಹಾ ಸಮಿತಿಯ ಗಣೇಶ್ ಪುತ್ರನ್, ರೈಲ್ವೆ ಸಮಯ ಪಟ್ಟಿ ಸಲಹೆಗಾರ ಪೃಥ್ವಿ ಕುಂದರ್, ಸಾರಿಗೆ ತಜ್ಞ ಅಭಿಜಿತ್ ಸಾರಂಗ್ ಮತ್ತು ಕುಂದಾಪುರ ರೈಲ್ವೆ ಸಮಿತಿಯ ವಿವೇಕ್ ಈ ಸಂದರ್ಭದಲ್ಲಿ ಸಂಸದರ ಜೊತೆಗಿದ್ದರು.
ಬಂಟ್ವಾಳ: ಎಸ್ಎಎಫ್ ಕಾರ್ಯಪಡೆ ವತಿಯಿಂದ ಪಥ ಸಂಚಲನ
ಬಂಟ್ವಾಳ: ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ, ರಭಸವಾದ ಗಾಳಿಯ ನಡುವೆಯೂ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಬಂಟ್ವಾಳ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸಂಬಂಧಿಸಿದ ಫರಂಗಿ ಪೇಟೆ ಎಂಬ ಪ್ರದೇಶದಲ್ಲಿ, ಎಸ್ಎಎಫ್ ಕಾರ್ಯಪಡೆಯು ಭಾನುವಾರದಂದು ಪಥ ಸಂಚಲನವನ್ನು ಕೈಗೊಂಡಿತು. ಮಳೆಯ ಅಡಚಣೆಯ ನಡುವೆಯೂ, ಇವರ ಈ ರೀತಿಯ ಶಿಸ್ತುಬದ್ಧ ಪಥ ಸಂಚಲನವನ್ನು ಕಂಡ ಸಾರ್ವಜನಿಕರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಎಸ್ಎಎಫ್ ಕಾರ್ಯ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆಗೂಡಿದರು.