ಕರಾವಳಿ ವಾತಾವರಣದಲ್ಲಿ ಏರುಪೇರು: ಜನ ಸಂಕಷ್ಟ
– ಹಗಲು ಬಿಸಿಲಿನ ಧಗೆಗೆ ಇರೋಕೆ ಆಗಲ್ಲ
– ರಾತ್ರಿ ಬೇಸಗೆಯ ನಡುವಿನಲ್ಲೇ ಮಳೆರಾಯನ ಪ್ರತಾಪ
– ಮೀನುಗಾರಿಕೆ ಈಗ ಕಷ್ಟ ಕಷ್ಟ
NAMMUR EXPRESS NEWS
ಮಂಗಳೂರು: ಕರಾವಳಿಯ ಹಲವು ಭಾಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ವಾತಾವರಣ ಕಂಡುಬರುತ್ತಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣ ಇದೆ ಹಾಗೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಸುಡು ಬಿಸಿಲಿನ ಬೇಗೆಯಲ್ಲಿ ಬೇಸತ್ತಿದ್ದ ಮಂಗಳೂರು ನಗರದಲ್ಲಿ ಬೇಸಗೆಯ ನಡುವಿನಲ್ಲೇ ಮಳೆರಾಯನ ಆರ್ಭಟ ಎಂಟ್ರಿ ಕೊಟ್ಟಿದ್ದಾನೆ. ಮಾ.12ರ ಸಂಜೆಯಿಂದಲೆ ಸಿಡಿಲು ಮಿಂಚು ಆರ್ಭಟಿಸಿದ್ದು ರಾತ್ರಿ 9.30ರ ಬಳಿಕ ಧೋ ಎಂದು ಮಳೆರಾಯ ಸುರಿದು ಬಿಟ್ಟಿದ್ದಾನೆ.
ಕಳೆದ 15 ದಿನಗಳಿಂದ ಅತೀ ಹೆಚ್ಚು ಬಿಸಿಲಿನ ಬೇಗೆಯಿಂದ ಜನ ಕಂಗಾಲಾಗಿದ್ದರು. ಜೊತೆಗೆ ಬಿಸಿಲಿನ ಉರಿ ತಾಳಲಾರದೇ ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು, ಇನ್ನು ಉದ್ಯೋಗ, ವ್ಯವಹಾರದಲ್ಲಿ ಕೂಡ ಕಳೆದ ತಿಂಗಳಿಂದ ವ್ಯಾಪಾರ ಅತ್ಯಂತ ಕಡಿಮೆಯಾಗಿದ್ದು, ಮೀನುಗಾರರಿಗೆ ಕೂಡ ತೊಂದರೆಯಾಗುತ್ತಿತ್ತು. ಇದೀಗ ಮಳೆಯ ವಾತಾವರಣ ಕಂಡುಬಂದಿದ್ದು ಮಲೆನಾಡಿನಲ್ಲಿಯೂ ಮೋಡ ಕವಿದ ವಾತಾವರಣ ಇದೆ.
ಮಂಗಳೂರಲ್ಲಿ ಸಂಜೆ ನಾಲ್ಕರಿಂದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿಗೆ ಸೀಮಿತವಾಗಿದ್ದ ಮಳೆ ರಾತ್ರಿಯಾಗುತ್ತಿದ್ದಂತೆ ಕರಾವಳಿಗೂ ಮುಖ ಮಾಡಿತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗಿದ್ದು ಬಳಲಿ ಬೆಂಡಾಗಿದ್ದ ಇಳೆ ಚೂರು ಉಸಿರು ಎಳಕೊಂಡಿದೆ.
– ಮೀನುಗಾರಿಕೆ ಈಗ ಕಷ್ಟ ಕಷ್ಟ
ತೀವ್ರ ಬಿಸಿಲಿನಿಂದಾಗಿ ಮೀನುಗಾರಿಕಾ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಆಳಕ್ಕೆ ಹೋಗುತ್ತಿರುವುದರಿಂದ ಮೀನುಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಸಾವಿರಾರು ಬೋಟ್‌ಗಳು ಬಂದರಿನಲ್ಲೇ ಲಂಗರು ಹಾಕಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ಸಮುದ್ರದಲ್ಲಿ ಹೆಚ್ಚಾದ ತಾಪಮಾನದಿಂದ, ಹವಾಮಾನ ವೈಪರೀತ್ಯದಿಂದಾಗಿ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮೀನುಗಾರಿಕೆಗೆ ತೆರಳುತ್ತಿರುವ ಮೀನುಗಾರರು ಲಕ್ಷಾಂತರ ರೂ. ನಷ್ಟಕ್ಕೊಳಗಾಗುತ್ತಿದ್ದಾರೆ. ಮಂಗಳೂರು ಬಂದರಿನಲ್ಲಿ 1500ಕ್ಕೂ ಹೆಚ್ಚು ಆಳಸಮುದ್ರ ಮೀನುಗಾರಿಕಾ ಬೋಟ್‌ಗಳಿವೆ. ಮೇ ತಿಂಗಳ ಅಂತ್ಯದವರೆಗೆ ಈ ಬೋಟ್‌ಗಳು ನಿರಂತರವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತವೆ. ಆದರೆ ಇದೀಗ ಸಾವಿರಕ್ಕೂ ಅಧಿಕ ಬೋಟ್‌ಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿವೆ.
ಆಳಸಮುದ್ರಕ್ಕೆ ಹೋಗುವ ಮೀನುಗಾರಿಕಾ ಬೋಟ್‌ಗಳು 10 ರಿಂದ 13 ದಿನ ಸಮುದ್ರದಲ್ಲಿ ಮೀನುಗಳ ಭೇಟೆಯಾಡಿ ಮತ್ತೆ ಬಂದರಿಗೆ ಬರುತ್ತವೆ. ಈ ವೇಳೆ ಹೋಗಿ ಬರೋದಕ್ಕೆ ಒಂದು ಬೋಟಿಗೆ 6 ಲಕ್ಷ ರೂ. ಖರ್ಚು ತಗುಲುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಬೋಟ್ಗಳಿಗೆ 2 ಲಕ್ಷ ರೂನಷ್ಟು ಮಾತ್ರವೇ ಮೀನುಗಳು ಸಿಗುತ್ತಿವೆ. ಇದರಿಂದಾಗಿ ಅಂದಾಜು 4 ಲಕ್ಷ ರೂ. ವರೆಗೆ ಮತ್ಸೋದ್ಯಮಿಗಳು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ನಷ್ಟ ಬೇಡ ಎಂದು ಬೋಟ್ಗಳನ್ನು ಮೀನುಗಾರಿಕೆಗೆ ಕಳುಹಿಸದೇ ಬಂದರಿನಲ್ಲಿ ಲಂಗರು ಹಾಕುತ್ತಿದ್ದಾರೆ. ಇನ್ನು ಮಾ. 12ಕ್ಕೆ ಅಂದರೆ ನಿನ್ನೆ ಮಳೆರಾಯ ಎಂಟ್ರಿ ಕೊಟ್ಟಿದ್ದು, ಮುಂದಿನ ಪರಿಸ್ಥಿತಿ ಹೇಗೆ ಎಂದು ಕಾದು ನೋಡಬೇಕಿದೆ.
