ಕರಾವಳಿ ಟಾಪ್ ನ್ಯೂಸ್!
ಗುರುವಾಯನಕೆರೆ: ಬೈಕ್ ಟಿಪ್ಪರ್ ಭೀಕರ ಅಪಘಾತ – ಬೈಕ್ ಸವಾರ ಸಾವು, ಒಬ್ಬ ಗಂಭೀರ!
– ಪುತ್ತೂರು: ರೈಲ್ವೇ ನಿಲ್ದಾಣದಲ್ಲಿ ಶೀಟ್ ಬಿದ್ದು ಇಬ್ಬರು ಮಹಿಳೆಯರಿಗೆ ಗಾಯ!!
– ಕೋಟ: ಕಾರು ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸ್ಥಳದಲ್ಲೇ ಸಾವು
– ಉಡುಪಿ: ಹೊಟೇಲ್ ಮಾಲಕ ನಾಪತ್ತೆ: ದೂರು ದಾಖಲು
NAMMUR EXPRESS NEWS
ಗುರುವಾಯನಕೆರೆ: ಬೆಳ್ತಂಗಡಿ ಬಳಿಯ ಗುರುವಾಯನಕೆರೆಯಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ.
ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯ ಸನ್ಯಾಸಿಕಟ್ಟೆ ಬಳಿ ಎ.14 ರ ಸೋಮವಾರ ಈ ಭೀಕರ ಅಪಘಾತ ನಡೆದಿದೆ. ಮೃತಪಟ್ಟ ಬೈಕ್ ಸವಾರ, ಮೂಲತಃ ಶಿವಮೊಗ್ಗ ಜಿಲ್ಲೆಯ ಉಪೇಂದ್ರ (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತ ಗುರುವಾಯನಕೆರೆ ಸ್ಥಳೀಯ ಕಾಲೇಜಿನ ಹಾಸ್ಟೆಲಿನಲ್ಲಿ ಅಡುಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಇನ್ನು ಸಹಸವಾರ ಮೋಹನ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
– ಪುತ್ತೂರು: ರೈಲ್ವೇ ನಿಲ್ದಾಣದಲ್ಲಿ ಶೀಟ್ ಬಿದ್ದು ಇಬ್ಬರು ಮಹಿಳೆಯರಿಗೆ ಗಾಯ!!
ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಒಂದು ಅವಘಡ ನಡೆದಿದ್ದು ನಿಲ್ದಾಣದ ಮಾಡಿನಿಂದ ಶೀಟ್ ಬಿದ್ದು ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ರೈಲ್ವೇ ನಿಲ್ದಾಣದಲ್ಲಿ ನವೀಕರಣ ಕೆಲಸ ನಡೆಯುತ್ತಿದ್ದು, ಶೀಟು ಅಳವಡಿಕೆ ಕಾರ್ಯ ಸಾಗುತ್ತಿತ್ತು. ಪ್ರಯಾಣಿಕರ ಆಸನದ ಮೇಲ್ಭಾಗದಲ್ಲಿ ಎರಡು ಸಿಮೆಂಟ್ ಶೀಟಿನ ನಡುವೆ ಇರಿಸಲಾಗಿದ್ದ ತಗಡು ಶೀಟು ಗಾಳಿಗೆ ಹಾರಿ ಮಂಗಳೂರಿಗೆ ತೆರಳಲು ನಿಲ್ದಾಣದಲ್ಲಿ ಕುಳಿತುಕೊಂಡಿದ್ದ ಇಬ್ಬರು ಮಹಿಳಾ ಪ್ರಯಾಣಿಕರ ಮೇಲೆ ಬಿದ್ದಿದೆ.
ತತ್‌ಕ್ಷಣ ಇಬ್ಬರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಪ್ರಯಾಣಿಕೆಯ ಕೈಗೆ ಹೆಚ್ಚಿನ ಗಾಯ ಉಂಟಾಗಿದೆ. ಗಾಯಾಳುಗಳಿಗೆ ರೈಲ್ವೇ ಇಲಾಖೆಯಿಂದಲೇ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದೆ.
– ಕೋಟ: ಕಾರು ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸ್ಥಳದಲ್ಲೇ ಸಾವು
ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಕಾರು ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಮಣೂರು ರಾಜಲಕ್ಷ್ಮಿ ಸಭಾ ಭವನ ಹತ್ತಿರ ಸಂಭವಿಸಿದೆ.
ಮೃತಪಟ್ಟ ಮಹಿಳೆ ಗಿಳಿಯಾರು ಹೊನ್ನಾರಿಯ ಗಿರಿಜಾ ಪೂಜಾರ್ತಿ (65) ಎಂದು ತಿಳಿದು ಬಂದಿದೆ.
ಬನ್ನಾಡಿಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರೊಂದು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಮೃತ ದೇಹವನ್ನು ಕೋಟ ಜೀವನ್ ಮಿತ್ರ ನಾಗೇಂದ್ರ ಪುತ್ರನ್ ರವರು ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಸಾಗಿಸಿರುತ್ತಾರೆ.
ಘಟನಾಸ್ಥಳಕ್ಕೆ ಕೋಟ ಪೊಲೀಸ್ ಠಾಣೆಯ ಎಎಸ್ಐ ಗೋಪಾಲ್ ಪೂಜಾರಿ, ಸಿಬ್ಬಂದಿ ಅಶೋಕ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
– ಉಡುಪಿ: ಹೊಟೇಲ್ ಮಾಲಕ ನಾಪತ್ತೆ: ದೂರು ದಾಖಲು
ಉಡುಪಿ: ನಗರದ ತೆಂಕಪೇಟೆಯ ಶ್ರೀರಾಮ ಭವನ ಹೊಟೇಲ್ ಮಾಲಕ, ಉಡುಪಿ ಹರಿಶ್ಚಂದ್ರ ಮಾರ್ಗ ನಿವಾಸಿ ಅಜಿತ್ ಕುಮಾರ್(48) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಇವರು ಎ.12ರಂದು ಸಂಜೆ ಹೊಟೇಲಿನ ತಿಂಡಿಯನ್ನು ಪಾರ್ಸೆಲ್ ಕೊಡಲು ಅವರ ಸ್ಕೂಟರ್‌ನಲ್ಲಿ ಹೋದವರು ಹೋಟೆಲ್‌ಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ.
ಇವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.