ಕರಾವಳಿ 7 ಸುದ್ದಿಗಳು
– ಉಡುಪಿ: ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್
– ಪಾಣೆಮಂಗಳೂರು: ಸೀರೆಯಲ್ಲಿ ನೇಣಿಗೆ ಶರಣು
– ಉಳ್ಳಾಲ: ನೂತನ ಅಗ್ನಿಶಾಮಕ ಠಾಣೆಗೆ ಶಿಲಾನ್ಯಾಸ
– ಬೆಳ್ತಂಗಡಿ: ವಿಷ ಸೇವಿಸಿ ಭದ್ರತಾ ಸಿಬ್ಬಂದಿ ಆತ್ಮಹತ್ಯೆ
– ಕಡಬ: ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಅನುದಾನ
– ಧರ್ಮಸ್ಥಳ: ಖಾಸಗಿ ಸುದ್ದಿ ವೆಬ್ ಸೈಟ್ ವಿರುದ್ಧ ಕೇಸ್!
NAMMUR EXPRESS NEWS
ಉಡುಪಿ: ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್
ಉಡುಪಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶಕ್ಕೆ ಅನುಗುಣವಾಗಿ ಇದೇ ತಿಂಗಳ ಹನ್ನೆರಡನೇ ತಾರೀಖಿನ ಶನಿವಾರದಂದು, ಬೈಂದೂರು ಸೇರಿದಂತೆ ಉಡುಪಿ, ಕಾರ್ಕಳ ಮತ್ತು ಕುಂದಾಪುರದ ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಇದರಲ್ಲಿ ಸುಮಾರು 35000 ಪ್ರಕರಣಗಳ ಪೈಕಿ ರಾಜಿಯಾಗಲು ಸಾಧ್ಯವಿರುವಂತಹ ಸುಮಾರು ನಾಲ್ಕು ಸಾವಿರದ ಒಂಭೈನೂರು ಕೇಸ್ ಗಳನ್ನು ಅದಾಲತ್ ಗೆ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಬಹುತೇಕ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶವನ್ನು ಸಹ ಹೊಂದಲಾಗಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾದ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಿರಣ್ ಎಸ್ ಗಂಗಣ್ಣನವರ್ ತಿಳಿಸಿದ್ದಾರೆ. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಯೋಗೀಶ್ ಪಿ ಆರ್ ಅವರು ಭಾಗವಹಿಸಿದ್ದರು.
ಪಾಣೆಮಂಗಳೂರು: ಸೀರೆಯಲ್ಲಿ ನೇಣಿಗೆ ಶರಣು
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ. ಐವತ್ತಾರು ವರ್ಷದ ವಿಜಯ ಕಾಮತ್ ಎನ್ನುವವರು ರಾತ್ರಿ ಊಟ ಮಾಡಿ ಕೋಣೆಗೆ ತೆರಳಿದ ಬಳಿಕ, ಸೀರೆಯೊಂದನ್ನು ಫ್ಯಾನಿಗೆ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ. ಮರುದಿನ ಬೆಳಿಗ್ಗೆ ತಾಯಿ ಏಳದಿದ್ದುದನ್ನು ಗಮನಿಸಿದ ಮಗ ಶಿವಾನಂದ ಅವರು ಕೋಣೆಗೆ ಹೋಗಿ ನೋಡಿದಾಗ, ಫ್ಯಾನಿಗೆ ನೇತಾಡುತ್ತಿರುವ ಸ್ಥಿತಿಯಲ್ಲಿ ತಾಯಿಯ ಶವ ಕಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಉಳ್ಳಾಲ: ನೂತನ ಅಗ್ನಿಶಾಮಕ ಠಾಣೆಗೆ ಶಿಲಾನ್ಯಾಸ
ಉಳ್ಳಾಲ: ತಾಲ್ಲೂಕಿನ ಕೊಣಾಜೆ ಗ್ರಾಮದ ಕಂಬಳಪದವು ಬಳಿಯ ಪ್ರದೇಶದಲ್ಲಿ ನೂತನ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲು ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದ್ದು, ಇದರ ಹಿನ್ನೆಲೆಯಲ್ಲಿ ಇಂದು ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಈ ಶಿಲಾನ್ಯಾಸವನ್ನು ನೆರವೇರಿಸಿದರು. ಉಳ್ಳಾಲ ತಾಲ್ಲೂಕಿನಲ್ಲೂ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲು ಪ್ರಯತ್ನ ನಡೆಸಿದ್ದು, ಹಂತಹಂತವಾಗಿ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂದು ತಿಳಿಸಿದರು. ವಿಧಾನಸಭೆಯ ಸ್ಪೀಕರ್ ಆದ ಯು.ಟಿ .ಖಾದರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಉಳ್ಳಾಲ ತಾಲ್ಲೂಕು ಆಗಿ ಘೋಷಣೆಯಾದ ಬಳಿಕ ವಿವಿಧ ಇಲಾಖೆಗಳ ಶಾಖೆಗಳು ಹಂತಹಂತವಾಗಿ ಬರುತ್ತಿವೆ ಹಾಗೆಯೇ ತಾಲ್ಲೂಕಿನ ಅಭಿವೃದ್ಧಿಗಾಗಿ ಮತ್ತು ಅಗತ್ಯ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಪ್ರಯತ್ನ ನಡೆಸುತ್ತೇವೆ ಎಂಬ ಭರವಸೆಯನ್ನು ನೀಡಿದರು.
ವಿಷ ಸೇವಿಸಿ ಭದ್ರತಾ ಸಿಬ್ಬಂದಿ ಆತ್ಮಹತ್ಯೆ
ಬೆಳ್ತಂಗಡಿ: ತಾಲ್ಲೂಕಿನ ಉರುವಾಲು ಗ್ರಾಮದ ಮನೆಗಾರ ಮಜಲು ನಿವಾಸಿ ನೀಲಯ್ಯ ಗೌಡ ಎನ್ನುವವರ ಪುತ್ರ ಸುರೇಶ್ ಎಂಬ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುರೇಶ್ ಅವರು ಪುತ್ತೂರಿನ ಉಪ್ಪಿನಂಗಡಿಯ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ವೈಯಕ್ತಿಕ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಗತಿ ತಿಳಿದು ಬಂದಿದ್ದರೂ, ಹೆಚ್ಚಿನ ಮಾಹಿತಿಗಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಡಬ: ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಅನುದಾನ
ಕಡಬ; ಮುಲ್ಕಿ: ಬುಧವಾರದಂದು ಕಂಬಳಪದವುದಲ್ಲಿ ನೂತನ ಅಗ್ನಿಶಾಮಕ ಠಾಣೆಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಭಾಗದ ಎಲ್ಲಾ ತಾಲ್ಲೂಕುಗಳಲ್ಲೂ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲು ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಕಡಬ ಮತ್ತು ಮುಲ್ಕಿ ತಾಲ್ಲೂಕುಗಳಲ್ಲಿ ನಿರ್ಮಾಣ ಕಾರ್ಯ ಆರಂಭಿಸಲು ಅನುದಾನವನ್ನು ಮಂಜೂರು ಮಾಡಲಾಗಿದೆ, ಆದಷ್ಟು ಬೇಗ ನಿರ್ಮಾಣ ಕಾರ್ಯ ಆರಂಭವಾಗಲು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
* ಪುತ್ತೂರು: ಕಾನೂನು ರಕ್ಷಣೆಗಾಗಿ ಕಾರ್ಯಪಡೆಯ ಆಗಮನ
ಪುತ್ತೂರು: ತಾಲ್ಲೂಕಿಗೆ ವಿಶೇಷ ಕಾರ್ಯಪಡೆಯೊಂದು ಜುಲೈ 8ರ ರಾತ್ರಿಯ ಸಮಯದಲ್ಲಿ ಆಗಮಿಸಿದೆ. ಸುಮಾರು 9 45ರ ಸಮಯದಲ್ಲಿ ಪಥಸಂಚಲನವನ್ನು ಸಹ ಕೈಗೊಂಡಿದೆ. ಪಥಸಂಚಲನದಲ್ಲಿ ವಿಶೇಷ ಕಾರ್ಯಪಡೆಯೊಂದಿಗೆ ಡಿ ವೈ ಎಸ್ ಪಿ ಅರುಣ್ ನಾಗೇಗೌಡ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜಾ ಕೂಡ ಜೊತೆಗೂಡಿದರು. ಕರಾವಳಿ ಭಾಗದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಸ್ವಸ್ಥ ಸಮಾಜಕ್ಕಾಗಿ ರೂಪಿಸಿದ ಕಾರ್ಯಪಡೆ ಇದಾಗಿದೆ. ಪೂರ್ವ ಮಾಹಿತಿ ಇಲ್ಲದೆ ಮತ್ತು ರಾತ್ರಿಯ ಸಮಯವಾದ್ದರಿಂದ ಬಹುತೇಕರು ಮನೆಯೊಳಗೆ ಇರುವ ಕಾರಣದಿಂದಾಗಿ ಪಥಸಂಚಲನವು ಯಾರ ಗಮನಕ್ಕೂ ಬರಲಿಲ್ಲ ಎನ್ನುವ ಸಂಗತಿ ತಿಳಿದು ಬಂದಿದೆ.
ಧರ್ಮಸ್ಥಳ: ಖಾಸಗಿ ಸುದ್ದಿ ವೆಬ್ ಸೈಟ್ ವಿರುದ್ಧ ಕೇಸ್!
ಬೆಳ್ತಂಗಡಿ: ಖಾಸಗಿ ಸುದ್ದಿ ವೆಬ್ ಸೈಟ್ ನಲ್ಲಿ ಧರ್ಮಸ್ಥಳದ ಪ್ರಕರಣದ ಕುರಿತು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಪತ್ರಕರ್ತರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮಸ್ಥಳದ ಕುರಿತು ತನ್ನ ಬಳಿ ಮಾಹಿತಿ ಇದೆ ಎಂದು ಹೇಳಿದ ವ್ಯಕ್ತಿಯನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಆತ ಬಹಿರಂಗಪಡಿಸದಂತೆ ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ವೆಬ್ ಸೈಟ್ ನಲ್ಲಿ ಹರಿಯಲು ಬಿಟ್ಟ ಪರಿಣಾಮವಾಗಿ ಪತ್ರಕರ್ತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 352 ಮತ್ತು 353 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.