Categories
ಮಲ್ನಾಡ್

ಮೃತ ಶಮಿತಾ ಊರಿನ ದುಸ್ಥಿತಿ ಕೇಳೋರಿಲ್ಲ!

ಮೃತ ಶಮಿತಾ ಊರಿನ ದುಸ್ಥಿತಿ ಕೇಳೋರಿಲ್ಲ!

– ಆಕೆ ಊರಲ್ಲಿ ರಸ್ತೆ ಇದ್ದಿದ್ದರೆ ಆಕೆ ಬದುಕುತ್ತಿದ್ದಳಾ..?
– ಶಮಿತಾ ಊರಿನ ಅವ್ಯವಸ್ಥೆ ಕೇಳದ ಜನಪ್ರತಿನಿಧಿಗಳು, ಸರ್ಕಾರ
– ಹಿರೇಕೊಡಿಗೆ ಗ್ರಾಪಂನ ಅಸೂಡಿಗೆ 3 ಕಿಮೀ ರಸ್ತೆ ಇಲ್ಲ: ಶಾಲಾ ಮಕ್ಕಳ ಪರದಾಟ

ವಿಶೇಷ ವರದಿ: ಕೃಷ್ಣಮೂರ್ತಿ ಕೊಪ್ಪ

NAMMUR EXPRESS NEWS
ಕೊಪ್ಪ: ಕೊಪ್ಪದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬಾಲಕಿ ಶಮಿತಾ ಸಾವನ್ನು ಕಂಡಿದ್ದಾಳೆ. ಆ ಮಗುವಿನ ಸಾವಿಗೆ ನ್ಯಾಯ ಬೇಕಿದೆ. ಜತೆಗೆ ಇನ್ನು ಇಂತಹ ದುರಂತ ಎಂದಿಗೂ ನಡೆಯಬಾರದು. ಈ ಸಾವಿಗೆ ಹೊಣೆ ಯಾರು..?.
ಹೌದು. ಶಮಿತಾ ಸಾವಿಗೆ ಒಂದು ಕಡೆ ಆಕೆ ವ್ಯಾಸಂಗ ಮಾಡುತ್ತಿದ್ದ ಹಾಸ್ಟೆಲ್ ಅವ್ಯವಸ್ಥೆ ಕಾರಣವಾದರೆ, ಮತ್ತೊಂದು ಕಾರಣ ಆಕೆಯ ಊರಿನ ಅವ್ಯವಸ್ಥೆ. ಹೀಗಾಗಿ ಈ ಸಾವಿಗೆ ಕೊಪ್ಪ ಆಡಳಿತ ಮತ್ತು ಸರ್ಕಾರವೇ ನೇರ ಹೊಣೆ. ಒಂದು ವೇಳೆ ಆಕೆಯ ಮನೆಗೆ ಸರಿಯಾದ ರಸ್ತೆ ಸೇರಿ ಎಲ್ಲಾ ಸೌಕರ್ಯ ಒದಗಿಸಿದ್ದರೆ, ಇಂದು ಆಕೆ ಜೀವಂತವಾಗಿರುತ್ತಿದ್ದಳೆನೋ.?. ಏಕೆಂದರೆ ಆಕೆಗೆ ಇಂತಹ ಅವ್ಯವಸ್ಥೆ ಇರುವ ಹಾಸ್ಟೆಲ್ ಅಲ್ಲಿ ಇರುವ ಅವಶ್ಯಕತೆ ಬರುತ್ತಿರಲಿಲ್ಲ. ಬಾಳಿ ಬದುಕಬೇಕಿದ್ದ, ತಂದೆ ತಾಯಂದಿರ ಮುದ್ದಿನ ಮಗಳ ಸಾವು ಇದೀಗ ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ. ಈ ಸಮಸ್ಯೆ ಬಗ್ಗೆ ಶಮಿತಾ ಕುಟುಂಬದವರು ಕೂಡ ಹೇಳಿಕೊಂಡಿದ್ದಾರೆ.

ಮಳೆಗಾಲದಲ್ಲಿ 5 ತಿಂಗಳು ಓಡಾಡೋಕೆ ಆಗಲ್ಲ!

ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಿಗುಂಡಿ- ಅಸೂಡಿ- ಕಾರೇಮನೆ-ಚೌತ- ಬೊಮ್ಲಾಪುರ ಮಾರ್ಗದ ರಸ್ತೆ ಸಂಪರ್ಕ ಇಲ್ಲ. ಹಾಗಾಗಿ ಈ ಭಾಗದಲ್ಲಿ ಮಕ್ಕಳು 5-6 ಕಿಮೀ ನಡೆದುಕೊಂಡು ಹೋಗಬೇಕು. ಇನ್ನು ಇಲ್ಲಿರುವ ಮಣ್ಣು ರಸ್ತೆಯಲ್ಲಿ ಯಾವುದೇ ವಾಹನ ಓಡಾಟ ಕಷ್ಟ. ಕೊಪ್ಪದ ಅದಿ ದೇವತೆ ಬೊಮ್ಲಾಪುರ ದೇವತೆಯ ಊರಿಗೆ ಸಂಪರ್ಕ ಬೆಸೆಯುವ ರಸ್ತೆ. ಅದರೆ ಈ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಲಭ್ಯ ಈ ಊರಿಗೆ ಮರೀಚಿಕೆ ಆಗಿದೆ. ಈ ಕಾರಣದಿಂದಲೇ ಶಾಲೆ, ಕಾಲೇಜು ಮಕ್ಕಳನ್ನು ಹಾಸ್ಟೆಲ್ ಅಲ್ಲಿ ಬಿಡಲಾಗಿದೆ. ಅಲ್ಲಿಯೂ ರಕ್ಷಣೆ ಇಲ್ಲ ಎಂದರೆ ಇನ್ನು ಯಾರನ್ನು ಕೇಳಬೇಕು? ಇಲ್ಲಿ ರಸ್ತೆ ಇಲ್ಲದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಹೊರಗಡೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದ ಮನೆಗಳಿದ್ದರೂ ಈ ಭಾಗದಲ್ಲಿ ಮೂಲಭೂತ ಸೌಲಭ್ಯ ಇಲ್ಲ.

ಬೈಕ್ ಅಲ್ಲಿ ಬಿದ್ದು ಜೀವನ ಕಳೆದುಕೊಂಡರು..!

ರಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ಶಮಿತಾ ಮನೆ ಮಾರ್ಗದಲ್ಲಿ ಓಡಾಡಲು ಸಾಧ್ಯವಿಲ್ಲ. ಬೈಕ್ ಅಲ್ಲಿ ಬಿದ್ದು ಹತ್ತಾರು ಜನ ಕಾಲು ಕೈ ಮುರಿದುಕೊಂಡಿದ್ದಾರೆ. ಇದರಿಂದ ಅನೇಕರ ಬದುಕು ಕೂಡ ಕತ್ತಲಲ್ಲಿ ಇದೆ. ಕಾಡಿನ ಹಾದಿ ನಡುವೆ ಈ ಭಾಗದಲ್ಲಿ ಜನ ನಡೆದುಕೊಂಡೇ ಹೋಗಬೇಕಿದೆ. ಚಿರತೆ, ಹುಲಿ, ಹಾವಿನ ಭಯದಲ್ಲೇ ಜೀವನ ಕಳೆಯುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮನವಿ, ಹೋರಾಟಕ್ಕೆ ಬೆಲೆ ಇಲ್ಲ.. ಜನ ಪ್ರತಿನಿಧಿಗಳಿಗೂ ಬೇಕಿಲ್ಲ

ಅಬ್ಬಿಗುಂಡಿ- ಅಸೂಡಿ- ಕಾರೇಮನೆ-ಚೌತ- ಬೊಮ್ಲಾಪುರ ಮಾರ್ಗದ ರಸ್ತೆ ಸಂಪರ್ಕ ರಸ್ತೆ ಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರೂ ಈ ವರೆಗೆ ಆಗಿಲ್ಲ. ಮನವಿ, ಹೋರಾಟಕ್ಕೆ ಬೆಲೆ ಇಲ್ಲ.. ಜನ ಪ್ರತಿನಿಧಿಗಳಿಗೂ ಬೇಕಿಲ್ಲ. ಕೂಡಲೇ ಜಿಲ್ಲಾಡಳಿತ, ಶಾಸಕರು, ಸಚಿವರು ಗಮನಿಸಿ ರಸ್ತೆ ಆಗಬೇಕು ಎಂದು ಜನ ಅಗ್ರಹಿಸಿದ್ದಾರೆ.
ಮತ ಕೇಳುವಾಗ ಜನ ಪ್ರತಿನಿಧಿಗಳು ಈ ಊರಿಗೆ ರಸ್ತೆ ಮಾಡುತ್ತೇವೆ ಎಂದವರು ಗೆದ್ದ ಬಳಿಕ ಈ ಕಡೆ ಪತ್ತೆ ಇರಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಎಷ್ಟೋ ಮಂದಿ ಇಲ್ಲಿ ಬಾಣಂತಿಯರು, ತುರ್ತು ಪರಿಸ್ಥಿತಿಯಲ್ಲಿ ಇಲ್ಲಿ ಆಟೋ ಕೂಡ ಬರಲ್ಲ. ಈ ಕಾರಣಕ್ಕೆ ಇಲ್ಲಿನ ಮಕ್ಕಳು ಹಾಸ್ಟೆಲ್ ಅಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹತ್ತಾರು ಮನೆಗಳಿವೆ.

ಊರವರೇ ಸೇರಿ ರಸ್ತೆ ಮಾಡಿದರು!

ಅಬ್ಬಿಗುಂಡಿ- ಅಸೂಡಿ- ಕಾರೇಮನೆ-ಚೌತ- ಬೊಮ್ಲಾಪುರ ಮಾರ್ಗದಲ್ಲಿ ಮಳೆಗಾಲದಲ್ಲಿ ಓಡಾಡೋದೇ ಕಷ್ಟ. ನೂರಾರು ಮನೆಗಳಿಗೆ ಸಂಪರ್ಕ ಬೆಸೆಯುವ ಈ ರಸ್ತೆಯನ್ನು ಪ್ರತಿ ವರ್ಷ ಗ್ರಾಮಸ್ಥರು ಸೇರಿ ಮಾಡುತ್ತಾರೆ. ಈ ಎಲ್ಲಾ ಸಮಸ್ಯೆಗಳು ಕೂಡ ಶಮಿತಾ ಸಾವಿಗೆ ಕಾರಣವಾಗಿವೆ.

ರಸ್ತೆಯಲ್ಲಿ ಹೋಗಲು ಶಾಸಕ ರಾಜೇಗೌಡ ಸೇರಿ ಎಲ್ಲರ ಪರದಾಟ

ಶಮಿತಾ ಸಾವಿನ ಬೆನ್ನಲ್ಲೇ ಶಮಿತಾ ಮನೆಗೆ ಭೇಟಿ ನೀಡಿದ ಶಾಸಕ ರಾಜೇಗೌಡ ಸೇರಿದಂತೆ ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು ಶಮಿತಾ ಮನೆಗೆ ಹೋಗಲು ಹರಸಾಹಸ ಪಟ್ಟರು. ಅರ್ಧ ದಾರಿಯಲ್ಲೇ ಕಾರು ಬಿಟ್ಟು ಕೆಸರಲ್ಲೇ ನಡೆದುಕೊಂಡೇ ಹೋದರು. ಈ ಬಗ್ಗೆ ಅಲ್ಲಿನ ಜನ ಕೂಡ ಸಮಸ್ಯೆ ಬಿಚ್ಚಿಟ್ಟು ಶಾಸಕರಿಗೆ ರಸ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದೀಗ ಶಮಿತಾ ಮನೆಯಿಂದ ಅನೇಕ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದು ಅಸೂಡಿ ಗ್ರಾಮದ ಮೂಲಭೂತ ಸಮಸ್ಯೆ ಬಗ್ಗೆ ಕೂಡ ದನಿ ಎತ್ತಲಿವೆ. ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿವೆ. ಜಿಲ್ಲಾಡಳಿತ, ತಾಲೂಕು ಆಡಳಿತ ಗಮನಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.