ಕರಾವಳಿ ಟಾಪ್ ನ್ಯೂಸ್
– ಮಂಗಳೂರು: ಲಂಚಕ್ಕೆ ಕೈಯೊಡ್ಡಿದ ಪೊಲೀಸರ ಅಮಾನತು
– ಉಳ್ಳಾಲ: ಬಿಪಿ ಹೆಚ್ಚಳ: ನವವಿವಾಹಿತ ದುರ್ಮರಣ
– ಬ್ರಹ್ಮಾವರ: ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಹಣ ಮಾಯ
– ಕಾರ್ಕಳ: ಕುಖ್ಯಾತ ಅಪರಾಧಿ ಕೊನೆಗೂ ಸೆರೆ
– ಹೆಬ್ರಿ: ಸೊಸೈಟಿ ಹಣ ದುರುಪಯೋಗ; ಸಿಬ್ಬಂದಿ ಅಮಾನತು
– ಉಡುಪಿ: ಗಂಧದ ಮರ ಕಳುವು; ಪ್ರಕರಣ ದಾಖಲು
NAMMUR EXPRESS NEWS
ಉಳ್ಳಾಲ: ಮಂಜನಾಡಿ ಗ್ರಾಮದ ನಿವಾಸಿಯಾದ, ನಗರದ ಮಾಲ್ ಒಂದರಲ್ಲಿ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ಮೂವತ್ತೆರಡು ವರ್ಷದ ಭರತ್ ಎನ್ನುವವರು ರಕ್ತದೊತ್ತಡ ಸಮಸ್ಯೆಯಿಂದ ಕುಸಿದು ಬಿದ್ದ ಪರಿಣಾಮವಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಏಪ್ರಿಲ್ ತಿಂಗಳಲ್ಲಷ್ಟೇ ಇವರ ವಿವಾಹವಾಗಿದ್ದು ಪತ್ನಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಭರತ್ ನ ಅಕಾಲಿಕ ಮರಣಕ್ಕೆ ಪತ್ನಿ ಮತ್ತು ತಾಯಿಯ ನೋವು ಹೇಳತೀರದಾಗಿದೆ.
• ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಹಣ ಮಾಯ
ಬ್ರಹ್ಮಾವರ: ತಾಲ್ಲೂಕು ನಿವಾಸಿ ಸುಗುಣ ಎನ್ನುವವರಿಗೆ ಕಡಿಮೆ ಹಣವನ್ನು ಹೂಡಿಕೆ ಮಾಡಿ ಅಧಿಕ ಲಾಭ ತರುವಂತಹ ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಸೈಬರ್ ದುಷ್ಕರ್ಮಿಗಳು ಜಾಹೀರಾತೊಂದನ್ನು ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಗುಣ ಅವರು, ದುಷ್ಕರ್ಮಿಗಳು ನೀಡಿದ ಬ್ಯಾಂಕ್ ಖಾತೆಗೆ ಹಣವನ್ನು ಕಳಿಸುತ್ತಾ ಹೋದರು. ಅದು ಅಂತಿಮವಾಗಿ 3. 92.250 ರೂಪಾಯಿಗಳಷ್ಟು ಸಂಗ್ರಹವಾಗಿ ದುಷ್ಕರ್ಮಿಗಳ ಪಾಲಾಗಿದೆ. ತಾನು ಮೋಸ ಹೋಗಿರುವುದಾಗಿ ತಿಳಿಸಿ ಸುಗುಣ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
• ಕಾರ್ಕಳ: ಕುಖ್ಯಾತ ಅಪರಾಧಿ ಕೊನೆಗೂ ಸೆರೆ
ಕಾರ್ಕಳ: ಕೊಲೆ, ಕಳ್ಳತನ, ಅಧಿಕಾರಿಗಳ ಮೇಲೆ ಹಲ್ಲೆ, ಸುಲಿಗೆ, ದರೋಡೆ ಹೀಗೆ ಹಲವಾರು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕುಖ್ಯಾತ ಕ್ರಿಮಿನಲ್ ಕಬೀರ್ ಹುಸೇನ್ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. 2005 ನೇ ವರ್ಷದಿಂದ ಸುಮಾರು ಹದಿನೇಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸೆರೆಮನೆವಾಸ ಅನುಭವಿಸಿ ಹೊರಬಂದಿದ್ದ. ಬಂಧನಕ್ಕೆ ಒಳಪಡುವುದು, ಹೊರಬರುವುದು ಇವನಿಗೆ ಸಾಮಾನ್ಯ ವಿಷಯವಾಗಿತ್ತು. ಕೇವಲ ಉಡುಪಿ, ಕಾರ್ಕಳ ಅಷ್ಟೇ ಅಲ್ಲದೆ ಹಿರಿಯಡ್ಕ, ಪಡುಬಿದ್ರೆ, ಮಣಿಪಾಲ, ಶಿರ್ವ, ಕಾಪು, ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ, ದಕ್ಷಿಣ ಕನ್ನಡದ ಮಂಗಳೂರು, ವೇಣೂರು, ಸೂರತ್ಕಲ್ ಹೀಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಉಡುಪಿಯ ಜಿಲ್ಲಾಧಿಕಾರಿಗಳು ಮತ್ತು ದಂಡಾಧಿಕಾರಿಗಳು ಗೂಂಡಾ ಕಾಯ್ದೆ ಅಡಿ ಕಬೀರ್ ಹುಸೇನ್ ನನ್ನು ಬಂಧಿಸಲು ಆದೇಶ ಹೊರಡಿಸಿದ್ದರ ಫಲವಾಗಿ ಪೊಲೀಸರು ಆತನನ್ನು ಸೆರೆಹಿಡಿದು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬಂಧನಕ್ಕೊಳಪಡಿಸಿದ್ದಾರೆ
ಹೆಬ್ರಿ: ಸೊಸೈಟಿ ಹಣ ದುರುಪಯೋಗ; ಸಿಬ್ಬಂದಿ ಅಮಾನತು
ಹೆಬ್ರಿ: ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಶಂಕರ ನಾಯ್ಕ ಎಂಬ ವ್ಯಕ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ತಿಂಗಳ ಹಿಂದಿನಿಂದ ಸಂಘದ ಸುಮಾರು 88 ಸಾವಿರದಷ್ಟು ಹಣವನ್ನು ದುರುಪಯೋಗಪಡಿಸಿಕೊಂಡ ಪರಿಣಾಮವಾಗಿ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಆತನನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ 88 ಸಾವಿರ ರೂಪಾಯಿಗಳಲ್ಲಿ 60 ಸಾವಿರ ರೂಪಾಯಿಯನ್ನು ಮನ್ನಾ ಮಾಡಿ, ಕೇವಲ 28 ಸಾವಿರ ಸಂಘಕ್ಕೆ ಮರುಪಾವತಿಸುವಂತೆ ಆಡಳಿತ ಮಂಡಳಿ ತಿಳಿಸಿದೆ. ಆದರೆ ಶಂಕರನಾಯ್ಕ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಸಂಘದ ಕಾರ್ಯನಿರ್ವಹಣಾಧಿಕಾರಿ, ಅಧ್ಯಕ್ಷರು ಸೇರಿದಂತೆ, ಅದರ ಹನ್ನೆರಡು ಜನ ನಿರ್ದೇಶಕರು ಮತ್ತು ನಾಡ್ಪಾಲು ಗ್ರಾಮದ ಕಾಸನಮಕ್ಕಿ ಸುಂದರ ಅವರ ವಿರುದ್ಧ “ಉದ್ದೇಶಪೂರ್ವಕವಾಗಿ ನನ್ನ ಮೇಲೆ ದ್ವೇಷಪೂರಿತ ಸುಳ್ಳು ಮೊಕದ್ದಮೆ ಹೂಡಿ, ಮಾನಸಿಕ ಹಿಂಸೆ ನೀಡಿ, ಕೆಲಸದಿಂದ ತೆಗೆದು ಹಾಕುವ ಮೂಲಕ ನನಗೆ ಆರ್ಥಿಕ ಬಹಿಷ್ಕಾರ ಹಾಕಿ ದೌರ್ಜನ್ಯ ಎಸಗಿದ್ದಾರೆ” ಎಂದು ಸಂಘದ ವಿರುದ್ಧವೇ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
* ಉಡುಪಿ: ಗಂಧದ ಮರ ಕಳುವು; ಪ್ರಕರಣ ದಾಖಲು
ಉಡುಪಿ: ತಾಲ್ಲೂಕಿನ ಶಿರ್ವ ಬಳಿಯ ಮೂಡುಬೆಳ್ಳೆಯಲ್ಲಿ ಖಾಲಿ ಜಾಗವೊಂದರಲ್ಲಿ ಬೆಳೆಸಿದ್ದ ಲಕ್ಷಾಂತರ ಮೌಲ್ಯದ ಎರಡು ಶ್ರೀಗಂಧದ ಮರಗಳು ಕಳುವಾಗಿರುವ ಘಟನೆ ಬಹುದಿನಗಳ ನಂತರ ಬೆಳಕಿಗೆ ಬಂದಿದೆ. ಎರಡು ಲಕ್ಷದಷ್ಟು ಬೆಲೆಬಾಳುವ ಮರಗಳನ್ನು ಕಡಿದು ದುಷ್ಕರ್ಮಿಗಳು ಅಪಹರಿಸಿದ್ದರೂ ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಗ್ರಾಮದ ನಿವಾಸಿ ಸತೀಶ್ ಎನ್ನುವವರು ತಮ್ಮ ತಾಯಿ ಗುಲಾಬಿ ಅವರ ಹೆಸರಿನಲ್ಲಿ ಎರಡು ಶ್ರೀಗಂಧದ ಮರಗಳನ್ನು ಬೆಳೆಸಿದ್ದು ಸುಮಾರು ನಲ್ವತ್ತು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದ್ದ ಎರಡೂ ಮರಗಳು ಈಗ ಕಾಣೆಯಾಗಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಲಂಚಕ್ಕೆ ಕೈಯೊಡ್ಡಿದ ಪೊಲೀಸರ ಅಮಾನತು
ಮಂಗಳೂರು: ಲಂಚವನ್ನು ಅಪೇಕ್ಷಿಸಿದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆದ ಸುಧೀರ್ ಕುಮಾರ್ ರೆಡ್ಡಿ ಅವರು ಇವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ವ್ಯಕ್ತಿಯೊಬ್ಬರ ವಾಹನ ಪರವಾನಗಿಯನ್ನು ಮರಳಿ ನೀಡಲು ಪೊಲೀಸರು ಐವತ್ತು ಸಾವಿರ ರೂಪಾಯಿಯಷ್ಟು ಬೇಡಿಕೆಯನ್ನು ಇಟ್ಟಿದ್ದಾರೆ. ಬೇಡಿಕೆ ಮುಂದಿಡಲು ಸಹಕರಿಸಿದ ಅಂದರೆ ಲಂಚದ ಬೇಡಿಕೆ ಕುರಿತು ತಿಳಿದಿದ್ದರೂ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡದೆ ಗೌಪ್ಯವಾಗಿಟ್ಟ ಕಾರಣ ತಸ್ಲಿಂ ಮತ್ತು ವಿನೋದ್ ಅವರನ್ನು ನೇರ ಆರೋಪಿಗಳೆಂದು ಪರಿಗಣಿಸಿ, ಲಂಚವನ್ನು ಬಯಸಿದ ಪೊಲೀಸರೊಂದಿಗೆ ಅಮಾನತು ಮಾಡಲಾಗಿದೆ.