* ಕಾಪು: 11ರಂದು ಉಚಿತ ಬೃಹತ್ ಉದ್ಯೋಗ ಮೇಳ
* ಮೂಲ್ಕಿ: ಕೇಳುವವರಿಲ್ಲದಂತಾಗಿದೆ ಮೂಲ್ಕಿ ಪ್ರಜಾ ಸೌಧ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
•ಕಾಪು: 11 ರಂದು ಉಚಿತ ಬೃಹತ್ ಉದ್ಯೋಗ ಮೇಳ
ಕಾಪು: ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಟೋಬರ್ 11ರ ಶನಿವಾರದಂದು, ಉಡುಪಿ ಜಿಲ್ಲೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಉಚಿತ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದ್ದು, ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನ ಮೂರರವರೆಗೆ ನಡೆಯಲಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರು “ರಾಜ್ಯದ ಯುವಕ ಯುವತಿಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು 50ಕ್ಕೂ ಹೆಚ್ಚು ಸ್ಥಳೀಯ ಪ್ರತಿಷ್ಠಿತ ಕಂಪನಿಗಳು ಮತ್ತು ಸೌದಿಯ ಹೊಟೇಲ್ ಉದ್ಯಮವು ಭಾಗವಹಿಸಲಿದ್ದು, ಸೌದಿಯ ಹೊಟೇಲ್ ಗಳಿಗೆ ಸುಮಾರು 350ಕ್ಕೂ ಹೆಚ್ಚು ಉದ್ಯೋಗಿಗಳ ಅವಶ್ಯಕತೆ ಇದ್ದು, ಅದಕ್ಕೆ ಇಲ್ಲಿ ನೇಮಕಾತಿ ನಡೆಯಲಿದೆ. ಜಿಲ್ಲಾ ಮಟ್ಟದ ಮೇಳವಾಗಿರುವ ಇದರಲ್ಲಿ ಸರ್ಕಾರಿ ಖಾಸಗಿ ಕಾಲೇಜುಗಳ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಎಂಬಿಎ ವಿದ್ಯಾರ್ಥಿಗಳು ಭಾಗವಹಿಸಬಹುದು. ಯುವಜನತೆಯಿಂದ ಹಿಡಿದು 45ರ ವಯೋಮಾನದವರೆಗೂ ಐಟಿಬಿಟಿ, ಆಟೋಮೊಬೈಲ್ ಎಜುಕೇಶನ್, ರಿಟೇಲ್, ಮಾರ್ಕೆಟಿಂಗ್, ಹೌಸ್ ಕೀಪಿಂಗ್, ಫಾರ್ಮಸಿ, ಇನ್ಸೂರೆನ್ಸ್, ಬ್ಯಾಂಕಿಂಗ್, ಹೊಟೇಲ್ ಮ್ಯಾನೇಜ್ಮೆಂಟ್, ಎಲೆಕ್ಟ್ರಿಕ್, ನರ್ಸಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಲಭಿಸಲಿದೆ. ಭಾಗವಹಿಸುವ ಅಭ್ಯರ್ಥಿಗಳು ಸ್ವವಿವರದ 10 ಪ್ರತಿಗಳನ್ನು ತೆಗೆದುಕೊಂಡು ಬರಬೇಕು, ಒಬ್ಬರು 10 ಸಂಸ್ಥೆಗಳಿಗೂ ಸ್ವವಿವರಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅಂದೇ ನೇಮಕಾತಿ ಪತ್ರವನ್ನು ನೀಡಲಾಗುತ್ತದೆ” ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಶ್ರೀನಿವಾಸ್, ಕಾಪು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಸುಕುಮಾರ್, ಹರೀಶ್ ಕಿಣಿ, ಜಿತೇಂದ್ರ ಪುಟಾರ್ಡೋ, ದಿವಾಕರ್ ಶೆಟ್ಟಿ, ಡಾ. ಸಂತೋಷ್ ಕುಮಾರ್ ಹಾಜರಿದ್ದರು.
* ಮೂಲ್ಕಿ: ಕೇಳುವವರಿಲ್ಲದಂತಾಗಿದೆ ಮೂಲ್ಕಿ ಪ್ರಜಾಸೌಧ
ಮೂಲ್ಕಿ: ತಾಲ್ಲೂಕು ಕೇಂದ್ರ ಎಂದು ಬಿಂಬಿಸುವ ನಿಟ್ಟಿನಲ್ಲಿ, ಕಳೆದೆರಡು ವರ್ಷಗಳ ಹಿಂದೆ ಪ್ರಜಾಸೌಧ ಎಂಬ ಹೆಸರಿನಲ್ಲಿ ತಾಲ್ಲೂಕು ಕಛೇರಿ ಕೇಂದ್ರವನ್ನು ನಿರ್ಮಿಸಲಾಗಿತ್ತು. ಆದರೆ ಇದನ್ನು ಇನ್ನೂ ಬಳಸಲು ಪ್ರಾರಂಭಿಸಿಲ್ಲ ಎನ್ನುವುದು ವಿಷಾದನೀಯ ಸಂಗತಿಯಾಗಿದೆ. ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವು ಕಂದಾಯ, ಕಾರ್ಮಿಕ ಇಲಾಖೆ ಸೇರಿದಂತೆ ಎಲ್ಲಾ ಪ್ರಧಾನ ಕಛೇರಿಗಳನ್ನು ಒಳಗೊಂಡಿದೆ. ಎರಡು ವರ್ಷಗಳಿಂದಲೂ ಜನರ ಚಟುವಟಿಕೆಗಳಿಲ್ಲದೆ, ಸುತ್ತಲೂ ಹುಲ್ಲು ಬೆಳೆದುಕೊಂಡಿದ್ದು, ಇನ್ನು ಕೆಲವು ದಿನಗಳ ಕಾಲ ಹೀಗೆಯೇ ಬಿಟ್ಟರೆ ಪಾಳು ಬಂಗಲೆಯಂತಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 2023ರ ಗಣರಾಜ್ಯೋತ್ಸವದಂದು ಮಾರ್ಚ್ ತಿಂಗಳ ಒಳಗಾಗಿ ಈ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ತಿಳಿಸಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಉದ್ಘಾಟನೆ ನಡೆಯದ ಪರಿಣಾಮವಾಗಿ, ಕಟ್ಟಡವು ಹಳೆಯದಾಗುತ್ತಿದೆ.
ಪ್ರಜಾಸೌಧವು ಸುಂದರವಾಗಿ ನಿರ್ಮಾಣಗೊಂಡಿದ್ದರೂ ಸಹ, ಒಳಗಡೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳಾದ ಮೇಜು, ಕುರ್ಚಿ, ಕಪಾಟು, ನೀರಿನ ವ್ಯವಸ್ಥೆ, ಶೌಚಾಲಯ ಅನುದಾನ ದೊರೆಯದೆ ವ್ಯವಸ್ಥೆಗೊಂಡಿಲ್ಲ. ಕಳೆದ ಕೆಲವು ತಿಂಗಳ ಹಿಂದೆ, ಕ್ಷೇತ್ರಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ರಸ್ತೆಯ ಬದಿಯಲ್ಲೇ ನಿಂತು ಕಟ್ಟಡವನ್ನು ವೀಕ್ಷಿಸಿ, ಅನುದಾನದ ಭರವಸೆಯನ್ನು ನೀಡಿ, ಪೀಠೋಪಕರಣಗಳು ಬಂದ ಬಳಿಕ ಉದ್ಘಾಟನೆಯನ್ನು ನೆರವೇರಿಸೋಣ ಎಂದು ಹೇಳಿ ತೆರಳಿದ್ದು, ಅದಕ್ಕೆ ಸಂಬಂಧಿಸಿದಂತೆ ಇಷ್ಟು ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. “ಪೀಠೋಪಕರಣಗಳು ಬಂದ ಮೇಲೆ ಉದ್ಘಾಟನೆಯನ್ನು ನಡೆಸಲು ಸಚಿವರು ನಿರ್ಧರಿಸಿದ್ದಾರೆ, ಅನುದಾನ ಬರುವವರೆಗೂ ಪೀಠೋಪಕರಣಗಳನ್ನು ವ್ಯವಸ್ಥೆಗೊಳಿಸಲಾಗುವುದಿಲ್ಲ. ಪೀಠೋಪಕರಣಗಳು ವ್ಯವಸ್ಥೆಗೊಳ್ಳುವ ತನಕ ಉದ್ಘಾಟನೆ ನಡೆಯದಂತಾಗಿ, ಕಟ್ಟಡ ಪಾಳು ಬೀಳುವಂತಾಗಿದೆ ಎಂದು ಹೇಳಲಾಗಿದೆ.