ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಭ್ರಷ್ಟರ ಬೇಟೆಗೆ ಲೋಕಾಯುಕ್ತ ಪ್ಲಾನ್!
– ಕರಾವಳಿಯಲ್ಲೂ ಲೋಕಾಯುಕ್ತ ದಾಳಿ: ಅಧಿಕಾರಿಗಳೇ ಶಾಕ್!
– ನಿವೃತ್ತಿ ಆಗಿ 15 ವರ್ಷ ಆದರೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯನಿರತ ಅಧಿಕಾರಿ!
NAMMUR EXPRESS NEWS
ಮಂಗಳೂರು/ ಉಡುಪಿ: ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧ ಭಾಗದಲ್ಲಿ ದಾಳಿ ನಡೆಸಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಈ ನಡುವೆ ಕರಾವಳಿಯಲ್ಲೂ ಕೂಡ ಅನೇಕ ಭ್ರಷ್ಟರ ಬೇಟೆಗೆ ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಮಂಗಳೂರು, ಉಡುಪಿ ಸೇರಿ ಅನೇಕ ಕಡೆ ದಾಳಿ ನಡೆಯುತ್ತಿದ್ದೂ ಇದೀಗ ತಳಮಟ್ಟದ ಭ್ರಷ್ಟಾಚಾರ ಹಣೆಯಲು ತಾಲೂಕು ಮಟ್ಟದಲ್ಲಿ ಅಧಿಕಾರಿಗಳ, ಸರ್ಕಾರಿ ನೌಕರರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಲೆ ಲೋಕಾಯುಕ್ತ ದಾಳಿ ನಡೆದ ಸಂದರ್ಭದಲ್ಲಿ ವಿವಿಧ ವಿಭಾಗಗಳ ಲೆಕ್ಕಪತ್ರದಲ್ಲಿ ಕೊರತೆಗಳೇ ಪ್ರಧಾನವಾಗಿ ಕಂಡುಬಂದಿದ್ದಷ್ಟೇ ಅಲ್ಲದೆ ಮತ್ತೊಂದು ಸಂಗತಿಯಿಂದ ಎಲ್ಲರೂ ದಂಗಾಗಿದ್ದಾರೆ. ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ನಿವೃತ್ತರಾಗಿ ಹದಿನೈದು ವರ್ಷ ಕಳೆದರೂ ಇನ್ನೂ ಅಧಿಕಾರದಲ್ಲಿದ್ದು ಕಾರ್ಯನಿರ್ವಹಿಸುತ್ತಿರುವುದು ಅಚ್ಚರಿಯೊಂದಿಗೆ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಲೋಕಾಯುಕ್ತ ನಿರ್ಧರಿಸಿದೆ.