ಕರಾವಳಿ ಟಾಪ್ 3 ನ್ಯೂಸ್
– ಮಂಗಳೂರು: ಕುಡ್ಲ ಯುವತಿಗೆ ರಾಷ್ಟ್ರೀಯ ಐಕಾನ್ ಪ್ರಶಸ್ತಿ
– ಬೈಂದೂರು: ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ರಾಜೀನಾಮೆ
– ಮಲ್ಪೆ: ನಿಲ್ಲದ ಕಡಲ ತೀರದ ಆರ್ಭಟ: ಜನರೇ ಹುಷಾರ್..!
NAMMUR EXPRESS NEWS
ಮಂಗಳೂರು: ನವ ದೆಹಲಿಯ ಭಾರತೀಯ ಯುವ ಕಲ್ಯಾಣ ಸಂಘವು ನೀಡುವ ರಾಷ್ಟ್ರೀಯ ಐಕಾನ್ ಪ್ರಶಸ್ತಿ ಈ ಬಾರಿ ಮಂಗಳೂರಿನ ಯುವ ಲೇಖಕಿ ರೇಷಲ್ ಬ್ರೆಟ್ನಿ ಫೆರ್ನಾಂಡಿಸ್ ಅವರಿಗೆ ಲಭಿಸಿದೆ. ಈ ಪ್ರಶಸ್ತಿಯನ್ನು ಪ್ರವಾಸೋದ್ಯಮ ಇಲಾಖೆ, ರಕ್ಷಣಾ ಸಚಿವಾಲಯ ಮತ್ತು ಕೇಂದ್ರ ಸಂಬಂಧಿತ ಇತರೆ ಸರ್ಕಾರಿ ಇಲಾಖೆಗಳೂ ಬೆಂಬಲ ನೀಡುತ್ತಾ ಬಂದಿದೆ. ರೇಷಲ್ ಅವರು ತಮ್ಮ ಬರವಣಿಗೆ ಮತ್ತು ಸಾಧನೆಯಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದು, ಪ್ರಸ್ತುತ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಕುರಿತು ನಾಲ್ಕು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ರೇಷಲ್ ಅವರ ಸಮಾಜಮುಖಿ ಕಾರ್ಯಗಳು ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಹಲವು ಗಣ್ಯರಿಂದ ಪ್ರಶಂಸೆಗೆ ಪಾತ್ರವಾಗಿದೆ. ರಾಷ್ಟ್ರೀಯ ಐಕಾನ್ ಪ್ರಶಸ್ತಿಯನ್ನು ಜುಲೈ ಹತ್ತರಂದು ನವದೆಹಲಿಯ ಪ್ರಧಾನ ಮಂತ್ರಿ ಸಂಗ್ರಹಾಲಯದಲ್ಲಿ ಪ್ರಧಾನ ಮಾಡಲಾಗುತ್ತಿದೆ.
ಬೈಂದೂರು: ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ರಾಜೀನಾಮೆ
ಉಡುಪಿ: ಬೈಂದೂರು ತಾಲ್ಲೂಕಿನ ಮಂಡಲದ ಬಿಜೆಪಿ ಅಧ್ಯಕ್ಷರಾಗಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ದೀಪಕ್ ಕುಮಾರ್ ಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಘಟನೆಯ ನಿಯಮದಂತೆ ಐದು ವರ್ಷಗಳನ್ನು ಪೂರೈಸಿರುವುದರಿಂದ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿರುವ ದೀಪಕ್ ಕುಮಾರ್ ಶೆಟ್ಟಿ ಅವರು ಹೊಸದಾಗಿ ಆಗಮಿಸುವವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವುದಾಗಿ ಪತ್ರದಲ್ಲಿ ಬರೆದು, ಉಡುಪಿಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರಿಗೆ ಸಲ್ಲಿಸಿದ್ದಾರೆ.
– ಮಲ್ಪೆ: ನಿಲ್ಲದ ಕಡಲ ತೀರದ ಆರ್ಭಟ: ಜನರೇ ಹುಷಾರ್..!
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆಯ ಕಡಲು ಇನ್ನೂ ತನ್ನ ಆರ್ಭಟವನ್ನು ಕಡಿಮೆಗೊಳಿಸಿಲ್ಲ. ಇದರಿಂದ ಮೀನುಗಾರರಲ್ಲಿ ಆತಂಕ ಮನೆ ಮಾಡಿದ್ದು, ಜೂನ್ 25ರ ಬುಧವಾರದಂದು ಕಂತುಬಲೆ ಮೀನುಗಾರರ ಸಂಘದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಲಾಗಿದೆ. ಡಿಸ್ಕೊ, ಟ್ರಾಲ್ ದೋಣಿ ಸೇರಿದಂತೆ ಪ್ರಮುಖ ನಾಡದೋಣಿಗಳು ಕೆಲ ದಿನಗಳಿಂದ ಮಳೆಯ ಪ್ರಮಾಣ ಇಳಿಮುಖವಾಗಿದ್ದರೂ ಸಮುದ್ರದ ನಿಲ್ಲದ ಆರ್ಭಟದಿಂದ ಕಡಲಿಗೆ ಇಳಿಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾರ್ಥನೆಯ ಬಳಿಕ ವಾತಾವರಣವನ್ನು ನೋಡಿಕೊಂಡು ದೋಣಿಗಳು ನೀರಿಗಿಳಿಯುವುದರ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.