ಮಂಗಳೂರು ಟಾಪ್ ನ್ಯೂಸ್!
ಮಂಗಳೂರು: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ ಗಂಭೀರ!
– ಬೆಳ್ತಂಗಡಿ: ಮರದ ಕೊಂಬೆ ಕಡಿಯುವಾಗಲೇ ಕರೆಂಟ್ ಶಾಕ್: ವ್ಯಕ್ತಿ ಸಾವು
– ಬೆಳ್ತಂಗಡಿ: ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮ ಗೋ ಸಾಗಾಟ!
– ಉಪ್ಪಿನಂಗಡಿ: ಬೋಳಂತಿಲದಲ್ಲಿ ಸರಣಿ ಕಳ್ಳತನ!
NAMMUR EXPRESS NEWS
ಮಂಗಳೂರು: ಇತ್ತೀಚಿಗಷ್ಟೇ ಕಡಬದಲ್ಲಿ ಯುವಕನೋರ್ವ ರೈಲಿನಿಂದ ಇಪ್ಪತ್ತೈದು ಅಡಿ ಆಳ ಬಿದ್ದಿದ್ದ, ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರೈಲಿನಿಂದ ಪ್ರಯಾಣಿಕರೊಬ್ಬರು ನರಿಮೊಗರು ಎಂಬಲ್ಲಿ ಕೆಳಗೆ ಬಿದ್ದಿದ್ದಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಗಂಭೀರವಾಗಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ್ದಾರೆ.
ಬಿದ್ದ ವ್ಯಕ್ತಿಯನ್ನು ಸಕಲೇಶಪುರದ ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ. ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಾತ್ ಆಗಿ ಕೆಳಗೆ ಬಿದ್ದಿದ್ದಾರೆ. ಗಂಭೀರ ಇರುವ ಇವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
– ಬೆಳ್ತಂಗಡಿ: ಮರದ ಕೊಂಬೆ ಕಡಿಯುವಾಗಲೇ ಕರೆಂಟ್ ಶಾಕ್: ವ್ಯಕ್ತಿ ಸಾವು
ಬೆಳ್ತಂಗಡಿ: ಮರದ ಕೊಂಬೆಯನ್ನು ಕಡಿಯುವಾಗ ಕರೆಂಟ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಬೆಳ್ತಂಗಡಿಯ ಕಸಬಾ ಗ್ರಾಮದ ಪುಂಡಿಕ್ಕು ಎಂಬಲ್ಲಿ ಎ.3ರಂದು ಚನನ ಗೌಡ (69) ಎಂಬುವವರು ಖಾಸಗಿ ಜಮೀನಿನಲ್ಲಿ ಮರದ ಗೆಲ್ಲು ಕಡಿಯುತ್ತಿದ್ದಾಗ ಗೆಲ್ಲು 11 ಕೆ. ವಿ ಕುವೆಟ್ಟು ಫೀಡರ್ನ ಎಚ್ಟಿ ಲೈನ್ಗೆ ಬಿದ್ದು, ಕರೆಂಟ್ ಶಾಕ್ ಹೊಡೆದು ಅವರು ಸಾವನ್ನಪ್ಪಿದ್ದಾರೆ.
ಮರದಿಂದ ಬಿದ್ದಿದ್ದ ಅವರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮರ ಕಡಿಯಲು ಅವರು ಮೆಸ್ಕಾಂನಿಂದ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.
– ಬೆಳ್ತಂಗಡಿ: ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮ ಗೋ ಸಾಗಾಟ!
ಬೆಳ್ತಂಗಡಿ: ಮಂಗಳೂರಿಗೆ ಅಕ್ರಮವಾಗಿ ಗೋ ಸಾಗಾಟ ನಡೆಸಲು ಹೊರಟ ವಾಹನವನ್ನು ಕಳಿಯ ನ್ಯಾಯತರ್ಪ ಸಮೀಪದ ಜಾರಿಗೆಬೈಲು ಎಂಬಲ್ಲಿ ಇಂದು ಬೆಳಗ್ಗೆ ತಡೆ ಹಿಡಿಯಲಾಗಿದೆ.
ಸುಮಾರು 10 ರಿಂದ 15 ಹಸುಗಳನ್ನು ಗೋವಧೆ ಮಾಡಲು ವಾಹನದಲ್ಲಿ ಸಾಗಾಟ ಮಾಡುವ ಕುರಿತು ಖಚಿತ ಮಾಹಿತಿ ಪಡೆದು ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆ ಹಿಡಿದಿದ್ದಾರೆ.
ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ವಾಹನ ಹಾಗೂ 15 ಕ್ಕೂ ಅಧಿಕ ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ.
– ಉಪ್ಪಿನಂಗಡಿ: ಬೋಳಂತಿಲದಲ್ಲಿ ಸರಣಿ ಕಳ್ಳತನ!
ಉಪ್ಪಿನಂಗಡಿ: ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಏ. 03ರಂದು ಬೆಳಗ್ಗಿನ ಜಾವ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಂದ ಸುಮಾರು 4.80 ಲಕ್ಷ ರೂ. ಹಾಗೂ ಆಭರಣಗಳನ್ನು ಕದ್ದೊಯ್ದಿರುವ ಕುರಿತು ದೂರು ದಾಖಲಾಗಿದೆ.
ಅಜರುದ್ದೀನ್ ಅವರ ಮನೆ ಮಂದಿ ಕಾರ್ಯಕ್ರಮದ ನಿಮಿತ್ತ ಸಂಬಂಧಿಕರ ಮನೆಗೆ ಹೋಗಿದ್ದು, ಈ ಸಂದರ್ಭದಲ್ಲಿ ಅವರ ಮನೆಯ ಮುಂಭಾಗದ ಬಾಗಿಲು ಮುರಿದಿದ್ದು, ಕಪಾಟಿನಲ್ಲಿದ್ದ 2.80 ಲಕ್ಷ ರೂ. ದೋಚಲಾಗಿದೆ.
ಅಜರುದ್ದೀನ್ ಅವರ ಬಾಡಿಗೆ ಮನೆಯಲ್ಲಿ ವಾಸವಿದ್ದ ನವಾಜ್ ಮನೆಯಿಂದ ಎರಡು ಲಕ್ಷ ರೂ. ಹಾಗೂ ಅರ್ಧ ಪವನ್ ತೂಕದ ಚಿನ್ನಾಭರಣವನ್ನೂ ಕಳ್ಳರು ಕದ್ದೊಯ್ದಿದ್ದಾರೆ.
ಪುತ್ತೂರು ತಾಲೂಕು ಪಂಚಾಯತ್ ಸಿಬ್ಬಂದಿ ಮಹಮ್ಮದ್ ಸಿರಾಜ್ ಅವರ ಮನೆಗೂ ಕಳ್ಳರು ನುಗ್ಗಿದ್ದು, ಕಪಾಟಿನಲ್ಲಿದ್ದ ಬೆಳ್ಳಿ ಗೆಜ್ಜೆ ಮೂರು ಸಾವಿರ ರೂ. ದೋಚಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯೆ ರತ್ನಾವತಿಯವರ ಹಳೆಯ ಮನೆಗೂ ಕಳ್ಳರು ನುಗ್ಗಿದ್ದು, ಅಲ್ಲಿ ಯಾವುದೇ ವಸ್ತು ಕಳುವಾಗಿಲ್ಲ ಎನ್ನಲಾಗಿದೆ. ಮಹಮ್ಮದ್ ಸಿರಾಜ್ ಮನೆಯಲ್ಲಿ ನಗ ನಗದಿಗಾಗಿ ಜಾಲಾಡಿಸಲಾಗಿದೆ. ಮನೆಯ ಫ್ರಿಡ್ಜ್ನಲ್ಲಿಟ್ಟಿದ್ದ ತಿಂಡಿಗಳನ್ನು ಕಳ್ಳರು ತಿಂದು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಲಾಗಿದೆ. ತನಿಖೆ ನಡೆಯುತ್ತಿದೆ.