Categories
ಕರಾವಳಿ

ಮಂಗಳೂರು: ನಾಪತ್ತೆಯಾಗಿದ್ದ ಮುಲ್ಕಿಯ ಆಟೋ ಚಾಲಕ ಶವವಾಗಿ ಪತ್ತೆ

ಕರಾವಳಿ ಟಾಪ್ ನ್ಯೂಸ್

ಮಂಗಳೂರು: ನಾಪತ್ತೆಯಾಗಿದ್ದ ಮುಲ್ಕಿಯ ಆಟೋ ಚಾಲಕ ಶವವಾಗಿ ಪತ್ತೆ

– ಹಿರಿಯಡ್ಕ: ಸಹೋದರಿಯರಿಬ್ಬರು ನಾಪತ್ತೆ!
– ಬೆಳ್ತಂಗಡಿ: ಕಾಡಿನಲ್ಲಿ ಪತ್ತೆಯಾದ ಶಿಶುವಿನ ತಂದೆ-ತಾಯಿಗೆ ಮದುವೆ

NAMMUR EXPRESS NEWS
ಮಂಗಳೂರು: ನಗರದ ಹೊರವಲಯದ ಮುಲ್ಕಿ ಸಮೀಪದ ಕೋಲ್ನಾಡಿನ ಆಟೋ ಚಾಲಕ ಮುಹಮ್ಮದ್ ಶರೀಫ್ (52) ಎಂಬವರು ನಾಪತ್ತೆಯಾಗಿದ್ದು, ಮೃತ ದೇಹವು ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ.
ಆಟೋ ಚಾಲಕ ಮುಹಮ್ಮದ್ ಶರೀಫ್ ತನ್ನ ರಿಕ್ಷಾವನ್ನು ನಗರದ ಕೊಟ್ಟಾರ ಚೌಕಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಎಂದಿನಂತೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದಿದ್ದರು. ಆದರೆ ಎಂದಿನಂತೆ ವಾಪಸ್ ಮನೆಗೆ ಬಾರದ ಕಾರಣ ಮತ್ತು ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗದ ಕಾರಣ ಮನೆ ಮಂದಿ ಆತಂಕಗೊಂಡಿದ್ದರು. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಕಾಣೆಯಾಗಿರುವ ಬಗ್ಗೆ ಸಂದೇಶ ರವಾನಿಸಲಾಗಿತ್ತು.
ವೇಳೆಗೆ ಮುಹಮ್ಮದ್ ಶರೀಫ್‌ರ ಮೃತದೇಹವು ಕರ್ನಾಟಕ-ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಪತ್ತೆಯಾಗಿದೆ. ಪಕ್ಕದಲ್ಲೇ ರಿಕ್ಷಾ ಕೂಡ ಇದೆ. ಬಾವಿಯ ಬಳಿ ರಕ್ತದ ಕಲೆಗಳು ಕಂಡು ಬಂದಿದ್ದು ಮಾದಕ ವ್ಯಸನಿಗಳು ಕೊಲೆಗೈದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿರುವ ಮುಹಮ್ಮದ್ ಶರೀಫ್ ದಿನಾ ಬೆಳಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದು ಬಾಡಿಗೆಗೆ ರಿಕ್ಷಾ ಓಡಿಸುತ್ತಾರೆ. ತಡರಾತ್ರಿಯಾದರೂ ಸರಿ, ಮನೆಗೆ ಮರಳುತ್ತಾರೆ. ಆದರೆ ಮನೆಯಿಂದ ಹೊರಟು ಮಂಗಳೂರಿಗೆ ಬಂದಿದ್ದ ಮುಹಮ್ಮದ್ ಶರೀಫ್ ಗುರುವಾರ ತಡರಾತ್ರಿಯವರೆಗೂ ಮನೆಗೆ ಮರಳಲಿಲ್ಲ ಎನ್ನಲಾಗಿದೆ. ಹಾಗಾಗಿ ಹುಡುಕಾಟ ನಡೆಸಲಾಯಿತು. ಮುಸ್ಸಂಜೆಯ ವೇಳೆಗೆ ಕೇರಳ ಗಡಿ ಭಾಗದ ತಲಪಾಡಿ ಸಮೀಪದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಮುಹಮ್ಮದ್ ಶರೀರ ಮೃತದೇಹವಿರುವ ಬಗ್ಗೆ ಮಾಹಿತಿ ಬಂತು. ಗಾಂಜಾ ವ್ಯಸನಿಗಳು ಮುಹಮ್ಮದ್ ಶರೀಫ್‌ರನ್ನು ಬಾಡಿಗೆಗೆ ಕರೆಕೊಂಡು ಹೋಗಿ ಬಳಿಕ ಅದ್ಯಾವುದೋ ಕಾರಣಕ್ಕೆ ಕೊಲೆಗೈದಿರಬೇಕು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದ್ದು ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಹಿರಿಯಡ್ಕ: ಸಹೋದರಿಯರಿಬ್ಬರು ನಾಪತ್ತೆ!

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಮಂಜುಳಾ (24) ಹಾಗೂ ಮಲ್ಲಿಕಾ (18) ಎಂಬ ಸಹೋದರಿಯರು ಎಪ್ರಿಲ್ 3ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
ಮಂಜುಳಾ ಅವರು 5 ಅಡಿ 1 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರಿಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು,ಕಳೆದ 2 ವರ್ಷಗಳಿಂದ ತವರು ಮನೆಯಲ್ಲಿಯೇ ವಾಸವಾಗಿದ್ದಾರೆ.
ಮಲ್ಲಿಕಾ (18) 5 ಅಡಿ ಎತ್ತರ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಇವರೂ ಸಹ ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಹತ್ತನೇ ತರಗತಿವರೆಗೆ ಶಾಲೆಗೆ ಹೋಗಿದ್ದು, ಬಳಿಕ ಮನೆಯ ಲ್ಲಿಯೇ ಇದ್ದಾರೆ. ಇವರಿಬ್ಬರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಉಪನಿರೀಕ್ಷರಿಗೆ ಮಾಹಿತಿ ನೀಡುವಂತೆ ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.

– ಬೆಳ್ತಂಗಡಿ: ಕಾಡಿನಲ್ಲಿ ಪತ್ತೆಯಾದ ಶಿಶುವಿನ ತಂದೆ-ತಾಯಿಗೆ ಮದುವೆ

ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ ಕಾಡುದಾರಿಯಲ್ಲಿ ಮಾರ್ಚ್ 22ರಂದು ದೊರಕಿದ್ದ ಹೆಣ್ಣು ಶಿಶುವಿನ ತಂದೆ-ತಾಯಿಗೆ ಮದುವೆ ನಡೆದಿದೆ.
ಬೆಳಾಲು ಗ್ರಾಮದ ಮಾಯ ಪ್ರದೇಶದ ನಿವಾಸಿ ರಂಜಿತ್ ಗೌಡ(27) ಹಾಗೂ ಧರ್ಮಸ್ಥಳದ ಪಾಂಗಾಳ ನಿವಾಸಿ ಸುಶ್ಮಿತಾ ಮದುವೆಯಾದವರು.
ರಂಜಿತ್ ಗೌಡ ಹಾಗೂ ಮಂಗಳೂರಿನ ಬ್ಯೂಟಿಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದರು. ರಂಜಿತ್ ಗೌಡ ವಿವಾಹವಾಗುವ ಭರವಸೆಯೊಂದಿಗೆ ಸುಶ್ಮಿತಾಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಗರ್ಭಿಣಿಯಾಗಿದ್ದ ಆಕೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಬಳಿಕ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆದ್ದರಿಂದ ಸುಶ್ಮಿತಾ ಮಗುವನ್ನು ರಂಜಿತ್ ಗೌಡನ ಮನೆಯಲ್ಲಿ ಬಿಟ್ಟು ಹೋಗಿದ್ದಳು. ಆದರೆ ಆತ ಅದನ್ನು ಕಾಡುದಾರಿಯಲ್ಲಿ ತೊರೆದು ಹೋಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.