ಕರಾವಳಿ ಪ್ರವಾಸೋದ್ಯಮ ಉತ್ತೇಜಿಸಲು ಹೊಸ ನೀತಿ ಜಾರಿಗೆ ಪ್ಲಾನ್!
– ಕುಂದಾಪ್ರ ಕನ್ನಡ ಹಬ್ಬದಲ್ಲಿ ಉಪ ಮುಖ್ಯಮಂತ್ರಿ ಡಿಕೆಶಿ ಘೋಷಣೆ
– ಕರಾವಯಲ್ಲೇ ಉದ್ಯೋಗ ಸೃಷ್ಟಿ ನಮ್ಮ ಸರ್ಕಾರದ ಗುರಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಇತ್ತೀಚಿಗೆ ರಾಜಧಾನಿಯಲ್ಲಿ ನಡೆದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಭಾಗವಹಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಕರಾವಳಿ ಪ್ರವಾಸೋದ್ಯಮ ಉತ್ತೇಜಿಸಲು ಹೊಸ ನೀತಿ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ “ನಾನು ಕರಾವಳಿ ಭಾಗಗಳಲ್ಲಿ ಸುತ್ತಾಡಿದ್ದೇನೆ, ಆ ಆತ್ಮೀಯತೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದೆ. ಕುಂದಾಪುರ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ನೋಡಿ ತುಂಬಾ ಸಂತೋಷವಾಗಿದೆ. ಶಿಕ್ಷಣ ಆರೋಗ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕರಾವಳಿ ಭಾಗವು ಮುಂಚೂಣಿಯಲ್ಲಿದೆ. ಇಲ್ಲಿನ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸುವ ಕಾರ್ಯವನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ 340 ಕಿಲೋ ಮೀಟರ್ ವ್ಯಾಪಿಸಿರುವ ಕರಾವಳಿ ಪ್ರದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ, ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿಯನ್ನು ಘೋಷಿಸಲಾಗಿದೆ. ಅದು ಜಾರಿಗೆ ಬಂದ ನಂತರ, ಮತ್ತೊಂದು ವಿಮಾನ ನಿಲ್ದಾಣದ ಸ್ಥಾಪನೆಯ ಬಗ್ಗೆ ಚರ್ಚಿಸಲಾಗುವುದು. ಜೊತೆಗೆ ಕನ್ನಡಿಗರು ಮೂಲ ಬೇರನ್ನು ಬಿಟ್ಟು ವಲಸೆ ಹೋಗುವುದನ್ನು ತಡೆಯಲು, ಕರ್ನಾಟಕದಲ್ಲೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜನೆಗಳನ್ನು ರೂಪಿಸಲಾಗುವುದು” ಎಂಬ ಭರವಸೆಯನ್ನು ನೀಡಿದರು. ಈ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭೆಗಳಿಗೆ ಸನ್ಮಾನಿಸಿದರು.
