ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ “ಅಭಿವಿನ್ಯಾಸ ಕಾರ್ಯಕ್ರಮ”
2025 – 26ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಭಿ ವಿನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಕಾಶ್ ಪೂಜಾರಿ ಮಾತಿಬೆಟ್ಟು (ಜೆಸಿಐ ರಾಷ್ಟ್ರೀಯ ತರಬೇತುದಾರರು ) ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ‘ ಕಾಲೇಜಿನ ಹೊಸ ವಾತಾವರಣಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಕೆಲಸ ಮಾಡಬೇಕು. ಕಾಲೇಜಿಗೆ ಬರುವುದು ಮೋಜು ಮಾಡಲಿಕ್ಕಲ್ಲ ಹೆಚ್ಚು ಹೆಚ್ಚು ಕೌಶಲ್ಯಗಳನ್ನು ಕಲಿತುಕೊಂಡು ಹೋಗಲು ಎಂಬುದನ್ನು ತಿಳಿಯಬೇಕು. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವ ನಡೆ ಇರಬೇಕು. ಯಾವುದೇ ವ್ಯಸನಗಳಿಗೆ ತುತ್ತಾಗದೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಉತ್ತಮ ಗೆಳೆಯರ ಸಹವಾಸ ಮಾಡಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗ್ಡೆ.ಎಸ್ ಇವರು ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಗುರಿ ಇರಬೇಕು ಅದನ್ನು ಸಾಧಿಸುವ ಇಚ್ಛಾಶಕ್ತಿ ಇರಬೇಕು ಆಗ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ನಿಮಗೆ ಅಗತ್ಯವಾಗಿ ಬೇಕಾಗುವ ಎಲ್ಲಾ ವ್ಯವಸ್ಥೆಗಳು ನಮ್ಮ ಕಾಲೇಜಿನಲ್ಲಿವೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಗಣೇಶ್ ಎಸ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಕುಮಾರ್ ಎಸ್ ಇವರು ಸ್ವಾಗತಿಸಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರವೀಣ್ ಶೆಟ್ಟಿ ಅವರು ನಿರೂಪಿಸಿ ವಂದಿಸಿದರು.