ಕರಾವಳಿ ಟಾಪ್ ನ್ಯೂಸ್
• ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಆರ್ಭಟ!
– ಮಳೆಯ ತೀವ್ರತೆಯಿಂದಾಗಿ ಮಂಗಳವಾರ ರಜೆ ಘೋಷಣೆ
ಮಂಗಳೂರು: ವೆನ್ಲಾಕ್ ಆಸ್ಪತ್ರೆಗೆ ಬಂತು ಬಗ್ಗಿ ಆ್ಯಂಬುಲೆನ್ಸ್
• ಕಾರ್ಕಳ: ಜ್ವರದಿಂದ ಮಹಿಳೆ ಸಾವು: ಅರೋಗ್ಯ ಅಲರ್ಟ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ/ ದಕ್ಷಿಣ ಕನ್ನಡ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆಯಿಂದಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಂಗನವಾಡಿ ಶಾಲಾ ಕಾಲೇಜುಗಳಿಗೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಂಗಳವಾರ ಕೂಡ ರಜೆಯನ್ನು ಘೋಷಿಸಿದ್ದಾರೆ. ಇನ್ನುಳಿದಂತೆ ಡಿಪ್ಲೋಮಾ, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ ಎಂಬುದನ್ನು ತಿಳಿಸಿದ್ದಾರೆ. ಮಳೆಯ ತೀವ್ರತೆಯಿಂದಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರೇಡ್ ಅಲರ್ಟ್ ಅನ್ನು ಘೋಷಿಸಲಾಗಿದೆ.
• ಮಂಗಳೂರು: ವೆನ್ಲಾಕ್ ಆಸ್ಪತ್ರೆಗೆ ಬಗ್ಗಿ ಆ್ಯಂಬುಲೆನ್ಸ್
ಮಂಗಳೂರು: ರಾಜ್ಯದ ಮೊದಲ ಬಗ್ಗಿ ಆ್ಯಂಬುಲೆನ್ಸ್ ನ ಸೇವೆಯನ್ನು ಪರಿಚಯಿಸಲು ವೆನ್ಲಾಕ್ ಆಸ್ಪತ್ರೆ ಸಜ್ಜಾಗಿದೆ. ಆಮ್ಲಜನಕ, ಜೀವರಕ್ಷಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ಈ ಆ್ಯಂಬುಲೆನ್ಸ್ ಭಾನುವಾರದಂದು ಆಸ್ಪತ್ರೆಗೆ ಆಗಮಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ. ಈ ವ್ಯವಸ್ಥೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲು, ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜಾ ಅವರು ಸುಮಾರು ಏಳು ಲಕ್ಷ ಅನುದಾನವನ್ನು ನೀಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ನೋಂದಣಿ, ಹೊರರೋಗಿ ವಿಭಾಗ, ವಾರ್ಡ್, ಸ್ಕ್ಯಾನಿಂಗ್, ಎಕ್ಸ್ ರೇ ಸೇರಿದಂತೆ ವಿವಿಧ ಸೌಕರ್ಯಗಳು ದೂರದಲ್ಲಿವೆ. ಹೀಗಾಗಿ ರೋಗಿಗಳು ಹೋಗಿ ಬರಲು ತೊಂದರೆಯಾಗುತ್ತಿತ್ತು. ಮತ್ತು ತಮ್ಮ ತಪಾಸಣೆಗಾಗಿ ಬಹಳ ಹೊತ್ತು ಕಾಯಬೇಕಾಗುತ್ತಿತ್ತು. ಆದರೆ ಬಗ್ಗಿ ಆ್ಯಂಬುಲೆನ್ಸ್ ನಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ ಮತ್ತು ರೋಗಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
• ಕಾರ್ಕಳ: ಜ್ವರದಿಂದ ಮಹಿಳೆ ಸಾವು
ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಮತ್ತು ಇಲಿ ಜ್ವರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹೆಚ್ಚಳವಾಗಿದೆ ಎನ್ನುವ ಸಂಗತಿ ತಿಳಿದುಬಂದಿತ್ತು. ಇದೀಗ ಮಹಿಳೆಯೊಬ್ಬರು ಜ್ವರದಿಂದ ಸಾವನ್ನಪ್ಪಿರುವ ಘಟನೆ ಕಾರ್ಕಳದಲ್ಲಿ ನಡೆದಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸುನಂದ ಎಂಬ ಮಹಿಳೆಯು ಜ್ವರದಿಂದ ಬಳಲುತ್ತಿದ್ದು, ಆಗಸ್ಟ್ 15 ರಂದು ಕಾರ್ಕಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಆದರೆ 16 ರಂದು ಅವರು ಇನ್ನೂ ಅಸ್ವಸ್ಥಗೊಂಡಿರುವುದನ್ನು ಕಂಡು ಮನೆಯವರು ಅವರನ್ನು ಪುನಃ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರಿಗೆ ತೋರಿಸುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ. ಸುನಂದ ಅವರ ಸಾವಿಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.