ಕರಾವಳಿ ಟಾಪ್ ನ್ಯೂಸ್
ಅಯೋಧ್ಯೆಗೆ ಮಂಗಳೂರಿನಿಂದ ನೇರ ರೈಲು ಸೇವೆಗೆ ಮನವಿ
* ಕಾಪು: ಮಳೆಯಬ್ಬರ ನಿವಾಸಿಗಳ ಸ್ಥಳಾಂತರ
* ಉಳ್ಳಾಲ: ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಹೊಸ ಪಿಯು ಕಾಲೇಜ್, ಹಾಸ್ಟೆಲ್
•ಸುಳ್ಯ: 52ನೇ ವಯಸ್ಸಲ್ಲಿ ಪಿಯುಸಿ ಪಾಸ್ ಮಾಡಿದ ಗ್ರಾಪಂ ಸದಸ್ಯೆ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮಂಗಳೂರು ಮತ್ತು ಅಯೋಧ್ಯೆ ನಡುವೆ ನೇರ ರೈಲು ಸಂಪರ್ಕ ಒದಗಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಯೋಜನೆಯಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಅನುಕೂಲವಾಗಲಿದೆ. ದ.ಕ., ಉಡುಪಿ ಪ್ರದೇಶವು ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿ ಶ್ರೀಮಂತವಾದ ಪರಂಪರೆ ಹೊಂದಿದೆ. ಶ್ರದ್ದೆ ಭಕ್ತಿಗೆ ಹೆಸರಾಗಿರುವ ಈ ನಾಡಿನಲ್ಲಿ ಭಜನಾ ಕಾರ್ಯಕ್ರಮ, ದೇವಾಲಯಗಳಲ್ಲಿ ಶ್ರೀರಾಮನನ್ನು ಭಜಿಸಲಾಗುತ್ತದೆ. ಅಯೋಧ್ಯೆಯ ಬಗ್ಗೆಯೂ ಇಲ್ಲಿನ ಜನರಿಗೆ ಅಪಾರ ಶ್ರದ್ದೆಯಿದೆ. ಆದ್ದರಿಂದ ಅಯೋಧ್ಯೆ ಸಂಪರ್ಕ ಸಂಬಂಧಿಸಿ ಈ ಭಾಗದ ಜನರ ಬೇಡಿಕೆ ಪರಿಗಣಿಸುವಂತೆ ಅವರು ಕೋರಿದರು.
ಬೆಂಗಳೂರು ಅಥವಾ ಇತರ ಮಾರ್ಗವಾಗಿ ಅಯೋಧ್ಯೆ ಸಾಗಲು 40 ಗಂಟೆಗಳನ್ನು ವ್ಯಯಿಸಬೇಕಾಗಿದೆ. ನೇರ ರೈಲು ಸಂಪರ್ಕ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಲಕ್ಷಾಂತರ ಯಾತ್ರಾರ್ಥಿಗಳಿಗೆ ಪ್ರಯೋಜನವಾಗಲಿದೆ.
ಕಾಪು: ಮಳೆಯಬ್ಬರ ನಿವಾಸಿಗಳ ಸ್ಥಳಾಂತರ
ಕಾಪು: ಮಳೆಯಿಂದಾಗಿ ತಾಲ್ಲೂಕಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲಾರಿನಿಂದ ಎಂಟು ಜನ, ಹೆಜಮಾಡಿಯಿಂದ ಒಬ್ಬರನ್ನು, ಪಾದೆಬೆಟ್ಟುವಿನಿಂದ ಹದಿನೈದು ಜನರನ್ನು, ಬಡಾ ಗ್ರಾಮದಿಂದ ಐದು ಜನರನ್ನು ಮನವೊಲಿಸಿ, ಕಾಪುವಿನ ತಹಶೀಲ್ದಾರರಾದ ಪ್ರತಿಭಾ ಆರ್. ಅವರ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಾಪುವಿನ ಪಡು ಗ್ರಾಮದ ಸರಕಾರಿ ಶಾಲೆಯಲ್ಲಿ ಸಂತ್ರಸ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಲು ಬಯಸಿದ್ದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಪ್ರತಿಭಾ ಅವರು ತಿಳಿಸಿದ್ದಾರೆ. ತಾತ್ಕಾಲಿಕವಾಗಿ ತಹಶಿಲ್ದಾರರು ನಮಗೆ ಒಂದು ವ್ಯವಸ್ಥೆಯನ್ನು ಮಾಡಿದ್ದಾರೆ, ಆದರೆ ಇದು ತಾತ್ಕಾಲಿಕ. ಪ್ರತಿವರ್ಷ ಇದೇ ರೀತಿಯ ಸಮಸ್ಯೆಯನ್ನು ನಾವು ಎದುರಿಸುತ್ತಿದ್ದೇವೆ ಮತ್ತು ತೊಂದರೆಗೊಳಗಾಗುತ್ತಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಿ ಕೊಡಬೇಕಾಗಿ ಸಂತ್ರಸ್ತರು ಮನವಿ ಮಾಡಿದ್ದಾರೆ.
ಉಳ್ಳಾಲ: ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಪಿಯು ಕಾಲೇಜ್, ವಸತಿ ನಿರ್ಮಾಣ
ಉಳ್ಳಾಲ: ಕಳೆದೆರಡು ದಿನಗಳ ಹಿಂದೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಳ್ಳಾಲದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗೆ ಪಿಯುಸಿ ಕಾಲೇಜ್ ಮತ್ತು ವಸತಿ ನಿಲಯವನ್ನು ನಿರ್ಮಾಣ ಮಾಡಲು ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಬಾರಿಯ ಶೈಕ್ಷಣಿಕ ವರ್ಷದಲ್ಲೇ ಹದಿನೈದು ಕೋಟಿ ವೆಚ್ಚದಲ್ಲಿ ಪಿಯುಸಿ ಕಾಲೇಜು ಮತ್ತು ವಸತಿ ನಿಲಯವನ್ನು ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಆವರ್ತಕ ಮತ್ತು ಅನಾವರ್ತಕ ವೆಚ್ಚಗಳಾದ 2.09 ಕೋಟಿ ರೂಪಾಯಿಗಳನ್ನು ಸೇರಿಸಿ, ಒಟ್ಟು 17.9 ಕೋಟಿ ವೆಚ್ಚವನ್ನು ಇದಕ್ಕಾಗಿ ಮೀಸಲಿಡಲಾಗುವುದು. ಜೊತೆಗೆ ಪಿಸಿಎಂಬಿ, ಪಿಸಿಎಂಸಿ, ಸಿಇಬಿಎ ಹಾಗೂ ಎಚ್ಇಪಿಎಸ್ ವಿಭಾಗಗಳನ್ನು ಮಂಜೂರು ಮಾಡಿ, ಅವುಗಳೊಂದಿಗೆ ವಿವಿಧ ವಿಭಾಗಗಳಿಗೆ ಹುದ್ದೆಗಳನ್ನು ರಚಿಸಿ, ಆರಂಭಿಸಲು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
52ನೇ ವಯಸ್ಸಲ್ಲಿ ಪಿಯುಸಿ ಪಾಸ್ ಮಾಡಿದ ಗ್ರಾಪಂ ಸದಸ್ಯೆ!
ಸುಳ್ಯ: ಅಜ್ಜಾವರ ಗ್ರಾಮದ ಅಟ್ಲೂರು ನಿವಾಸಿ ಮತ್ತು ನಿವೃತ್ತ ಶಿಕ್ಷಕರಾದ ಅಚ್ಚುತ ಅಟ್ಲೂರು ಅವರ ಪತ್ನಿ ಜಯಂತಿ ಎಂಬ ಮಹಿಳೆಯು ಸುಳ್ಯದ ಶಾರದಾ ವಿದ್ಯಾಲಯ ಮತ್ತು ಪುತ್ತೂರಿನ ಪ್ರಗತಿ ವಿದ್ಯಾ ಸಂಸ್ಥೆಯವರ ಮಾರ್ಗದರ್ಶನದಲ್ಲಿ ಅಭ್ಯಾಸವನ್ನು ಮಾಡಿ, ತನ್ನ 52ನೇ ವಯಸ್ಸಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆಯನ್ನು ಬರೆದು, 307 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಜ್ಜಾವರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ಕಲಿಕೆಗೆ ವಯಸ್ಸಿಲ್ಲ ಎಂಬ ಮಾತನ್ನು ಇವರು ಸಾಬೀತುಪಡಿಸಿದ್ದಾರೆ.