ಕರಾವಳಿ ಟಾಪ್ ನ್ಯೂಸ್
ಸುಳ್ಯ: ಪೊಲೀಸರೊಂದಿಗೆ ಅನುಚಿತ ವರ್ತನೆ: ಶಿಕ್ಷೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!?
* ಉಡುಪಿ: ಅಡ್ಡಾದಿಡ್ಡಿ ಚಲಿಸಿದ ವಿದೇಶಿ ಕಾರು: ಡ್ರಗ್ಸ್ ಶಂಕೆ!?
* ಕಾರ್ಕಳ: ಈ ರಸ್ತೆಯಲ್ಲಿ ಓಡಾಡಿದ್ರೆ ಮಣಿಪಾಲ ಸೇರ್ಬೇಕು!
* ಕುಂದಾಪುರ: ಬಂದರು ಗೋಲ್ಮಾಲ್: ಜೀವಕ್ಕೆ ಕಂಟಕ
* ಮಂಗಳೂರು: ಜು.24ರವರೆಗೆ ಕೂಳೂರು ಸೇತುವೆ ಸಂಪರ್ಕ ಬಂದ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಹಳದಿ ಬಣ್ಣದ, ವಿದೇಶಿ ನೋಂದಣಿ ಇರುವ ಕಾರೊಂದು ಉಡುಪಿಯಿಂದ ಮಣಿಪಾಲಕ್ಕೆ ಬರುತ್ತಿದ್ದ ಸಮಯದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಇದೀಗ ದೊಡ್ಡ ಸುದ್ದಿ ಆಗಿದೆ. ಅದರೆ ಅದರಲ್ಲಿದ್ದವರು ಡ್ರಗ್ಸ್ ಸೇವನೆ ಮಾಡಿದ್ದಾರಾ ಎಂಬ ಚರ್ಚೆ ಕೂಡ ಶುರುವಾಗಿದೆ.
ಶನಿವಾರ ಮತ್ತು ಭಾನುವಾರಗಳಂದು ಮಣಿಪಾಲದ ಸುತ್ತಮುತ್ತ ಅನ್ಯ ರಾಜ್ಯದ ಮತ್ತು ವಿದೇಶಿ ನೋಂದಣಿಯ ಕಾರುಗಳು ಅಬ್ಬರ ಹೆಚ್ಚಾಗಿದೆ. ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಸಂದರ್ಭದಲ್ಲಿ ಕಾರಿನೊಳಗೆ ಇಬ್ಬರು ವ್ಯಕ್ತಿಗಳಿದ್ದು, ಅವರನ್ನು ಸ್ಥಳೀಯರು ಠಾಣೆಗೆ ಕರೆದುಕೊಂಡು ಹೋಗಿ, ಸಂಧಾನ ನಡೆಸಲಾಗಿದೆ ಎನ್ನಲಾಗಿದೆ. ಮಾಹಿತಿಗಳ ಪ್ರಕಾರ ಕಾರಿನೊಳಗೆ ಇದ್ದ ಇಬ್ಬರು ವ್ಯಕ್ತಿಗಳು ಸ್ಥಳೀಯರಾಗಿದ್ದು, ಪರ್ಕಳ ಮತ್ತು ಅತ್ರಾಡಿ ಮೂಲದವರು. ಈ ರೀತಿಯ ನೋಂದಣಿ ಇರುವ ವಾಹನಗಳು ಸಾಮಾನ್ಯವಾಗಿ ಪೆರಂಪಳ್ಳಿ, ಸಿಂಡಿಕೇಟ್ ವೃತ್ತದ ಬಳಿ ಮತ್ತು ಕಾಯಿನ್ ವೃತ್ತದ ಬಳಿ ಹೆಚ್ಚಾಗಿ ಕಂಡುಬರುತ್ತಿದೆ ಎನ್ನಲಾಗಿದೆ. ಕೆಲವು ತಿಂಗಳುಗಳ ಹಿಂದೆ ಇದೇ ರೀತಿಯ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೂ ಇದರ ಹಾವಳಿ ಮುಂದುವರಿದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಢಿಕ್ಕಿ ಹೊಡೆದ ದ್ವಿಚಕ್ರ ವಾಹನ ಚಾಲಕನ ಚಿಕಿತ್ಸೆಗೆ ಹಣವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಕಳ: ಈ ರಸ್ತೆಯಲ್ಲಿ ಓಡಾಡಿದ್ರೆ ಮಣಿಪಾಲ ಸೇರ್ಬೇಕು!
ಕಾರ್ಕಳ: ಮುಂಡ್ಲಿ ಮತ್ತು ಕಾರ್ಕಳವನ್ನು ಸಂಪರ್ಕಿಸುವ ತೆಳ್ಳಾರು ಪಲಾಯಿ ಬಾಕ್ಯಾರ್ ರಸ್ತೆಯು ಕೆಲವು ವರ್ಷಗಳಿಂದ ಅತ್ಯಂತ ಕಳಪೆ ಸ್ಥಿತಿಯಲ್ಲಿದ್ದು, ಕಾಲುದಾರಿಯಲ್ಲೂ ನಡೆಯಲು ಆಗದಂತಹ ಸಮಸ್ಯೆ ಎದುರಾಗಿದೆ. ಸುಮಾರು ನಲವತ್ತಕ್ಕೂ ಹೆಚ್ಚು ಮನೆಗಳಿಗೆ ಈ ರಸ್ತೆಯು ಬಹಳ ಪ್ರಯೋಜನಕಾರಿಯಾಗಿತ್ತು. ಪಲಾಯಿ ಬಕ್ಯಾರ್, ಹೊಸಕಂಬಳ ಮನೆ, ದೊಡ್ಡ ಮನೆ, ಪರಪ್ಪು ಮನೆ, ಮೂಡು ಮನೆಗಳಲ್ಲಿ ನೆಲೆಸಿರುವ ಜನರಿಗೆ ಶಾಲಾ ಕಾಲೇಜುಗಳಿಗೆ ಮತ್ತು ವೈದ್ಯರಲ್ಲಿಗೆ ತೆರಳಲು ಈ ಮಾರ್ಗವನ್ನೇ ಬಳಸಬೇಕಾಗಿತ್ತು. ಆದರೆ ಈಗ ಅಧಿಕ ಮಳೆಯಿಂದಾಗಿ ರಸ್ತೆಯು ಸಂಪೂರ್ಣವಾಗಿ ಅವಶೇಷವಾಗಿದ್ದು, ಸಂಚರಿಸಲು ಸಾಧ್ಯವಾಗದಂತ ಸನ್ನಿವೇಶ ನಿರ್ಮಾಣವಾಗಿದೆ.
ಬಂದರು ಪ್ರದೇಶಗಳಲ್ಲಿ ಹೂಳು: ಗೋಳು ಇಲ್ಲಿ ಜನರ ಬಾಳು!
ಕುಂದಾಪುರ: ಬಂದರು ಪ್ರದೇಶಗಳಲ್ಲಿ ಹೂಳು ತುಂಬಿರುವುದು, ಅಳಿವೆ ಬಾಗಿಲು ಮತ್ತು ಬ್ರೇಕ್ ವಾಟರ್ ವಿಸ್ತರಣೆಯಾಗದಿರುವುದು ಮೀನುಗಾರರ ಪ್ರಾಣಾಪಾಯಕ್ಕೆ ಮೂಲ ಕಾರಣವಾಗಿದೆ. ಇದರಿಂದಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 323 ಮೀನುಗಾರರು ಮೃತಪಟ್ಟಿದ್ದಾರೆ. ಅಲ್ಲದೆ ಕರಾವಳಿ ಪ್ರದೇಶಗಳಾದ ಮಂಗಳೂರು, ಮಲ್ಪೆ, ಗಂಗೊಳ್ಳಿ, ಹೆಜಮಾಡಿ, ಕೊಡೇರಿ, ಅಳ್ವೆಗದ್ದೆ, ಕಾರವಾರ, ಭಟ್ಕಳ, ಹೊನ್ನಾವರ ಸೇರಿದಂತೆ ಬಹುತೇಕ ಎಲ್ಲಾ ಕಡೆಗಳಲ್ಲಿ ಕೆಲವು ವರ್ಷಗಳಿಂದ ಡ್ರೆಜ್ಜಿಂಗ್ ಸಮರ್ಪಕವಾಗಿ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಈಗಾಗಲೇ ಕೆಲವೆಡೆ ಜೀವರಕ್ಷಕಗಳನ್ನು ಮೀನುಗಾರರಿಗೆ ವಿತರಿಸಿದ್ದು, ಅದು ಸ್ವಲ್ಪ ಬಿಗಿಯಾಗಿರುವ ಕಾರಣ, ಅದನ್ನು ಹಾಕಿಕೊಂಡು ಕೆಲಸ ಮಾಡಲು ಕಷ್ಟಕರವಾಗಿದೆ. ಕೆಲಸಕ್ಕೆ ಅಡಚಣೆ ಉಂಟಾಗದ ರೀತಿಯಲ್ಲಿ, ಜೀವ ರಕ್ಷಕಗಳನ್ನು ವಿನ್ಯಾಸಗೊಳಿಸಿ ನೀಡುವಂತೆ ಮೀನುಗಾರರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಜೊತೆಗೆ ಹೂಳೆತ್ತುವ ಕಾರ್ಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ಪ್ರಾರಂಭಿಸಬೇಕು ಎಂದು ಗಂಗೊಳ್ಳಿ ಮೀನುಗಾರರ ಮುಖಂಡರಾದ ರಮೇಶ್ ಕುಂದರ್ ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆ ಆವರಣ ಶುಚಿ ಮಾಡುವ ಶಿಕ್ಷೆ!
ಸುಳ್ಯ: ಏಪ್ರಿಲ್ ತಿಂಗಳಿನಲ್ಲಿ ರಾತ್ರಿಯ ವೇಳೆ ಅಂಕತ್ ಪಲ್ಸಾಯ್ ಎನ್ನುವ ವ್ಯಕ್ತಿಯು ಕುಡಿತದ ಅಮಲಿನಲ್ಲಿ, ಕೆವಿಜಿ ಜಂಕ್ಷನ್ ಬಳಿ ಸುಳ್ಯದ ಎಸ್ಐ ಜೊತೆಗೆ ದುರಹಂಕಾರದಿಂದ ವರ್ತಿಸಿದ್ದರ ಜೊತೆಗೆ, ವಾಹನದ ದಾಖಲೆಗಳನ್ನು ಪೊಲೀಸರಿಗೆ ತೋರಿಸದೆ, ವಾಹನವನ್ನು ಚಲಾಯಿಸಿಕೊಂಡು ಹೋಗಿ ಉದ್ಧಟತನ ಮೆರೆದಿದ್ದ. ಈ ಪ್ರಕರಣವು ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡು ಬಂದಿರುವ ಕಾರಣದಿಂದ ಹಿರಿಯ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಬಾಬು ಅವರು ಕುಡಿದುಕೊಂಡು ವಾಹನ ಚಲಾಯಿಸಿರುವುದು ಮತ್ತು ಪೊಲೀಸರ ಬಳಿ ಅಹಂಕಾರ ತೋರಿಸಿದ್ದರ ಫಲವಾಗಿ ಹನ್ನೆರಡು ಸಾವಿರ ರೂಪಾಯಿ ದಂಡವನ್ನು ಪಾವತಿಸುವಂತೆ ಆರೋಪಿಗೆ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಹತ್ತು ದಿನಗಳ ಕಾಲ ಅಂದರೆ ಜುಲೈ ಹತ್ತೊಂಭತ್ತರಿಂದ ಇಪ್ಪತ್ತೆಂಟರ ವರೆಗೆ ಸಮುದಾಯ ಸೇವೆ ಹೆಸರಿನಲ್ಲಿ ಪೊಲೀಸ್ ಠಾಣೆಯ ಆವರಣವನ್ನು ಶುಚಿಗೊಳಿಸುವ ಶಿಕ್ಷೆಯನ್ನು ವಿಧಿಸಲಾಗಿದೆ.
ಮಂಗಳೂರು: ತೀವ್ರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಅರವತ್ತಾರರ ಕೆಐಓಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆ ನಡುವಿನ ಸಂಪರ್ಕ ಸಂಪೂರ್ಣವಾಗಿ ಶಿಥಿಲವಾಗಿರುವ ಹಿನ್ನೆಲೆಯಲ್ಲಿ, ಅದನ್ನು ದುರಸ್ತಿ ಮಾಡುವ ಉದ್ದೇಶದಿಂದ ಜುಲೈ ಇಪ್ಪತ್ತನಾಲ್ಕರ ರಾತ್ರಿ ಎಂಟು ಗಂಟೆಯವರೆಗೆ ಇಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲು ಎನ್ಎಚ್ಐಎ ನಿರ್ಧರಿಸಿದೆ. ಇದಕ್ಕೆ ವಾಹನ ಚಾಲಕರು ಸಹಕಾರ ನೀಡುವಂತೆ ಕೇಳಿಕೊಂಡಿದೆ. ದುರಸ್ತಿ ಕಾರ್ಯವು ಈಗಾಗಲೇ ಪ್ರಾರಂಭಗೊಂಡಿದ್ದು, ಮಳೆಯ ತೀವ್ರತೆಯಿಂದಾಗಿ ಡಾಂಬರನ್ನು ಹಾಕಲು ಸಾಧ್ಯವಾಗದೆ, ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕವಾಗಿ ಪೇಪರ್ ಬ್ಲಾಕ್ ಗಳನ್ನು ಸರಿಪಡಿಸಲು ಮಾತ್ರ ಸಾಧ್ಯವಾಗಿದೆ ಎನ್ನಲಾಗಿದೆ.