ಪುತ್ತೂರು ಅರಣ್ಯ ಇಲಾಖೆ ವಿಚಿತ್ರ ಪ್ಲಾನ್!
– ವಿದ್ಯುತ್ ತಂತಿ, ನೀರಿನ ಪೈಪ್ ಹೋಗುವಲ್ಲೇ ಗಿಡ ನೆಡ್ತಾರಂತೆ
– ಸರ್ಕಾರದ ಹಣ ನೀರಲ್ಲಿ ಹೋಮ: ಕೇಳುವವರು ಯಾರು?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ವಿದ್ಯುತ್ ತಂತಿಗಳ ಅಡಿಯಲ್ಲಿ ಮತ್ತು ನೀರಿನ ಪೈಪ್ ಲೈನ್ ಗಳು ಹಾದು ಹೋಗುವ ಜಾಗಗಳ ಮೇಲೆ ಗಿಡಗಳನ್ನು ನೆಡುವ ಮತ್ತು ಬೆಳೆಸುವ ಪ್ರಯತ್ನ ನಡೆಸುವ ವಿಚಿತ್ರ ರೀತಿಯ ಪರಿಸರ ಚಟುವಟಿಕೆಯೊಂದು ಅರಣ್ಯ ಇಲಾಖೆಯಿಂದ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಪುತ್ತೂರು ಉಪವಿಭಾಗದ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಹಲವೆಡೆ ಇಂತಹ ದೃಶ್ಯಗಳು ಕಂಡು ಬರುತ್ತಿರುವುದು, ಸಾರ್ವಜನಿಕರಿಗೆ ಇದು ಯಾವ ಬಗೆಯ ಪರಿಸರ ಸಂರಕ್ಷಣೆ ಎನ್ನುವುದು ಅರ್ಥವಾಗುತ್ತಿಲ್ಲ. ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ಹಾನಿಯಾಗದಂತೆ ಮತ್ತು ಇನ್ನಿತರ ಯಾವುದೇ ಸಮಸ್ಯೆಗಳು ತಲೆದೋರದಂತಹ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಬದಲು, ಸುರಕ್ಷಿತವಾಗಿ ಕಾಪಾಡಲು ಸಾಧ್ಯವಾಗದಂತಹ ಮಾದರಿಯ ನಾಟಿಯ ಮೂಲಕ ಸಂಬಂಧಿತ ವ್ಯಕ್ತಿಗಳು ಜನರ ಹಣವನ್ನು ವ್ಯರ್ಥಗೊಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪುತ್ತೂರು, ಸವಣೂರು, ಕಾಣಿಯೂರು, ಸುಳ್ಯ ರಸ್ತೆಗಳ ಹಲವು ಭಾಗಗಳಲ್ಲಿ ಎಚ್ ಟಿ ಲೈನ್ ಗಳ ಅಡಿಯಲ್ಲಿಯೇ ಗಿಡಗಳನ್ನು ನೆಡಲಾಗಿದ್ದು, ಅದು ಮುಂದೆ ಮರವಾಗಿ ಬೆಳೆದ ನಂತರ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಅಪಾಯ ಎದುರಾಗುವ ಸಂಭವ ಇದೆ. ಇಷ್ಟು ಸಾಮಾನ್ಯ ಅರಿವು ಕೂಡ ಇಲ್ಲದ ರೀತಿಯಲ್ಲಿ ಅರಣ್ಯ ಇಲಾಖೆ ಗಿಡ ನೆಟ್ಟಿರುವುದಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಸುರಕ್ಷಿತ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಮಾದರಿಯಾಗಬೇಕು. ಅದಕ್ಕೆ ಬದಲು ಈ ರೀತಿ ಅಸಮರ್ಪಕ ರೀತಿಯಲ್ಲಿ ಕಾರ್ಯವನ್ನು ಕೈಗೊಂಡು ಟೀಕೆಗೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಈ ರೀತಿಯ ಆರೋಪಗಳು ಮತ್ತು ಟೀಕೆಗಳು ಸಾರ್ವಜನಿಕರಿಂದ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪುತ್ತೂರು ಅರಣ್ಯ ಇಲಾಖೆಯ ವಿಭಾಗಕ್ಕೆ ಸಂಬಂಧಿಸಿದ ಸುಬ್ಬಯ್ಯ ನಾಯ್ಕ ಅವರು ಕಾನೂನಿನ ಪ್ರಕಾರ ವಿದ್ಯುತ್ ತಂತಿಗಳ ಅಡಿಯಲ್ಲಿ ಗಿಡಗಳನ್ನು ನೆಡಲು ಅವಕಾಶವಿಲ್ಲ. ಇದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೂ ತಿಳಿಸಲಾಗಿದೆ. ಇಷ್ಟಾದರೂ ಸಿಬ್ಬಂದಿಗಳು ಈ ರೀತಿಯ ಅಪ್ರಯೋಜಕ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾನೇ ಸ್ವತಃ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.