Categories
ಕರಾವಳಿ

ಜನಪದ ಕಲೆಯ ತವರೂರು ಕರಾವಳಿ..!

ಜನಪದ ಕಲೆಯ ತವರೂರು ಕರಾವಳಿ..!
– ಭೂತಕೋಲ, ಯಕ್ಷಗಾನ ಸೇರಿ ಅನೇಕ ಕಲೆಗಳ ಹುಟ್ಟು ಕಡಲ ತಡಿ
– ಕರಾವಳಿ ಜನಪದ ಸೊಗಡು ಏನೇನು?… ಇಲ್ಲಿದೆ ವಿಶೇಷ ವರದಿ

ವಿಶೇಷ ವರದಿ: ರಚನಾ ಕಾಮತ್
NAMMUR EXPRESS NEWS
ಕರಾವಳಿ ಭಾಗದ ಜನಪದ ಕಲೆ ವಿಭಿನ್ನತೆಯೊಂದಿಗೆ ವಿಶಿಷ್ಟತೆಯಿಂದ ಕರ್ನಾಟಕದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಪ್ರದೇಶ ಕನ್ನಡ ಮತ್ತು ತುಳು ಎರಡೂ ಭಾಷೆಯ ಜನಪದ ಕಲೆಗಳನ್ನು ಒಳಗೊಂಡಿರುವುದು ಮತ್ತೊಂದು ವೈಶಿಷ್ಟ್ಯ. ಈ ಭಾಗದ ಪ್ರಮುಖ ಜನಪದ ಕಲೆ ಭೂತಕೋಲ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಈ ಕಲೆಯಲ್ಲಿ ದೈವ ಎಂಬ ಹೆಸರಿನಿಂದ ಕರೆಯುವ ಶಕ್ತಿಯ ಆರಾಧನೆ ನಡೆಯುತ್ತದೆ. ಇದರಲ್ಲಿ ಕಲ್ಕುಡ, ಕಲ್ಲುರ್ಟಿ, ಪಂಜುರ್ಳಿ, ಪಿಲಿಫೂತ್, ಪಿಲಿಚಾಮುಂಡಿ, ಬೊಬ್ಬರ್ಯ, ಜುಮಾದಿ, ಧೂಮಾವತಿ, ಕೋರ್ದಬ್ಬು, ಕೋಟಿಚನ್ನಯ್ಯ ಹೀಗೆ ಹಲವು ಬಗೆಗಳಿವೆ. ಈ ಕಲೆಯು ಜಾತ್ಯಾತೀತವಾಗಿದ್ದು, ಪ್ರಮುಖವಾಗಿ ತುಳು ಭಾಷೆಯಲ್ಲಿ ವಾಚನ ನಡೆಯುತ್ತದೆ. ಇದರೊಂದಿಗೆ ಸಂಗೀತ ಮತ್ತು ನೃತ್ಯ ಕೂಡ ಮೇಳೈಸಿದೆ.
ಯಕ್ಷಗಾನ ಕರಾವಳಿ ಜನಪದದ ಉಸಿರು. ಇಲ್ಲಿ ಹತ್ತಾರು ಮೇಳಗಳು ಇವೆ. ಕರಾವಳಿ, ಮಲೆನಾಡು ಭಾಗದಲ್ಲಿ ಯಕ್ಷಗಾನ ಬಹು ದೊಡ್ಡ ಕಲೆ ಆಗಿದೆ.
ಕರಾವಳಿಯ ಮತ್ತೊಂದು ಪ್ರಮುಖವಾದ ಜನಪದ ಕಲಾ ಪ್ರಕಾರ ಪಾಡ್ದನ. ಇದು ಸಾಹಿತ್ಯ ಪ್ರಧಾನವಾದುದು. ತುಳು ಮೌಖಿಕ ಸಾಹಿತ್ಯದ ಒಂದು ಭಾಗವಾಗಿದೆ. ಹಳಗನ್ನಡದಂತೆ ಈ ಪಾಡ್ದನದಲ್ಲಿ ಹಳೆಯ ತುಳು ಭಾಷೆ ಬಳಕೆಗೊಂಡಿದೆ. ಸಿರಿ ಮತ್ತು ಕುಮಾರ, ಕೋಟಿ ಮತ್ತು ಚೆನ್ನಯ್ಯ ಹೆಚ್ಚು ಜನಪ್ರಿಯವಾದ ಪಾಡ್ದನಗಳಾಗಿವೆ.
ಆಟಿಕಳೆಂಜ ಕರಾವಳಿ ಸೀಮೆಯ ಮತ್ತೊಂದು ಜನಪದ ಕಲೆ. ವಿಪರೀತ ಮಳೆ ಸುರಿಯುವ ಸಮಯವಾದ ಆಟಿ ಅಥವಾ ಆಷಾಢ ತಿಂಗಳಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಅಂದರೆ ರೋಗ ರುಜಿನಗಳನ್ನು ಹೋಗಲಾಡಿಸಲು,ಮನೆಮನೆಗೆ ಆಟಿಕಳೆಂಜ ಬರುವ ಪದ್ಧತಿ ಹಿಂದಿನಿಂದಲೂ ರೂಢಿಗತವಾಗಿದೆ. ನಲಿಕೆ ಅಥವಾ ಪಾಣಾರ ಜನಾಂಗದವರು ಆಟಿಕಳೆಂಜ ವೇಷ ಧರಿಸಿಕೊಂಡು ಮನೆಮನೆಗೆ ಹೋಗಿ ಕುಣಿಯುವ ಮೂಲಕ ದೈವದ ಆರಾಧನೆ ಮಾಡಿದಂತಾಗುತ್ತದೆ. ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ, ಪಕ್ಷಿಗಳು, ಇತರೆ ಜೀವಿಗಳಿಗೂ ರೋಗ ರುಜಿನಗಳು ಬಾರದಂತೆ ರಕ್ಷಣೆ ಬೇಡಿ ಪ್ರಾರ್ಥಿಸಲಾಗುತ್ತದೆ.
ಕರಾವಳಿಯ ಮತ್ತೊಂದು ಪ್ರಮುಖ ಆಕರ್ಷಣೆ ಕಂಬಳ. ಈ ಭಾಗದ ರೈತರು ಭತ್ತದ ಕೊಯಿಲಿನ ಬಳಿಕ ಮನರಂಜನೆಗಾಗಿ ನಡೆಸುವ ಸ್ಪರ್ಧೆ ಇದಾಗಿದೆ. ದಷ್ಟಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹದವಾಗಿ, ಹಸನುಗೊಳಿಸಿದ ಮಣ್ಣಿನ ಗದ್ದೆಯಲ್ಲಿ ಓಡಿಸುವುದು ಆಟದ ಶೈಲಿಯಾಗಿದೆ. ಈ ಜನಪದ ಕಲೆಗೆ ನೂರಾರು ವರ್ಷಗಳ ಇತಿಹಾಸವಿದೆ. ನವೆಂಬರ್ ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ ಆರಂಭಗೊಳ್ಳುವ ಈ ಜನಪದ ಸ್ಪರ್ಧೆ, ಕರಾವಳಿಯ ಬಿಸಿಲಿನ ಬೇಗೆ ಪ್ರಾರಂಭವಾಗುವ ಮೊದಲೇ ಅಂದರೆ ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಮುಗಿಸುತ್ತಾರೆ.
ಕರಾವಳಿಯ ಈ ವಿಶಿಷ್ಟ ಜನಪದ ಕಲೆ, ಸಾಹಿತ್ಯ, ಆಚರಣೆಗಳ ಕುರಿತು ವಿವೇಕ್ ರೈ ಮೊದಲಾದ ಸಾಹಿತ್ಯ ಕ್ಷೇತ್ರದ ಪ್ರಮುಖರು ಅಧ್ಯಯನ ನಡೆಸಿ, ಕನ್ನಡ ಸಾಹಿತ್ಯಕ್ಕೆ, ಜನಪದ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.