Categories
ಮಾಹಿತಿ ಸುದ್ದಿ

ಫೋನ್‌ ಪೇ, ಗೂಗಲ್‌ ಪೇ ಸೇರಿ ಯುಪಿಐ ಆಪ್‌ಗಳ ಬಳಕೆದಾರರಿಗೆ ಬಿಗ್ ಶಾಕ್..!!

ಫೋನ್‌ ಪೇ, ಗೂಗಲ್‌ ಪೇ ಸೇರಿ ಯುಪಿಐ ಆಪ್‌ಗಳ ಬಳಕೆದಾರರಿಗೆ ಬಿಗ್ ಶಾಕ್..!! 
– 3,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗೆ ಶುಲ್ಕ?
– ಸಣ್ಣ ವ್ಯಾಪಾರಿಗಳು ಮತ್ತು ಬಳಕೆದಾರರಿಗೆ ಬಾರಿ ತೊಂದರೆ

NAMMUR EXPRESS NEWS
ಫೋನ್‌ ಪೇ, ಗೂಗಲ್‌ ಪೇ ಮೊದಲಾದ ಯುಪಿಐ ಆಪ್‌ಗಳ ಮೂಲಕ ನಡೆಸುವ ವಹಿವಾಟಿಗೆ ಶುಲ್ಕ ತೆರಬೇಕಾದ ಸಂದರ್ಭ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು 3,000 ರೂ.ಗಳಿಗಿಂತ ಹೆಚ್ಚಿನ ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಮರ್ಚೆಂಟ್ ಚಾರ್ಜ್‌ಗಳನ್ನು ವಿಧಿಸಲು ನೋಡುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಇದರಿಂದ ಬ್ಯಾಂಕುಗಳು, ಫಿನ್‌ಟೆಕ್ ಸಂಸ್ಥೆಗಳು ಮತ್ತು ಫೋನ್‌ ಪೇ, ಗೂಗಲ್‌ ಪೇನಂತಹ ಸೇವಾ ಪೂರೈಕೆದಾರ ಕಂಪನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇವುಗಳಿಗೆ ಆದಾಯ ಗಳಿಸಲು ಸಹಾಯ ಮಾಡಲಿದೆ. ಸಣ್ಣ ವ್ಯಾಪಾರಿಗಳು ಮತ್ತು ದೈನಂದಿನ ಬಳಕೆದಾರರ ಮೇಲೆ ಪರಿಣಾಮ ಬೀರದಂತೆ ಹೆಚ್ಚಿನ ವಹಿವಾಟುಗಳ ಮೇಲೆ ಮಾತ್ರ ಶುಲ್ಕ ವಿಧಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ವರದಿ ಹೇಳಿದೆ. ಈ ಸಂಬಂಧ ಪ್ರಧಾನ ಮಂತ್ರಿ ಕಚೇರಿ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಹಣಕಾಸು ಸೇವೆಗಳ ಇಲಾಖೆ ಸಭೆಯನ್ನೂ ನಡೆಸಿವೆ.

ಈ ಹಿಂದೆ ಬ್ಯಾಂಕುಗಳು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಧಾರಿತ ವಾರ್ಷಿಕ ವಹಿವಾಟು 40 ಲಕ್ಷ ರೂ.ಗಿಂತ ಹೆಚ್ಚು ಇರುವ ವ್ಯಾಪಾರಿಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಎಂದರೆ ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುವುದಕ್ಕಾಗಿ ಬ್ಯಾಂಕುಗಳು ವ್ಯಾಪಾರಿಗಳಿಂದ ವಿಧಿಸುವ ಶುಲ್ಕವನ್ನು ಮರಳಿ ತರುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ರೂಪೇ ಡೆಬಿಟ್ ಕಾರ್ಡ್‌ಗಳು ಮತ್ತು ಯುಪಿಐ ಪಾವತಿಗಳಿಗೆ ಈ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ. ಇದೀಗ ಮತ್ತೆ ಶುಲ್ಕದ ವಿಚಾರ ಮುನ್ನೆಲೆಗೆ ಬಂದಿದ್ದು ದೊಡ್ಡ ಮೊತ್ತದ ಯುಪಿಐ ವಹಿವಾಟುಗಳಿಗೆ ವ್ಯಾಪಾರಿ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಆದರೆ ಸಣ್ಣ ಮೊತ್ತದ ವಹಿವಾಟುಗಳಿಗೆ ವಿನಾಯಿತಿ ಮುಂದುವರಿಯಬಹುದು. ದೊಡ್ಡ ಚಿಲ್ಲರೆ ವ್ಯಾಪಾರಿಗಳು ಸಾಮಾನ್ಯವಾಗಿ ಶೇ. 50ಕ್ಕಿಂತ ಹೆಚ್ಚು ವಹಿವಾಟುಗಳನ್ನು ಕಾರ್ಡ್‌ಗಳ ಮೂಲಕ ಪಡೆಯುತ್ತಿದ್ದು, ಇದಕ್ಕೆ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಆದ್ದರಿಂದ, ಇದೇ ರೀತಿಯ ವ್ಯವಸ್ಥೆಯು ಹೆಚ್ಚಿನ ಮೌಲ್ಯದ ಡಿಜಿಟಲ್ ವಹಿವಾಟುಗಳನ್ನು ನಿರ್ವಹಿಸಲು ಬ್ಯಾಂಕುಗಳು ಮತ್ತು ಪಾವತಿ ಪೂರೈಕೆದಾರರಿಗೆ ಸಹಾಯ ಮಾಡುತ್ತದೆ. ಆದರೆ ಯುಪಿಐ ವಹಿವಾಟಿನಿಂದ ಯಾವುದೇ ಶುಲ್ಕಗಳು ಬ್ಯಾಂಕ್‌ಗಳಿಗೆ ಸಿಗುತ್ತಿಲ್ಲ.

ಡಿಜಿಟಲ್ ಪಾವತಿ ಕಂಪನಿಗಳನ್ನು ಪ್ರತಿನಿಧಿಸುವ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ, ಮಾರ್ಚ್ 24 ರಂದು ಈ ಸಂಬಂಧ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದ್ದು, ಬ್ಯಾಂಕುಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಪಾವತಿ ಕಂಪನಿಗಳು ಒಟ್ಟಾಗಿ ವರ್ಷಕ್ಕೆ ಸುಮಾರು 10,000 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿವೆ. ಸ್ಟಾರ್ಟ್‌ಅಪ್‌ಗಳಲ್ಲಿ ಸುಮಾರು ಶೇ. 20ರಷ್ಟು ಯುಪಿಐ ಮೂಲಕ ಸೇವೆ ಸಲ್ಲಿಸುತ್ತಿರುವ ಕಂಪನಿಗಳೇ ಇವೆ ಎಂದು ಗಮನ ಸೆಳೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.