Categories
ಕರಾವಳಿ

ದೋಣಿ ಮುಗುಚಿ ಮೂವರು ಸಮುದ್ರ ಪಾಲು!

ಟಾಪ್ ನ್ಯೂಸ್ ಕರಾವಳಿ

ದೋಣಿ ಮುಗುಚಿ ಮೂವರು ಸಮುದ್ರ ಪಾಲು!
– ಕುಂದಾಪುರದ ಗಂಗೊಳ್ಳಿಯಲ್ಲಿ ಘಟನೆ
– ಬೆಳ್ತಂಗಡಿ : ಸರ್ಕಾರಿ ನೌಕರ ಹೃದಯಾಘಾತಕ್ಕೆ ಬಲಿ
– ಕಾರ್ಕಳ: ಕಾರ್ಕಳ ಪರಶುರಾಮನ ಪ್ರತಿಮೆ: ಮತ್ತೆ ವಿವಾದತ್ತ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ಮೀನುಗಾರಿಕೆಗೆಂದು ಕಿರು ದೋಣಿಯೊಂದರಲ್ಲಿ ತೆರಳಿದ್ದ ನಾಲ್ವರು ಮೀನುಗಾರರು ರಭಸವಾದ ಗಾಳಿ ಮತ್ತು ಅಬ್ಬರದ ಅಲೆಗಳ ಹೊಡೆತಕ್ಕೆ ಸಿಲುಕಿ, ದೋಣಿಯು ಮುಗುಚಿದ್ದರ ಪರಿಣಾಮವಾಗಿ ಸಮುದ್ರದ ಪಾಲಾಗಿರುವ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಸುರೇಶ್ ಖಾರ್ವಿ, ಲೋಹಿತ್ ಖಾರ್ವಿ ಮತ್ತು ಜಗದೀಶ್ ಖಾರ್ವಿ ಎನ್ನುವ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ನಾಲ್ವರು ಮೀನನ್ನು ತುಂಬಿಸಿಕೊಂಡು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಬ್ರೇಕ್ ವಾಟರ್ ತುದಿಯಲ್ಲಿ ಈ ಅನಾಹುತ ಸಂಭವಿಸಿದೆ. ದೋಣಿಯಲ್ಲಿದ್ದ ನಾಲ್ವರಲ್ಲಿ ಮೊದಲಿಗೆ ಒಬ್ಬ ಗಾಳಿಯ ರಭಸ ಮತ್ತು ಅಲೆಗಳ ಹೊಡೆತಕ್ಕೆ ಸಿಲುಕಿ ನೀರಿಗೆ ಬಿದ್ದಿದ್ದ. ಅವನನ್ನು ಕರೆದುಕೊಂಡು ಬರಲು ಪುನಃ ದೋಣಿಯನ್ನು ತಿರುಗಿಸಿದಾಗ, ಅಲೆಗಳ ಹೊಡೆತಕ್ಕೆ ಸಿಲುಕಿ ಉಳಿದ ಮೂವರು ಕೂಡ ನೀರು ಪಾಲಾದರು.‌ ನಾಲ್ವರಲ್ಲಿ ಸಂತೋಷ ಖಾರ್ವಿ ಎನ್ನುವವರು ಈಜಿಕೊಂಡು ದಡ ಸೇರಿದ್ದು, ಉಳಿದ ಮೂವರು ಮೀನುಗಾರರ ಪತ್ತೆಗಾಗಿ ಕರಾವಳಿಯ ಕಾವಲು ಪಡೆ, ಗಂಗೊಳ್ಳಿ ಠಾಣಾ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಸ್ಥಳೀಯ ಮೀನುಗಾರರು ಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ತೀವ್ರ ಗಾಳಿ, ಮಳೆ ಮತ್ತು ಅಲೆಗಳ ಹೊಡೆತದಿಂದ ಶೋಧನಾ ಕಾರ್ಯಕ್ಕೂ ಅಡ್ಡಿ ಉಂಟಾಗುತ್ತಿದೆ ಎನ್ನಲಾಗಿದೆ.

* ಸರ್ಕಾರಿ ನೌಕರ ಹೃದಯಾಘಾತಕ್ಕೆ ಬಲಿ

ಬೆಳ್ತಂಗಡಿ: ಹಾಸನ ಮೂಲದ ಸತೀಶ್ ಎನ್ನುವ ವ್ಯಕ್ತಿ ಬೆಳ್ತಂಗಡಿ ತಾಲ್ಲೂಕಿನ ಆಡಳಿತ ಸೌಧದಲ್ಲಿ ಪ್ರಥಮ ದರ್ಜೆ ಸಹಾಯಕ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು.‌ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಇವರು ಬೆಳಗಿನ ಜಾವ ಸ್ನಾನ ಮುಗಿಸಿಕೊಂಡು ಒಳಗೆ ಬಂದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸತೀಶ್ ಅವರ ಪತ್ನಿ ಜಯಶ್ರೀ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸಂಗತಿಯನ್ನು ಆಸ್ಪತ್ರೆಯ ವೈದ್ಯರು ಜಯಶ್ರೀ ಅವರಿಗೆ ತಿಳಿಸಿದರು.

ಕಾರ್ಕಳ ಪರಶುರಾಮನ ಪ್ರತಿಮೆ: ಮತ್ತೆ ವಿವಾದತ್ತ!

ಕಾರ್ಕಳ: ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್ ನ ಕೃಷ್ಣ ನಾಯ್ಕ ಎನ್ನುವ ಶಿಲ್ಪಿಯು ಪರಶುರಾಮನ ಕಂಚಿನ ಪ್ರತಿಮೆಯನ್ನು ಸಿದ್ಧಪಡಿಸುವ ಸಲುವಾಗಿ ಹಣವನ್ನು ಪಡೆದುಕೊಂಡಿದ್ದರು. ಆದರೆ ಈಗ ಅದು ಕಂಚಿನದಲ್ಲ ಹಿತ್ತಾಳೆಯದು ಎಂಬ ಸಂಗತಿ ಬೆಳಕಿಗೆ ಬಂದಿದೆ.‌ ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಸುಮಾರು ಮೂವತ್ತೈದು ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯನ್ನು ನಿರ್ಮಿಸುವ ಸಲುವಾಗಿ ಹತ್ತು ಕೋಟಿ ರೂಪಾಯಿಯನ್ನು ಮಂಜೂರು ಮಾಡಲಾಗಿತ್ತು, ಇದನ್ನು ಸಿದ್ಧಪಡಿಸಲು ಶಿಲ್ಪಿಯಾದ ಕೃಷ್ಣ ನಾಯ್ಕ ಒಪ್ಪಿಕೊಂಡಿದ್ದು, ಪರಶುರಾಮನ ಪ್ರತಿಮೆಯನ್ನು ಮಾಡಿಕೊಟ್ಟರು. ಆದರೆ ಆದೇಶಿಸಲಾಗಿದ್ದ ಕಂಚಿನ ಪ್ರತಿಮೆಗೆ ಬದಲಾಗಿ, ಹಿತ್ತಾಳೆಯ ಪ್ರತಿಮೆಯನ್ನು ಮಾಡಿದ್ದು, ಕೃಷ್ಣ ಶೆಟ್ಟಿ ಎನ್ನುವವರು ನಕಲಿ ಪ್ರತಿಮೆಯನ್ನು ಮಾಡಿರುವುದರ ಕುರಿತು ಮತ್ತು ನಿರ್ಮಾಣ ಯೋಜನೆಯ ನಿರ್ದೇಶಕರಾದ ಅರುಣ್ ಕುಮಾರ್, ಇಂಜಿನಿಯರ್ ಸಚಿನ್ ಕುಮಾರ್ ಸರ್ಕಾರ ವಿಧಿಸಿದ್ದ ಕೆಲಸದ ಷರತುಗಳನ್ನು ಪಾಲಿಸಲಿಲ್ಲ ಎಂದು ಕೃಷ್ಣ ಶೆಟ್ಟಿ ಎನ್ನುವವರು
ದೂರನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಿಲ್ಪಿ ಕೃಷ್ಣ ನಾಯ್ಕ್ ಮತ್ತು ನಿರ್ಮಾಣ ಯೋಜನಾ ಕೇಂದ್ರದ ಇಬ್ಬರು ಅಧಿಕಾರಿಗಳ ಮೇಲೆ ಒಳಸಂಚು, ನಂಬಿಕೆ ದ್ರೋಹ ಮತ್ತು ವಂಚನೆಗೆ ಸಂಬಂಧಿಸಿದಂತೆ ಸುಮಾರು 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳ ತಾಲ್ಲೂಕಿನ‌ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.