ಟಾಪ್ 7 ನ್ಯೂಸ್ ಕರಾವಳಿ
* ಬೆಳ್ತಂಗಡಿ: ದೇವರ ದರ್ಶನಕ್ಕೆ ಹೋದ ಶಿಕ್ಷಕ ಶವವಾಗಿ ಪತ್ತೆ!
* ಕುಂದಾಪುರ: ಮನೆಯ ಚಿನ್ನಾಭರಣ ಕದ್ದ ಹೋಂನರ್ಸ್
* ಬ್ರಹ್ಮಾವರ: ದನಗಳ ಮೇಲೆ ಹಿಂಸಾತ್ಮಕ ಹಲ್ಲೆ!
* ಮಂಗಳೂರು: ಹೊಟೇಲ್ ಉದ್ಯಮಿ ಆತ್ಮಹತ್ಯೆ
* ಬೈಂದೂರು: ಲಕ್ಷಾಂತರ ಮೌಲ್ಯದ ಅಡಿಕೆ ಕಳುವು
* ಬಂಟ್ವಾಳ: ಕೊಲೆ ಪ್ರಕರಣದಲ್ಲಿ ವ್ಯಕ್ತಿಯ ಬಂಧನ
* ಕಾಪು: ಕೋಳಿಯಂಕದ ಮೇಲೆ ದಾಳಿ: ಪರಾರಿ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ದೇವರ ದರ್ಶನಕ್ಕೆ ಬಂದಿದ್ದ ಶಿಕ್ಷಕ ಶವವಾಗಿ ಪತ್ತೆಯಾಗಿರುವ ಘಟನೆ ಧರ್ಮಸ್ಥಳ ಸಮೀಪದ ನೇತ್ರಾವತಿ ನದಿ ಬಳಿ ನಡೆದಿದೆ.
ಕುಷ್ಟಗಿ ಮೂಲದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಬಸವರಾಜ ಪೊಲೀಸ್ ಪಾಟೀಲ ಎನ್ನುವವರು, ಭಾನುವಾರದಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆಂದು ಬಂದವರು ಮರಳಿ ಊರಿಗೆ ಹೋಗಲಿಲ್ಲ. ಇವರಿಗಾಗಿ ಹುಡುಕಾಟ ನಡೆಸಿದಾಗ, ಧರ್ಮಸ್ಥಳದ ನೇತ್ರಾವತಿ ನದಿಯ ಸೇತುವೆಯ ಕೆಳಭಾಗದ ಹಳೆ ರಸ್ತೆಯಲ್ಲಿ, ಕೊಳೆತ ಸ್ಥಿತಿಯಲ್ಲಿ ಬಸವರಾಜ ಅವರ ಶವ ಪತ್ತೆಯಾಗಿದೆ.
ಕುಂದಾಪುರ: ಮನೆಯ ಚಿನ್ನಾಭರಣ ಕದ್ದ ಹೋಂನರ್ಸ್!
ಕುಂದಾಪುರ: ಪಾಂಡೇಶ್ವರದ ಸಿಪ್ರಿಯನ್ ಅಲ್ಮೇಡಾ ಎನ್ನುವವರ ತಾಯಿ ವೃದ್ದರಾಗಿದ್ದು, ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಸಾಗರ ಮೂಲದ ದಾದಿಯೊಬ್ಬರನ್ನು ಮನೆಯಲ್ಲಿ ಇರಿಸಿಕೊಂಡಿದ್ದರು. ಆ ದಾದಿಯು ತನ್ನ ಮಗನಿಗೆ ಹುಷಾರಿಲ್ಲ ಎಂಬ ನೆಪವೊಡ್ಡಿ ಊರಿಗೆ ಹಿಂತಿರುಗಿದಳು. ಬಳಿಕ ಸಿಪ್ರಿಯನ್ ಆವರು ತಮ್ಮ ತಾಯಿಯ ಕೋಣೆಗೆ ಬಂದು, ಲಾಕರ್ ತೆರೆದು ನೋಡಿದಾಗ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಒಡವೆಗಳು, ಎಂಭತ್ತೇಳು ಸಾವಿರ ರೂಪಾಯಿ ನಗದು, ಲಕ್ಷಾಂತರ ಮೌಲ್ಯದ ಪಾತ್ರೆಗಳು, ಚೂರಿ ಸೆಟ್ ಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಠಾಣೆಗೆ ತನಿಖೆಗೆ ಎಂದು ಕರೆಸಿಕೊಂಡಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಹಾಗೂ ಕಳ್ಳತನ ಮಾಡಿದ ಕೆಲವು ಒಡವೆ ವಸ್ತುಗಳನ್ನು ಹಿಂತಿರುಗಿಸಿದ್ದರೂ, ಇನ್ನು ಕೆಲವೊಂದನ್ನು ಹಿಂತಿರುಗಿಸದೆ ವಂಚನೆ ಮಾಡಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ.
ಬ್ರಹ್ಮಾವರ: ದನಗಳ ಮೇಲೆ ಹಿಂಸಾತ್ಮಕ ಹಲ್ಲೆ!
ಬ್ರಹ್ಮಾವರ: ಕರಾವಳಿಯಲ್ಲಿ ದನಗಳ ಅಕ್ರಮ ಸಾಗಾಣಿಕೆ ಮುಂದುವರಿತ್ತಿದ್ದು ಶಿರೂರು ಮೂರುಕೈ ಪೇಟೆಯ ನೀರ್ ಜೆಡ್ಡು ಎಂಬಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಕೊ ಸ್ಪೋರ್ಟ್ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ದನಗಳಿಗೆ ಹಿಂಸೆ ನೀಡಿ ಕಾರಿನಲ್ಲಿ ತುರುಕಲು ಮುಂದಾಗಿದ್ದಾರೆ. ಆ ಹೊತ್ತಿಗೆ ಸುದೀಪ್ ಎಂಬ ವ್ಯಕ್ತಿಯು ಬೈಕಿನಲ್ಲಿ ಬಂದುದನ್ನು ಕಂಡು, ಕಾರಿನಲ್ಲಿ ದನವನ್ನು ತುರುಕುತ್ತಿದ್ದವರಲ್ಲಿ ಒಬ್ಬನು ಪರಾರಿಯಾಗಿದ್ದಾನೆ. ಉಳಿದ ಇಬ್ಬರು ದನಗಳನ್ನು ತೆಗೆದುಕೊಂಡೇ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಸುವಿನ ಹತ್ಯೆ ಮಾಡಿ, ಮಾಂಸವನ್ನು ಸಿದ್ಧಪಡಿಸಿ, ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಯಾದ ಸುದೀಪ್ ಅವರ ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಮತ್ತೋರ್ವ ಆರೋಪಿಯ ಬಂಧನಕ್ಕಾಗಿ ಶೋಧನ ಕಾರ್ಯ ನಡೆದಿದೆ.
ಮಂಗಳೂರು: ಹೊಟೇಲ್ ಉದ್ಯಮಿ ಆತ್ಮಹತ್ಯೆ
ಮಂಗಳೂರು: ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮಂಗಳೂರು ಉತ್ತರ ಶಾಸಕರಾಗಿದ್ದ ಭರತ್ ಶೆಟ್ಟಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಹೊಟೇಲ್ ಉದ್ಯಮಿಯಾದ ನಿತಿನ್ ಸುವರ್ಣ ಎನ್ನುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.
5.6 ಲಕ್ಷ ಮೌಲ್ಯದ ಅಡಿಕೆ ಕಳ್ಳತನ
ಬೈಂದೂರು: ಮಸೂದ್ ಪಟೇಲ್ ಅವರ ಒಡೆತನದ ರಾಯಲ್ ಪ್ಲಾಂಟೇಶನ್ ಗೋದಾಮಿನಿಂದ ಸುಮಾರು 5.6 ಲಕ್ಷ ಮೌಲ್ಯದ ಅಡಿಕೆ ಕಳ್ಳತನವಾಗಿರುವ ಘಟನೆ ಶಿರೂರು ಸಮೀಪದ ಹಡವಿನಗದ್ದೆಯಲ್ಲಿ ನಡೆದಿದೆ. ಅರವತ್ತು ಎಕರೆ ಭೂಮಿಯಲ್ಲಿ ಕೃಷಿಯನ್ನು ನಡೆಸುತ್ತಿದ್ದ ಮಸೂದ್ ಅವರು, ತಮ್ಮ ತೋಟದಲ್ಲೇ ಬೆಳೆದಿದ್ದ ಸುಮಾರು ಇನ್ನೂರು ಚೀಲಗಳಷ್ಟಿದ್ದ ಒಣಗಿಸಿದ್ದ ಸಿಪ್ಪೆ ಸಹಿತ ಅಡಿಕೆಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಗೋದಾಮಿನಲ್ಲಿ ಇರಿಸಿದ್ದರು. ಆರೋಪಿಗಳು ಗೋದಾಮಿನ ಭಾಗದ ಗ್ರಿಲ್ ಲಾಕ್ ಮುರಿದು ಅಡಿಕೆಗಳನ್ನು ಕದ್ದಿರುವುದು ಸಾಬೀತಾಗಿದೆ. ಕಳ್ಳತನ ಮಾಡಿರುವ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಕಡಬ ತಾಲ್ಲೂಕಿನ ಸಂತೋಷ್, ಧಾರವಾಡ ಮೂಲದ, ಪ್ರಸ್ತುತ ಭಟ್ಕಳದಲ್ಲಿ ವಾಸವಾಗಿರುವ ನವಾಜ್ ಫಾಜ್ನಿ ಮತ್ತು ಭಟ್ಕಳದ ಖ್ವಾಜಾ ಮೊಹಮ್ಮದ್, ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬೈಂದೂರು ಆಸುಪಾಸಿನಲ್ಲೇ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಪಿಗಳ ಶೋಧನೆಗೆ ಉಡುಪಿ ಜಿಲ್ಲಾ ಎಸ್ ಪಿ ಆದ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖೆಯನ್ನು ನಡೆಸಲಾಯಿತು. ಮತ್ತು ಕುಂದಾಪುರದ ಎಎಸ್ ಪಿ ಸುಧಾಕರ ನಾಯ್ಕ, ಡಿವೈಎಸ್ ಪಿ ಎಚ್. ಡಿ. ಕುಲಕರ್ಣಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸವೀತ್ರ್ ತೇಜ್ ಅವರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ ಪತ್ತೆ ಹಚ್ಚಲಾಯಿತು ಎನ್ನಲಾಗಿದೆ.
ಬಂಟ್ವಾಳ: ಕೊಲೆ ಪ್ರಕರಣದಲ್ಲಿ ವ್ಯಕ್ತಿಯ ಬಂಧನ
ಬಂಟ್ವಾಳ: ಮೇ ತಿಂಗಳಿನಲ್ಲಿ ಕುರ್ಯಾಲ್ ಗ್ರಾಮದ ಎರಕೋಡಿ ಎಂಬಲ್ಲಿ ನಡೆದ ರಹಿಮಾನ್ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳವಾರದಂದು ಅಮ್ಮುಂಜೆ ನಿವಾಸಿ ಶಾಹಿತ್ ಎಂಬ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ, ಆದರೆ ಕೊಲೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು: ಕೋಳಿಯಂಕದ ಮೇಲೆ ದಾಳಿ: ಪರಾರಿ!
ಕಾಪು: ಕೈಪುಂಜಾಲು ಸಮುದ್ರ ತೀರದ ಬಳಿ ಕೋಳಿ ಅಂಕ ನಡೆಸುತ್ತಿದ್ದ ವಿಜಯ್, ಅನಿಲ್ ಕುಮಾರ್ ಸೇರಿದಂತೆ ಇತರರು ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪರಾರಿಯಾಗಿದ್ದಾರೆ. ಕಾಪು ಪೊಲೀಸ್ ಠಾಣೆಯ ಎಸ್ಐ ತೇಜಸ್ವಿ ಮತ್ತು ಸಿಬ್ಬಂದಿಗಳು ಕೋಳಿ ಅಂಕದ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಆರೋಪಿಗಳು ಪರಾರಿಯಾದ ಹಿನ್ನೆಲೆಯಲ್ಲಿ, ಅವರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.