ಕರಾವಳಿಯಲ್ಲಿ ಆಟಿ ಅಮಾವಾಸ್ಯೆಯ ಸಡಗರ!
– ನಂಬಿಕೆ ಹೇಗೆ… ಆಚರಣೆ ಹೇಗೆ ನಡೆಯುತ್ತೆ?
– ಸಮುದ್ರದಲ್ಲಿ ಸ್ನಾನ ಮಾಡೋದು ಕೂಡ ವಿಶೇಷ
ವಿಶೇಷ ಲೇಖನ: ರಚನಾ ಕಾಮತ್
ಆಷಾಢ ಅಮಾವಾಸ್ಯೆ ಅಥವಾ ಭೀಮನ ಅಮಾವಾಸ್ಯೆ ಎಂದು ಕರೆಯಲ್ಪಡುವ ದಿನವನ್ನು ಕರಾವಳಿ ಭಾಗದಲ್ಲಿ, ಅಂದರೆ ತುಳುವರು l ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯನ್ನು ಒಂದು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಇದಕ್ಕೆ ಒಂದು ಕಾರಣವೂ ಇದೆ. ಜುಲೈ 24ರಂದು ಆಟಿ ಅಮಾವಾಸ್ಯೆ ನಡೆಯಲಿದ್ದು ಈಗಾಗಲೇ ಸಿದ್ಧತೆ ನಡೆದಿದೆ.
ನಂಬಿಕೆ ಹೇಗೆ… ಆಚರಣೆ ಹೇಗೆ ನಡೆಯುತ್ತೆ?
ನಕ್ಷತ್ರಗಳು ಉದಯಿಸಿ, ಪಾಲೆ ಮರ ಚಿಗುರಿ, ಅದರಲ್ಲಿ ಸೂರ್ಯ ಚಂದ್ರ ಸೇರಿದಂತೆ ಮೊದಲಾದ ದೇವಾನುದೇವತೆಗಳು ನೆಲೆಗೊಂಡು, ಔಷಧಿಯನ್ನು ನೀಡಿ, ಮನುಷ್ಯರ ಆರೋಗ್ಯವನ್ನು ಕಾಪಾಡುವುದರ ಮೂಲಕ, ಜೀವವನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ ಇದೆ. ಇದನ್ನು ಸ್ವತಃ ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ ಎನ್ನುವ ಉಲ್ಲೇಖವಿದೆ. ಮನೆಯ ಯಜಮಾನ ಸೂರ್ಯೋದಯಕ್ಕೂ ಮೊದಲು ಕಾಡಿಗೆ ತೆರಳಿ, ಮೇಲ್ಭಾಗದಲ್ಲಿ ಏಳು ಎಲೆಗಳನ್ನು ಹೊಂದಿರುವ ಸಪ್ತಪಾರಣ್ಯ ಅಥವಾ ಪಾಲೆ ಮರದ ಬಳಿ ಹೋಗಿ, ಕತ್ತಿಯಿಂದ ಮರದ ಮಧ್ಯಭಾಗದ ತೊಗಟೆಯನ್ನು ದಪ್ಪ ಪದರದಲ್ಲಿ ಸೀಳಿ, ಮನೆಗೆ ತೆಗೆದುಕೊಂಡು ಬರುತ್ತಾನೆ. ಬಳಿಕ ಅದನ್ನು ಚೆನ್ನಾಗಿ ಜಜ್ಜಿ, ತುಳಸಿ ಎಲೆ, ಜೀರಿಗೆ, ಬರ್ಕಲ್ಲು ಗಳನ್ನು ಸೇರಿಸಿ, ದೇವರಿಗೆ ಅರ್ಪಿಸಿ ಬಳಿಕ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಮನೆಯಲ್ಲಿರುವ ಎಲ್ಲರಿಗೂ ನೀಡುತ್ತಾನೆ.
ಅರೋಗ್ಯಕ್ಕೂ ಒಳ್ಳೆಯದು ಆಚರಣೆ!
ಮೊದಲು ಉಂಡೆಗಳಂತೆ ಸಣ್ಣ ಸಣ್ಣದಾಗಿ ಸಿದ್ಧಪಡಿಸಿ ನೀಡುತ್ತಿದ್ದರು. ಆದರೆ ಈಗ ಅದನ್ನು ಕಷಾಯದ ರೂಪದಲ್ಲಿ ತಯಾರಿಸಿ ಹಂಚಲಾಗುತ್ತದೆ. ಒಬ್ಬೊಬ್ಬರು ಏಳರಿಂದ ಎಂಟು ಚಮಚ ಮಾತ್ರ ಸೇವಿಸಬೇಕು. ಏಕೆಂದರೆ ಇದರಲ್ಲಿ ಉಷ್ಣತೆಯ ಪ್ರಮಾಣ ಅಧಿಕವಾಗಿದೆ. ಅಕ್ಕಪಕ್ಕದ ಮನೆಯವರು ತರಲು ಸಾಧ್ಯವಾಗದಿದ್ದಾಗ, ಯಾರ ಬಳಿ ಅದು ಇರುತ್ತದೆಯೋ ಅವರು ಹಂಚಿಕೊಂಡು ಸೇವಿಸುತ್ತಾರೆ. ಇದು ಇಡೀ ವರ್ಷ ಬರಬಹುದಾದ ಕಾಯಿಲೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಅಂದು ಎಲ್ಲರೂ ಮನೆಯಲ್ಲೇ ಇದ್ದು, ನುಗ್ಗೆ ಸೊಪ್ಪು ಮೊದಲಾದ ತರಕಾರಿಗಳನ್ನು ಬಳಸಿಕೊಂಡು ಅಡುಗೆ ತಯಾರಿಸಿ, ಊಟ ಮಾಡಿ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಇದು ಹಬ್ಬಗಳು ಆರಂಭವಾಗುವ ಸಮಯವಾದ್ದರಿಂದ ಭೂಮಿಗೆ ಎಣ್ಣೆ ಹಾಕುವುದು, ಕೋಲು ಊರುವುದು ಆ ಮೂಲಕ ಮುಂದಿನ ಜಾತ್ರೆಗಳಿಗೆ ನಾಂದಿ ಹಾಡುವುದು ಇದರ ಮತ್ತೊಂದು ಪ್ರಧಾನ ಅಂಶವಾಗಿದೆ. ಕೆಲವರು ಉಷ್ಣವುಳ್ಳ ಕಷಾಯವನ್ನು ಸೇವಿಸುವುದರಿಂದ, ಮಧ್ಯಾಹ್ನ ಗಂಜಿಯೂಟವನ್ನು ಮಾಡುವ ಮೂಲಕ ದೇಹದ ಉಷ್ಣ ಮತ್ತು ಶೀತ ಅಂಶಗಳನ್ನು ಸಮತೋಲನಗೊಳ್ಳುವಂತೆ ಮಾಡಿಕೊಳ್ಳುತ್ತಾರೆ. ಮಳೆಗಾಲ ಕಾಯಿಲೆಗಳ ಕಾಲವಾದ್ದರಿಂದ ಒಂದು ರೀತಿಯಲ್ಲಿ ಈ ಅಮಾವಾಸ್ಯೆಯನ್ನು ಕೆಲವರು ಅನಿಷ್ಟ ಅಮಾವಾಸ್ಯೆ ಎಂದು ಕರೆಯುವ ವಾಡಿಕೆ ಇದೆ.
ಸಮುದ್ರ ಸ್ನಾನ, ದೇವಸ್ಥಾನ ದರ್ಶನ!
ಇನ್ನು ಕುಂದಾಪುರ ಭಾಗದಲ್ಲಿ ಈ ದಿನದಂದು ಸಮುದ್ರ ಸ್ನಾನವನ್ನು ಮಾಡುತ್ತಾರೆ. ಇಲ್ಲಿಯವರು ಆಸಾಡಿ ಅಮಾವಾಸ್ಯೆ ಎಂದು ಕರೆಯುವುದುಂಟು. ಹಿಂದೆ ಈ ದಿನಕ್ಕೆ ಶಾಲೆ-ಕಾಲೇಜುಗಳಿಗೆ ರಜೆ ನೀಡುತ್ತಿದ್ದರು ಎನ್ನುತ್ತಾರೆ ಹಿರಿಯರು. ಮರವಂತೆಯಲ್ಲಿ ಸಮುದ್ರ ಸ್ನಾನದ ಬಳಿಕ, ದೇವಾಲಯಕ್ಕೆ ತೆರಳಿ, ದರ್ಶನ ಪಡೆಯುವುದು ಒಂದು ರೀತಿ ಜಾತ್ರೆಯ ವೈಭವವನ್ನು ನೆನಪಿಸುತ್ತದೆ. ಸಮುದ್ರದಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ಸ್ನಾನ ಮಾಡುವುದರಿಂದ ಆ ಜಾಗಕ್ಕೆ ಅಮಾವಾಸ್ಯೆ ಕಡು ಎಂದು ಕರೆಯಲಾಗುತ್ತದೆ. ಈ ದಿನ ಅಲ್ಲಿ ಯಾವುದೇ ಜಾತಿ ಭೇದವಿಲ್ಲದೆ, ಎಲ್ಲರೂ ಸಾಮರಸ್ಯದಿಂದ, ಸಾಮೂಹಿಕವಾಗಿ ಸ್ನಾನ ಮಾಡುವುದು ಒಂದು ವಿಶಿಷ್ಟ. ಸಮುದ್ರ ಸ್ನಾನದಿಂದ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವ ವೈಜ್ಞಾನಿಕ ಕಾರಣವಿದ್ದರೆ, ಎಲ್ಲರೂ ಒಟ್ಟಾಗಿ ಬೆರೆತು, ಸ್ನಾನ ಮಾಡುವುದರಿಂದ ಭಾವೈಕ್ಯತೆಯನ್ನು ಸಾರುವ ಉತ್ತಮ ಅಂಶ ಕೂಡ ಕಂಡು ಬರುತ್ತದೆ. ಕರಾವಳಿ ಭಾಗಗಳಲ್ಲಿ ಇಡೀ ವರ್ಷದಲ್ಲಿ ಬರುವ ಹನ್ನೆರಡು ಅಮಾವಾಸ್ಯೆಗಳಲ್ಲಿ ಇದು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಮಲೆನಾಡು ಮೈಸೂರು ಸೇರಿದಂತೆ ಘಟ್ಟದ ಮೇಲಿನ ಪ್ರಾಂತ್ಯಗಳಲ್ಲಿ ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಕರೆದು, ಮುತ್ತೈದೆಯರು ಪತಿಯ ಆಯಸ್ಸು ಆರೋಗ್ಯಗಳು ವೃದ್ಧಿಸಿ, ತನ್ನ ಗಂಡನಿಗೆ ಭೀಮನಷ್ಟು ಬಲವಿರಲಿ ಎಂಬ ಉದ್ದೇಶದಿಂದ ದೇವರಲ್ಲಿ ಬೇಡಿಕೊಂಡು, ಗಂಡನ ಪಾದಪೂಜೆಯನ್ನು ನೆರವೇರಿಸಿ, ಆತನ ಆಶೀರ್ವಾದವನ್ನು ಈ ದಿನದಂದು ವಿಶೇಷವಾಗಿ ಪಡೆದುಕೊಳ್ಳುತ್ತಾರೆ.
ಸಮಸ್ತ ಜನತೆಗೆ ಆಟಿ ಅಮಾವಾಸ್ಯೆ ಶುಭಾಶಯಗಳು
