Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ

* ಉಡುಪಿ: ಡಿವೈಡರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್!
* ಬಂಟ್ವಾಳ: ಕಲಾವಿದ ರಮೇಶ್ ಕಲ್ಲಡ್ಕ ನೆನಪು ಮಾತ್ರ
* ಉಳ್ಳಾಲ: ಭಾರಿ ಮಳೆ; ಮನೆಗಳು ಜಲಾವೃತ
* ಮರವಂತೆ: ಅಮಾವಾಸ್ಯೆ ಜಾತ್ರಾ ಮಹೋತ್ಸವ
* ಬೈಂದೂರು: ಅಭಿವೃದ್ಧಿಯ ಹಂತದಲ್ಲಿ ಸೋಮೇಶ್ವರ ಕಡಲತೀರ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ದಾವಣಗೆರೆಯಿಂದ ಉಡುಪಿಗೆ ಆಗಮಿಸಿ, ಅಲ್ಲಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಗೆ ಹೊಡೆದ ಘಟನೆ ಬುಧವಾರದಂದು ಮಣಿಪಾಲ್ ಲಕ್ಷ್ಮೀಂದ್ರ ನಗರದಲ್ಲಿ ನಡೆದಿದೆ. ಅತಿಯಾದ ವೇಗದಿಂದ ಬರುತ್ತಿದ್ದುದರಿಂದ, ಬಸ್ ಚಾಲಕನ ನಿಯಂತ್ರಣ ತಪ್ಪಿದೆ, ಆದರೆ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಮಣಿಪಾಲದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಬಂಟ್ವಾಳ: ಕಲಾವಿದ ರಮೇಶ್ ಕಲ್ಲಡ್ಕ ನೆನಪು ಮಾತ್ರ

ಬಂಟ್ವಾಳ: ಮಂಗಳೂರಿನ ಪ್ರಸಿದ್ಧ ನಾಟಕ ತಂಡವಾದ ಕಲಾಸಂಗಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಹಲವಾರು ನಾಟಕಗಳಲ್ಲಿ ಅಭಿನಯಿಸಿ, ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮತ್ತು ಚಿತ್ರನಟ ರಮೇಶ್ ಕಲ್ಲಡ್ಕ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಲ್ಲಡ್ಕ ಕೊಳಕೀರು ನಿವಾಸಿಯಾದ ರಮೇಶ್ ಅವರು ಕೇವಲ ರಂಗಭೂಮಿ ಅಷ್ಟೇ ಅಲ್ಲದೆ, ತುಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಜೊತೆಗೆ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ತುಳು ರಂಗ ಭೂಮಿಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಶಿವಧೂತೆ ಗುಳಿಗೆ ಎಂಬ ನಾಟಕದಲ್ಲಿ ಭೀಮರಾವ್ ಪಾತ್ರದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದ್ದರು.

ಉಳ್ಳಾಲ: ಭಾರಿ ಮಳೆ; ಮನೆಗಳು ಜಲಾವೃತ

ಉಳ್ಳಾಲ: ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ, ಮಳೆಯ ತೀವ್ರತೆಯಿಂದಾಗಿ ಉಳ್ಳಾಲ ನಗರ ಸಭೆಯ ವ್ಯಾಪ್ತಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ, ಮನೆಗಳು ಜಲಾವೃತಗೊಂಡಿವೆ. ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಮತ್ತು ಅದಕ್ಕಾಗಿ ಡಿಜಿಟಲ್ ಸರ್ವೆಗೆ ಪರಿಶೀಲನೆ ನಡೆಸಲಾಗುವುದು ಎಂದು ಉಳ್ಳಾಲ ನಗರಸಭೆಯ ಕಮಿಷನರ್ ಆದ ನವೀನ್ ಹೆಗ್ಡೆ ತಿಳಿಸಿದರು. ಕೇವಲ ರಾಜಕಾಲುವೆ ಒತ್ತುವರಿ ಅಷ್ಟೇ ಅಲ್ಲ, ಸಮುದ್ರದ ಅಲೆಗಳು ಹೆಚ್ಚಾದಾಗ ರಾಜಕಾಲುವೆಯ ನೀರು ಮೇಲೆ ಬರುತ್ತಿತ್ತು. ನೀರು ಹರಿದು ಹೋಗಲು ಬೇರೆ ಸ್ಥಳವಿಲ್ಲದೆ ಮನೆಗಳಿಗೆ ನುಗ್ಗುತ್ತಿದೆ . ಇನ್ನು ಮುಂದೆ ಮನೆಗಳನ್ನು, ಅಪಾರ್ಟ್ಮೆಂಟ್ ಗಳನ್ನು ಕಟ್ಟುವ ಸಂದರ್ಭದಲ್ಲಿ ಸೆಟ್ ಬ್ಯಾಕ್ ಬಿಟ್ಟು ಮತ್ತು ಮೂರು ಅಡಿ ಮಳೆಯ ನೀರು ಚರಂಡಿಗೆ ಹೋಗುವ ವ್ಯವಸ್ಥೆ ಮಾಡಿದರೆ ಮಾತ್ರ ಲೈಸೆನ್ಸ್ ಮತ್ತು ಮನೆಗಳಿಗೆ ನೀಡುವ ಸಂಖ್ಯೆಯನ್ನು ನೀಡಲಾಗುವುದು ಎಂದು ವಿಧಾನಸಭಾ ಅಧ್ಯಕ್ಷರು ಮತ್ತು ಶಾಸಕರು ಆಗಿರುವ ಯು.ಟಿ.ಖಾದರ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಹಾಗೆಯೇ ಮಳೆಯ ಪ್ರಮಾಣ ಕಡಿಮೆಯಾಗುತ್ತಲೇ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ, ರಾಜಕಾಲುವೆಗಳನ್ನು ಒತ್ತುವರಿ ಮಾಡಿದ ಕಡೆಗಳಲ್ಲಿ ಸ್ವಯಂ ಪ್ರೇರಿತರಾಗಿ ತೆರುವು ಕಾರ್ಯವನ್ನು ನಡೆಸಲು ಸಹಕಾರ ನೀಡಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮರವಂತೆ: ಅಮಾವಾಸ್ಯೆ ಜಾತ್ರಾ ಮಹೋತ್ಸವ

ಕುಂದಾಪುರ: ಮಹಾರಾಜ ಶ್ರೀ ವರಹ ಸ್ವಾಮಿಯನ್ನು ಮಳೆಯದೇವರು ಎಂದು ಕರೆಯುತ್ತಾರೆ.‌ ಈ ಹಿನ್ನೆಲೆಯಲ್ಲಿ ಕರ್ಕಟಕ ಅಮಾವಾಸ್ಯೆ ಜಾತ್ರೆಯು ಇಲ್ಲಿ ಮಳೆಗಾಲದ ಜಾತ್ರೆ ಎಂದು ಖ್ಯಾತಿ ಪಡೆದಿದೆ. ಮರವಂತೆ ಕಡಲ ತೀರ ಮತ್ತು ಸೌಪರ್ಣಿಕಾ ನದಿಯ ನಡುವೆ ಇರುವ ಮಹಾರಾಜ ಶ್ರೀ ವರಹ ಸ್ವಾಮಿ ದೇವಾಲಯದಲ್ಲಿ ಇಂದು ಜಾತ್ರೆಯ ಸಡಗರ ಮನೆಮಾಡಿದೆ. ಮತ್ಸ್ಯ ಸಂಪತ್ತು, ಕೃಷಿಯಲ್ಲಿ ಸಮೃದ್ಧತೆ ಮತ್ತು ಮೀನುಗಾರರ ಸುರಕ್ಷತೆಗಾಗಿ ಈ ಜಾತ್ರೆಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ವಿಷ್ಣುವಿನ ಮೂರು ಅವತಾರಗಳು ಈ ದೇವಾಲಯದಲ್ಲಿರುವುದು ಇಲ್ಲಿನ ವಿಶೇಷ. ಮಳೆಯಲ್ಲಿ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಾತ್ರಾ ಮಹೋತ್ಸವವನ್ನು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಾತ್ರೆಯ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಸಮಿತಿಯವರು ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿಯ ಹಂತದಲ್ಲಿ ಸೋಮೇಶ್ವರ ಕಡಲತೀರ

ಬೈಂದೂರು: ಬೇಸಿಗೆ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಕಡಲ ತೀರಕ್ಕೆ ಆಗಮಿಸುತ್ತಾರೆ. ಇದರಿಂದಾಗಿ ಕರಾವಳಿ ಭಾಗದ ಹಲವಾರು ಸಮುದ್ರ ತೀರಗಳು ಹೆಚ್ಚು ಖ್ಯಾತಿಯನ್ನು ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬೈಂದೂರಿನ ಸೋಮೇಶ್ವರ ಕಡಲ ತೀರವನ್ನು ಅಭಿವೃದ್ಧಿಪಡಿಸಲು ಪ್ರಯತ್ನ ನಡೆಸಲಾಗಿದೆ.‌ ಬೈಂದೂರು ಸೋಮೇಶ್ವರ ಸಮುದ್ರವು ವಿವಿಧ ಆಕರ್ಷಕ ವ್ಯವಸ್ಥೆಗಳ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿದೆಯಾದರೂ, ಅಭಿವೃದ್ಧಿಯ ವಿಚಾರದಲ್ಲಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಡುವಿನ ಸಾಮರಸ್ಯದ ಕೊರತೆಯಿಂದಾಗಿ ಅಲ್ಲಿನ ಪ್ರಧಾನ ರಸ್ತೆಯ ಕಾಮಗಾರಿಯು ಆಮೆಗತಿಯಲ್ಲಿದೆ. ಕಾಮಗಾರಿಯ ವೆಚ್ಚಕ್ಕಾಗಿ 1. 24 ಕೋಟಿ ಹೆಚ್ಚುವರಿಯಾಗಿ ಮಂಜೂರು ಮಾಡಲು ಪ್ರಸ್ತಾವನೆ ಮಾಡಲಾಗಿದೆ. ಈ ಸಮಸ್ಯೆಯ ನಡುವೆಯೂ ಗುತ್ತಿಗೆದಾರರು ಹಳೆಯ ರಸ್ತೆಯನ್ನು ಅಗೆದು ಹಾಕಿದ್ದು, ಸುತ್ತಮುತ್ತಲ ಪ್ರದೇಶ ಅವ್ಯವಸ್ಥೆಯ ತಾಣಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.