ಟಾಪ್ ನ್ಯೂಸ್ ಕರಾವಳಿ
* ಪುತ್ತೂರು: ರೇಪ್ ಪ್ರಕರಣದಲ್ಲಿ ಅಂಡರ್ ವರ್ಲ್ಡ್ ಎಂಟ್ರಿ..!
ಸಂತ್ರಸ್ತೆ ಮದುವೆಯಾಗದಿದ್ರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆ
* ಉಡುಪಿ: ನಾಡದೋಣಿ ಮಗುಚಿ ಮೀನುಗಾರನ ಸಾವು
* ಬ್ರಹ್ಮಾವರ: ಅಕ್ರಮ ಮದ್ಯ ಮಾರಾಟ; ಬಂಧನ
* ಕುಂದಾಪುರ: ಉತ್ತರ ಪ್ರದೇಶ ಮೂಲದ ಮಹಿಳೆ ನಾಪತ್ತೆ
* ಕಡಬ: ಆಸ್ಪತ್ರೆಗೆ ಹೋದ ಬಾಲಕಿಗೆ ಗರ್ಭಿಣಿ ಎಂದು ಸುಳ್ಳು ವರದಿ!?
•ಮಂಗಳೂರು: ಡ್ರಗ್ಸ್ ಮಾರಾಟ; ವೈದ್ಯಕೀಯ ವಿದ್ಯಾರ್ಥಿ ಅರೆಸ್ಟ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಬಿಜೆಪಿ ಮುಖಂಡನ ಮಗನಾದ ಕೃಷ್ಣರಾವ್ ಎಸಗಿದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಈಗ ಭೂಗತ ಜಗತ್ತಿನ ಹೆಸರಿನಲ್ಲಿ ವ್ಯಕ್ತಿಯೊಬ್ಬನ ಪ್ರವೇಶವಾಗಿದೆ. ಖಾಸಗಿ ಸುದ್ಧಿ ವಾಹಿನಿಯೊಂದಕ್ಕೆ ವ್ಯಕ್ತಿಯು ಯೋಗೀಶ್ ಎಂಬ ಹೆಸರಿನಲ್ಲಿ ಕರೆ ಮಾಡಿದ್ದು, ಆರೋಪಿಯು ಶಿಕ್ಷೆಯನ್ನು ಅನುಭವಿಸಿ, ಹೊರಬಂದ ಬಳಿಕ ಯುವತಿಯನ್ನು ವಿವಾಹವಾಗದಿದ್ದಲ್ಲಿ ಸ್ವತಃ ತಾನೇ ಆರೋಪಿಯನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂಬ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉಡುಪಿ: ನಾಡದೋಣಿ ಮಗುಚಿ ಮೀನುಗಾರನ ಸಾವು
ಉಡುಪಿ: ಮಳೆಯ ಪ್ರಮಾಣ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ಪಡುಕೆರೆ ಕಡಲ ತೀರದಲ್ಲಿ ನಾಡದೋಣಿಗಳು ನೀರಿಗಿಳಿದಿದ್ದು, ಸಮುದ್ರದ ಅಲೆಯ ತೀವ್ರತೆ ಇನ್ನೂ ಕಡಿಮೆಯಾಗದ ಕಾರಣ ನೀರಿಗಿಳಿದ ದೋಣಿಯೊಂದು ಮುಗುಚಿ, ಮೀನುಗಾರ ಸಾವನ್ನಪ್ಪಿದ ಘಟನೆ ನಡೆದಿದೆ. ಪಿತ್ರೋಡಿ ಗ್ರಾಮದ ನಿವಾಸಿಯಾದ ನೀಲು ಎಂಬ ನಲವತ್ತೆಂಟು ವರ್ಷದ ಮೀನುಗಾರ ಅಸುನೀಗಿದ್ದಾನೆ. ನಾಡ ದೋಣಿ ಮುಗುಚಿ ಬಿದ್ದ ಪರಿಣಾಮ, ಮೀನಿನ ಬಲೆಗೆ ಸಿಲುಕಿ ನೀಲು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಬ್ರಹ್ಮಾವರ: ಅಕ್ರಮ ಮದ್ಯ ಮಾರಾಟ; ಬಂಧನ
ಬ್ರಹ್ಮಾವರ: ಹಂದಾಡಿ ಗ್ರಾಮದ ಉಮೇಶ್ ಪೂಜಾರಿ ಎಂಬ ವ್ಯಕ್ತಿಯು ಬ್ರಹ್ಮಾವರದ ವೈನ್ ಶಾಪಿನಿಂದ ಮದ್ಯವನ್ನು ಖರೀದಿಸಿ, ಸ್ಕೂಟರ್ ನಲ್ಲಿ ಮಾರಾಟ ಮಾಡುತ್ತಿದ್ದು, ಯಾವುದೇ ಪರವಾನಿಗೆಯನ್ನು ಪಡೆಯದೆ, ಅಕ್ರಮವಾಗಿ ವ್ಯವಹಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ವಾರಂಬಳ್ಳಿ ಗ್ರಾಮದ ಕುಂಜಾಲ್ ಜಂಕ್ಷನ್ ಬಳಿ ಬಂಧಿಸಲಾಗಿದೆ. ಅಲ್ಲದೆ ಉಮೇಶ್ ಪೂಜಾರಿಯ ಸ್ಕೂಟರ್ ಮತ್ತು ಅವನ ಬಳಿಯಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಉತ್ತರ ಪ್ರದೇಶ ಮೂಲದ ಮಹಿಳೆ ನಾಪತ್ತೆ
ಕುಂದಾಪುರ: ಕೋಟೇಶ್ವರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಉತ್ತರ ಪ್ರದೇಶದ ಇಪ್ಪತ್ತೆಂಟು ವರ್ಷದ ಅಂಜಲಿ ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ತಾನು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದು, ಮನೆಗೆ ಮರಳಿ ಬಂದಿಲ್ಲ ಎಂದು ಪತಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಕಡಬ: ಜ್ವರ ಎಂದು ತೋರಿಸಲು ಹೋದ ಬಾಲಕಿಗೆ ಗರ್ಭಿಣಿ ಎಂದು ಸುಳ್ಳು ವರದಿ!?
ಕಡಬ: ತಾಲ್ಲೂಕಿನ ಹದಿಮೂರು ವರ್ಷದ ಬಾಲಕಿಯೊಬ್ಬಳು ಜ್ವರ ಎಂಬ ಕಾರಣಕ್ಕಾಗಿ ಪಂಜದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆಂದು ಆಗಮಿಸಿದ್ದು, ರಕ್ತ, ಮೂತ್ರ ಇತ್ಯಾದಿ ಪರೀಕ್ಷೆಗಳ ಬಳಿಕ ಅಲ್ಲಿನ ವೈದ್ಯರು ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂಬ ವರದಿಯನ್ನು ನೀಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ವರದಿಯನ್ನು ತೆಗೆದುಕೊಂಡು, ಮಗಳನ್ನು ಕರೆದುಕೊಂಡು ಮತ್ತೊಮ್ಮೆ ಪರೀಕ್ಷಿಸಲೆಂದು ಸುಳ್ಯದ ಆಸ್ಪತ್ರೆಗೆ ಹೋದಾಗ ಗರ್ಭಧಾರಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ವರದಿ ನೀಡಲಿಲ್ಲ. ಇದರಿಂದ ಪೋಷಕರು ನಿರಾಳರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಪಂಜ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ವೈದ್ಯರ ಎಡವಟ್ಟು ಬೆಳಕಿಗೆ ಬಂದಿದೆ. ಆದರೆ ಅಷ್ಟೊತ್ತಿಗಾಗಲೇ ವಿಚಾರ ಸಾರ್ವಜನಿಕವಾಗಿ ಹರಡಿದ್ದು, ಕುಟುಂಬದವರಿಗೆ ಮಾನಸಿಕ ನೋವುಂಟಾಗಿರುವುದಷ್ಟೇ ಅಲ್ಲದೆ ಬಾಲಕಿಯು ಅವಮಾನವಾಗಿ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪೋಷಕರು ದೂರು ನೀಡಿದ್ದಾರೆ.
ಡ್ರಗ್ಸ್ ಮಾರುತ್ತಿದ್ದ ಮೆಡಿಕಲ್ ವಿದ್ಯಾರ್ಥಿ!
ಮಂಗಳೂರು: ಬೀದರ್ ಮೂಲದ ಪ್ರಜ್ವಲ್ ಪೀಣ್ಯಾಸ್ ಎಂಬ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಮೂಲಕ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು, ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, ಆತನನ್ನು ಬಂಧಿಸಿದ್ದಾರೆ. ಈ ಹಿಂದೆ ಪ್ರಜ್ವಲ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ವಿಷಯ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು, ಈಗಾಗಲೇ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಮೂರು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಜ್ವಲ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.