Categories
ಮಲ್ನಾಡ್

ಮಲೆನಾಡ ಜನರಿಗೆ ಹಕ್ಕು ಪತ್ರ ಭಾಗ್ಯ ಯಾವಾಗ..?

ಮಲೆನಾಡ ಜನರಿಗೆ ಹಕ್ಕು ಪತ್ರ ಭಾಗ್ಯ ಯಾವಾಗ..?
– ವಾಸದ ಮನೆಗಳಿಗೆ ಹಕ್ಕುಪತ್ರ ಕೊಡಿಸಿ ಶಾಸಕರೇ..
– ನೂರಾರು ವರ್ಷಗಳಿಂದ ವಾಸವಿದ್ರು ದಾಖಲೆ ಇಲ್ಲ
– ಹಕ್ಕು ಪತ್ರ ವಿತರಿಸಿ..ಮಲೆನಾಡಿನ ಹಳ್ಳಿಗರಿಗೆ ಜೀವನ ಕೊಡಿ..!

ವಿಶೇಷ ವರದಿ: ಸಚಿನ್ ಶೃಂಗೇರಿ
ಮಲೆನಾಡು ದಿನೇ ದಿನೇ ಅನೇಕ ಸಮಸ್ಯೆಗಳ ಗೂಡಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆಯಿಂದ ಮಲೆನಾಡಿನರ ಜನರಿಗೆ ಸರ್ಕಾರಿ ಕಛೇರಿ ಅಲೆದಾಟ ತಪ್ಪಿದ್ದಲ್ಲ…!
ರಾಜಕೀಯವಾಗಿ ಮಲೆನಾಡು ಎಷ್ಟೇ ಪ್ರಾಬಲ್ಯ ಸಾಧಿಸಿದ್ದರೂ ಜನರ ಸಮಸ್ಯೆ ಬಗೆಹರಿಸುವಲ್ಲಿ ಚುನಾಯಿತ ಪ್ರತಿನಿಧಿಗಳು,ಸರ್ಕಾರಗಳು ವಿಫಲವಾಗಿರೋದಂತು ಸತ್ಯ.

ಅಜ್ಜ ಮುತ್ತಜ್ಜನ ಕಾಲದ ಸಮಸ್ಯೆ!

ಮಲೆನಾಡಿಗರ ಹಲವಾರು ಸಮಸ್ಯೆಗಳ ಪೈಕಿ ಬಹುದೊಡ್ಡ ಸಮಸ್ಯೆ ಹಕ್ಕುಪತ್ರದ್ದಾಗಿದೆ. ನೂರಾರು ವರ್ಷಗಳಿಂದ ಅಜ್ಜ ಮುತ್ತಜ್ಜನ ಕಾಲದಿಂದಲೂ ಒಂದೇ ಸ್ಥಳದಲ್ಲಿ ವಾಸವಿರುವ ಹಲವರಿಗೆ ಇನ್ನೂ ಹಕ್ಕುಪತ್ರವೇ ಸಿಕ್ಕಿಲ್ಲ. ಇದರಿಂದ ಮಲೆನಾಡಿಗರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಅದೆಷ್ಟೋ ಸರ್ಕಾರಗಳು ಬದಲಾದವು,ಅದೆಷ್ಟೋ ಜನಪ್ರತಿನಿಧಿಗಳು ಆರಿಸಿ ಬಂದರೂ ಕೂಡ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಕ್ಕವು. ಆದರೆ ಮಲೆನಾಡಿಗರ ಜೀವನದ ಪ್ರಶ್ನೆಯಾದ ಹಕ್ಕುಪತ್ರದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ಶಾಸಕರ ಸುಳ್ಳು ಭರವಸೆ ಈಡೇರಿಲ್ಲ..

ಸದಾ ಒಂದಿಲ್ಲೊಂದು ತೊಡಕಿನ ನೆಪವೊಡ್ಡಿ ತಮ್ಮ ಹಕ್ಕುಪತ್ರ ಹಕ್ಕಿನ ವಂಚನೆಗೊಳಗಾಗಿದ್ದಾರೆ ಮಲೆನಾಡಿಗರು. ನೂರಾರು ವರ್ಷಗಳಿಂದ ತನ್ನ ಕುಟುಂಬ ವಾಸ ಇದ್ದಿದ್ದು ಅಲ್ಲೇ,ಕೃಷಿ ಮಾಡಿದ್ದು ಅಲ್ಲೇ ಆದರೆ ಆ ಜಾಗ,ಮನೆ ನನ್ನದು ಎಂದು ಹೇಳಿಕೊಳ್ಳಲು ಹಕ್ಕುಪತ್ರವಿಲ್ಲ. ಈ ಸಲುವಾಗಿ ಅದೆಷ್ಟು ಅಲೆದಾಡಿದರೂ,ಅಧಿಕಾರಿಗಳನ್ನು,ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮಲೆನಾಡಿನ ಗ್ರಾಮಗಳಲ್ಲಿನ ಜನ ತಮ್ಮ ಚುನಾಯಿತ ಶಾಸಕರಿಗೆ ಆಗ್ರಹಿಸುತ್ತಿದ್ದಾರೆ. ಶಾಸಕರೇ ಹಕ್ಕು ಪತ್ರ ಕೊಡಿಸಿ ನಮಗೆ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು. ಅದರೆ ಈ ದನಿ ಯಾರಿಗೂ ಕೇಳುತ್ತಿಲ್ಲ.

ಅಧಿಕಾರಿಗಳ ಎಡವಟ್ಟು: ಜನರ ಪರದಾಟ

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಮಲೆನಾಡು ಭಾಗದ ಶಾಸಕರು ಈ ಬಗ್ಗೆ ಗಮನಹರಿಸಿ ಇರುವ ತೊಡಕುಗಳನ್ನು ಬಗೆಹರಿಸಿ ಮಲೆನಾಡಿನ ಹಳ್ಳಿಗಳಲ್ಲಿ ನೂರಾರು ವರ್ಷದಿಂದ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ ಕೊಡಿಸಿ ಅವರ ಜೀವನಕ್ಕೆ ನೆರವಾಗಬೇಕಿದೆ. ಅನೇಕ ಅಧಿಕಾರಿಗಳು, ಸರ್ಕಾರಿ ನೌಕರರ ಎಡವಟ್ಟು ಕೂಡ ಅನೇಕರ ಬದುಕನ್ನು ಬೀದಿಗೆ ತಂದಿದೆ.

ಬಗರ್ ಹುಕುಂ ಇಲ್ಲ.. ಹಕ್ಕು ಪತ್ರವೂ ಇಲ್ಲ..!

ಮಲೆನಾಡಿನ ಜನರಿಗೆ ತಮ್ಮ ಅಸ್ತಿ ಹಕ್ಕು ಭಾಗ್ಯ ಕೊಡಿಸುವಲ್ಲಿ ಯಾವುದೇ ಸರ್ಕಾರ ಕೂಡ ಸಫಲವಾಗಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಅಥವಾ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಬಿಟ್ಟರೇ ಇತ್ತೀಚಿಗೆ ಯಾವುದೇ ಶಾಸಕರು ಈ ಬಗ್ಗೆ ದೊಡ್ಡ ಹೋರಾಟ ಮಾಡದಿರುವುದು ದುರಂತ. ಬಗರ್ ಹುಕುಂ ಸಮಿತಿ ನೇಮಕವಾದರೂ ಎಲ್ಲಿಯೂ ಸಭೆಗಳೇ ನಡೆದಿಲ್ಲ. ಚುನಾವಣೆಯಲ್ಲಿ ಇವೆಲ್ಲ ಪ್ರಮುಖರು ಭರವಸೆಯಲ್ಲಿ ಪ್ರಣಾಳಿಕೆಯಲ್ಲಿ ಕಂಡರೂ ಯಾವುದೂ ಇನ್ನು ಈಡೇರಿಲ್ಲ. ರಾಜಕಾರಣಿಗಳ ಪುಡಿ ಕಾಸನ್ನು ತೆಗೆದುಕೊಂಡು ಜನ ಕೂಡ ಯಾವುದೂ ಬೇಡದ ರೀತಿಯಲ್ಲಿದ್ದಾರೆ. ಪ್ರಶ್ನೆ ಮಾಡುವುದನ್ನೇ ಮರೆತಿದ್ದಾರೆ.
ಮಲೆನಾಡಿನ ಜಮೀನು, ಮನೆ, ಅಸ್ತಿಗೆ ಯಾವುದೇ ದಾಖಲೆ ಇಲ್ಲ. ಹೀಗಾಗಿ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಸಿಗಲ್ಲ. ಇದರಿಂದ ಜನ ಫೈನಾನ್ಸ್ ಮೊರೆ ಹೋಗಿದ್ದು ಬಡ್ಡಿ ಕಟ್ಟಿ ಕಟ್ಟಿ ಬದುಕು ಕಳೆದುಕೊಳ್ಳುತ್ತಿದ್ದಾರೆ. ಒಂದು ಮನೆ, ಒಂದು ಸ್ವಲ್ಪ ತೋಟದ ಆಧಾರ ಇದ್ದರೆ ಒಂದು ಕುಟುಂಬದ ಭದ್ರತೆಗೆ ಸಾಕು. ಅದರೆ ಅದ್ಯಾವುದು ಸಿಗುವ ಭರವಸೆ ಇದೀಗ ಕನಸಾಗಿ ಉಳಿದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.