Categories
ಕರಾವಳಿ ತೀರ್ಥಹಳ್ಳಿ

ತೀರ್ಥಹಳ್ಳಿ- ಕುಂದಾಪುರ ಹೆದ್ದಾರಿ ಸಂಚಾರ ಸ್ಥಗಿತ!

ತೀರ್ಥಹಳ್ಳಿ- ಕುಂದಾಪುರ ಹೆದ್ದಾರಿ ಸಂಚಾರ ಸ್ಥಗಿತ!

•ಕುಂದಾಪುರ: ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52ರಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ಸ್ಥಗಿತ
* ಉಡುಪಿ: ಹಬ್ಬಗಳಿಗೆ ವಿಶೇಷ ರೈಲ್ ವ್ಯವಸ್ಥೆ ಮನವಿಗೆ ಅಸ್ತು
* ಹೆಬ್ರಿ: ಮಳೆಯಿಂದ ರಸ್ತೆಗಳು ಜಲಾವೃತ: ಎಚ್ಚರಿಕೆ
* ಮಂಗಳೂರು: ಪಾಳುಬಿದ್ದ ಮನೆಯಲ್ಲಿ ಹಿರಿಜೀವ
* ಸುಳ್ಯ: ಮಿತಿಮೀರಿದ ಕಾಡಾನೆ ಹಾವಳಿ: ಜನರಿಗೆ ಜೀವ ಭಯ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ತೀವ್ರ ಮಳೆಯಿಂದಾಗಿ, ಹುಲಿಕಲ್ ಘಾಟಿ ಹೇರ್ ಪಿನ್ ತಿರುವಿನ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ, ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಕಾರಣದಿಂದ ಕುಂದಾಪುರ ಮತ್ತು ತೀರ್ಥಹಳ್ಳಿ ಮಾರ್ಗದಲ್ಲಿ (ಮಾಸ್ತಿಕಟ್ಟೆಯಿಂದ ಹೊಸಂಗಡಿ) ಅಂದರೆ ರಾಜ್ಯ ಹೆದ್ದಾರಿ 52 ರಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿದ ಶಿವಮೊಗ್ಗ ಜಿಲ್ಲಾಧಿಕಾರಿಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ತಿಳಿಸಿದ್ದಾರೆ.

* ಉಡುಪಿ: ಹಬ್ಬಗಳಿಗೆ ವಿಶೇಷ ರೈಲ್ ವ್ಯವಸ್ಥೆ ಮನವಿಗೆ ಅಸ್ತು

ಉಡುಪಿ: ಸಾಲು ಸಾಲು ರಜೆ ಮತ್ತು ಹಬ್ಬಗಳ ಕಾರಣದಿಂದ ಬೆಂಗಳೂರಿನಿಂದ ಉಡುಪಿ ಮತ್ತು ಮಂಗಳೂರು ಕಡೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ವಿಶೇಷ ರೈಲು ಬಿಡುವಂತೆ ಉಡುಪಿ ಮತ್ತು ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದರು‌. ಇದಕ್ಕೆ ಸಂಬಂಧಿಸಿದಂತೆ ಸಚಿವರು ಅನುಮೋದನೆ ನೀಡಿದ್ದು, ರೈಲಿನಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾದಂತಾಗಿದೆ. ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ರಾಜ್ಯ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

* ಹೆಬ್ರಿ: ಮಳೆಯಿಂದ ರಸ್ತೆಗಳು ಜಲಾವೃತ

ಹೆಬ್ರಿ: ಮಂಗಳವಾರದಂದು ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವಾರು ತೊಂದರೆಗಳು ಎದುರಾಗಿದ್ದು, ಹೆಬ್ರಿಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಈ ರೀತಿಯ ಸಮಸ್ಯೆ ತಲೆದೋರಿದೆ ಎನ್ನಲಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ದ್ವಿಚಕ್ರ ವಾಹನಗಳ ಸ್ಥಿತಿಯಂತು ಮತ್ತಷ್ಟು ದುಸ್ತರವಾಗಿದೆ. ನೀರು ನಿಂತಿರುವ ಪರಿಣಾಮ ಹೊಂಡ ಗುಂಡಿಗಳು ಗಮನಕ್ಕೆ ಬಾರದೆ, ಅಪಘಾತದ ಪ್ರಮಾಣ ಅಧಿಕವಾಗಿದೆ.

* ಮಂಗಳೂರು: ಪಾಳುಬಿದ್ದ ಮನೆಯಲ್ಲಿ ಹಿರಿಜೀವ

ಮಂಗಳೂರು: ಕಳೆದ ಅರವತ್ತು ವರ್ಷಗಳಿಂದ ಮಂಗಳೂರಿನ ಪಾಳುಬಿದ್ದ ಮನೆಯಲ್ಲಿ ವಾಸವಾಗಿರುವ, ಹಿರಿಜೀವ ಯಶೋಧಾ ಅವರ ಸಮಸ್ಯೆ ಯಾರೂ ಕೇಳದಂತಾಗಿದೆ. ಮನೆ ಕೂಡ ಹಲವು ವರ್ಷಗಳ ಹಿಂದಿನದಾಗಿದ್ದು, ಮಣ್ಣಿನಿಂದ ಗೋಡೆ ನಿರ್ಮಾಣವಾಗಿರುವ ಕಾರಣ ಮಳೆಯ ತೀವ್ರತೆಯಿಂದಾಗಿ ಮನೆಗೆ ಅಧಿಕ ಪ್ರಮಾಣದ ಹಾನಿಯುಂಟಾಗಿ ಅಪಾಯದ ಸ್ಥಿತಿಯಲ್ಲಿದೆ. ಬೆಂಕಿಗೆ ತುಪ್ಪ ಸುರಿದಂತೆ ಮೊದಲೇ ತೊಂದರೆ ಅನುಭವಿಸುತ್ತಿರುವ ಯಶೋಧಾ ಅವರಿಗೆ, ಕೆಲವರು ಮನೆ ದಾಖಲೆಗಳನ್ನು ನಮಗೆ ಕೊಡಿ ಎಂದು, ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವಮಾನಿಸುವುದು ಹೀಗೆ ಹಲವಾರು ಬಗೆಯಲ್ಲಿ ಪೀಡಿಸುತ್ತಿದ್ದಾರೆ ಎನ್ನಲಾಗಿದೆ. ಆದರೂ ಕದ್ರಿ ಮಂಜುನಾಥ ಸ್ವಾಮಿಯ ಕೃಪೆಯಿಂದ ಮಾನವೀಯತೆ ಎನ್ನುವುದು ಸ್ವಲ್ಪ ಮಟ್ಟಿಗಾದರೂ ಉಳಿದಿದೆ.‌ ಈ ಕಾರಣದಿಂದ ಕೆಲವರು ನನಗೆ ಆಪತ್ಕಾಲದಲ್ಲಿ ನೆರವಾಗುತ್ತಿದ್ದಾರೆ ಎಂದಿದ್ದಾರೆ ಯಶೋಧಾ.

* ಸುಳ್ಯ: ಮಿತಿ ಮೀರಿದ ಕಾಡಾನೆ ಹಾವಳಿ

ಸುಳ್ಯ: ಗುತ್ತಿಗಾರು, ಪೂಂಬಾಡಿ, ಕಜೆ ಮುಂತಾದ ಗ್ರಾಮಗಳಲ್ಲಿ ಕಳೆದ ವಾರದಿಂದ ಕಾಡಾನೆ ಹಾವಳಿಯಿಂದಾಗಿ ಕೃಷಿತೋಟಗಳು ಹಾನಿಗೆ ಒಳಗಾಗಿವೆ. ಕತ್ತಲಾಗುತ್ತಿದ್ದಂತೆ ಕಾಡಾನೆಗಳು ರಸ್ತೆಗಿಳಿದು ಸಂಚರಿಸುವುದು ಸಾಮಾನ್ಯ ಸಂಗತಿಯಂತಾಗಿದೆ. ಇದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿ ಕಳೆಯುವಂತಾಗಿದೆ. ಒಂದೆಡೆ ಗಿಡ ಮರಗಳಿಗೆ ತಗಲುತ್ತಿರುವ ರೋಗ ಮತ್ತೊಂದೆಡೆ ಕಾಡಾನೆಯ ಉಪಟಳ. ಈ ಎರಡೂ ಸಮಸ್ಯೆಗಳಿಂದ ತೋಟಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದು ಗ್ರಾಮಸ್ಥರ ಚಿಂತೆಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.