Categories
ದಕ್ಷಿಣ ಕನ್ನಡ

ತಿಮರೋಡಿ, ಮಟ್ಟಣ್ಣನವರ್, ಸಮೀರ್ ವಿರುದ್ಧ ಕೇಸ್..!!

ತಿಮರೋಡಿ, ಮಟ್ಟಣ್ಣನವರ್, ಸಮೀರ್ ವಿರುದ್ಧ ಕೇಸ್..!!
– ನೇತ್ರಾವತಿ ನದಿ ಸಮೀಪದ ಅರಣ್ಯದಲ್ಲಿ ಪತ್ತೆಯಾಗದ ಕುರುಹು
– 4 ಯ್ಯೂಟ್ಯೂಬರ್‌ಗಳ ಮೇಲೆ ಹಲ್ಲೆ, ಹಲ್ಲೆಗೊಳಗಾದವರುವ ಖಾಸಗಿ ಆಸ್ಪತ್ರೆಗೆ ದಾಖಲು

NAMMUR EXPRESS NEWS
ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನಡೆದ ಅಸ್ಥಿಪಂಜರ ಶೋಧ ಕಾರ್ಯಾಚರಣೆಯ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಯೂಟ್ಯೂಬರ್ ಸಮೀರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದಾಖಲಾದ ಸೆಕ್ಷನ್‌ಗಳು ಮತ್ತು ಆರೋಪಿಗಳು:

ಬೆಳ್ತಂಗಡಿ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 115(2), 189(2), 191(2), 351(2), 352, 190 ಅಡಿ ಎಫ್ ಐ ಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗಿರೀಶ್ ಮಟ್ಟಣನವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಯೂಟ್ಯೂಬರ್ ಸಮೀರ್ (ಎ3), ಜಯಂತ್ (ಎ4) ಮತ್ತು ಇತರರ ಹೆಸರನ್ನು ಉಲ್ಲೇಖಿಸಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ದೂರುದಾರ ನೀಡಿದ ದೂರಿನಂತೆ ನಡೆಯುತ್ತಿರುವ ತನಿಖೆಯಲ್ಲಿ ಬುಧವಾರ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅಗೆಯುವ ಕಾರ್ಯ ನಡೆದಿದ್ದು ಈ ಸ್ಥಳದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಇನ್ನೊಂದೆಡೆ ನೇತ್ರಾವತಿಯ ಪಾಂಗಳ ಪ್ರದೇಶದಲ್ಲಿ ನಾಲ್ಕು ಮಂದಿ ಯ್ಯೂಟ್ಯೂಬರ್‌ಗಳ ಮೇಲೆ ಅಪರಿಚಿತರು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಕುಡ್ಲ ರ್‍ಯಾಂಪೇಜ್‌ನ ಅಜಯ್‌ ಅಂಚನ್‌, ಕ್ಯಾಮರಾಮನ್‌ ಹಾಗೂ ಅಭಿಷೇಕ್‌, ವಿಜಯ್‌ ಎಂಬ ಇನ್ನಿಬ್ಬರು ಯ್ಯೂಟ್ಯೂರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ.

ಹಲ್ಲೆ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ ವೇಳೆ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಪರಿಸ್ಥಿತಿ ಹತೋಟಿಗೆ ತರಲು ಲಘು ಲಾಠಿ ಚಾರ್ಜ್‌ ನಡೆಸಿದ್ದಾರೆ. ಹಲ್ಲೆಗೊಳಗಾದ ಯೂಟ್ಯೂಬರ್‌ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಎಸ್‌ಐಟಿ ತಂಡ ಸಾಕ್ಷಿ ದೂರುದಾರನೊಂದಿಗೆ ನೇತ್ರಾವತಿ ಸ್ನಾನಘಟ್ಟದ ಸಮೀಪಕ್ಕೆ ಆಗಮಿಸಿತು. ಆತ ಗುರುತಿಸಿದ್ದ 13ನೇ ಸ್ಥಳವನ್ನು ಅಗೆಯದೆ ಸಮೀಪವೇ ಇರುವ ಬಂಗ್ಲೆಗುಡ್ಡೆಯ ಅರಣ್ಯಕ್ಕೆ ಗುರುತಿಸದ ಸ್ಥಳಕ್ಕೆ ತೆರಳಿದರು. ರಸ್ತೆಯಿಂದ ಸುಮಾರು 200 ಮೀ. ದೂರದಲ್ಲಿ ಸಾಕ್ಷಿ ದೂರುದಾರ ತೋರಿಸಿದ ಹೊಸ ಜಾಗದಲ್ಲಿ ಬುಧವಾರ ಅಗೆಯುವ ಕಾರ್ಯ ನಡೆಸಲಾಯಿತು. ಆದರೆ ಇಲ್ಲಿ ಯಾವುದೇ ಅವಶೇಷಗಳು, ಗುರುತುಗಳು ಪತ್ತೆಯಾಗಿಲ್ಲ. ಸಂಜೆ 4.30ರ ಸುಮಾರಿಗೆ ತಂಡ ಕಾರ್ಯಾಚರಣೆ ಮುಗಿಸಿ ಹಿಂತಿರುಗಿತು.

– 13ನೇ ಸ್ಥಳದಲ್ಲಿ ನಡೆಯದ ಶೋಧ ಕಾರ್ಯ

ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಬುಧವಾರ ಅಗೆಯುವ ಕಾರ್ಯ ನಡೆಯಬೇಕಾಗಿತ್ತು. ಆದರೆ ಈ ಸ್ಥಳದ ಸಮೀಪ ಕಿಂಡಿ ಅಣೆಕಟ್ಟು,ವಿದ್ಯುತ್‌ ಪರಿವರ್ತಕ ಇತ್ಯಾದಿ ಇದ್ದು, ಇಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಿನ ಕೆಲಸವಾಗಿದೆ. ಇದಕ್ಕೆ ಸಣ್ಣ ನೀರಾವರಿ ಇಲಾಖೆ, ಮೆಸ್ಕಾಂನ ಸಹಕಾರ ಬೇಕಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಇಲ್ಲಿ ಶೋಧ ಕಾರ್ಯ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಗುರುವಾರ 13ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತದೆಯೇ ಎಂಬ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

– ಎಸ್‌ಐಟಿ ಕಚೇರಿಯಲ್ಲಿ ಸಭೆ

ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣವ್‌ ಕುಮಾರ್‌ ಮೊಹಾಂತಿ, ಡಿಜಿಪಿ ಅನುಚೇತ್‌ ಸೇರಿದಂತೆ ಎಸ್‌ಐಟಿ ತಂಡ, ಎಸಿ ಸ್ಟೆಲ್ಲಾ ವರ್ಗಿಸ್‌, ಸಂಬಂಧಪಟ್ಟ ಅಗತ್ಯ ಇಲಾಖೆಯ ಅಧಿಕಾರಿಗಳ ಸಭೆ ಬುಧವಾರ ಬೆಳಗ್ಗೆ ಹಾಗೂ ಸಂಜೆ ಎಸ್‌ಐಟಿ ಕಚೇರಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.