• ಉಡುಪಿ: ಕಾಂತಾರ ಚಿತ್ರತಂಡಕ್ಕೆ ಮತ್ತೊಂದು ಆಘಾತ
• ಕಾರ್ಕಳ: ಆಗಸ್ಟ್ 10 ರಂದು ಕೆಸರಾಟ ಪಾಠ
•ದಕ್ಷಿಣ ಕನ್ನಡ: ಮಕ್ಕಳಲ್ಲಿ ಹೆಚ್ಚಿದ ರಕ್ತಹೀನತೆ ಸಮಸ್ಯೆ
• ಬಂಟ್ವಾಳ: ಡೆಂಗ್ಯೂ ಗೆ ನಾಟಕಕಾರ ಬಲಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಉಡುಪಿ: ಕಾಂತಾರ ಚಿತ್ರತಂಡಕ್ಕೆ ಮತ್ತೊಂದು ಆಘಾತ
ಉಡುಪಿ: ಹೆಚ್ಚು ಯಶಸ್ವಿಗೊಳ್ಳುವ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿಯನ್ನು ವಿಶ್ವಾದ್ಯಂತ ಪಸರಿಸಿದ ಕಾಂತಾರ ಚಿತ್ರಕ್ಕೆ ಎರಡನೇ ಭಾಗದ ಚಿತ್ರೀಕರಣ ಪ್ರಾರಂಭಗೊಂಡ ದಿನದಿಂದ, ಮುಗಿದ ನಂತರವೂ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಮತ್ತೊಂದು ನಿದರ್ಶನ ಟಿ ಪ್ರಭಾಕರ ಕಲ್ಯಾಣಿ ಅವರ ಸಾವು. ಕಾಂತಾರ ಚಿತ್ರದ ಮೊದಲ ಭಾಗದಲ್ಲಿ ನ್ಯಾಯವಾದಿಯ ಪಾತ್ರ ನಿರ್ವಹಿಸಿದ್ದ, ಪೆರ್ಡೂರಿನ ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಅಧಿಕಾರಿ ಹಾಗೂ ರಂಗ ಕಲಾವಿದರಾಗಿದ್ದ ಇವರು ಕೆಲವು ದಿನಗಳ ಹಿಂದೆ ಹಿರಿಯಡ್ಕದ ತಮ್ಮ ಮನೆಯಲ್ಲಿ ಕುಸಿದು ಬಿದ್ದಿದ್ದರು. ಬಿದ್ದ ಪರಿಣಾಮದಿಂದ ನಿನ್ನಯ ದಿನ ಕೈ ಕಾಲಿನಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಪತ್ನಿಯ ಸಹಾಯದಿಂದ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಕಾರ್ಕಳ: ಆಗಸ್ಟ್ 10 ರಂದು ಕೆಸರಾಟ ಪಾಠ
ಕಾರ್ಕಳ: ಇಲ್ಲಿನ ಅಂಬಾಭವಾನಿ ಗಾಳಿಮಾರಿ ದೇವಸ್ಥಾನದ ಆವರಣದಲ್ಲಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ಆಗಸ್ಟ್ ಹತ್ತರ ಭಾನುವಾರದಂದು, ಅಂದರೆ ನಾಳೆಯ ದಿನ ಕೆಸರಾಟದ ಕುರಿತ ಪಾಠ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಶ್ರೀಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಕೋಟ್ಯಾನ್ ಅವರು ಉದ್ಘಾಟಿಸಲಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮೊಹಮ್ಮದ್ ಸದಾಕತ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇವರೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿಗಳಾದ ವಿವೇಕ್ ಆಳ್ವ, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ, ಉದ್ಯಮಿಗಳಾದ ನಿರಂಜನ್ ಜೈನ್, ನ್ಯೂಸ್ ಕಾರ್ಕಳದ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರ ಬರೆಪ್ಪಾಡಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್, ವಾಣಿಜ್ಯ ವಿಭಾಗದ, ಕಲಾ ವಿಭಾಗದ, ಸಂಸ್ಕೃತ ವಿಭಾಗದ ಮುಖ್ಯಸ್ಥರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
• ಮಂಗಳೂರು: ಮಕ್ಕಳಲ್ಲಿ ಹೆಚ್ಚಿದ ರಕ್ತಹೀನತೆ ಸಮಸ್ಯೆ
ಮಂಗಳೂರು: ಕಳೆದ ಒಂದು ತಿಂಗಳಿನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ “ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ” ಎಂಬ ಹೆಸರಿನ ಅಭಿಯಾನದ ಪ್ರಯುಕ್ತ ನಡೆಸಿದ ಹಿಮೋಗ್ಲೋಬಿನ್ ಪರೀಕ್ಷೆ ಮುಕ್ತಾಯಗೊಂಡಿದ್ದು, ವರದಿಯೊಂದು ಹೊರಬಿದ್ದಿದೆ. ಸರ್ಕಾರದ ವತಿಯಿಂದ ಒಟ್ಟು 49 575 ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಒಳಪಡಿಸಲಾಗಿದ್ದು, ಇದರಲ್ಲಿ 26೦9ಮಕ್ಕಳಿಗೆ ಸಾಧಾರಣ ಸಮಸ್ಯೆ, 2444 ಮಕ್ಕಳಿಗೆ ಮಧ್ಯಮ ಸಮಸ್ಯೆ ಮತ್ತು 1೦ ಮಕ್ಕಳಿಗೆ ತೀವ್ರತರವಾದ ರಕ್ತಹೀನ ಸಮಸ್ಯೆ ಕಂಡುಬಂದಿದೆ. ಮಕ್ಕಳು ತೀವ್ರವಾಗಿ ರಕ್ತಹೀನತೆ ಸಮಸ್ಯೆಗೆ ಒಳಪಟ್ಟಿದ್ದರೆ ಅವರನ್ನು ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಯ ಮಕ್ಕಳತಜ್ಞರಿಗೆ ಶಿಫಾರಸು ಮಾಡಲಾಗುತ್ತದೆ ಮತ್ತು ಮಧ್ಯಮ ಹಾಗೂ ಸಾಧಾರಣ ರೀತಿಯ ಸಮಸ್ಯೆ ಇರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಈ ಸಮಸ್ಯೆಗೆ ಹೆದರುವ ಅವಶ್ಯಕತೆ ಇಲ್ಲ ಔಷಧಿಯ ಮೂಲಕವೇ ಗುಣಪಡಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.
• ಬಂಟ್ವಾಳ: ಡೆಂಗ್ಯೂ ಗೆ ನಾಟಕಕಾರ ಬಲಿ
ಬಂಟ್ವಾಳ: ಕೊಯಿಲ ಗ್ರಾಮದ ನಿವಾಸಿಯಾದ ಮತ್ತು ನಾಟಕಕಾರ ನಾರಾಯಣ ಕೊಯಿಲ ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಅದು ಡೆಂಗ್ಯೂ ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ನಾರಾಯಣ ಅವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಸುಮಾರು ಹನ್ನೆರಡಕ್ಕೂ ಹೆಚ್ಚು ತುಳು ನಾಟಕಗಳನ್ನು, ಹಲವು ಬಗೆಯ ದೈವ, ದೇವಸ್ಥಾನಗಳ ಕುರಿತ ಕನ್ನಡ, ಜನಪದ ಮಾದರಿಯ ಮತ್ತು ತುಳು ಗೀತೆಗಳನ್ನು ರಚಿಸಿದ್ದು ಅವು ಧ್ವನಿಮುದ್ರಣವನ್ನು ಸಹ ಕಂಡಿದೆ. ವಿವಿಧ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ನಾರಾಯಣ ಅವರು ತಮ್ಮ ಪಂಡ ಕೇನುಜೇರ್ ನಾಟಕಕ್ಕೆ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಇವರೇ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದರು. ಈಗ ಇವರ ಸಾವಿನಿಂದಾಗಿ ಕುಟುಂಬ ನಿರಾಧಾರವಾಗಿರುವುದು ವಿಷಾದನೀಯ ಸಂಗತಿ.