ಕರಾವಳಿ ಟಾಪ್ ನ್ಯೂಸ್
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಏಳು ಮಂದಿ ಪೊಲೀಸರ ವಶ!
– ಸುಳ್ಯದ ಯುವಕ ಬ್ಯಾಂಕಾಕಿನಲ್ಲಿ ನಿಗೂಢವಾಗಿ ಸಾವು
– ಮುಲ್ಕಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಇಬ್ಬರು ಸವಾರರ ಸಾವು
NAMMUR EXPRESS NEWS
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಕ್ಯಾಂಡಲ್ ಉರಿಸಿಟ್ಟು ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಡುಪಿಯ ಬೀಡಿನಗುಡ್ಡೆ ಮಹಾತ್ಮಗಾಂಧಿ ಬಯಲುರಂಗ ಮಂದಿರದ ಬಳಿ ನಡೆದಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಆಟಕ್ಕೆ ಬಳಸಿದ ಮೂವತ್ತೆರಡು ಸಾವಿರದ ಎಂಟುನೂರು ನಗದು ಸಹಿತ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
– ಸುಳ್ಯದ ಯುವಕ ಬ್ಯಾಂಕಾಕಿನಲ್ಲಿ ನಿಗೂಢವಾಗಿ ಸಾವು
ಸುಳ್ಯ: ಈಜಿಪ್ಟ್ ನಲ್ಲಿ ಶಿಪ್ ಕೆಲಸಕ್ಕೆ ನೇಮಕಗೊಂಡಿದ್ದ ಯುವಕ ಬ್ಯಾಂಕಾಕ್‍ನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಸುಳ್ಯದ ಪಂಬೆತ್ತಾಡಿಯ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಲಿಖಿನ್(26) ಎಂದು ಗುರುತಿಸಲಾಗಿದೆ.
ಈಜಿಪ್ಟ್ ನಲ್ಲಿ ಶಿಪ್‍ನಲ್ಲಿ ಉದ್ಯೋಗಕ್ಕೆ ನೇಮಕಗೊಂಡು ಅಲ್ಲಿಗೆ ತೆರಳಲು ವಿಮಾನ ಪ್ರಯಾಣಕ್ಕಾಗಿ ಬ್ಯಾಂಕಾಕ್‍ನಲ್ಲಿ ರೂಮ್‍ವೊಂದನ್ನು ಮಾಡಿ ತಂಗಿದ್ದರು. ಅಲ್ಲಿ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರಿಗೆ ತಾಯಿ, ಸಹೋದರ ಇದ್ದಾರೆ.
– ಮುಲ್ಕಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಇಬ್ಬರು ಸವಾರರ ಸಾವು
ಮಂಗಳೂರು : ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟ ಘಟನೆ ಮುಲ್ಕಿ ತಾಲೂಕಿನ ಕಿನ್ನಿಗೋಳಿ ಸಮೀಪ ನಡೆದಿದೆ.
ಮೂಲತಃ ಧಾರವಾಡ ಜಿಲ್ಲೆ ಸವದತ್ತಿ ಕಲ್ಲೂರು ನಿವಾಸಿಗಳಾದ ಆತ್ಮಾನಂದ (27), ನವೀನ್ ಹೂಗಾರ (26) ಮೃತ ದುರ್ದೈವಿಗಳು.
ವೇಗವಾಗಿ ಬಂದ ಬೈಕ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಕುರಿತು ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.