ಟಾಪ್ 5 ನ್ಯೂಸ್ ಕರ್ನಾಟಕ
ಬೆಂಗಳೂರು: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ..!!
– ಧಾರವಾಡ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!!
– ಬೀದರ್: ವಾಕಿಂಗ್ ಹೋಗುತ್ತಿದ್ದಾಗ ಯುವಕನಿಗೆ ಬೈಕ್ ಡಿಕ್ಕಿಯಿಂದ ಯುವಕ ಸಾವು..!!
– ದಾವಣಗೆರೆ: ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಸಾವು..!
– ಬೆಂಗಳೂರು: ತಾಯಿ ಜೊತೆ ಜಗಳವಾಡಿ ಮನೆಬಿಟ್ಟು ಬಂದ ಅಪ್ರಾಪ್ತ ಯುವತಿ ಮೇಲೆ ಮೆಜೆಸ್ಟಿಕ್ ಹಣ್ಣು ವ್ಯಾಪಾರಿಯಿಂದ ಬಲತ್ಕಾರ
NAMMUR EXPRESS NEWS
ಬೆಂಗಳೂರು : ಕಾಮುಕರಿಂದ, ದುಷ್ಟರಿಂದ ರಕ್ಷಣೆ ಕೊಡಬೇಕಾದ ತಂದೆಯೇ ಮಗಳ ಮೇಲೆ ಕಾಮುಕನಂತೆ ಅತ್ಯಾಚಾರ ಎಸಗಿದ ನೀಚ ಕೃತ್ಯ ಹೊಸಕೋಟೆ ನಗರದಲ್ಲಿ ವರದಿಯಾಗಿದೆ. ತಂದೆಯಿಂದ ಅತ್ಯಾಚಾರಕ್ಕೊಳಗಾಗಿ ಮತ್ತು ಬೆದರಿಕೆ ಹಾಕಲ್ಪಟ್ಟ ಯುವತಿಯೊಬ್ಬಳು ಮನೆ ಬಿಟ್ಟು ಪಿಜಿಯಲ್ಲಿ ಆಶ್ರಯ ಪಡೆದ ಪ್ರಕರಣ ಇದೀಗ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿ, ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯ ಎಸಗಿದ್ದಾನೆ. 19 ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಮಾಡಿದ್ದರ ಜತೆಗೆ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾನೆ. ಸದ್ಯ ಹೊಸಕೋಟೆ ಮಹಿಳಾ ಠಾಣೆ ಪೊಲೀಸರು ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ. ಕಾರು ಚಾಲಕನಾಗಿರುವ ಮಂಜುನಾಥ್ಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು, ಒಂದು ಗಂಡು ಮಗು. ಹಿರಿಯ ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಹಾಗೂ ದೂರು ದಾಖಲಾಗಿದೆ. ತಂದೆಯ ಕಾಟ ತಾಳಲಾರದೆ ಯುವತಿ ಪಿಜಿಯಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಲಾಗಿತ್ತು. ಹೀಗಾಗಿ ಜೀವ ಭಯದಿಂದ ಯುವತಿ ಮನೆಯಿಂದ ದೂರ ಉಳಿದಿದ್ದಳು. ತಂದೆಯಿಂದಾದ ಅನಾಚರಕ್ಕೆ ನ್ಯಾಯ ಒದಗಿಸುವಂತೆ ಯುವತಿ ಆಗ್ರಹಿಸಿದ್ದು, ಸದ್ಯ ಪೊಲೀಸರಿಂದ ತನಿಖೆ ನಡೆಯುತ್ತಿದೆ.
– ಧಾರವಾಡ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!!
ಧಾರವಾಡ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಧಾರವಾಡ ಹೊಯ್ಸಳ ನಗರ ಬೈಪಾಸ್ ಬಳಿ ನಡೆದಿದೆ. ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಧಾರವಾಡದಿಂದ ಹುಬ್ಬಳ್ಳಿ ಕಡೆ ಬೈಕ್ನಲ್ಲಿ ವ್ಯಕ್ತಿ ಹೊರಟಿದ್ದು, ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ನಿಲ್ಲಿಸದೇ ಚಾಲಕ ಪರಾರಿ ಆಗಿದ್ದಾನೆ. ಬಳಿಕ ಬೆನ್ನತ್ತಿ ಲಾರಿಯನ್ನು ಸಂಚಾರ ಠಾಣೆ ಪೊಲೀಸರು ಧಾರವಾಡ ತಾಲೂಕಿನ ತೇಗೂರ ಬಳಿ ಹಿಡಿದಿದ್ದಾರೆ.
– ಬೀದರ್: ವಾಕಿಂಗ್ ಹೋಗುತ್ತಿದ್ದಾಗ ಯುವಕನಿಗೆ ಬೈಕ್ ಡಿಕ್ಕಿಯಾಗಿ ಯುವಕ ಸಾವು..!!
ಬೀದರ್: ವಾಕಿಂಗ್ ಹೋಗುತ್ತಿದ್ದ ಯುವಕನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿರುವಂತಹ ಘಟನೆ ಬೀದರ್ನ ಔರಾದ್ ತಾಲೂಕಿನ ಮಸ್ಕಲ್ ಬಳಿ ನಡೆದಿದೆ. ಮಸ್ಕಲ್ ಗ್ರಾಮದ ನವನಾಥ್ ರಾಮಣ್ಣ (32) ಮೃತ ಯುವಕ. ವೇಗವಾಗಿ ಬಂದ ಬೈಕ್, ಯುವಕನಿಗೆ ಡಿಕ್ಕಿ ಹೊಡೆದಿದ್ದರಿಂದ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಪರಾರಿ ಆಗಿದ್ದಾನೆ. ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ದಾವಣಗೆರೆ: ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಸಾವು.!
ದಾವಣಗೆರೆ : ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಲಕ್ಷ್ಮೀಸಾಗರ, ದುಗ್ಗೇನಹಳ್ಳಿ ಗ್ರಾಮಗಳ ಬಳಿ ನಡೆದಿದೆ. ದೀಪಾ(28), ದಿವ್ಯಾ(೨6) ಹಾಗೂ ಚಂದನಾ(19) ಮೃತ ಮಹಿಳೆಯರು. ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಅವಘಡ ಸಂಭವಿಸಿದೆ. ಚನ್ನಗಿರಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ತಾಹಶೀಲ್ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.
– ಬೆಂಗಳೂರು: ತಾಯಿ ಜೊತೆ ಜಗಳವಾಡಿ ಮನೆಬಿಟ್ಟು ಬಂದ ಅಪ್ರಾಪ್ತ ಯುವತಿ ಮೇಲೆ ಮೆಜೆಸ್ಟಿಕ್ ಹಣ್ಣು ವ್ಯಾಪಾರಿಯಿಂದ ಬಲತ್ಕಾರ.
ಬೆಂಗಳೂರು : ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಹಣ್ಣು ವ್ಯಾಪಾರಿಯೊಬ್ಬನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಸುನೀಲ್(30) ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಮೆಜೆಸ್ಟಿಕ್‌ನಲ್ಲಿ ತಳ್ಳುವ ಗಾಡಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾನೆ. ಅಪ್ರಾಪ್ತೆ ಮೆಜೆಸ್ಟಿಕ್‌ಗೆ ಬಂದಿದ್ದಾಗ ಪುಸಲಾಯಿಸಿ ತಿರುಪತಿಗೆ ಕರೆದುಕೊಂಡು ಹೋಗಿದ್ದರಿಂದ ಪ್ರಕರಣವನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.