ಕರಾವಳಿ ಟಾಪ್ ನ್ಯೂಸ್
ಭಾರೀ ಮಳೆಯಿಂದಾಗಿ, ಯಕ್ಷಗಾನ ಕಲಾವಿದ ರಸ್ತೆ ಅಪಘಾತದಲ್ಲಿ ಸಾವು!
– ಉಡುಪಿ: ಆನ್ಲೈನ್ ಶಾಪಿಂಗ್, ಲಕ್ಷಾಂತರ ರೂ. ಗುಳುಂ!
– ಮಂಗಳೂರು: ಮಾಟ, ಮಂತ್ರ ನಿವಾರಿಸುವುದಾಗಿ ಮಹಿಳೆಗೆ 1.5 ಲಕ್ಷ ವಂಚನೆ, ಕಿರುಕುಳ
– ಮಂಗಳೂರು: ಮಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆ ಯತ್ನ!
– ಮಂಗಳೂರು: ತಾಯಿ – ಮಗ ವಿಷ ಸೇವನೆ: ಮಗ ಮೃತ್ಯು, ತಾಯಿ ಆಸ್ಪತ್ರೆಗೆ
NAMMUR EXPRESS NEWS
ಕುಂದಾಪುರ: ಕುಂದಾಪುರದ ಅರಾಟೆ ಸೇತುವೆ ಬಳಿ ಯಕ್ಷಗಾನ ಕಲಾವಿದರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಎ. 05ರಂದು ನಡೆದಿದೆ.
ಮೃತಪಟ್ಟ ಕಲಾವಿದರನ್ನು ಹಟ್ಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ (40) ಎಂದು ಗುರುತಿಸಲಾಗಿದೆ.
ಶಿರೂರಿನ ತೂದಳ್ಳಿಯಲ್ಲಿ ನಡೆಯಬೇಕಿದ್ದ ಹಟ್ಟಿಯಂಗಡಿ ಮೇಳದ ಆಟ ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಕಾರ್ಯಕ್ರಮ ರದ್ದಾದ ನಂತರ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಅವರು ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಅರಾಟೆ ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಏಕಮುಖ ಸಂಚಾರ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸಲಾಗಿತ್ತು. ಗೊಂದಲಕ್ಕೆ ಒಳಗಾದ ನಾರಾಯಣ ಪೂಜಾರಿ ಅವರು ಬದಲಾದ ಸಂಚಾರ ವ್ಯವಸ್ಥೆಯ ಅರಿವಿಲ್ಲದ ತಡೆಗೋಡೆಯಾಗಿ ಇರಿಸಲಾಗಿದ್ದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಬೈಕ್ ನಿಯಂತ್ರಣ ಕಳೆದುಕೊಂಡು ಬಿದ್ದು ಸಾವನ್ನಪ್ಪಿದ್ದಾರೆ. ಕುಂದಾಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
– ಉಡುಪಿ: ಆನ್ಲೈನ್ ಶಾಪಿಂಗ್, ಲಕ್ಷಾಂತರ ರೂ. ಗುಳುಂ!
ಕೋಟ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ಸಾಗ್ರಾಮ್ ಮೂಲಕ ಬಟ್ಟೆ ಆರ್ಡರ್ ಮಾಡಿ, ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮುಸ್ಕಾನ್ ಅನ್ಸಾರಿ(24) ಎಂಬವರು ಮಾ.18ರಂದು ಇನ್ವಗ್ರಾಮ್ ಮೂಲಕ ವ್ಯವಹಾರಕ್ಕಾಗಿ ಬಟ್ಟೆಯನ್ನು ಆರ್ಡರ್ ಮಾಡಿದ್ದರು.
ಮಾ.25ರಂದು ರಾಹುಲ್ ಶರ್ಮ ಎಂಬ ಹೆಸರಿನಿಂದ ಮುಸ್ಕಾನ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಅದರಂತೆ ಮುಸ್ಕಾನ್ ಹಂತ ಹಂತವಾಗಿ ಆರೋಪಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಎರಡು ದಿನಗಳ ನಂತರ ಮುಸ್ಕಾನ್ ಆರೋಪಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ ಎಂದು ದೂರಲಾಗಿದೆ. ಇವರು ಬಟ್ಟೆಯನ್ನು ಕಳುಹಿಸುವುದಾಗಿ ನಂಬಿಸಿ 1,06,273 ರೂ. ಹಣವನ್ನು ಪಡೆದು ವಂಚಿಸಿರುವುದಾಗಿ ದೂರಲಾಗಿದೆ.
– ಮಾಟ, ಮಂತ್ರ ನಿವಾರಿಸುವುದಾಗಿ ಮಹಿಳೆಗೆ 1.5 ಲಕ್ಷ ವಂಚನೆ, ಕಿರುಕುಳ
ಮಂಗಳೂರು: ಮಹಿಳೆ ಒಬ್ಬರಿಗೆ ಯಾರೋ ನಿಮಗೆ ಮಾಟ, ಮಂತ್ರವನ್ನು ಮಾಡಿಸಿದ್ದಾರೆ ಅದನ್ನು ನಾನು ನಿವಾರಿಸುತ್ತೇನೆ ಎಂದು ಹೇಳಿಕೊಂಡು ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಆರೋಪದಲ್ಲಿ ಹೆಜಮಾಡಿಯ ಉಸ್ತಾದ್ ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುರುವಾಯನಕೆರೆಯ ನಿವಾಸಿ ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಬಂಧಿತ ಆರೋಪಿ. 2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ಆಕೆ ತನ್ನ ಅಕ್ಕನ ಗಂಡನ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಕೂಳೂರು ಉಸ್ತಾದ್ ಎಂಬ ಹೆಸರಿನ ಈ ಅಬ್ದುಲ್ ಕರೀಮ್ ಎಂಬಾತ ಮಹಿಳೆಯನ್ನು ನೋಡಿ ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ನಂಬಿಸಿ ಅದನ್ನು ತೆಗೆಸಬೇಕು ಎಂದು ನಂಬಿಸಿದ್ದಾನೆ.
ಈ ವ್ಯಕ್ತಿ ಇದೇ ರೀತಿ ಮಾಟ ಮಂತ್ರ ನಿವಾರಿಸುವ ಉಸ್ತಾದ್ ಎಂಬ ಸೋಗಿನಲ್ಲಿ ಇನ್ನೂ ಹಲವರಿಗೆ ವಂಚಿಸಿರುವ ಹಾಗೂ ಕಿರುಕುಳ ನೀಡಿರುವ ಬಗ್ಗೆ ದೂರುಗಳಿವೆ ಎಂದು ತಿಳಿದು ಬಂದಿದೆ. ಸಧ್ಯ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
– ಮಂಗಳೂರು: ಮಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆ ಯತ್ನ!
ಮಂಗಳೂರು: ಮಂಗಳೂರು ಹೊರವಲಯದ ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಮುತ್ತೂಟ್ ಫೈನಾನ್ಸ್‌ಗೆ ಕನ್ನ ಹಾಕಲು ಕಳ್ಳರು ಮುಂದಾಗಿದ್ದು, ಇದೀಗ ಲಾಕ್ ಆಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ನಟೋರಿಯಸ್ ದರೋಡೆಕೋರರ ವಿಚಾರಣೆ ನಡೆಯುತ್ತಿದ್ದು, ಮಂಗಳೂರು ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ವರದಿ ಮಾಡಿದೆ.
ಕೇರಳ ಮೂಲದ ಐವರು ದರೋಡೆಕೋರರು ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನ ಮಾಡಿದ್ದರು. ತಡರಾತ್ರಿ ಕಟ್ಟಡದ ಹಿಂದಿರುವ ಮರವೇರಿ ಫೈನಾನ್ಸ್ ಕಟ್ಟಡ ಪ್ರವೇಶಿಸಿದ್ದ ಮುರುಳಿ, ಹರ್ಷದ್, ಲತೀಫ್, ಸೈಲೆಂಟ್ ಡ್ರಿಲ್ ಮಿಷನ್ ಉಪಯೋಗಿಸಿದ್ದರು. ಆದರೆ ಫೈನಾನ್ಸ್‌ನಲ್ಲಿದ್ದ ಅತ್ಯಾಧುನಿಕ ಸೆನ್ಸರ್ ಸೈರನ್ ಮೊಳಗಿದ ಕೂಡಲೇ ಮುರಳಿ ಮತ್ತು ಹರ್ಷದ್ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದು, ಲತೀಫ್ ಪರಾರಿಯಾಗಿದ್ದ.
ಫೈನಾನ್ಸ್ ಕಳ್ಳತನಕ್ಕೆ ಯತ್ನದಲ್ಲಿ ಭದ್ರತಾ ಸಲಕರಣೆಗಳೇ ಸಹಕಾರಿಯಾಗಿದೆ. ಜೊತೆಗೆ ಫೈನಾನ್ಸ್‌ನ ಕಂಟ್ರೋಲ್ ರೂಂ ಅಧಿಕಾರಿಗಳು, ಸ್ಥಳೀಯರು ಹಾಗೂ ಪೊಲೀಸರು ಸಮಯ ಪ್ರಜ್ಞೆಯಿಂದ ಭಾರೀ ಕಳ್ಳತನ ತಪ್ಪಿದೆ.
– ತಾಯಿ – ಮಗ ವಿಷ ಸೇವನೆ: ಮಗ ಮೃತ್ಯು, ತಾಯಿ ಆಸ್ಪತ್ರೆಗೆ
ಸುಬ್ರಮಣ್ಯ: ನಾಲ್ಕೂರು ಗ್ರಾಮದ ನಡುಗಲ್ಲು ಬಳಿಯ ದೇರಪ್ಪಜ್ಜನ ಮನೆ ತಾಯಿ ಸುಲೋಚನಾ ಮತ್ತು ಮಗ ನಿತಿನ್ ಕುಮಾರ್ ಇಲಿ ಪಾಷಣ ಸೇವಿಸಿದ್ದು, ಮಗ ನಿತಿನ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.